ಕಾಸರಗೋಡು: ಪರಂಪರಾಗತ ಅರಿವು, ಆಧುನಿಕ ಯಂತ್ರ ಸಾಮಗ್ರಿಗಳನ್ನು ಉಪಯೋಗಿಸಿಕೊಂಡು ಅಡ್ಡಬೋರ್ ಗಳನ್ನು ನಿರ್ಮಿಸಿ ಮಲೆನಾಡಿನಲ್ಲಿನೀರಿನ ಕೊರತೆಗೆ ಪರಿಹಾರ ಕಲ್ಪಿಸುವ ಮೂಲಕ ರತೀಶ್ ಕುಮಾರ್ ಗಮನ ಸೆಳೆಯುತ್ತಿದ್ದಾರೆ.
ಹಿಂದಿನ ಕಾಲದಲ್ಲಿ ತಿಳಿನೀರು ಹರಿಯುವ ಶುದ್ಧಜಲ ಸಂಪನ್ಮೂಲಗಳಾದ ಸುರಂಗಗಳ ಬದಲಿಗೆ ಮಲೆನಾಡಿನ ಗ್ರಾಮಗಳಲ್ಲಿಅಡ್ಡಬೊರ್ ಗಳನ್ನು ನಿರ್ಮಿಸಲಾಗುತ್ತಿದೆ.
1500 ಸುರಂಗಗಳನ್ನು ನಿರ್ಮಿಸಿ ಯುನಿಸೆಫ್ ನ ಪರಂಪರಾಗತ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡ ಕರ್ನಾಟಕದ ಬೀದರ್ ಸುರಂಗಗಳ ಪುನರ್ ನಿರ್ಮಾಣದಲ್ಲಿ ಪ್ರಧಾನ ಪಾತ್ರ ವಹಿಸಿದ ಕುಂಡಂಗುಯಿ ಬೀಂಬುಂಗಾಲಿನ ದಿ.ಸಿ.ಕುಞಂಬು ಅವರ ಪುತ್ರ ರತೀಶ್ ಕುಮಾರ್ ಅವರು ತಂದೆಯ ನೆನಪುಗಳು ತುಂಬಿರುವ ಮಣ್ಣಿನಲ್ಲಿ ಜಲಸಮೃದ್ಧಿಯ ನೂತನ ದಾರಿಗಳತ್ತ ಮುಂದಾಗಿದ್ದಾರೆ.
ಸಾಧಾರಣವಾಗಿ ಕೊಳವೆ ಬಾವಿಗಳನ್ನು ಭೂಮಿಯ ಆಳಕ್ಕೆ ಕೊರೆದು ನೀರು ತೆಗೆದರೆ ಅಡ್ಡಬೋರ್ ಗಳನ್ನು ಗುಡ್ಡದ ಇಳಿಜಾರಿನಲ್ಲಿಬಾವಿಗಳ ಪಾಶ್ರ್ವ ಭಾಗಗಳಲ್ಲಿಭೂಮಿಗೆ ಸಮತಲವಾಗಿ ತೆರೆದು ನಿರ್ಮಿಸಲಾಗುತ್ತದೆ. ಭೂಮಿಯ ಆಳಕ್ಕೆ ಹರಿಯುವ ಸಹಜ ನೀರಿನ ಹರಿಯುವಿಕೆಯನ್ನು ಪತ್ತೆ ಹಚ್ಚಲಾಗುತ್ತದೆ ಎಂಬುವುದು ಇದರ ವಿಶೇಷತೆಯಾಗಿದೆ.
