ಪೂರ್ಣಿಮಾ ಪರಿಪೂರ್ಣ ನಾದಪಯಣ
ಇಂಟ್ರೊ: ಪಂ.ಬಸವರಾಜ ರಾಜಗುರುಗಳ ಶಿಷ್ಯರಲ್ಲಿಒಬ್ಬರಾದ ಗಾಯಕಿ , ಗುರು ಪೂರ್ಣಿಮಾ ಭಟ್ ಕುಲಕರ್ಣಿ ಬದುಕಿಗೆ ಅರವತ್ತು, ಸಂಗೀತ ಪಯಣಕ್ಕೆ ಐವತ್ತರ ಹೊತ್ತು. ಶುದ್ಧ ಶಾಸ್ತ್ರೀಯ ಸಂಗೀತಕ್ಕೆ ಹೆಸರಾಗಿರುವ ಪೂರ್ಣಿಮಾ ಅವರು ಲವಲವಿಕೆಯೊಂದಿಗೆ ಮನಸು ಬಿಚ್ಚಿದ್ದಾರೆ.
ಚಿತ್ರಾ ಸಂತೋಷ್
ಬದುಕಿನ ದಾರಿಯಲ್ಲಿಸ್ವರಗಳ ಕೈಹಿಡಿದ ಬಗೆ ಹೇಗೆ?
ನನ್ನೂರು ಮಂಗಳೂರು, ಬೆಳೆದಿದ್ದೆಲ್ಲಾಧಾರವಾಡ. ಚಿಕ್ಕಂದಿನಿಂದಲೇ ಭಜನೆಗಳನ್ನು ಹಾಡುವ ರೂಢಿಯಿತ್ತು.
ಉಷಾ ದಾತರ್ ಅವರ ಬಳಿ ಮೂಲ ಶಾಸ್ತ್ರೀಯ ಸಂಗೀತ ಕಲಿಯುವಾಗ ನನಗೆ ವಯಸ್ಸು ಹನ್ನೆರಡು. ಧಾರವಾಡದಲ್ಲಿಓದುತ್ತಿದ್ದ ಸಮಯದಲ್ಲಿಕಾಲೇಜಿನ ಕಾರ್ಯಕ್ರಮದಲ್ಲಿಹಾಡಿದ್ದೆ. ಅದಕ್ಕೆ ಗಂಗೂಬಾಯಿ ಹಾನಗಲ್ ಅತಿಥಿಗಳಾಗಿ ಬಂದಿದ್ದರು. ನನ್ನ ಹಾಡು ಕೇಳಿ ‘‘ಛಲೋ ಹಾಡ್ತಿಯಲ್ವ, ಮುಂದೆ ಸಂಗೀತದಲ್ಲಿಬಿಎ ಓದು’’ ಎಂದುಬಿಟ್ಟರು. ಅವರ ಮಾತೇ ಬದುಕಿನ ಪ್ರಮುಖ ತಿರುವಾಯಿತು. ಸಂಗೀತದಲ್ಲಿಬಿಎ, ಎಂಎ ಪದವಿಗಳನ್ನು ಚಿನ್ನದ ಪದಕಗಳೊಂದಿಗೆ ತೇರ್ಗಡೆಯಾದೆ. ಅದೇ ಸಮಯದಲ್ಲಿಪಂ.ವಸಂತ ಕನಕಾಪುರ ಅವರ ಸಂಯೋಜನೆಯಲ್ಲಿಆಕಾಶವಾಣಿಗೆ ನೂರಾರು ಭಾವಗೀತೆಗಳನ್ನು ಹಾಡಿದೆ. ಕಣವಿ, ಕರ್ಕಿ, ವಿ.ಸಿ.ಅಯ್ಯರ್ ಸಂಗ್ , ನಿಸಾರ್ ಅಹಮದ್ , ಜಿಎಸ್ ಎಸ್ , ಕುವೆಂಪು ಸೇರಿದಂತೆ ಅನೇಕರ ಗೀತೆಗಳಿಗೆ ದನಿಯಾಗಿದ್ದೇನೆ.
ಬಸವರಾಜ ರಾಜಗುರುಗಳೊಂದಿಗಿನ ನಂಟು ಬೆಳೆದಿದ್ದು ಹೇಗೆ?
