ಗುಜರಾತ್ -ಬೆಂಗಳೂರು ಫೈನಲ್ ಫೈಟ್

Contributed bymanjunath.gowda@timesgroup.com|Vijaya Karnataka

ಗುಜರಾತ್ ಟೈಟನ್ಸ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ 7 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದೆ. ಶುಭ್ಮನ್ ಗಿಲ್ ಅವರ ಶತಕ ಮತ್ತು ಸಾಯಿ ಸುದರ್ಶನ್ ಅವರ ಅರ್ಧಶತಕ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿತು. ಈ ಗೆಲುವಿನೊಂದಿಗೆ ಗುಜರಾತ್ ಟೈಟನ್ಸ್ ತಂಡವು ಐಪಿಎಲ್ ಫೈನಲ್‌ಗೆ ಪ್ರವೇಶಿಸಿದೆ. ರಾಜಸ್ಥಾನ ರಾಯಲ್ಸ್ ತಂಡವು ಮೂರನೇ ಸ್ಥಾನಿಯಾಗಿ ಅಭಿಯಾನ ಮುಗಿಸಿತು.

gujarat titans and bengaluru set for an exciting final in the indian premier league

ಗಿಲ್ ಶತಕದ ಸೊಬಗು | 2ನೇ ಕ್ವಾಲಿಫೈಯರ್ ನಲ್ಲಿರಾಜಸ್ಥಾನ ವಿರುದ್ಧ ಟೈಟನ್ಸ್ ಗೆ 7 ವಿಕೆಟ್ ಜಯ

ಮುಲ್ಲಾನ್ ಪುರ: ಶುಬ್ಮನ್ ಗಿಲ್ (104;53 ಎಸೆತ, 15 ಫೋರ್ , 3 ಸಿಕ್ಸರ್ ) ಅವರ ಅಮೋಘ ಶತಕ ಹಾಗೂ ಸಾಯಿ ಸುದರ್ಶನ್ (58; 32 ಎಸೆತ, 8 ಫೋರ್ , 1 ಸಿಕ್ಸರ್ ) ಅವರ ಅರ್ಧ ಶತಕದ ಸಾಹಸದಿಂದ ಗುಜರಾತ್ ಟೈಟನ್ಸ್ ತಂಡ ಐಪಿಎಲ್ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ7 ವಿಕೆಟ್ ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಬಗ್ಗು ಬಡಿಯಿತು.

ಇದರೊಂದಿಗೆ ಮೇ 31ರಂದು ಭಾನುವಾರ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿನಡೆಯಲಿರುವ ಆರ್ ಸಿಬಿ ವಿರುದ್ಧದ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜುಗೊಳಿಸಿಕೊಂಡಿತು. ಇದೇ ಆವೃತ್ತಿಯ ಮೊದಲ ಕ್ವಾಲಿಫೈಯರ್ ನಲ್ಲಿಆರ್ ಸಿಬಿ ಮತ್ತು ಜಿಟಿ ಎದುರಾಗಿದ್ದವು. ರಾಯಲ್ಸ್ ಮೂರನೇ ಸ್ಥಾನಿಯಾಗಿ ಅಭಿಯಾನ ಮುಗಿಸಿತು. ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿಶುಕ್ರವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿರಾಯಲ್ಸ್ ಒಡ್ಡಿದ 215 ರನ್ ಗಳ ಕಠಿಣ ಗುರಿ ಬೆನ್ನಟ್ಟಿದ ಟೈಟನ್ಸ್ ,18.4 ಓವರ್ ಗಳಲ್ಲಿ3 ನಷ್ಟಕ್ಕೆ 219 ರನ್ ಪೇರಿಸಿ ಸಂಭ್ರಮಿಸಿತು.