ಹಾರೆ ಹಾಗೂ ಪಿಕ್ಕಾಸು ಉಪಯೋಗಿಸಿ ತಿಂಗಳುಗಟ್ಟಲೆ ಕಾಮಗಾರಿ ನಡೆಸಿ ಸುರಂಗಗಳಲ್ಲಿ ನೀರಿನ ಹರಿಯುವಿಕೆಯನ್ನು ಪತ್ತೆಹಚ್ಚಲಾಗುತ್ತಿತ್ತು. ಆದರೆ ಅಡ್ಡಬೋರ್ ಎಂಬ ಬೃಹತ್ ಯಂತ್ರದ ಮ್ಯಾಜಿಕ್ ನಲ್ಲಿ ಒಂದೆರಡು ದಿನಗಳೊಳಗೆ ನಿರ್ಮಾಣ ಪೂರ್ತಿಯಾಗುತ್ತದೆ. ಸಾಧಾರಣವಾಗಿ ಸುರಂಗ ನಿರ್ಮಿಸಲು ಲಕ್ಷಾಂತರ ರೂ.ಬೇಕಾಗಿ ಬಂದರೆ ಅಡ್ಡಬೋರ್ ಗೆ ಇದರ ನಾಲ್ಕರಲ್ಲೊಂದು ಭಾಗ ಖರ್ಚು ಸಾಕಾಗುತ್ತದೆ. ಗುಡ್ಡದ ಇಳಿಜಾರುಗಳಲ್ಲಿನಿರ್ಮಿಸುವ ಸುರಂಗಗಳಲ್ಲಿ ಸಹಜವಾದ ಒತ್ತಡ ಕಾರಣ ನೀರು ಹೊರಗೆ ಹರಿಯುತ್ತದೆ. ದೊಡ್ಡ ಯಂತ್ರಗಳಾಗಲಿ, ವಿದ್ಯುತ್ ಆಗಲಿ ಅಗತ್ಯವಿಲ್ಲ. ಪಿಕಪ್ ವ್ಯಾನ್ ನಲ್ಲಿ ಕೊಂಡೊಯ್ಯಬಹುದಾದ ಪೋರ್ಟಬಲ್ ಯೂನಿಟ್ ಉಪಯೋಗಿಸಿಕೊಂಡು ಎಲ್ಲಿಬೇಕಾದರೂ ನಿರ್ಮಿಸಬಹುದು. ಆದರೆ ಕಗ್ಗಲ್ಲುಗಳನ್ನು ಒಡೆಯಲು ಇದರಿಂದ ಸಾಧ್ಯವಿಲ್ಲ.
ಮಣ್ಣು, ಕೆಂಪುಕಲ್ಲು ಪಾರೆ ಇರುವ ಸ್ಥಳಗಳಲ್ಲಿ ಇದು ಹೆಚ್ಚು ಫಲಪ್ರದವಾಗಿದೆ. ಒಂದೂವರೆ ಇಂಚು ವ್ಯಾಸವಿರುವ ಪಿವಿಸಿ ಪೈಪ್ ಗಳ ಮೂಲಕ ನೀರು ಹೊರಗೆ ತೆಗೆಯಲಾಗುತ್ತದೆ. ಕರ್ನಾಟಕ ಹಾಗೂ ರಾಜಸ್ತಾನದ ವಿಧಾನಗಳನ್ನು ಅಧ್ಯಯನ ನಡೆಸಿದ ಬಳಿಕ ಕುಂಡಂಗುಯಿ ನೀರ್ಗಯದಲ್ಲಿರತೀಶ್ ಕುಮಾರ್ ಮೊದಲ ಪರೀಕ್ಷೆಯಲ್ಲಿಯಶಸ್ವಿಯಾಗಿದ್ದಾರೆ. ರತೀಶ್ ಹಾಗೂ ತಂಡ ಈಗಾಗಲೇ 50 ಅಡ್ಡಬೋರ್ ಗಳನ್ನು ನಿರ್ಮಿಸಿದೆ. ಸುಡು ಬಿಸಿಲಿಗೆ ಕುಡಿಯುವ ನೀರಿಗಾಗಿ ಪರದಾಟ ನಡೆಸುವವರಿಗೆ ಅಡ್ಡಬೋರ್ ಗಳು ಬಹುದೊಡ್ಡ ನಿರೀಕ್ಷೆಗಳನ್ನು ಹುಟ್ಟಿಸಿದೆ.
ಚಿತ್ರ: 29ಕೆಎಸ್ ಎಲ್ ಅಡ್ಡಬೋರ್ -ಬಾವಿಯೊಳಗೆ ಅಡ್ಡಬೋರ್ ನ ನಿರ್ಮಾಣ ಕಾಮಗಾರಿಯು ನಡೆಯುತ್ತಿರುವುದು.

