ವೆಂಕಟಾಚಲಧಾಮ ಪು. 12 ಲೀಡ್

Contributed byShridevi Ambekallu|Vijaya Karnataka

ಮೈಸೂರಿನಲ್ಲಿರುವ ಶ್ರೀ ವೆಂಕಟಾಚಲಧಾಮವು ಶ್ರೀನಿವಾಸ ಮತ್ತು ಶ್ರೀ ಗುರು ರಾಘವೇಂದ್ರರ ಸನ್ನಿಧಿಗಳನ್ನು ಹೊಂದಿದೆ. ಈ ಧಾಮವು ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಪ್ರಮುಖ ಕ್ಷೇತ್ರವಾಗಿದೆ. ಜೂನ್ 5 ರಂದು ಧಾಮದ 15ನೇ ವಾರ್ಷಿಕೋತ್ಸವ ನಡೆಯಲಿದೆ. ಶ್ರೀ ಭಂಡಾರಕೇರಿ ಮಠವು ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತದೆ. ಅನ್ನದಾನ, ಧಾರ್ಮಿಕ ಸೇವೆಗಳು ನಿರಂತರವಾಗಿ ನಡೆಯುತ್ತಿವೆ.

venkatachaladhama 15th anniversary a religious and cultural festival

ಪದ್ಮ ಪುರಾಣೋಕ್ತ ಶ್ರೀನಿವಾಸನ ಸನ್ನಿಧಿ

ಶ್ರೀ ವೆಂಕಟಾಚಲಧಾಮ

-----------------

* ಮೈಸೂರಿನಲ್ಲಿದೆ ವರಪ್ರದ ದೇವ- ಗುರು ಸನ್ನಿಧಿ

* ಜೂನ್ 5ರಂದು 15ನೇ ವಾರ್ಷಿಕೋತ್ಸವ

* ಭಂಡಾರಕೇರಿ ಶ್ರೀಗಳ ಸಾನ್ನಿಧ್ಯ

--------------

- ವಾರುಣಿ ಮೈಸೂರು

=----

ಪದ್ಮ ಪುರಾಣೋಕ್ತವಾಗಿ ಕೆತ್ತನೆಗೊಂಡ ಕಲ್ಯಾಣಕಾರಕ ಶ್ರೀ ವೆಂಕಟೇಶನ ಸನ್ನಿಧಾನ, ಕಲಿಯುಗದ ಕಾಮಧೇನುವಾದ ಶ್ರೀ ಗುರು ರಾಘವೇಂದ್ರರ ವೃಂದಾವನ ಕ್ಷೇತ್ರಗಳ ಸಂಗಮವು ಅರಮನೆ ನಗರಿಯ ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಗೊಳಿಸುವಲ್ಲಿಶ್ರೀ ವೆಂಕಟಾಚಲಧಾಮ ಪ್ರಧಾನವಾಗಿದೆ.

ಚಾಮರಾಜ ಜೋಡಿ ರಸ್ತೆಯಲ್ಲಿರಾಮಸ್ವಾಮಿ ವೃತ್ತದ ಸನಿಹವೇ ಇರುವ ಈ ದೇಗುಲದಲ್ಲಿಅಭಯಪ್ರದ ವೇಂಕಟೇಶನ ಮನ ಮೋಹಕ ವಿಗ್ರಹವೇ ಆರಾಧನೆಗಳಿಗೆ ಸ್ಫೂರ್ತಿದಾಯಕವಾಗಿದೆ.

