ಹಲೋ ಲೈಫ್ ಸುಧಾ ಬೆಳವಾಡಿ

Contributed bynetravati.krishnamurthy@timesgroup.com|Vijaya Karnataka

ನಟಿ ಸುಧಾ ಬೆಳವಾಡಿ ತಮ್ಮ ಜೀವನಶೈಲಿಯ ಬಗ್ಗೆ ಮಾತನಾಡಿದ್ದಾರೆ. ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನ ಮಾಡಿಕೊಳ್ಳುವುದು ಮುಖ್ಯ. ಸುತ್ತಮುತ್ತಲಿನವರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳಬೇಕು. ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು, ಆರೋಗ್ಯಕರ ಆಹಾರ ಸೇವನೆ, ದೇಹಕ್ಕೆ ಹಿತವಾಗುವ ಉಡುಗೆ ಧರಿಸುವುದು, ಕುಟುಂಬದೊಂದಿಗೆ ಸಮಯ ಕಳೆಯುವುದು ಇವು ಜೀವನದ ಭಾಗ. ಯುವ ಪೀಳಿಗೆಗೆ ಅವರು ಸಂದೇಶ ನೀಡಿದ್ದಾರೆ.

sudha belawadis lifestyle plans food hobbies and family relationships

ವೃತ್ತಿ ಒಂದೇ ಜೀವನವಲ್ಲ

-------------

ಇಂಟ್ರೊ

ಸ್ಯಾಂಡಲ್ ವುಡ್ ನ ಪ್ರೀತಿಯ ಅಮ್ಮನಾಗಿ, ಕಿರುತೆರೆಯ ನೆಚ್ಚಿನ ತಾರೆಯಾಗಿ ಜನಪ್ರಿಯರಾಗಿರುವ ಕಲಾವಿದೆ ಸುಧಾ ಬೆಳವಾಡಿ ಜೀವನಶೈಲಿ ಬಗ್ಗೆ ತಮ್ಮದೇ ವ್ಯಾಖ್ಯಾನ ನೀಡಿದ್ದು, ತಮ್ಮ ಸರಳ ಲೈಫ್ ಸ್ಟೈಲ್ ಸೂತ್ರವನ್ನು ವಿವರಿಸಿದ್ದಾರೆ.

-----

ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನ ಮಾಡಿಕೊಂಡು, ಇವೆರಡಕ್ಕೆ ಸೀಮಿತವೂ ಆಗದೆ, ಸುತ್ತಮುತ್ತಲಿನವರೊಂದಿಗೆ ಉತ್ತಮ ಜನಸಂಪರ್ಕ ಬೆಳೆಸಿಕೊಂಡು, ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಎಲ್ಲಾವಿಷಯಗಳಲ್ಲೂಜೀವಂತ ಆಸಕ್ತಿ ಇಟ್ಟುಕೊಳ್ಳುವುದೇ ಜೀವನಶೈಲಿ ಎಂದಿರುವ ಸುಧಾ ಬೆಳವಾಡಿ, ‘ಬಿಡುವಿನ ಸಮಯಲ್ಲಿಉತ್ತಮ ಹವ್ಯಾಸ ಬೆಳೆಸಿಕೊಳ್ಳುವುದು ಜೀವನಶೈಲಿಯ ಭಾಗ’ ಎಂದಿದ್ದಾರೆ.

‘ಬೆಳಗ್ಗೆ ಎದ್ದ ತಕ್ಷಣ ಮಾಡುವ ಮೊದಲ ಕೆಲಸ ಟೀ ಮಾಡುವುದು, ನಂತರ ಉಪಾಹಾರ ಸಿದ್ಧಪಡಿಸಿ, 40 ನಿಮಿಷ ವಾಕಿಂಗ್ ನಲ್ಲಿತೊಡಗಿಸಿಕೊಳ್ಳುತ್ತೇನೆ. ಪುನಃ ಅಡುಗೆ ತಯಾರಿ ಮಾಡಿ ವೃತ್ತಿ ಕೆಲಸದಲ್ಲಿಸಕ್ರಿಯಳಾಗುತ್ತೇನೆ. ಅಡುಗೆ ಮಾಡುವುದು ನನಗೆ ಹೆಚ್ಚು ಖುಷಿ ನೀಡುತ್ತದೆ. ಪದಬಂಧ ಬಿಡಿಸುವುದು, ಸಂಗೀತ ಕೇಳುವುದು, ಹಾಡುವುದು, ರೆಕಾರ್ಡ್ ಮಾಡುವುದು, ಇಷ್ಟದ ಸಾಹಿತ್ಯವನ್ನು ಬರೆದುಕೊಳ್ಳುವುದು, ನನ್ನ ನೆಚ್ಚಿನ ಹವ್ಯಾಸ. ಸುತ್ತಮುತ್ತ ಯಾವುದೇ ಸಂಗೀತ ಕಾರ್ಯಕ್ರಮವಿದ್ದರೂ ಅಲ್ಲಿನಾನು ಹಾಜರ್ . ಇವೆಲ್ಲಾನನ್ನ ಮೆಂಟಲ್ ಜಾಗಿಂಗ್ . ಮನಸ್ಥಿತಿ ಚೆನ್ನಾಗಿದ್ದರೆ ಆರೋಗ್ಯವೂ ಚೆನ್ನಾಗಿರುತ್ತದೆ’ ಎಂದಿದ್ದಾರೆ ಸುಧಾ.