ಬಿಎ ಓದುವಾಗ ರೇಡಿಯೋದಲ್ಲಿರಾಜಗುರುಗಳ ಗಾಯನ ಹೆಚ್ಚು ಕೇಳುತ್ತಿದ್ದೆ. ಯಮನ್ , ಶುದ್ಧಕಲ್ಯಾಣ, ಸಾರಂಗ ಪ್ರಕಾರದ ರಾಗಗಳು, ಬಾಗೇಶ್ರಿ, ಬಿಹಾಗ್ ... ಮೊದಲಾದ ರಾಗಗಳು ಅವರ ಮಧುರದನಿಯಲ್ಲಿಮನಸೂರೆಗೊಳ್ಳುತ್ತಿದ್ದವು. ಅವರೊಬ್ಬ ಸೃಜನಶೀಲ ಗಾಯಕರು. ಬಿಎ ಓದುವಾಗಲೇ ಅವರಲ್ಲಿಸೇರಿಕೊಂಡೆ. ಕಲಿಕೆಯ ಆರಂಭದಲ್ಲೇ ಅವರು ಕ್ಲಿಷ್ಟಕರವಾದ ‘ಜೈಜೈವಂತಿ’ ರಾಗ ಆರಂಭಿಸಿದ್ದು ಇವತ್ತಿಗೂ ನೆನಪಿದೆ.
ಮದುವೆಯ ನಂತರ ಸಂಗೀತದ ಕಲಿಕೆಯ ಪಯಣ ಹೇಗಾಯಿತು?
ಮದುವೆಯ ಬಳಿಕ ಪುಣೆಯಲ್ಲಿನೆಲೆಸಬೇಕಾಯಿತು. ಸುಮಾರು 15 ವರ್ಷ ಪುಣೆ ಮತ್ತು ಮುಂಬಯಿಯಲ್ಲಿದ್ದೆ. ಆ ಕಾಲಘಟ್ಟ ಮಹಿಳಾ ಕಲಾವಿದೆಯರ ಪರ್ವಕಾಲ. ಕರ್ನಾಟಕದಲ್ಲಿಗಂಗೂಬಾಯಿ, ಪುಣೆಯಲ್ಲಿಕಿಶೋರಿ ಅಮೋನ್ ಕರ್ , ವೀಣಾ ಸಹಸ್ರಬುದ್ಧೆ, ಮಾಲಿನಿ ರಾಜುರ್ ಕರ್ , ಪದ್ಮ ತಳವಾಳಕರ್ ಮೊದಲಾದವರು ಅಗ್ರಪಂಕ್ತಿಯಲ್ಲಿದ್ದರು. ಅವರ ಕಛೇರಿಗಳಿಂದ ಪ್ರೇರಣೆ ಪಡೆಯುತ್ತಿದ್ದೆ. ಮದುವೆಗೆ ಮೊದಲು ಬೆಳಗ್ಗೆ ಐದರ ಹೊತ್ತಿಗೆ ಆರಂಭವಾಗುತ್ತಿದ್ದ ರಿಯಾಜ…, ಮದುವೆಯ ನಂತರ ಸಮಯ ಹೊಂದಾಣಿಕೆ ಮೇಲೆ ನಡೆಯುತ್ತಿತ್ತು. ಅವಳಿ ಮಕ್ಕಳೂ ಜನಿಸಿದರು. ಸಿಕ್ಕ ಸಮಯದಲ್ಲಿಯೇ ಕಛೇರಿಗಳು, ಗಂಭೀರವಾಗಿ ಅಭ್ಯಾಸ ಮಾಡಿದೆ. ಅತ್ತೆ ಮನೆಯಲ್ಲಿಪೂರ್ಣ ಸಹಕಾರವಿತ್ತು. ಪುಣೆಯಲ್ಲಿರುವಾಗಲೇ ಪ್ರತಿಷ್ಠಿತ ಸವಾಯಿ ಗಂಧರ್ವ ಉತ್ಸವದಲ್ಲಿಅವಕಾಶ ಸಿಕ್ಕಿತು. ವಿಶೇಷ ಎಂದರೆ, ನಾನು ಹಾಡಿದ ‘ಶುದ್ದ ಕಲ್ಯಾಣ’ ರಾಗದ ಕೆಸೆಟ್ ಕೇಳಿದ ಭೀಮಸೇನ ಜೋಷಿಯವರು ಕರೆದರು, ಸಾವಿರಾರು ಶ್ರೋತೃಗಳ ಎದುರು ‘ಪುರಿಯಾ’ ಮತ್ತು ‘ಹಮೀರ್ ’ ರಾಗ ಪ್ರಸ್ತುತಿಪಡಿಸಿದ್ದು ಇನ್ನೂ ಸಿಹಿಸಿಹಿ ನೆನಪು. ತದನಂತರ ಮಹಾರಾಷ್ಟ್ರದ ಎಲ್ಲಾಕಡೆಗಳಲ್ಲಿಅಪಾರ ಅವಕಾಶಗಳು ಒದಗಿದವು. ಪುಣೆಯಲ್ಲಿದ್ದಾಗ ಕುಸುಮಾ ಶೆಂಡೆ ಅವರ ಬಳಿ ನಾಟ್ಯಸಂಗೀತ, ಠುಮ್ರಿ, ಅಭಂಗ ಪ್ರಕಾರಗಳನ್ನು ಕಲಿತರೆ, ಮುಂಬಯಿಯಲ್ಲಿಮುರಳಿ ಮನೋಹರ ಶುಕ್ಲಾಅವರ ಬಳಿಯೂ ಕಲಿತಿದ್ದೇನೆ.
