ಪ್ರಕೃತಿಯೇ ದೇವರು
--------
ಜೂನ್ 5 ಪರಿಸರ ದಿನ. ಮಾನವನ ಉಳಿವು-ಅಳಿವು ಪ್ರಕೃತಿಯನ್ನೇ ಅವಲಂಬಿಸುವುದರಿಂದ ಪ್ರಕೃತಿಯನ್ನು ಪೂಜಿಸೋಣ ಎಂಬ ಸಂದೇಶ ಇಲ್ಲಿದೆ.
-------
- ದಿನೇಶ್ ಹೊಳ್ಳ
----------------
‘ಗುಡಿಯ ಕಲ್ಲುಮತ್ತು ಮರದ ವಿಗ್ರಹಗಳು ದೇವರೆಂದಾದರೆ ಕಲ್ಲುಗಳನ್ನು ಹೊತ್ತ ಶಿಖರ ಮತ್ತು ಮರಗಳನ್ನು ಹೆತ್ತ ಅಡವಿ ಯಾಕಾಗಬಾರದು ದೇವ ಮಂದಿರ?
ಹೌದು, ಪ್ರಕೃತಿಯೇ ನೈಜ ದೇವರು. ಗುಡಿ, ಮಸೀದಿ, ಚರ್ಚುಗಳ ಅಮೂರ್ತ, ಅಗೋಚರ ದೇವರುಗಳ ಮೇಲೆ ನಂಬಿಕೆ, ಶ್ರದ್ಧೆ-ಭಕ್ತಿ ಎಷ್ಟಿದೆಯೋ ಅಷ್ಟೇ ಭಕ್ತಿ- ಶ್ರದ್ಧೆ ಪ್ರಕೃತಿಯ ಮೇಲೆ ಇಡದೇ ಇರುವುದೇ ಇಂದಿನ ಪ್ರಾಕೃತಿಕ ದುರಂತಗಳ ಹಿನ್ನೆಲೆ. ಮರ, ಗಿಡ, ನದಿ, ಗಿರಿ, ಝರಿ, ಸಾಗರ, ಆಗಸ ಇವೆಲ್ಲವೂ ಇಂದು ಸಕಲ ಜೀವಸಂಕುಲಗಳ ಬದುಕಿನ ಚೇತನಾ ಶಕ್ತಿ, ಪ್ರಕೃತಿಯ ಈ ಮೂಲ ನಾಡಿಗಳು ಇಲ್ಲದೇ ಇದ್ದರೆ ಇಂದು ಈ ಭುವಿಯಲ್ಲಿಯಾವ ಮನುಜ ಆಗಲಿ, ಯಾವ ಜೀವ ಸಂಕುಲಗಳು ಆಗಲಿ ಉಳಿಯಲು ಸಾಧ್ಯವೇ ಇಲ್ಲ.
ಪ್ರಕ…ೃತಿಯೂ
ಏನೂ ಶಿಕ್ಷಣ ಕಲಿಯದ ಈ ಭುವಿಯ ಇನ್ನಿತರ ಜೀವಿಗಳು ಪ್ರಕೃತಿಯ ಎಲ್ಲದರ ಜೊತೆ ಹೊಂದಾಣಿಕೆಯಿಂದ ಬದುಕುತ್ತವೆ. ಆದರೆ ಎಲ್ಲವನ್ನೂ ಕಲಿತ ಬುದ್ಧಿವಂತ ಮಾನವ ಪ್ರಕೃತಿಯ ಎಲ್ಲಾಫಲಾನುಭವಗಳನ್ನು ಅನುಭವಿಸಿಯೂ ಪ್ರಕೃತಿಯ ವಿರುದ್ಧ ಹೋಗುವುದೆಂದರೆ ಇದು ಎಲ್ಲಕ್ಕಿಂತ ದೊಡ್ಡ ದುರಂತ!