ದೇವ-ಗುರು ವೃಂದಾವನ ಸನ್ನಿಧಿಯನ್ನು ಒಂದೇ ಕ್ಷೇತ್ರದಲ್ಲಿದರ್ಶನ ಮಾಡುವ ಸುಕೃತ ಸಿಗುವುದು ಬಹುಅಪರೂಪ. ಹಾಗಾಗಿ ಇದು ಭಕ್ತರ ಅಭೀಷ್ಟಗಳನ್ನು ಶೀಘ್ರ ಈಡೇರಿಸುವ ವಿಶೇಷ ಕ್ಷೇತ್ರ ಇದಾಗಿದೆ. ಭಕ್ತಗಣದ ಅನನ್ಯ ಪ್ರಾರ್ಥನೆ ಫಲವಾಗಿಯೇ ಈ ಸನ್ನಿಧಿ ರೂಪ ಪಡೆಯಿತು. ಉಡುಪಿ ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥರು ಆಗಾಗ್ಗೆ ಮೈಸೂರಿನ ಭಕ್ತರ ಮನೆಗಳಿಗೆ ಆಗಮಿಸಿ ತೊಟ್ಟಿಲು ಪೂಜೆ ಮಾಡುತ್ತಿದ್ದರು. ಒಮ್ಮೆ ಆಡಿಟರ್ ಜಿ. ರವೀಂದ್ರರ ಮನೆಗೆ ಭೇಟಿ ನೀಡಿದ್ದ ಸಂದರ್ಭ ಮೈಸೂರಿನಲ್ಲಿಮಠದ ಶಾಖೆ (ಭಾಗವತಾಶ್ರಮ ಪ್ರತಿಷ್ಠಾನ) ಆರಂಭಿಸುವ ಪ್ರಸ್ತಾಪ ಮಾಡಿದರು. ಇಲ್ಲಿವಿವಿಧ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆ ರೂಪಿಸಬೇಕು ಎಂಬುದು ಶ್ರೀಗಳ ಆಶಯವಾಗಿತ್ತು.

ಚಾಮರಾಜ ಜೋಡಿರಸ್ತೆಯಲ್ಲಿಮೈಸೂರು ಆಸ್ಥಾನದ ಅಗ್ರಪಂಕ್ತಿ ಸಂಗೀತ ವಿದ್ವಾಂಸ ಪದ್ಮನಾಭರಾಯರ ಹಳೆಯ ಮನೆಯನ್ನೇ ಭಾಗವತ ಆಶ್ರಮ ಮಾಡಲಾಯಿತು. ನಿರಂತರ ಉಪನ್ಯಾಸ, ಹೋಮ, ಭಜನೆ, ಪಾರಾಯಣಗಳು 1999ರಲ್ಲಿಚಾಲನೆಗೊಂಡವು. ಇದಕ್ಕಾಗಿ ಹತ್ತಾರು ಸ್ವಯಂಸೇವಕರ ತಂಡ ಸೇವಾಕಾರ್ಯಕ್ಕೆ ಮುಂದಾಯಿತು.

2011ರ ಮೇ 24ರಂದು ಶ್ರೀ ವಿದ್ಯೇಶ ತೀರ್ಥರ ಸಾನ್ನಿಧ್ಯದಲ್ಲಿಪೇಜಾವರ ಶ್ರೀ ವಿಶ್ವೇಶ ತೀರ್ಥರು ಮತ್ತು ಶ್ರೀ ವಿಶ್ವ ಪ್ರಸನ್ನ ತೀರ್ಥರು ಭಾಗವತಾಶ್ರಮದ ನೂತನ ಕಟ್ಟಡ ‘ಶ್ರೀ ವೆಂಕಟಾಚಲ ಧಾಮ’ವನ್ನು ಲೋಕಾರ್ಪಣೆಗೊಳಿಸಿದರು. ಅಂದಿನಿಂದ ಹಲವು ಧಾರ್ಮಿಕ ಸೇವಾ ಕಾರ್ಯ ಸಾಂಗವಾಗಿ ನಡೆಯುತ್ತಿವೆ. 3 ಅಂತಸ್ತಿನ ದೇಗುಲದಲ್ಲಿಗರ್ಭಗುಡಿ, ಯಾಗಶಾಲೆ, ಪಾಕಶಾಲೆ, ಸಭಾಂಗಣವೂ ಇದೆ.