ಅಕ್ಕಿರೊಟ್ಟಿ ಕಾಯಿಚಟ್ನಿ ಮೇಲೆ ಪ್ರೀತಿ

ಸೋಶಿಯಲ್ ಮೀಡಿಯಾದಲ್ಲಿಬರುವ ಯಾವುದೇ ಡಯಟ್ ಅನುಸರಿಸಿದೇ ನಮ್ಮ ದೇಹಕ್ಕೆ ಯಾವ ಆಹಾರ ಒಗ್ಗುತ್ತದೆ ಎಂಬುದು ನಮಗೆ ಗೊತ್ತಿರಬೇಕು. ಅದನ್ನೇ ಸೇವಿಸುವುದು ಆರೋಗ್ಯಕ್ಕೂ ಉತ್ತಮ ಎನ್ನುವ ಅವರು, ‘ಯಾವುದೇ ಡಯಟ್ ಅನುಸರಿಸುವುದಿಲ್ಲ. ಮನೆಯಲ್ಲಿಇಡ್ಲಿ, ದೋಸೆ, ಹುಗ್ಗಿ, ಉಪ್ಪಿಟ್ಟು, ಅವಲಕ್ಕಿ, ಕೋಸಂಬರಿ, ಪಲಾವ್ , ಅನ್ನ, ಸಾಂಬಾರ್ ನಂತಹ ಸಾಂಪ್ರದಾಯಿಕ ಅಡುಗೆಗೆ ಹೆಚ್ಚು ಮಹತ್ವ. ಬೆಳಗ್ಗೆ 9 ಗಂಟೆಯೊಳಗೆ ತಿಂಡಿ, 2 ಗಂಟೆಯೊಳಗೆ ಮಧ್ಯಾಹ್ನದ ಊಟ, 8.30ರೊಳಗೆ ರಾತ್ರಿ ಊಟ ಮಾಡುವ ಅಭ್ಯಾಸವಿದೆ. ಹಣ್ಣು ಮತ್ತು ತರಕಾರಿಗಳ ಸೇವನೆಗೆ ಆದ್ಯತೆ. ಬೆಳಗ್ಗೆ ಉಪಾಹಾರದ ನಂತರ ಯಾವುದಾದರೂ ಒಂದು ಹಣ್ಣಿನ ಸೇವನೆ ಇದ್ದೇ ಇರುತ್ತದೆ. ಆಗಾಗ ಒಣಹಣ್ಣುಗಳ ಸೇವನೆ, ನೀರು, ಮಜ್ಜಿಗೆ ಜತೆಗೆ ಸೀಸನಲ್ ಫ್ರೂಟ್ ನ ಜ್ಯೂಸ್ ನಿಂದ ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳುತ್ತೇನೆ. ಅಕ್ಕಿರೊಟ್ಟಿ, ಕಾಯಿಚಟ್ನಿ, ಮೆಂತ್ಯೆ ಸೊಪ್ಪಿನ ಅನ್ನ, ಮಜ್ಜಿಗೆ ಹುಳಿ ನನ್ನ ನೆಚ್ಚಿನ ಊಟ. ಮನೆ ಊಟಕ್ಕೆ ಆದ್ಯತೆ ನೀಡುವುದರಿಂದ ಶೂಟಿಂಗ್ ಸಮಯದಲ್ಲೂಮನೆ ಊಟವನ್ನು ಕೊಂಡೊಯ್ಯುತ್ತೇನೆ’ ಎನ್ನುತ್ತಾರೆ ಸುಧಾ.