ದೇವಸ್ಥಾನದಲ್ಲಿಭಕ್ತಿ, ಶ್ರದ್ಧೆಯಿಂದ ಪೂಜೆ, ಹರಕೆ ಮಾಡಿಸಿ ಅಲ್ಲಿತೀರ್ಥವನ್ನು ಕುಡಿದು ಪರಮ ಪ್ರಸಾದವೆಂದು ತನ್ನ ತಲೆಗೆ ನೆವರಿಸುವ ಮನುಜ ಅದೇ ತೀರ್ಥದ ನೀರು ಹರಿದು ಬರುವ ನದಿಗಳಿಗೆ ತ್ಯಾಜ್ಯ, ಮಲಿನಗಳನ್ನು ಎಸೆದು ಅಪವಿತ್ರ ಮಾಡುವುದೆಂದರೆ? ಗುಡಿಯ ವಿಗ್ರಹಗಳಿಗೆ ಭಕ್ತಿಯಿಂದ ತನ್ನ ಮಹದಾಸೆಗೆ ಕೈ ಮುಗಿದು ಬೇಡಿಕೊಳ್ಳುವ ಮನುಜ ಅದೇ ಕಲ್ಲುಗಿರಿಯ ಮೇಲೆ ಇದ್ದರೆ ಗಣಿಗಾರಿಕೆ ಮಾಡಿ ತನ್ನ ಧನದಾಸೆ ತೀರಿಸಿಕೊಳ್ಳುತ್ತಾನೆ.
ಯಾವ ಗಿರಿಯ ಬಂಡೆ ಯಾವ ಗುಡಿಯ ವಿಗ್ರಹವಾಗುವುದೋ? ಯಾವ ಮರದ ಕೊಂಬೆ ಯಾವ ಮಗುವಿಗೆ ಆಟಿಕೆಯ ಗೊಂಬೆಯಾಗುವುದೋ? ಯಾವ ಗುಡಿಯ ದ್ವಾರವಾಗುವುದೋ? ಬಲ್ಲವರಾರು? ಪ್ರಕೃತಿಯ ಪ್ರತೀ ಒಂದು ವಸ್ತು ಕೂಡಾ ಮನುಜರಿಗೆ ಧಾರ್ಮಿಕವಾಗಿ, ಸಾಮಾಜಿಕವಾಗಿ ಕೊಡುಗೆಯನ್ನು ನೀಡುವುದೇ ಹೊರತು ಹೊಡೆತದ ಬಡಿಗೆಯನ್ನು ನೀಡುವುದಿಲ್ಲ. ಆದರೆ ಮನುಜ ಇದಕ್ಕೆ ವಿರುದ್ಧವಾಗಿ ಪ್ರಕೃತಿಗೆ ಗಾಯ ಮತ್ತು ಏಟು ನೀಡುವುದು ತನ್ನ ಕರ್ತವ್ಯ ಎಂದು ಭಾವಿಸಿರಬಹುದೊ ಏನೋ?!
ಪ್ರಕೃತಿಗೆ ಬೇಧವಿಲ್ಲ
ಹರಿಯುವ ನದಿ, ಸುರಿಯುವ ಮಳೆ, ಬೀರುವ ಬೆಳಕು, ಸುಳಿಯುವ ಗಾಳಿ ಯಾವತ್ತಿಗೂ ಜಾತಿಯ ರಶೀದಿ ಕೇಳುವುದಿಲ್ಲ, ಅದು ದೇವಸ್ಥಾನವಿರಲಿ, ಮಸೀದಿ ಇರಲಿ, ಚರ್ಚು ಇರಲಿ ಎಲ್ಲಾಕಡೆಗೂ ತನ್ನ ಛಾಪು ಹಾಸುತ್ತದೆ. ನೀರಿಗೆ, ಗಾಳಿಗೆ ಆ ಪಕ್ಷ, ಈ ಪಕ್ಷ ಎಂಬ ಬೇಧವಿಲ್ಲ, ಸೂರ್ಯ, ಚಂದ್ರರಿಗೆ ಆ ಜಾತಿ, ಈ ಧರ್ಮ ಎಂಬ ವಿಭಜನೆ ಇಲ್ಲ.
