ಕಲೆ
------------
ಎಂದಿನಂತೆ ಬೆಳಗ್ಗೆ ಎದ್ದು ಪಾರ್ಕಿನಲ್ಲಿನಾಲ್ಕು ರೌಂಡು ಹೊಡೆದು, ಮರದ ಕೆಳಗಿನ ಕಲ್ಲುಬೆಂಚಿನ ಮೇಲೆ ಕೂತಿದ್ದೆ. ಹಿರಿಯರೊಬ್ಬರು ಇನ್ನೊಂದು ತುದಿಯಲ್ಲಿಕೂತಿದ್ದರು. ಗಂಭೀರ ಮುಖ. ಬೆರಳ ಉಗುರುಗಳಲ್ಲಿಒಣಗಿದ ಬಣ್ಣದ ಕಲೆಗಳು.
‘ಸರ್ , ನೀವು ಕಲಾವಿದರೇ?’ ಎಂದು ಕೇಳಿದೆ.
‘ಹೌದು,’ ಎಂದರು. ಒಂದು ಕ್ಷಣ ಬಿಟ್ಟು, ‘ಬನ್ನಿ, ನನ್ನ ಸ್ಟುಡಿಯೋ ಹತ್ತಿರದಲ್ಲೇ ಇದೆ,’ ಎಂದರು. ಸುಂದರ ಅಚ್ಚುಕಟ್ಟಾದ ಸ್ಟುಡಿಯೋ. ಗೋಡೆಗೆ ಒರಗಿಸಿಟ್ಟಿದ್ದ ಹತ್ತಾರು ಪೇಂಟಿಂಗ್ ಗಳು. ಈಸಲ್ ಮೇಲಿದ್ದ ಚಿತ್ರ ನೋಡಿ ನನಗೆ ದಂಗು ಬಡಿಯಿತು. ಅಸಾಧಾರಣ ಬಯಲುಚಿತ್ರ!
ನಮ್ಮ ಪರಿಚಯ ನಿಧಾನವಾಗಿ ಗಾಢವಾಯಿತು. ನಾನು ಆಗಾಗ ಅವರ ಸ್ಟುಡಿಯೋಗೆ ಹೋಗಿಬರುತ್ತಿದ್ದೆ. ಬಯಲುಚಿತ್ರ ಮಾತ್ರವಲ್ಲಅವರ ಭಾವಚಿತ್ರಗಳೂ ನನ್ನನ್ನು ಚಕಿತಗೊಳಿಸಿದವು.
ಅವರು ಸ್ಥಿತಿವಂತರಾಗಿ ಕಂಡರು. ಮನೆ, ಕಾರು ಎಲ್ಲವೂ ಅಚ್ಚುಕಟ್ಟಾಗಿದ್ದವು.
ಆದರೆ ಒಂದು ದಿನ ಪೇಪರ್ ನಲ್ಲಿಅವರ ಫೋಟೋ ನೋಡಿ ಬೆಚ್ಚಿಬಿದ್ದೆ. ಅಪರೂಪದ ಪೇಂಟಿಂಗ್ ಗಳ ನಕಲು ದಂಧೆಯಲ್ಲಿಸಿಕ್ಕಿಬಿದ್ದಿದ್ದರು. ಹದಿನಾಲ್ಕು ತಿಂಗಳ ಜೈಲು ಶಿಕ್ಷೆಯಾಯಿತು.
ಜೈಲಿನಿಂದ ಹೊರಗೆ ಬಂದ ನಂತರ ಒಂದು ದಿನ ಪಾರ್ಕಿನಲ್ಲಿಮತ್ತೆ ನಮ್ಮ ಭೇಟಿಯಾಯಿತು. ಸ್ವಲ್ಪ ಸೊರಗಿದ ಹಾಗೆ ಕಂಡರೂ ಜಾಲಿಯಾಗಿ ಮಾತಾಡಿದರು.
‘ಸ್ಟುಡಿಯೋಗೆ ಬನ್ನಿ.’
‘ಇಲ್ಲ, ಸಧ್ಯಕ್ಕೆ ಸಾಧ್ಯವಿಲ್ಲ, ಸ್ವಲ್ಪ ಕೆಲಸ ಇದೆ.’
‘ನನಗೆ ಗೊತ್ತು, ನನ್ನ ಒಡನಾಟದಿಂದ ನಿಮ್ಮ ರೆಪ್ಯುಟೇಷನ್ ಸ್ವಲ್ಪ ಹಾಳಾಗಿದೆ. ಆದರೂ ಬನ್ನಿ. ಹತ್ತು ನಿಮಿಷ ಅಷ್ಟೇ.’
ಸ್ಟುಡಿಯೋ ಮೊದಲಿನಂತೆ ಅಚ್ಚುಕಟ್ಟಾಗಿತ್ತು. ಈಸಲ್ ಮೇಲೆ ಅದೇ ಪೇಂಟಿಂಗ್ ಇತ್ತು. ಆದರೂ ಏನೋ ಬದಲಾಗಿತ್ತು. ಮೊದಲಿಗಿಂತಲೂ ಹೆಚ್ಚು ಆಕರ್ಷಕವಾಗಿ ಕಾಣುತ್ತಿತ್ತು. ಅರ್ಧ ಗಂಟೆ ಮಾತಾಡಿ ಅವರ ಕೈಕುಲುಕಿ ಹೊರಬಂದೆ.
ಸಂಜೆ ಕೆಂಪು ಮೂಡಿತ್ತು. ತಣ್ಣನೆಯ ಗಾಳಿ.
ಅವರನ್ನು ನಾನು ಮತ್ತೆ ನೋಡಲಿಲ್ಲ. ಅಪ್ಪಿತಪ್ಪಿಯೂ ಸ್ಟುಡಿಯೋ ಕಡೆ ತಲೆಹಾಕಲಿಲ್ಲ. ಅವರೂ ನನ್ನನ್ನು ಮತ್ತೆ ಭೇಟಿಯಾಗಲಿಲ್ಲ.
ಒಮ್ಮೊಮ್ಮೆ ಈಸಲ್ ಮೇಲಿದ್ದ ಆ ಬಯಲುಚಿತ್ರದ ನೆನಪಾಗುತ್ತದೆ. ಆಗ ಪಾರ್ಕಿನ ಬೆಂಚಿನ ಮೇಲೆ ಒಣಗಿದ ಬಣ್ಣದ ಕಲೆಗಳು ಮೂಡಿಬರುತ್ತವೆ.