ಅರವತ್ತರ ಹೊತ್ತಿನಲ್ಲಿಹಿಂತಿರುಗಿ ನೋಡುವುದಾದರೆ ಸುಲಭವಿತ್ತೆ ಸಾಧನೆಯ ದಾರಿ?
ಯಾವುದೇ ಕ್ಷೇತ್ರವಾಗಿರಲಿ ಹೆಣ್ಣುಮಕ್ಕಳ ಸಾಧನೆ ಅಷ್ಟು ಸುಲಭವಲ್ಲ. ಪ್ರಕೃತಿ ರೂಪಿಸಿದಂತೆ ಹೆಣ್ಣು ಅನೇಕ ಮಾನಸಿಕ, ದೈಹಿಕ ಮಾರ್ಪಾಟುಗಳನ್ನು ಹೊಂದುತ್ತಲೇ ಇರುವವಳು. ಅವಳೆಷ್ಟೇ ಸಾಧನೆ ಮಾಡಿರಲಿ ಐವತ್ತರ ಹೊತ್ತಿಗೆ ಹೆಗಲೇರುವ ಮೆನೋಪಾಸ್ ಹಂತ, ಮಾನಸಿಕವಾಗಿ ಬಳಲುವುದು ಇದೇ ಹಂತದಲ್ಲಿ. ಇಂಥ ಹೊತ್ತಿನಲ್ಲಿಸಂಗೀತ ಶಕ್ತಿ ನೀಡಿದೆ. ಎಷ್ಟೇ ಒತ್ತಡವಿದ್ದರೂ ಮನದ ಭಾರ ಹಗುರಾಗಿದ್ದು ಸಂಗೀತದಿಂದಲೇ. ಇವತ್ತಿಗೂ ಬೆಳಗ್ಗೆ ಓಂಕಾರ ಅಭ್ಯಾಸ ಮಾಡುತ್ತೇನೆ, ರಿಯಾಜ… ಮಾಡುತ್ತೇನೆ, ಯೋಗ-ಧ್ಯಾನದಲ್ಲಿತೊಡಗಿಸಿಕೊಂಡು ಬೆಳಗಿನ ಆರಂಭದಿಂದಲೇ ಸಕಾರಾತ್ಮಕವಾಗಿರಲು ಪ್ರಯತ್ನಿಸುತ್ತೇನೆ. ಸಂಗೀತಕ್ಕೆ ಸಂಪೂರ್ಣ ಸಮರ್ಪಿಸಿಕೊಂಡರೆ, ಬದುಕಿಗೆ ಬೇಕಾದ ಎಲ್ಲವೂ ದಕ್ಕುತ್ತದೆ.
ಬಾಕ್ಸ್
ವೈವಿಧ್ಯಮಯ ಪರಿಕಲ್ಪನೆ
ನಿರ್ದಿಷ್ಟ ಪರಿಕಲ್ಪನೆಯ ಕಾರ್ಯಕ್ರಮಕ್ಕೆ ಹೆಸರಾದವರು ಪೂರ್ಣಿಮಾ ಕುಲಕರ್ಣಿಯವರು. ಋುತುಗಳಾಧರಿತ ರಾಗಗಳ ಮೇಲೆ ಋುತುಚಕ್ರ, ಋುತುಸಂಭ್ರಮ, ಕೃಷ್ಣನ ಮೇಲಿನ ರಚನೆಗಳನ್ನೊಳಗೊಂಡ ಕೃಷ್ಣನಾದ, ವಸಂತ ಮಾಸದ ವಿಶೇಷ ಸಾರುವ ಬಸಂತ ಬಹಾರ್ , ದುರ್ಗೆಯ ಮೇಲಿನ ಬಂದಿಶ್ ಆಧರಿತ ‘ದೇವಿ ನಮನ’... ಜನಪ್ರಿಯ ಕಾರ್ಯಕ್ರಮಗಳಾಗಿವೆ.
ಧಿಧಿಧಿಧಿ----
ಪೂರ್ಣಿಮಾ ಭಟ್ 60ನೇ ವರ್ಷದ ಜನುಮದಿನ ನಿಮಿತ್ತ ಮೇ 31ರಂದು ಬಸವೇಶ್ವರ ನಗರದ ಕೆಇಎ ಪ್ರಭಾತ್ ರಂಗಮಂದಿರದಲ್ಲಿ ಬೆಳಗ್ಗೆ 9.45ಕ್ಕೆ ಅಭಿನಂದನಾ ಸಮಾರಂಭವಿದೆ.
--

