ಸೂಪರ್ ವಾಲ್ಕೆನೋ ಟೂರಿಸಂನತ್ತ ಯುವ ಸೆಳೆತ
ಇಂಟ್ರೊ: ವಿಭಿನ್ನ ಅನುಭವ ನೀಡುವ ಜ್ವಾಲಾಮುಖಿಯ ಕುರುಹನ್ನು ಒಳಗೊಂಡ ತಾಣಗಳತ್ತ ಪಯಣವೇ ರೋಚಕ.
ಲವಲವಿಕೆ ಸುದ್ದಿಲೋಕ
ಸುಂದರ ಕಾಡು, ಹರಿಯುವ ನದಿ, ಧುಮ್ಮಿಕ್ಕುವ ಜಲಪಾತ, ಕಡಲ ತೀರವಷ್ಟೇ ಅಲ್ಲ, ನಿಗಿ ನಿಗಿ ಕೆಂಡದಂತೆ ಬೆಂಕಿ ಕಾರುವ ಜ್ವಾಲಾಮುಖಿಗಳು ಪ್ರವಾಸಿಗರನ್ನು ಸೆಳೆಯುತ್ತವೆ.
ಶತಮಾನಗಳ ಹಿಂದೆ ಸ್ಫೋಟಗೊಂಡ ಜ್ವಾಲಾಮುಖಿಯ ತಾಣ ಅಥವಾ ಸಕ್ರಿಯ ಜ್ವಾಲಾಮುಖಿಯನ್ನು ನೋಡುವುದೇ ಸಾಹಸ. ಇದೊಂದು ರೀತಿಯ ಸಾಹಸ ಮನೋಭಾವ ಉಕ್ಕಿಸುವ, ಪ್ರಕೃತಿಯ ವಿಸ್ಮಯವನ್ನು ತಿಳಿಸುವ ಯಾನ. ಅದೇ ಈಗ ಸೂಪರ್ ವಾಲ್ಕೆನೋ ಟೂರಿಸಂ ಹೆಸರಿನಲ್ಲಿಯುವ ಜನತೆಯನ್ನು ಸೆಳೆಯುತ್ತಿದೆ. ಸೂಪರ್ ವಾಲ್ಕೆನೋ ಅಂದರೆ ಭೂಮಿಯ ಮೇಲೆ ಅತ್ಯಂತ ಭೀಕರ ಸ್ಫೋಟಗಳನ್ನು ಉಂಟುಮಾಡಬಲ್ಲಶಕ್ತಿಯುಳ್ಳ ಜ್ವಾಲಾಮುಖಿ ವ್ಯವಸ್ಥೆ. ಇವು ಸಾಮಾನ್ಯ ಜ್ವಾಲಾಮುಖಿಗಳಂತೆ ಪರ್ವತದ ಆಕಾರದಲ್ಲಿಇರುವುದಿಲ್ಲ, ಬದಲಾಗಿ ಭೂಮಿಯ ಒಳಭಾಗದಲ್ಲಿಬೃಹತ್ ಕುಳಿಗಳನ್ನು ಹೊಂದಿರುತ್ತವೆ. ಇಂದು ಇವುಗಳು ಪ್ರಪಂಚದಾದ್ಯಂತ ಅತ್ಯಾಕರ್ಷಕ ಪ್ರವಾಸಿ ತಾಣಗಳಾಗಿ ಮಾರ್ಪಟ್ಟಿವೆ.
ಯಾಕೆ ಸೆಳೆತ?
ಸಾಮಾನ್ಯ ಬೆಟ್ಟ-ಗುಡ್ಡಗಳಿಗಿಂತ ಇವು ಭಿನ್ನವಾಗಿರುತ್ತವೆ. ಬೃಹತ್ ಗಾತ್ರದ ಕುಳಿಗಳು, ವಿವಿಧ ಬಣ್ಣಗಳಿಂದ ಕೂಡಿದ ಬಿಸಿನೀರಿನ ಸರೋವರಗಳು ಮತ್ತು ಹಬೆ ಹೊರಸೂಸುವ ಭೂಮಿ ಪ್ರವಾಸಿಗರಿಗೆ ಬೇರೆ ಯಾವುದೋ ಗ್ರಹದಲ್ಲಿರುವಂತಹ ಅನುಭವ ನೀಡುತ್ತವೆ. ನೆಲದೊಳಗಿಂದ ನೂರಾರು ಅಡಿ ಎತ್ತರಕ್ಕೆ ಚಿಮ್ಮುವ ಬಿಸಿನೀರಿನ ಬುಗ್ಗೆಗಳು ಮತ್ತು ಕುದಿಯುವ ಕೆಸರಿನ ಹೊಂಡಗಳನ್ನು ನೋಡುವುದು ಒಂದು ಮೈನವಿರೇಳಿಸುವ ಅನುಭವ.