ಹಣ್ಣು ತಿನ್ನುವಾಗ ಅದರ ರುಚಿಯನ್ನು ಅನುಭವಿಸಿ ಹಣ್ಣಿನ ಬೀಜವನ್ನು ಎಸೆದು ಬಿಡುವುದು ಸಾಮಾನ್ಯ ಕ್ರಮ. ಹಣ್ಣಿನ ಒಳಗಿನ ಬೀಜ (ಭ್ರೂಣ) ವನ್ನು ಮತ್ತೆ ಮಣ್ಣಿನೊಳಗೆ ಸೇರಿಸಿದರೆ ಗಿಡವಾಗಿ, ಮರವಾಗಿ ಬೆಳೆದು ಮತ್ತೆ ಹಣ್ಣು ನೀಡುತ್ತಾ, ನೆರಳಾಗಿ, ಮಳೆ ಸುರಿಸಿ, ಅಂತರ್ಜಲವಾಗಿ, ನದಿ, ಕೆರೆಗಳಿಗೆ ಜೀವವಾಗಿ, ಸದಾ ನಮ್ಮ ಬದುಕಿಗೆ ಚೇತನಾ ಶಕ್ತಿ ನೀಡುವ ಮರ, ಗಿಡಗಳು ಈ ಭುವಿಯ ದೇವ ಶಕ್ತಿ ಎಂದಾದ ಮೇಲೆ ಮರ, ಗಿಡಗಳು ಈ ಭೂಮಿಯ ಪ್ರತ್ಯಕ್ಷ ದೇವರು ತಾನೇ ? ಈ ದೈವ ಶಕ್ತಿಯನ್ನು ಅರಿತರೂ ಮಾನವ ಮರ, ಗಿಡಗಳನ್ನು ಕಡಿಯುವುದೇ ಹೊರತು ನೆಟ್ಟು ಸಾಕಿ ಸಲಹುವವರು ವಿರಳವಾಗುತ್ತಿರುವುದೇ ನಮ್ಮ ಬಹು ದೊಡ್ಡ ದುರಂತ.
ನಿಸರ್ಗದಲ್ಲಿದೆ ದೇವಶಕ್ತಿ
ದೇವರು ಅಂದರೆ ಒಂದು ಅಗೋಚರವಾದ ಶಕ್ತಿ, ಆ ಶಕ್ತಿ ನಮ್ಮೆಲ್ಲರನ್ನು ಕಾಪಾಡುವುದು. ಅದೇ ರೀತಿ ಪಶ್ಚಿಮ ಘಟ್ಟದ ಗಗನ ಚುಂಬಿಸುವ ಬೆಟ್ಟಗಳು ಮಳೆ ನೀರನ್ನು ತನ್ನೊಳಗೆ ಬಚ್ಚಿಟ್ಟುಕೊಂಡು ಹಂತ, ಹಂತವಾಗಿ ಹೊಳೆಗೆ ಸರಬರಾಜು ಮಾಡುತ್ತಾ ನಾಡಿನ ಕೃಷಿ ಮತ್ತು ನೀರಾವರಿಗೆ ಸಹಾಯ ಮಾಡುತ್ತಿದೆ ಎಂದರೆ ಇದು ದೇವರ ಶಕ್ತಿ ಎಂದು ಹೇಳಬಹುದು. ಮನುಷ್ಯನ ಬದುಕಿಗೆ ಪ್ರಮುಖವಾಗಿ ಬೇಕಾಗಿರುವ ಮಳೆ, ಗಾಳಿ, ಉಸಿರು ಇವುಗಳನ್ನು ನೀಡುತ್ತಿರುವ ಪ್ರಕೃತಿಯು ನಿಜಕ್ಕೂ ದೇವ ಶಕ್ತಿಯಲ್ಲಿರುವಂಥದ್ದು. ನಮ್ಮ ಧಾರ್ಮಿಕ ವಿಚಾರಗಳನ್ನು