ಶರಣ ಪರಂಪರೆ

Contributed byShridevi Ambekallu|Vijaya Karnataka

ಕಾಶ್ಮೀರದ ದೊರೆ ಮಹಾದೇವ ಭೂಪಾಲ ಮತ್ತು ರಾಣಿ ಗಂಗಾದೇವಿ ಶರಣರಾಗಿ ಕಲ್ಯಾಣಕ್ಕೆ ಬಂದರು. ಮೋಳಿಗೆ ಮಾರಯ್ಯ ಮತ್ತು ಮಹಾದೇವಮ್ಮರಾಗಿ ಬಸವ ಮಾರ್ಗದಲ್ಲಿ ನಡೆದರು. ಕಾಯಕ ಮತ್ತು ದಾಸೋಹದಲ್ಲಿ ತೊಡಗಿದರು. ಅವರ ಜೀವನದ ಘಟನೆಗಳು ತ್ಯಾಗ, ಕಾಯಕ, ದಾಸೋಹದ ಮೌಲ್ಯಗಳನ್ನು ಸಾರುತ್ತವೆ. ಮೋಳಕೇರಾದಲ್ಲಿ ಅವರ ಸ್ಮಾರಕವಿದೆ.

gangadevis sharan tradition message of sacrifice and charity

ಕಾಶ್ಮೀರದಿಂದ ಬಂದ ರಾಣಿ ಗಂಗಾದೇವಿ

----------

ರಾಜ ಮನೆತನದಲ್ಲಿದ್ದರೂ ಸುಖ ಭೋಗಗಳನ್ನು ತ್ಯಾಗ ಮಾಡಿ ಶರಣರಾದ ರಾಜ ರಾಣಿಯ ಕಥನವಿದು.

-----

ಕಾಶ್ಮೀರಕ್ಕೆ ಭೂಲೋಕದ ಸ್ವರ್ಗವೆಂದೇ ಹೆಸರು. ನಿಸರ್ಗ ಸೌಂದರ್ಯದ ಖಣಿ. ಕಾಶ್ಮೀರದ ಒಂದು ಭಾಗವಾಗಿದ್ದ ಸವಾಲಕ್ಷದ ದೊರೆ ಮಹಾದೇವ ಭೂಪಾಲ. ಅವನ ಧರ್ಮಪತ್ನಿ ಗಂಗಾದೇವಿ. ಶೈವಧರ್ಮದ ನಿಷ್ಠಾವಂತರು. ಶಿವಭಕ್ತರು. ನಿತ್ಯ ಜಂಗಮರಿಗೆ ಊಟ ಬಡಿಸದೇ, ತಾವು ಉಣ್ಣುತ್ತಿರಲಿಲ್ಲ. ಕಾಶ್ಮೀರದ ಸಾವಿರಾರು ಜಂಗಮರು ಕಲ್ಯಾಣದ ಚರಜಂಗಮರಿಂದ ಪ್ರಭಾವಿತರಾಗಿ ಕಲ್ಯಾಣಕ್ಕೆ ಬಂದು ಅಲ್ಲಿಯೇ ಉಳಿದರು. ಇದನ್ನು ತಿಳಿದ ಕಾಶ್ಮೀರದ ದೊರೆ ಮಹಾದೇವ ಭೂಪಾಲನಿಗೆ ಸಿಟ್ಟು ಬಂತು. ಅವನು ಬಸವಣ್ಣನವರನ್ನು ಕೊಲೆ ಮಾಡಲು ಚಂಡಾಲ ಚಿಕ್ಕಯ್ಯನನ್ನು ಕಲ್ಯಾಣಕ್ಕೆ ಕಳಿಸಿದನು. ಬಸವಣ್ಣನವರ ಮಾತೃವಾತ್ಸಲ್ಯದಿಂದ ಅವನು ಪರಿವರ್ತನೆಯಾಗಿ ನಿಜಲಿಂಗ ಚಿಕ್ಕಯ್ಯನಾಗಿ ಶರಣನಾದರು. ಈ ಘಟನೆ ಮಹಾದೇವ ಭೂಪಾಲನಲ್ಲಿಪರಿವರ್ತನೆ ತಂದಿತು. ಮಹಾದೇವ ಭೂಪಾಲ ರಾಜ್ಯವನ್ನು ಬಿಟ್ಟು ಸತಿ-ಪತಿಗಳು ಕಲ್ಯಾಣಕ್ಕೆ ಬಂದರು.

