ವಿಕ ವಿಶೇಷ, ಬೀದರ್ ನಗರದ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬ್ರಿಮ್ಸ್ )ಭೋದಕ ಆಸ್ಪತ್ರೆಯ ಶವಾಗಾರದಲ್ಲಿಗುತ್ತಿಗೆ ಸಿಬ್ಬಂದಿ ಮುನೀರ್ ಅಹ್ಮದ್ ಎಂಬಾತ ಮೃತ ಮಹಿಳೆಯರ ಶವದ ಬೆತ್ತಲೆ ಫೋಟೋ ಮೊಬೈಲ್ ನಲ್ಲಿಸೆರೆಹಿಡಿಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಮರಣೋತ್ತರ ಪರೀಕ್ಷೆ ಹಾಗೂ ವಾರಸುದಾರರಿಗೆ ಒಪ್ಪಿಸುವ ಮುನ್ನ ಮಹಿಳೆಯರ ಮೃತ ದೇಹ ಆಸ್ಪತ್ರೆಯ ಶವಾಗಾರದಲ್ಲಿಇರಿಸಲಾಗುತ್ತಿತ್ತು. ಈ ವೇಳೆ ಈತ ತನ್ನ ವಿಕೃತ ಬುದ್ಧಿಯನ್ನು ಪ್ರದರ್ಶಿಸಿದ್ದ. ಮೃತದೇಹದ ಮೇಲಿದ್ದ ಬಟ್ಟೆ ಸರಿಸಿ, ತನ್ನ ಮೊಬೈಲ್ ಕ್ಯಾಮೆರಾದಲ್ಲಿಮಹಿಳೆಯರ ಬೆತ್ತಲೆ ಫೋಟೋ ಹಾಗೂ ವಿಡಿಯೋಗಳನ್ನು ತೆಗೆದುಕೊಳ್ಳುತ್ತಿದ್ದ. ಈತನ ಈ ನೀಚ ಕೃತ್ಯವನ್ನು ಇಲಾಖೆಯ ಮುಖ್ಯಸ್ಥರು ಖುದ್ದಾಗಿ ಗಮನಿಸಿದ್ದಾರೆ. ಪ್ರಕರಣ ದಾಖಲು: ಶವಾಗಾರ ಕೋಣೆಯಲ್ಲಿಹಲವು ವರ್ಷಗಳಿಂದ ಕರ್ತವ್ಯ ನಿರ್ವವಹಿಸುತ್ತಿದ್ದ ಸಹಾಯಕ ಮುನೀರ್ ಅಹ್ಮದ್ ಎಂಬಾತ ಮೃತ ಮಹಿಳೆಯರ ಬೆತ್ತಲೆ ಫೋಟೋ ತೆಗೆದು ಸಂಗ್ರಹಿಸಿಟ್ಟಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಆತನ ವಿರುದ್ಧ ಕಾನೂನು ಕ್ರಮ ಕೈ ಗೊಳ್ಳಬೇಕು ಎಂದು ಬ್ರಿಮ್ಸ್ ನ ಪ್ರೊಫೆಸರ್ ಹಾಗೂ ಇಲಾಖೆಯ ಮುಖ್ಯಸ್ಥ ಡಾ.ಮೋಸಿನುಲ್ ಹಕ್ ಅವರು ನೂತನ ನಗರ ಠಾಣೆಗೆ ನೀಡಿದ ದೂರಿನ್ವಯ ಪ್ರಕರಣ ದಾಖಲಾಗಿದೆ. ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆರೋಪಿಯ ಮೊಬೈಲ್ ತಕ್ಷಣವೇ ಜಪ್ತಿ ಮಾಡಿದ್ದು, ಸೈಬರ್ ವಿಭಾಗಕ್ಕೆ ಕಳುಹಿಸಿಕೊಟ್ಟಿದ್ದಾರೆ. ಈತ ಈ ಹಿಂದೆ ಎಷ್ಟು ಹೆಣ್ಣುಮಕ್ಕಳ ಶವಗಳ ಜತೆ ಇಂತಹ ವಿಕೃತಿ ಮೆರೆದಿದ್ದಾನೆ?, ಈ ಫೋಟೋಗಳನ್ನು ಯಾವುದೇ ಅಶ್ಲೀಲ ಜಾಲತಾಣ ಅಥವಾ ಇತರರಿಗೆ ಶೇರ್ ಮಾಡಿದ್ದಾನೆಯೇ? ಎಂಬ ನಿಟ್ಟಿನಲ್ಲಿಆಳವಾದ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