ಅರಿತುಕೊಂಡರೆ ಅಲ್ಲಿನವಿಲು, ವರಹ, ಅಂದ್ರೆ ಹಂದಿ, ಆಮೆ, ಹುಲಿ ಇನ್ನಿತರ ಪ್ರಾಣಿ ಪಕ್ಷಿಗಳು ದೇವರ ವಾಹನವಾಗಿ ಉಪಯೋಗವಾಗಿರುತ್ತದೆ. ಮನುಷ್ಯ ಯಾವುದೇ ಮಂಗಳ ಕಾರ್ಯ ಅಥವಾ ವ್ಯವಹಾರಕ್ಕೆ ಮುಂಚಿತವಾಗಿ ವಿಘ್ನ ನಿವಾರಕನ ಆರಾಧನೆ ಎಂದು ಗಣಪತಿಯನ್ನು ಪೂಜಿಸುತ್ತಾನೆ. ಗಣಪತಿ ಎಂದರೆ ಆನೆ, ಆದರೆ ಇಂದು ಪಶ್ಚಿಮಘಟ್ಟದ ಆನೆಗಳು ನೀರು ಮತ್ತು ಆಹಾರಕ್ಕಾಗಿ ಅಸಹಾಯಕ ಪರಿಸ್ಥಿತಿಯಿಂದ ನಾಡಿಗೆ ಬಂದಾಗ ಆನೆಗಳ ಮೇಲೆ ಅತೀವ ಹಿಂಸೆ, ಹೊಡೆತ, ಮಾರಣಾಂತಿಕ ಏಟು ನೀಡುವುದು ಕೂಡಾ ಅದೇ ಆನೆಯನ್ನು ದೇವರೆಂದು ಆರಾಧಿಸುವ ಮನುಷ್ಯ. ನಾಗರ ಪಂಚಮಿಯ ದಿನ ನಾಡಿನಾದ್ಯಂತ ನಾಗನ ಕಲ್ಲಿಗೆ ಹಾಲೆರೆಯುತ್ತಾರೆ. ಆದರೆ ಅಪ್ಪಿ ತಪ್ಪಿ ಮನೆ ಸುತ್ತಮುತ್ತ ಜೀವಂತ ನಾಗರ ಹಾವು ಬಂದಾಗ ಅದನ್ನು ಹಿಂಸಿಸುವುದೇ ಮನುಷ್ಯನ ಮೂಲ ಉದ್ದೇಶವಾಗಿರುತ್ತದೆ. ಸರಸ್ವತಿ ದೇವಿಯನ್ನು ಆರಾಧಿಸುವರು ಸರಸ್ವತಿಯ ವಾಹನವಾದ ನವಿಲುಗಳು ಆಹಾರ ಹುಡುಕಿಕೊಂಡು ಗದ್ದೆ ತೋಟದ ಕಡೆಗೆ ಬಂದಾಗ ನವಿಲುಗಳನ್ನು ಹೊಡೆದು ಓಡಿಸುತ್ತಾರೆ. ಚಾಮುಂಡೇಶ್ವರಿ ದೇವಿಯ ವಾಹನವಾದ ಹುಲಿಗಳು ತಮ್ಮ ಮರಿಗಳಿಗೋಸ್ಕರ ಆಹಾರ ಹುಡುಕಿಕೊಂಡು ಊರಿನ ಕಡೆ ಬಂದಾಗ ಹುಲಿಯನ್ನು ಕೊಂದೇ ಬಿಡುವವರಿದ್ದಾರೆ. ಹಾಗಾದರೆ ಮನುಷ್ಯನ ದೇವರ ಪ್ರೀತಿ ಕೇವಲ ಗರ್ಭಗುಡಿಗೆ ಮಾತ್ರ ಸೀಮಿತವಾಯಿತೆ? ಎಂಬ ಪ್ರಶ್ನೆ ಕಾಡುತ್ತದೆ.