ಮಹಾದೇವ ಭೂಪಾಲನು ಮೋಳಿಗೆ ಮಾರಯ್ಯರಾಗಿ, ರಾಣಿ ಗಂಗಾದೇವಿಯವರು ಮಹಾದೇವಮ್ಮರಾಗಿ ಬಸವಪಥದಲ್ಲಿಸಾಗಿದರು. ಅವರ ಕಾಯಕ ಅರಣ್ಯಕ್ಕೆ ಹೋಗಿ ಕಟ್ಟಿಗೆ ಕಡಿದು ಮಾರಾಟ ಮಾಡಿ ದಾಸೋಹ ಮಾಡುವುದು. ಮಹಾದೇವಮ್ಮನವರು ನಸುಕಿನಲ್ಲಿಎದ್ದು ಸ್ನಾನ ಮಾಡಿ ಲಿಂಗಪೂಜೆ ಮಾಡಿಕೊಂಡು ದಾಸೋಹಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.

ಮೋಳಿಗೆ ಮಹಾದೇವಮ್ಮನವರುÜ ‘ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನ’ ಎಂಬ ವಚನಾಂಕಿತದಲ್ಲಿರಚಿಸಿದ 70 ವಚನಗಳು ದೊರಕಿವೆ.

ಬಂಗಾರ ಮಣ್ಣಾಯಿತು:

ಕಲ್ಯಾಣಕ್ಕೆ ಬರುವಾಗ ದಾರಿಯಲ್ಲಿಒಂದು ಘಟನೆ ನಡೆಯುತ್ತದೆ. ಕೆಲವು ಬಂಗಾರದ ನಾಣ್ಯಗಳು ದಾರಿಯಲ್ಲಿಬಿದ್ದಿದ್ದವು. ಮೋಳಿಗೆ ಮಾರಯ್ಯನವರು ಅದನ್ನು ನೋಡಿ ಮೇಲೆ ಮಣ್ಣು ಮುಚ್ಚಿದರು. ಕಾರಣ ಹೆಣ್ಣುಮಕ್ಕಳಿಗೆ ಬಂಗಾರದ ಮೇಲೆ ಹೆಚ್ಚಿನ ಆಸೆ ಇರುತ್ತದೆ. ಸತಿ ಗಂಗಾದೇವಿ ಆಸೆಗೆ ಒಳಗಾಗಬಾರದೆಂದು ಮಣ್ಣು ಮುಚ್ಚಿ ಮುಂದೆ ಹೊರಟರು. ಗಂಗಾದೇವಿ ಅದನ್ನು ಗಮನಿಸಿದರು. ‘ಏನು ಮಾಡುತ್ತಿದ್ದೀರಿ?’ ಎಂದು ಕೇಳಿದರು. ಮಹಾದೇವ ಭೂಪಾಲ ‘ಏನೂ ಇಲ್ಲ, ಇಲ್ಲಿಬಂಗಾರದ ನಾಣ್ಯಗಳು ಬಿದ್ದಿವೆ. ನಿನಗೆ ಆಸೆಯಾಗಬಾರದು ಎಂದು ಮಣ್ಣು ಮುಚ್ಚಿದೆ’ ಎಂದು ಹೇಳಿದರು. ಅದಕ್ಕೆ ಗಂಗಾದೇವಿಯವರು ಹೇಳುತ್ತಾರೆ, ‘ಅಯ್ಯೋ ನಿಮಗೆ ಬಂಗಾರವಾಗಿ ಕಂಡದ್ದೆ ಆಶ್ಚರ್ಯ. ನನಗೆ ಕಲ್ಲುಮಣ್ಣಾಗಿ ಕಾಣುತ್ತದೆ’ ಎಂದಾಗ, ಮಹಾದೇವ ಭೂಪಾಲರಿಗೆ ತನ್ನ ಸತಿ ನನಗಿಂತಲೂ ಒಂದು ಹೆಜ್ಜೆ ಮುಂದೆ ಇದ್ದಾಳೆಂದು ಅಭಿಮಾನ ಮೂಡಿತು.

