ಸ್ಮೃತಿ ವನ
ಶ್ರೀ ವಿಶ್ವೇಶ ತೀರ್ಥರ ಸ್ಮರಣೆಯಲ್ಲಿ
ಪ್ರಕೃತಿಯ ಆರಾಧನೆ
----
---
* ಮೋಹನ ಉಡುಪ ಹಂದಾಡಿ
-------
ಹೈಲೈಟ್ಸ್
* ಕೀರ್ತಿಶೇಷ ಪೇಜಾವರ ವಿಶ್ವೇಶ ತೀರ್ಥರ ನೆನಪಿನಲ್ಲಿಉದ್ಯಾನ
*ಶ್ರೀ ವಿಶ್ವೇಶ ತೀರ್ಥರ ಪರಿಸರ ಕಾಳಜಿಯ ಅನಾವರಣ
* ಮೇ 25ರಂದು ಲೋಕಾರ್ಪಣೆ
*ಶ್ರೀ ಪೇಜಾವರ ಅಧೋಕ್ಷಜ ಮಠ ಹಾಗೂ ರಾಜ್ಯ ಅರಣ್ಯ ಇಲಾಖೆ ಸಹಯೋಗ
--------
ಬ್ರಹ್ಮಾವರ( ಉಡುಪಿ ): ಹಚ್ಚ ಹಸುರಿನ ಪ್ರಕೃತಿಯ ನಡುವೆ ಧ್ಯಾನಕ್ಕೆ ಪೂರಕವಾದ ಪ್ರಶಾಂತ ವಾತಾವರಣದಲ್ಲಿಕೀರ್ತಿಶೇಷ ಶ್ರೀ ವಿಶ್ವೇಶ ತೀರ್ಥ ಶ್ರೀಗಳ ಸ್ಮರಣೆಯಲ್ಲಿಸುಂದರ ಉದ್ಯಾನ ‘ಸ್ಮೃತಿ ವನ’ ನಿರ್ಮಾಣಗೊಂಡಿದ್ದು ಇತ್ತೀಚೆಗೆ ಲೋಕಾರ್ಪಣೆಗೊಂಡಿದೆ.
ಬ್ರಹ್ಮಾವರ ತಾಲೂಕಿನ ನೀಲಾವರ ಗೋಶಾಲೆ ಬಳಿ ಕರ್ನಾಟಕ ಸರಕಾರ ಅರಣ್ಯ ಇಲಾಖೆ ಹಾಗೂ ಶ್ರೀ ಪೇಜಾವರ ಅಧೋಕ್ಷಜ ಮಠದ ಸಹಯೋಗದಲ್ಲಿಸ್ಮೃತಿ ವನ ನಿರ್ಮಾಣಗೊಂಡಿದೆ. ಇದು ಕೇವಲ ವನವಾಗಿರದೇ ಮರಗಿಡಗಳ ಸಂರಕ್ಷಣೆ, ಕಲೆ, ಸಂಸ್ಕೃತಿ, ಅಧ್ಯಾತ್ಮ ಒಂದೇ ಕಡೆ ಸಮ್ಮಿಳಿತಗೊಂಡಿದೆ.
ಸ್ಮೃತಿವನದಲ್ಲಿಏನಿದೆ?
ಸುಮಾರು 2 ಕೋಟಿ ರೂ. ವೆಚ್ಚದಲ್ಲಿನಿರ್ಮಾಣಗೊಂಡಿರುವ ಈ ಸ್ಮೃತಿವನದಲ್ಲಿಶ್ರೀ ವಿಶ್ವೇಶ ತೀರ್ಥರ 5ಅಡಿ ಎತ್ತರದ ಕಂಚಿನ ಪ್ರತಿಮೆ, ಧ್ಯಾನ ಮಂದಿರ, ಆರ್ಟ್ ಗ್ಯಾಲರಿ, ಶ್ರೀ ವಿಶ್ವೇಶ ತೀರ್ಥರ ಜೀವನ ಸಾಧನೆಗಳ ಫೋಟೊ ಗ್ಯಾಲರಿ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ನಡೆಸಲು ವೇದಿಕೆ ನಿರ್ಮಿಸಲಾಗಿದೆ. ನಕ್ಷತ್ರಾಕಾರದಲ್ಲಿರುವ ಈ ಕಟ್ಟಡದಲ್ಲಿಸುಮಾರು 200 ಆಸನ ವ್ಯವಸ್ಥೆ ಇದೆ. ನಾಲ್ಕು ದಿಕ್ಕಿನಲ್ಲಿಕುಟೀರಗಳಿವೆ. ಸಾವಿರಾರು ಗಿಡಗಳನ್ನು ನೆಡಲಾಗಿದ್ದು, ಔಷಧೀಯ ಗಿಡಗಳನ್ನು ನೆಡುವ ಯೋಜನೆಯಿದೆ. ಹತ್ತಿರದಲ್ಲೇ ನೀಲಾವರ ಗೋಶಾಲೆ ಇದೆ.