ಯಾವುದೇ ದೇವಸ್ಥಾನಕ್ಕೆ ಹೋದರೂ ಅಲ್ಲಿಯಾವುದೇ ದೇವರು ಇದ್ದರೂ ನಾವು ಭಕ್ತಿಯಿಂದ ಪೂಜಿಸುವುದು ಭಜಿಸುವುದು ಎಲ್ಲವೂ ಸಹಜ. ಆದರೆ ಎಲ್ಲಾಗುಡಿಗೋಪುರ ದೇವರಿಗಿಂತ ಪ್ರಕೃತಿಯು ನಮ್ಮೆಲ್ಲರ ಮಿಗಿಲಾದ ಅತ್ಯಮೂಲ್ಯವಾದ ದೇವರು ಎಂಬುದನ್ನು ನಾವೆಲ್ಲರೂ ಅರಿಯಬೇಕಾಗುತ್ತದೆ. ಈಗ ಆಗುತ್ತಿರುವ ಪ್ರಾಕೃತಿಕ ದುರಂತಗಳಿಂದ ಮುಕ್ತರಾಗಲು ನಾವು ನಮ್ಮ ಮಕ್ಕಳನ್ನು ಪ್ರಕೃತಿಯ ಕಡೆಗೆ ಕರೆದುಕೊಂಡು ಹೋಗಿ ಪ್ರಕೃತಿಯೇ ನೈಜ ದೇವರು ಎಂದು ತುಂಬಾ ವಿಚಾರಗಳನ್ನು ಹೇಳಬೇಕಾದ ಅನಿವಾರ್ಯತೆ ಇದೆ. ನಮ್ಮ ನಿಮ್ಮೆಲ್ಲರ ಮಕ್ಕಳ ಭವಿಷ್ಯದ ಭದ್ರತೆಗಾಗಿ ಪ್ರಕೃತಿಯನ್ನು ನಾವು ಆರಾಧಿಸಲೇಬೇಕಾಗುತ್ತದೆ. ಪ್ರಕೃತಿಯು ನಮ್ಮೆಲ್ಲರ ಪರಮ ಪೂಜ್ಯ ದೇವರು ಎಂದು ಭಕ್ತಿ ಭಾವಗಳಿಂದ ತುಂಬಿಕೊಂಡಲ್ಲಿಪ್ರಕೃತಿಯು ನಮ್ಮನ್ನು ತಾಯಿಯ ರೀತಿಯಲ್ಲಿಮಮತೆಯಿಂದ ನೋಡಿಕೊಳ್ಳುತ್ತದೆ. ನಾಗರಿಕತೆಯ ಬೆಳವಣಿಗೆಯ ಈ ಸಂದರ್ಭದಲ್ಲಿಪ್ರಕೃತಿಯಿಂದ ದೂರವಾಗುತ್ತಿರುವವರು ಹೆಚ್ಚಾಗುತ್ತಿದ್ದಾರೆ. ಆದರೆ ಪ್ರಕೃತಿಗೆ ಹತ್ತಿರವಾಗಿ ಒಡನಾಟ ಪ್ರೀತಿ ಬಾಂಧವ್ಯ ಬೆಳೆಸಿಕೊಂಡಲ್ಲಿನಾವು ಮುಂದೆ ನೆಮ್ಮದಿಯಾಗಿ ಬದುಕಬಹುದು.
ಬಾಕ್ಸ್
ಭೂಮಿ ತಾಯಿಗೆ ನಮಿಸೋಣ
ನಾವು ದಿನವೂ ಮನೆಯಿಂದ ಶಾಲೆ ಅಥವಾ ಕಚೇರಿಗೆ ಹೊರಡುವಾಗ ದೇವರ ಫೋಟೋಗಳಿಗೆ ಭಕ್ತಿಯನ್ನು ಅರ್ಪಿಸುತ್ತೇವೆ. ಆದರೆ ಮನೆಯಿಂದ ಹೊರಗೆ ಅಂಗಳಕ್ಕೆ ಕಾಲಿಟ್ಟ ಕೂಡಲೇ ನೆಲಕ್ಕೆ ಒಮ್ಮೆ ನಮಸ್ಕಾರ ಮಾಡಬೇಕಾಗುತ್ತದೆ. ಯಾಕೆಂದರೆ ಪ್ರತಿದಿನವೂ ನಾವು ಭೂಮಿ ತಾಯಿಯನ್ನು ತುಳಿಯುತ್ತಾ ಇದ್ದೇವೆ. ನಮ್ಮನ್ನು ಪ್ರತಿದಿನವೂ ಪ್ರತಿ ಕ್ಷಣವೂ ರಕ್ಷಣೆ ಮಾಡುತ್ತರುವುದೇ ಭೂಮಿತಾಯಿ ಅಂದರೆ ದೇವರು.
----
ಲೇಖಕರು: ಪರಿಸರವಾದಿ, ಚಾರಣಿಗ