ಕಟ್ಟಿಗೆ ಬಂಗಾರವಾಯಿತು:

ಮತ್ತೊಂದು ಪ್ರಸಂಗ ನಡೆಯುತ್ತದೆ. ಬಸವಣ್ಣನವರು ಮಾತೃಹೃದಯಿಗಳು. ಕಾಶ್ಮೀರದಿಂದ ಬಂದ ರಾಜರು ಕಷ್ಟದಿಂದ ಬಳಲುಬಾರದು ಎಂದು ಬಸವಣ್ಣನವರು ಮಾರುವೇಷದಲ್ಲಿಮೋಳಿಗೆ ಮಹಾದೇವಮ್ಮನವರ ಮನೆಗೆ ಬಂದು ಪ್ರಸಾದ ಸ್ವೀಕರಿಸಿ ಬಂಗಾರದ ನಾಣ್ಯದ ಚೀಲ ಮಣೆಯ ಕೆಳಗೆ ಇಟ್ಟು ಹೋಗುತ್ತಾರೆ. ಇದನ್ನು ಕಂಡು ಮೋಳಿಗೆ ಮಾರಯ್ಯನವರಿಗೆ ಸಿಟ್ಟು ಬರುತ್ತದೆ. ಬಂಗಾರದ ಚೀಲ ತಿಪ್ಪೆಗೆ ಎಸೆದು ಮನೆ ಸಾರಿಸಿದರು. ಇದು ಬಸವಣ್ಣನವರ ಆಟವೇ ಆಗಿದೆ ಎಂದು ಭಾವಿಸಿ ಬಸವಣ್ಣನವರಿಗೆ ತನ್ನ ಹಿರಿಮೆ ತೋರಿಸಬೇಕೆಂದು ಕಲ್ಯಾಣದಲ್ಲಿದ್ದ ಎಲ್ಲಜಂಗಮರಿಗೆ ಪ್ರಸಾದಕ್ಕೆ ಹೇಳಿದರು. ನಂತರ ಮೂಲೆಯಲ್ಲಿಬಿದ್ದಿದ್ದ ಕಟ್ಟಿಗೆಯ ರಾಶಿ ಮೇಲೆ ಪಾದೋದಕ ಸಿಂಪಡಣೆ ಮಾಡಿದಾಗ ಕಟ್ಟಿಗೆ ರಾಶಿ ಬಂಗಾರವಾಗುತ್ತದೆ. ಬಂದ ಜಂಗಮರಿಗೆಲ್ಲಪ್ರಸಾದ ಮಾಡಿಸಿ, ಬಂಗಾರದ ಕಟ್ಟಿಗೆಯನ್ನು ಕೊಟ್ಟು ಕಳಿಸಿದರು. ಮಹಾಮನೆಯ ಮುಂದೆ ಎಲ್ಲಜಂಗಮರು ಬಂಗಾರದ ಕಟ್ಟಿಗೆಯನ್ನು ತೆಗೆದುಕೊಂಡು ಹೋಗುವ ದೃಶ್ಯ ನೋಡಿ ಬಸವಣ್ಣನವರು ಬೆರಗಾದರು. ಮಾರಯ್ಯನವರ ಮನೆಗೆ ಹೋಗಿ ಕ್ಷಮೆ ಯಾಚಿಸಿದರು.

ಅರಿವಿನ ಬೆಳಕು:

ಮೇಲಿನ ಪ್ರಸಂಗದಲ್ಲಿಮಾರಯ್ಯನವರ ಸೂಕ್ಷ್ಮ ಅಭಿಮಾನದ ಅತಿರೇಕವು ಮಹಾದೇವಮ್ಮನವರಿಗೆ ಸರಿಬರಲಿಲ್ಲ. ಬಸವಣ್ಣನವರ ವರ್ತನೆಯನ್ನು ಇಷ್ಟೇಕೆ ಒರೆಗೆ ಹಚ್ಚಬೇಕು? ಮಾರಯ್ಯನವರ ವರ್ತನೆ ಅವರಿಗೆ ಹಿಡಿಸಲಿಲ್ಲ. ಅದಕ್ಕೆ ಅವರು ತನ್ನ ವಚನದಲ್ಲಿಉತ್ತರ ನೀಡುತ್ತಾರೆ, ‘ಕಾಷ್ಟವ ಸುವರ್ಣವ ಮಾಡಿದೆನೆಂಬ ಘಾತುಕತನವೆ ನಿಮ್ಮವ ಭಕ್ತಿ?’. ಕಟ್ಟಿಗೆಯನ್ನು ಚಿನ್ನವನ್ನಾಗಿ ಮಾಡುವ ಹಮ್ಮುಬಿಮ್ಮುವಿನ ಭಕ್ತಿ ನಿಮಗೆ ಸಲ್ಲದು. ಇದಕ್ಕೆ ಶಿವ ಮೆಚ್ಚುವುದು ಇಲ್ಲ. ಬಸವಣ್ಣನವರು ತಿಳಿದೊ ತಿಳಿಯಲಾರದಕ್ಕೊ ಬಂಗಾರದ ನಾಣ್ಯವನ್ನು ಇಟ್ಟಿದ್ದು ಸರಿ ಎನಿಸಲಿಲ್ಲ. ಆದರೆ ಅವರ ಈ ವರ್ತನೆಗೆ ಈ ಪ್ರತಿಷ್ಠೆ ಒಡ್ಡುವುದು ಏನು ಅವಶ್ಯಕತೆ ಇತ್ತು. ನಾನು ಕಾಶ್ಮೀರದ ಅರಸ ಎಂಬ ಸೂಕ್ಷತ್ರ್ಮ ಅಹಂ ನಿಮ್ಮೊಳಗೆ ಅಳಿದಿಲ್ಲ. ಇದು ಶರಣರಿಗೆ ಸಲ್ಲುವ ನಡೆಯಲ್ಲಎಂದು ಮಹಾದೇವಮ್ಮನವರು ತನ್ನ ಪತಿಗೆ ಬುದ್ಧಿವಾದ ಹೇಳುತ್ತಾರೆ. ಕೊಡುವೆನೆಂಬುದು ಬಸವಣ್ಣನವರ ಅಭಿಮಾನವಾದರೆ, ನಾನು ಏನನ್ನೂ ಯಾರಿಂದಲೂ ಕೊಳ್ಳೆನು ನಾನೇನು ಕಡಿಮೆಯವನೇ ಎಂಬುದು ಮಾರಯ್ಯನವರ ಅಭಿಮಾನವಿದ್ದು ಇವರಿಬ್ಬರಿಗೂ ಅರಿವಿನ ಬೆಳಕು ನೀಡಿದವರು ಮಹಾದೇವಮ್ಮ.

ಅನುಭಾವದ ಎತ್ತರ:

ಕಲ್ಯಾಣ ಕ್ರಾಂತಿಯಾಗುತ್ತದೆ. ಶರಣರು ಅಗಲಿ ಹೋಗಿದ್ದಾರೆ. ಕಲ್ಯಾಣದ ಹತ್ಯಾಕಾಂಡ ನೋಡಿ ಮಾರಯ್ಯ ವಿಚಲಿತರಾಗುತ್ತಾರೆ. ನಿರಾಸೆಯ ಛಾಯೆ ಆವರಿಸುತ್ತದೆ. ದುಃಖ ನಿರಾಸೆಯಿಂದ ಹೆಂಡತಿಯ ಮುಂದೆ ಹೇಳಿಕೊಳ್ಳುತಾರೆ- ‘ಊರು ಕೆಟ್ಟು ಸೂರೆಯಾಡುವಲ್ಲಿಆರಿಗಾರು ಇಲ್ಲಬಸವಣ್ಣ ಸಂಗಮಕ್ಕೆ, ಚನ್ನಬಸವಣ್ಣ ಉಳವಿಗೆ, ಪ್ರಭು ಕದಳಿಗೆ ಮಿಕ್ಕಿದ ಪ್ರಮಥರೆಲ್ಲರು ತಮ್ಮ ತಮ್ಮ ಲಕ್ಷ ಭಾವಕ್ಕೆ ಮುಕ್ತಿಯನೆಯ್ದಿಹರು. ನನಗೊಂದು ಬಟ್ಟೆಯ ಹೇಳ ನಿಃಕಳಂಕ ಮಲ್ಲಿಕಾರ್ಜುನಾ’ ಎಂದು ಕೇಳುತ್ತಾರೆ.