ಪದ್ಮ ಪುರಾಣೋಕ್ತ ಪ್ರತಿಮೆ

ಶ್ರೀ ವೆಂಕಟೇಶ ದೇವರ ಪ್ರತಿಮೆ ಶ್ರೀ ಪದ್ಮ ಪುರಾಣೋಕ್ತ ಶೈಲಿಯಲ್ಲಿದೆ. ಹಾಗಾಗಿ ಇಲ್ಲಿವೆಂಕಟೇಶನು ಸಕಲ ಸಿರಿ ಸಂಪತ್ತುಗಳನ್ನೂ ಭಕ್ತರಿಗೆ ಪ್ರದಾನ ಮಾಡುತ್ತಾನೆ ಎಂಬ ನಂಬಿಕೆ ಭಕ್ತರಿಗೆ ಅಚಲವಾಗಿದೆ. ಕಲಿಯುಗದ ಕಲ್ಪತರು ರಾಘವೇಂದ್ರ ಸ್ವಾಮಿಗಳ ಅವತಾರವಾಗಲು ವೆಂಕಟೇಶನೇ ಕಾರಣ. ರಾಯರ ಆರಾಧ್ಯ ದೈವವೂ ವೆಂಕಟೇಶನೇ. ಇವೆರಡೂ ಇಲ್ಲಿಮಿಳಿತಗೊಂಡಿರುವುದು ಮಹತ್ವಪೂರ್ಣ.

* ವಿವಿಧ ಸೇವೆಗಳು

ಧಾಮದಲ್ಲಿಪ್ರತಿನಿತ್ಯ ವೆಂಕಟೇಶದೇವರಿಗೆ, ರಾಯರ ವೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ ಸೇವೆ, ತಂತ್ರಸಾರೋಕ್ತ ಪೂಜೆ, ಮಹಾ ನೈವೇದ್ಯವಾಗುತ್ತದೆ. ಪ್ರತಿ ಗುರುವಾರ ಸಂಜೆ ರಥೋತ್ಸವ, ದೀಪೋತ್ಸವ, ರಂಗಪೂಜೆ ವಿಜೃಂಭಿಸುತ್ತದೆ. ಯುಗಾದಿ, ಶ್ರೀರಾಮನವಮಿ, ದೀಪಾವಳಿ, ವಿಜಯದಶಮಿ ಸೇರಿದಂತೆ ಹಿಂದೂ ಪಂಚಾಂಗದ ಎಲ್ಲಹಬ್ಬಗಳು ನಡೆಯುತ್ತವೆ.

ವೈಕುಂಠ ಏಕಾದಶಿ ದಿನ ಸ್ವರ್ಗದ ಬಾಗಿಲು ಮತ್ತು ಉಯ್ಯಾಲೆ ನಿರ್ಮಿಸಿ ವೈಭವೋಪೇತ ಅಲಂಕಾರದೊಂದಿಗೆ ಶ್ರೀನಿವಾಸ ಕಲ್ಯಾಣ ನೆರವೇರಿಸಲಾಗುತ್ತದೆ. 20ಕ್ಕೂ ಹೆಚ್ಚು ಭಜನಾಮಂಡಳಿಗಳು ದಿನಪೂರ್ತಿ ಅಖಂಡ ಭಜನಾ ಸೇವೆ ಸಮರ್ಪಿಸುತ್ತವೆ. ದೋಷ ಪರಿಹಾರಾರ್ಥ ಮಂಡಲಪೂಜೆ, ನಾಗಾರಾಧನೆ, ವಿವಿಧ ಹೋಮ, ಉಪನಯನ, ಪಿತೃಕಾರ್ಯಗಳಿಗೂ ಇಲ್ಲಿಅವಕಾಶವಿದೆ. ವಿದ್ಯಾಪ್ರಾಪ್ತಿ, ಉದ್ಯೋಗ, ವಿವಾಹ, ಸಂತಾನ ಇತ್ಯಾದಿಗೆ ಭಕ್ತರು ವೆಂಕಟೇಶನಲ್ಲಿಮೊರೆ ಇಡುತ್ತಾರೆ. ಇಷ್ಟಾರ್ಥ ನೆರವೇರಿದನಂತರ ಅಭಿಷೇಕ, ಪುಷ್ಪಾಲಂಕಾರ ಮತ್ತು ಕಲ್ಯಾಣೋತ್ಸವ ಸೇವೆ ಸಮರ್ಪಿಸಿ ಧನ್ಯತೆ ಮೆರೆಯುತ್ತಾರೆ.