ಸೆಳೆಯುವ ತಾಣ
ಯೆಲ್ಲೊಸ್ಟೋನ್ ಕ್ಯಾಲ್ಡೆರಾ ಯುಎಸ್ ನ ಇದು ವಿಶ್ವದ ಪ್ರಸಿದ್ಧ ಸೂಪರ್ ವಾಲ್ಕೆನೋ ತಾಣ. ಇಲ್ಲಿಜಗತ್ತಿನ ಶೇ. 50ಕ್ಕಿಂತ ಹೆಚ್ಚು ಬಿಸಿನೀರಿನ ಬುಗ್ಗೆಗಳು ಮತ್ತು ಬಿಸಿ ನೀರಿನ ಕುಳಿಗಳಿವೆ. ಓಲ್ಡ… ಫೇತ್ ಫುಲ್ ಎನ್ನುವ ಬುಗ್ಗೆ ಇಲ್ಲಿನ ಪ್ರಮುಖ ಆಕರ್ಷಣೆ. ಬಣ್ಣಬಣ್ಣದ ಬಿಸಿನೀರಿನ ಕೊಳಗಳು, ಕಾಡು ಪ್ರಾಣಿಗಳ ವೀಕ್ಷಣೆ ಮತ್ತು ಟ್ರೆಕ್ಕಿಂಗ್ ಗೆ ಇದು ಅತ್ಯುತ್ತಮ ಸ್ಥಳ.ಇಂಡೋನೇಷ್ಯಾದ ಲೇಕ್ ಟೋಬಾ ಸುಮಾರು 74,000 ವರ್ಷಗಳ ಹಿಂದೆ ನಡೆದ ಬೃಹತ್ ಸ್ಫೋಟದ ಪರಿಣಾಮವಾಗಿ ಈ ಸರೋವರ ಸೃಷ್ಟಿಯಾಯಿತು.ಇದರ ಮಧ್ಯದಲ್ಲಿಸಮೋರ್ಸಿ ಎಂಬ ಸುಂದರ ದ್ವೀಪವಿದೆ. ಶಾಂತವಾದ ಸರೋವರದ ವೀಕ್ಷಣೆ, ಸಾಂಪ್ರದಾಯಿಕ ಬಟಾಕ್ , ಸಂಸ್ಕೃತಿಯ ಅನುಭವ ಮತ್ತು ಜಲಪಾತಗಳ ವೀಕ್ಷಣೆಗೆ ಇದು ಹೆಸರುವಾಸಿ. ಇಟಲಿಯ ನೇಪಲ್ಸ್ ನಗರದ ಸಮೀಪವಿರುವ ಕ್ಯಾಂಪಿ ಫ್ಲೆಗ್ರೇಈ ಪ್ರದೇಶವು ಹಲವು ಸಣ್ಣ ಕುಳಿಗಳು ಮತ್ತು ಅನಿಲ ಹೊರಸೂಸುವಿಕೆಯನ್ನು ಹೊಂದಿದೆ. ಇದು ಕೇವಲ ಜ್ವಾಲಾಮುಖಿಯಲ್ಲ, ಇಲ್ಲಿಗ್ರೀಕ್ ಮತ್ತು ರೋಮನ್ ಪುರಾಣಗಳಿಗೆ ಸಂಬಂಧಿಸಿದ ಅನೇಕ ಐತಿಹಾಸಿಕ ತಾಣಗಳಿವೆ. ನ್ಯೂಜಿಲೆಂಡ್ ನ ಉತ್ತರ ದ್ವೀಪದಲ್ಲಿರುವ ತೌಪೊ ವಾಲ್ಕೆನೋ ಸಾಹಸ ಪ್ರಿಯರಿಗೆ ನೆಚ್ಚಿನ ತಾಣ. ಇಲ್ಲಿಬಿಸಿನೀರಿನ ಸ್ನಾನ, ಸ್ಕೈಡೈವಿಂಗ್ ಮತ್ತು ಮೀನುಗಾರಿಕೆ ಜನಪ್ರಿಯ ಚಟುವಟಿಕೆಗಳು. ಇವು ಸುಪ್ತಾವಸ್ಥೆಯಲ್ಲಿದ್ದರೂ ತಾಂತ್ರಿಕವಾಗಿ ಸಕ್ರಿಯ ಜ್ವಾಲಾಮುಖಿಗಳು.