ಆ ಸಂದರ್ಭದಲ್ಲಿಮಹಾದೇವಮ್ಮ ಪತಿಗೆ ಸಮಾಧಾನದ ಮಾತುಗಳನ್ನು ಹೇಳುತ್ತಾರೆ. ಎಂಥ ಪ್ರಸಂಗದಲ್ಲಿಯೂ ವಿಚಲಿತರಾಗಬಾರದು. ಏನೇ ಬಂದರೂ ಸಮಾಧಾನದಿಂದ ಅರಿವಿನ ಬೆಳಕಿನಲ್ಲಿಆನಂದ ಅನುಭವಿಸಬೇಕು. ಮಹಾದೇವಮ್ಮನವರ ಈ ನಿಲುವು, ತಿಳಿವಳಿಕೆ, ಅನುಭಾವದ ಎತ್ತರ ಕಂಡು ಮೋಳಿಗೆ ಮಾರಯ್ಯನವರಿಗೆ ವಿಸ್ಮಯವಾಗುತ್ತದೆ. ಮಹಾದೇವಮ್ಮನವರು ತನ್ನ ಪತಿಗೆ ವಚನದ ಮೂಲಕ ಉತ್ತರ ನೀಡಿ ಸಮಾಧಾನ ಪಡಿಸುತ್ತಾರೆ.

‘ಮಾಡಿದ ಭಕ್ತಿಗೆ ಕೈಲಾಸಕ್ಕೆ ಹೋದೆಹೆನೆಂಬುದು ಕೈಕೂಲಿಯೇ? ಕೈಲಾಸವೆಂಬ ಸೂತ್ರದ ಬೆಳಗಿಗೆ ಮನಸೋತಿರಲ್ಲ. ಕೈಯಲ್ಲಿಜ್ಯೋತಿ ಹಿಡಿದು ಕತ್ತಲೆ ಎನಲೇತಕ್ಕೆ?, ಪರುಷ ಕೈಯಲ್ಲಿಹಿಡಿದು ಕೂಲಿಯ ಮಾಡಲೇತಕ್ಕೆ? ಮುಂತಾದ ವಚನಗಳ ಮೂಲಕ ದಿವ್ಯಜ್ಞಾನಿ ಮಹಾದೇವಮ್ಮನವರ ನುಡಿಗಳು ಮಾರಯ್ಯನವರ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುತ್ತದೆ.

ಮೋಳಕೇರಾದಲ್ಲಿಸ್ಮಾರಕ:

ಕಲ್ಯಾಣದ ಹತ್ಯಾಕಾಂಡದ ನಂತರ ಎಲ್ಲಶರಣರು ಕಲ್ಯಾಣ ಬಿಟ್ಟು ಹೋದರು. ವಚನ ಸಾಹಿತ್ಯ ರಕ್ಷಣೆಗಾಗಿ ಹೋರಾಡಿದರು. ಮೋಳಿಗೆ ಮಾರಯ್ಯ-ಮಹಾದೇವಮ್ಮನವರು ಕಲ್ಯಾಣದ ಹತ್ತಿರದ ಮೋಳಕೇರಾ ಗ್ರಾಮದಲ್ಲಿಯೇ ಕೊನೆಯ ದಿನಗಳನ್ನು ಕಳೆದು ಅಲ್ಲಿಯೇ ಲಿಂಗೈಕ್ಯರಾದರು. ಮೋಳಿಗೆ ದಂಪತಿಯಿಂದಲೇ ಈ ಗ್ರಾಮಕ್ಕೆ ಮೋಳಕೇರಾ ಎಂಬ ಹೆಸರು ಬಂದಿರಬಹುದು ಎನಿಸುತ್ತದೆ. ಇಂದಿಗೂ ಅವರ ಸ್ಮಾರಕ ಮೋಳಕೇರಾದಲ್ಲಿಇದೆ. ಇದು ಕೇವಲ ಸ್ಮಾರಕವಲ್ಲ. ತ್ಯಾಗ, ಕಾಯಕ, ದಾಸೋಹ, ಸರಳತೆ ಮುಂತಾದ ಮೌಲ್ಯಗಳು ಸಾರುವ ಪ್ರೇರಣಾ ಸ್ಥಳವಾಗಿದೆ. ಶರಣರ ಸ್ಮಾರಕಗಳು ಅವರು ಬದುಕಿದ ಮೌಲ್ಯಗಳನ್ನು ಸಾರುತ್ತ ನಿಂತಿವೆ. ಆ ದಿಶೆಯಲ್ಲಿನಾವು ಇಂತಹ ಸ್ಮಾರಕಗಳನ್ನು ರಕ್ಷಿಸುವ ಹಾಗೂ ಸಂವರ್ಧಿಸುವ ಕಾರ್ಯ ಮಾಡಬೇಕಾಗಿದೆ.

-----------------

-ನಾಡೋಜ ಪೂಜ್ಯಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಹಿರೇಮಠ ಸಂಸ್ಥಾನ, ಭಾಲ್ಕಿ ಮೊ: 9448115404