*

15ನೇ ಸಂವತ್ಸರೋತ್ಸವ :

ವೆಂಕಟಾಚಲಧಾಮದ 15ನೇ ಸಂವತ್ಸರೋತ್ಸವ ಅಂಗವಾಗಿ ಜೂನ್ 5ರಂದು ಬೆಳಗ್ಗೆ 7ಕ್ಕೆ ಪಂಚಾಶತ್ ಕಲಶಾರಾಧನೆ, ಬೆಳಗ್ಗೆ 10 ಗಂಟೆಗೆ ಶ್ರೀ ವಿದ್ಯೇಶ ತೀರ್ಥರಿಂದ ಬ್ರಹ್ಮ ಕಲಶಾಭಿಷೇಕ, ಸಂಸ್ಥಾನ ಪೂಜೆ, ಸಂಜೆ 7ಕ್ಕೆ ರಂಗಪೂಜೆ, ರಥೋತ್ಸವ ಸಂಪನ್ನಗೊಳ್ಳಲಿದೆ.

*

ಸಂಸ್ಕೃತಿ ಸೇವೆ

ಶ್ರೀ ಭಂಡಾರಕೇರಿ ಮಠವು ಭಾರತೀಯ ಸನಾತನ ಪರಂಪರೆ, ಸಂಸ್ಕೃತಿ ಮತ್ತು ಮೌಲ್ಯ ರಕ್ಷಣೆಯ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಪ್ರತಿವರ್ಷವೂ ಶ್ರೀ ವಿದ್ಯಾಮಾನ್ಯತೀರ್ಥರ ಆರಾಧನೆ ಸಂದರ್ಭ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ವೇದವಿದ್ಯೆ ಪೋಷಣೆ ಮಾಡುವ ದೇಶದ ಒಂದು ಸಂಸ್ಥೆಗೆ ಮತ್ತು ನಾಲ್ವರು ಶಾಸ್ತಾ್ರಧ್ಯಯನ ವಿದ್ವಾಂಸರಿಗೆ 1ಲಕ್ಷ ರೂ. ನಗದು ಪುರಸ್ಕಾರ ಸಹಿತ ವಿದ್ವತ್ ಸನ್ಮಾನ ಮಾಡಲಾಗುತ್ತದೆ. ಪ್ರತಿವರ್ಷವೂ ಕನ್ನಡದಲ್ಲಿಗ್ರಂಥ ಪ್ರಕಟಣೆಗೆ ಆದ್ಯತೆ ನೀಡಲಾಗಿದೆ. ಪಾಠ- ಪ್ರವಚನ ಇತ್ಯಾದಿ ಜ್ಞಾನ ಯಜ್ಞವನ್ನು ನಿರಂತರವಾಗಿ ರಾಜ್ಯ- ಹೊರ ರಾಜ್ಯದಲ್ಲಿಮಾಡಲಾಗುತ್ತಿದೆ.

ಕೋಟ್ -

ನಂಬಿದ ಭಕ್ತರಿಗೆ ದೇವರ ಕೃಪೆ ಆಗಬೇಕು. ಧಾರ್ಮಿಕ ಚಟುವಟಿಕೆಗಳು ಸೌಹಾರ್ದ ಪಾಲನೆಗೆ ಇಂಬು ನೀಡಬೇಕು. ನಿತ್ಯವೂ ನೈವೇದ್ಯ ಮಾಡಿದ ಅನ್ನದಾನವಾಗಬೇಕು ಎಂಬುದು ಶ್ರೀ ವೆಂಕಟಾಚಲ ಧಾಮದ ಧ್ಯೇಯ. ಒಂದೂವರೆ ದಶಕಗಳ ಕಾಲ ಇವೆಲ್ಲವೂ ಈಡೇರಿದೆ. ಮುಂಬರುವ ದಿನಗಳಲ್ಲಿಮತ್ತಷ್ಟು ಸೇವೆ ವಿಸ್ತಾರವಾಗಲಿದೆ.

- ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ

ಭಂಡಾರಕೇರಿ ಮಠ ಗಿರಿನಗರ ಬೆಂಗಳೂರು

========