ಆರಂಭದಿಂದಲೇ ರಾಜಸ್ಥಾನದ ಬೌಲಿಂಗ್ ಅಸ್ತ್ರಗಳನ್ನು ಸುದರ್ಶನ್ ಮತ್ತು ಗಿಲ್ ನಿರ್ಭಯವಾಗಿ ದಂಡಿಸಿದರು. ಈ ಮಧ್ಯೆ, ಅರ್ಧ ಶತಕ ಗಳಿಸಿದ ನಂತರ ಸುದರ್ಶನ್ ಹಿಟ್ ವಿಕೆಟ್ ಗೆ ಔಟಾದರು. ಹೀಗಾಗಿ 167 ರನ್ ಗಳ ಮೊದಲ ವಿಕೆಟ್ ಜತೆಯಾಟ ಕೊನೆಗೊಂಡಿತು. 47 ಎಸೆತಗಳಲ್ಲಿಶತಕ ಸಿಡಿಸಿ ಸಂಭ್ರಮಿಸಿದ ಗಿಲ್ , 104 ರನ್ ಗಳಿಗೆ ಹೋರಾಟ ಮುಗಿಸಿದರು. ಬಳಿಕ ಬಟ್ಲರ್ (9*) ಮತ್ತು ರಾಹುಲ್ ತೇವಾಟಿಯಾ(17*), ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮುನ್ನ ರಾಯಲ್ಸ್ 1.5 ಓವರ್ ಗಳ ಅಂತರದಲ್ಲಿಯೇ ಜೈಸ್ವಾಲ್ ಮತ್ತು ಜುರೆಲ್ ಅವರನ್ನು ಕೇವಲ 9 ರನ್ ಗಳಿಗೆ ಕಳೆದುಕೊಂಡಿತು. ಈ ಹಂತದಲ್ಲಿ15ರ ಹರೆಯದ ವೈಭವ್ ಸೂರ್ಯವಂಶಿ ಮತ್ತು ರವೀಂದ್ರ ಜಡೇಜಾ ಆಸರೆಯಾದರು. ಗಾಯಗೊಂಡು ಹೊರ ಹೋಗುವ ಮುನ್ನ 3ನೇ ವಿಕೆಟ್ ಗೆ 127 ರನ್ ಗಳ ಅಮೂಲ್ಯ ಜತೆಯಾಟ ನಿರ್ವಹಿಸಿದ ಜಡೇಜಾ(45*), ಮುರಿಯದ 7ನೇ ವಿಕೆಟ್ ಗೂ ಡೊನಾವನ್ ಫೆರೇರಾ(38*) ಜತೆ 42 ರನ್ ಗಳ ಮಹತ್ವದ ಜತೆಯಾಟಕ್ಕೆ ಸಾಕ್ಷಿಯಾದರು.

ನಿರೀಕ್ಷೆಯಂತೆ ವೈಭವ್ ಮತ್ತೊಮ್ಮೆ ಅಮೋಘ ಇನಿಂಗ್ಸ್ ಕಟ್ಟಿದರು. ಆರಂಭಿಕರಿಬ್ಬರು ಸಣ್ಣ ಮೊತ್ತಕ್ಕೆ ಔಟಾದರೂ ಎದೆಗುಂದದ ವೈಭವ್ , ತಮ್ಮ ಎಂದಿನ ಸ್ಫೋಟಕ ಆಟದ ಮೂಲಕ ಟೈಟನ್ಸ್ ಬೌಲರ್ ಗಳ ಬೆವರಿಳಿಸಿದರು. 46 ರನ್ ಗಳಿಸಿದ್ದ ವೇಳೆ ಜೀವದಾನ ಪಡೆದ ವೈಭವ್ , 31 ಎಸೆತಗಳಲ್ಲಿಅರ್ಧ ಶತಕ ಪೂರೈಸಿದರು. ಇದು ಹಾಲಿ ಋುತುವಿನಲ್ಲಿವೈಭವ್ ಅವರ ಆರನೇ ಅರ್ಧಶತಕ.

ತಲಾ 2 ವಿಕೆಟ್ ಪಡೆದ ಕಗಿಸೊ ರಬಾಡ ಮತ್ತು ಜೇಸನ್ ಹೋಲ್ಡರ್ ಅವರ ಮಾರಕ ದಾಳಿಯ ನಡುವೆಯೂ ಸೂರ್ಯವಂಶಿ ತಮ್ಮ ವೈಭವದ ಬ್ಯಾಟಿಂಗ್ ಪ್ರದರ್ಶಿಸಿದರು. ಜತೆಗೆ 23 ಇನಿಂಗ್ಸ್ ಗಳಿಂದ ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು. ಡೆತ್ ಓವರ್ ಗಳಲ್ಲಿಮಿಂಚಿದ ವೈಭವ್ 15 ಎಸೆತಗಳಲ್ಲಿ46 ರನ್ ಸಿಡಿಸಿ ಶತಕದತ್ತ ದಾಪುಗಾಲಿಟ್ಟರು. ಆದರೆ 18ನೇ ಓವರ್ ನಲ್ಲಿವೇಗಿ ರಬಾಡಗೆ ವಿಕೆಟ್ ಒಪ್ಪಿಸುವುದರೊಂದಿಗೆ ಮೂರನೇ ಬಾರಿ 90 ರನ್ ಗಡಿಯಲ್ಲಿಔಟಾದರು.

ಸಂಕ್ಷಿಪ್ತ ಸ್ಕೋರ್

ಗುಜರಾತ್ ಟೈಟನ್ಸ್ : 18.4 ಓವರ್ ಗಳಲ್ಲಿ3 ವಿಕೆಟ್ ಗೆ 219 (ಗಿಲ್ 104. ಸುದರ್ಶನ್ 58; ಆರ್ಚರ್ 45ಕ್ಕೆ 1, ನಂದ್ರ 35ಕ್ಕೆ 1).