ಪರಿಸರ ಸಂರಕ್ಷಣೆಗೆ ಶ್ರೀ ವಿಶ್ವೇಶ ತೀರ್ಥರ ಕೊಡುಗೆ
ಕೀರ್ತಿಶೇಷ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಕೇವಲ ಆಧ್ಯಾತ್ಮಿಕ ಕ್ಷೇತ್ರಕ್ಕೆ ಸೀಮಿತರಾಗದೆ, ಸಮಾಜದ ಬಹುವಿಧ ಸುಧಾರಣೆಗಳಿಗೆ ಶ್ರಮಿಸಿದ ಮಹಾನ್ ಸಂತ. ಐದು ಬಾರಿ ಉಡುಪಿ ಕೃಷ್ಣ ಮಠದ ಪರ್ಯಾಯ ನಡೆಸಿದ್ದ ಶ್ರೀಗಳಿಗೆ ದೇಶದ ಅತ್ಯುನ್ನತ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಕೀರ್ತಿಶೇಷ ಶ್ರೀ ವಿಶ್ವೇಶ ತೀರ್ಥ ಶ್ರೀಗಳು ತಮ್ಮ ಜೀವಿತಾವಧಿಯಲ್ಲಿಪರಿಸರ ಸಂರಕ್ಷಣೆಗಾಗಿ ಮಾದರಿ ಮಾರ್ಗದರ್ಶನ ನೀಡಿದ್ದರು. ಪೇಜಾವರ ಮಠದ ವತಿಯಿಂದ ‘ವೃಕ್ಷ ಲಕ್ಷ ಆಂದೋಲನ’ ಹಮ್ಮಿಕೊಂಡು ಲಕ್ಷಾಂತರ ಭಕ್ತರಿಗೆ ಉಚಿತ ಸಸಿ ಹಾಗೂ ಬೀಜದ ಉಂಡೆಗಳನ್ನು (ಸೀಡ್ ಬಾಲ್ ) ವಿತರಿಸಿ, ಅವುಗಳನ್ನು ನೆಟ್ಟು ಪೋಷಿಸುವಂತೆ ಪ್ರೋತ್ಸಾಹಿಸಿದ್ದರು. ಶ್ರೀಗಳಿಗಿದ್ದ ಪರಿಸರ ಕಾಳಜಿ, ಅವರ ಸೇವಾ ಮನೋಭಾವ, ಪ್ರಕೃತಿಯ ಆರಾಧನೆ ಮುಂದಿನ ಪೀಳಿಗೆಗೆ ನೀಡುವ ಉದ್ದೇಶದಿಂದ ‘ಸ್ಮೃತಿ ವನ’ ನಿರ್ಮಿಸಲಾಗಿದೆ.
---
ಮೇ 25ರಂದು ಲೋಕಾರ್ಪಣೆ
ಪರಿಸರ ಸಂರಕ್ಷಣೆಗೆ ಅಪಾರ ಕೊಡುಗೆ ನೀಡಿದ್ದ ಪೇಜಾವರ ಮಠದ ಕೀರ್ತಿಶೇಷ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಗೌರವಾರ್ಥವಾಗಿ 2021ರಲ್ಲಿ2ಕೋಟಿ ರೂ. ವೆಚ್ಚದ ಸ್ಮೃತಿವನ ನಿರ್ಮಾಣಕ್ಕೆ ಯಡಿಯೂರಪ್ಪ ಸರಕಾರ ಅನುಮೋದನೆ ನೀಡಿತ್ತು. ಅಂದಿನ ಅರಣ್ಯ ಸಚಿವ ಉಮೇಶ್ ಕತ್ತಿ ಶಿಲಾನ್ಯಾಸ ಮಾಡಿದ್ದರು. 25 ಮೇ 2026ರಂದು ರಾಜ್ಯ ಸಚಿವ ಅರಣ್ಯ ಈಶ್ವರ ಖಂಡ್ರೆ ಲೋಕಾರ್ಪಣೆಗೊಳಿಸಿದ್ದಾರೆ.
--------------
ಕೋಟ್ :
ಪೇಜಾವರ ಅಧೋಕ್ಷಜ ಮಠದ 33ನೇ ಯತಿಗಳಾಗಿ ಪೇಜಾವರ ಮಠ ಮತ್ತು ಶ್ರೀಕೃಷ್ಣ ಮಠದ ಕೀರ್ತಿಯನ್ನು ತಮ್ಮ ಅಗಾಧ ತಪಸ್ಸು, ಜನ ಶುಶ್ರೂಷೆ ಮತ್ತು ಲೋಕವಿಹಿತವಾದ ಅನೇಕ ಕಾರ್ಯಗಳ ಮೂಲಕ ಕರ್ನಾಟಕ ಸರಕಾರವು ಶ್ರೀ ವಿಶ್ವೇಶ ತೀರ್ಥರ ಗೌರವಾರ್ಥ ಸ್ಮೃತಿವನ ಘೋಷಿಸಿತ್ತು. ಈಗ ಸುಂದರವಾದ ಸ್ಮೃತಿವನ ಲೊಕಾರ್ಪಣೆಗೊಂಡಿದ್ದು, ಸಂತಸ ತಂದಿದೆ. ಸ್ಮೃತಿ ವನ ಹಸಿರಿನ ಬನವಾಗಲಿ. ಇಲ್ಲಿಬರುವ ಮಂದಿಗೆ ಒಂದಷ್ಟು ಸಂತೋಷ ನೆಮ್ಮದಿ ಉಂಟುಮಾಡಲಿ ಎಂಬುವುದು ನಮ್ಮ ಆಶಯ. ಗುರುಗಳಿಗೆ ಆಸಕ್ತಿಯ ವಿಷಯವಾದ ವಿದ್ವತ್ ಗೋಷ್ಠಿಗಳು, ತಾಳಮದ್ದಳೆ, ಯಕ್ಷಗಾನ ಇತ್ಯಾದಿಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವ ಉದ್ದೇಶ ಇದೆ. ಸಾರ್ವಜನಿಕವಾಗಿ ಸರ್ವರಿಗೂ ಸ್ಮೃತಿವನ ಸತ್ಕಾರ್ಯಕ್ಕೆ ಬಳಸುವಂತಾಗಲಿ.
- ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದರು
ಪೇಜಾವರ ಅಧೋಕ್ಷಜ ಮಠ ಉಡುಪಿ