ಮಾರ್ಡನ್ ಡ್ರೆಸ್ ಕೂಡ ಇಷ್ಟ

ಸಿನಿಮಾ ಮತ್ತು ಧಾರಾವಾಹಿಗಳಲ್ಲಿಹೆಚ್ಚಾಗಿ ಸೀರೆಯಲ್ಲೇ ಕಾಣಿಸಿಕೊಳ್ಳುವ ಸುಧಾ ಅವರಿಗೆ ಮಾರ್ಡನ್ ಉಡುಗೆ ಇಷ್ಟವಂತೆ. ‘ನನಗೆ ಸೀರೆ, ಸಲ್ವಾರ್ ನಂತಹ ಸಾಂಪ್ರದಾಯಿಕ ಉಡುಗೆ ಜತೆ ಜೀನ್ಸ್ , ಟಾಪ್ , ಪ್ಯಾಂಟ್ , ಲಾಂಗ್ ಸ್ಕರ್ಟ್ ನಂತಹ ಆಧುನಿಕ ಡ್ರೆಸ್ ಧರಿಸುವುದು ಇಷ್ಟ. ನನ್ನ ಪ್ರಕಾರ ನಮ್ಮ ದೇಹ ಹಾಗೂ ವಯಸ್ಸಿಗೆ ಒಪ್ಪುವ ಬಟ್ಟೆ ಧರಿಸುವುದು ಮುಖ್ಯ. ಮೈ ಮತ್ತು ಕಣ್ಣಿಗೆ ಹಿತವಾಗುವ ಉಡುಗೆ ಧರಿಸುವುದೇ ನಿಜವಾದ ಫ್ಯಾಷನ್ ’ ಎನ್ನುತ್ತಾರೆ ಬೆಳವಾಡಿ.

ಪ್ರವಾಸದಲ್ಲಿನಂಬಿಕೆ ಇಲ್ಲ

‘ಪ್ರವಾಸ ಜೀವನದ ಭಾಗವಲ್ಲ. ವಾರ ಹಾಗೂ ತಿಂಗಳಿಗೊಮ್ಮೆ ರಜೆ ಸಿಕ್ಕರೆ ಸಾಕು ತುಂಬಾ ಜನರು, ಕಾರು, ರೈಲು, ವಿಮಾನ ಹತ್ತಿ ಪ್ರಯಾಣ ಬೆಳೆಸುತ್ತಾರೆ. ಇದರಿಂದ ಪ್ರಪಂಚದ ಸುಂದರ ತಾಣಗಳು ತುಂಬಾ ಕಲುಷಿತವಾಗುತ್ತಿದೆ. ಅದರ ಬದಲು ಕುಟುಂಬದವರೆಲ್ಲಾಒಟ್ಟಿಗೆ ಸೇರಿ ಆನಂದದ ಸಮಯ ಕಳೆಯುವುದು ಉತ್ತಮ. ಸಾಮಾಜಿಕ ಕಳಕಳಿಯೊಂದಿಗೆ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಒಳ್ಳೆಯದು. ಕುಟುಂಬದವರೊಂದಿಗೆ ವರ್ಷಕ್ಕೊಮ್ಮೆ ಪ್ರವಾಸ ಹೋದರೆ ಸಾಕು. ವೈಯಕ್ತಿಕವಾಗಿ ನನಗೆ ಕಾಡು, ಮೇಡು, ಪುಟ್ಟ ಮನೆ, ನದಿ, ಸುತ್ತಮುತ್ತ ಹಸಿರಿರುವ ಪ್ರಶಾಂತ ತಾಣ ಇಷ್ಟ’ ಎನ್ನುತ್ತಾರೆ ಸುಧಾ.

ಬಾಕ್ಸ್

ಜೀವನಶೈಲಿ ಸೂತ್ರ

ಯುವ ಪೀಳಿಗೆ ವೃತ್ತಿ ಒಂದೇ ಜೀವನ, ಅದೇ ಮುಖ್ಯ ಎಂದುಕೊಂಡಿದೆ. ಮೊಬೈಲ್ , ಟಿವಿ, ಲ್ಯಾಪ್ ಟ್ಯಾಪ್ , ಒಟಿಟಿಯ ಪ್ರಪಂಚದಲ್ಲೇ ಮುಳುಗಿ ಹೋಗಿದೆ. ಮನೆ, ಕುಟುಂಬ, ಸಂಬಂಧಗಳ ಅರ್ಥ ತಿಳಿಯದೇ ಹೆಚ್ಚು ಜನರ ಸಂಪರ್ಕವಿಲ್ಲದೇ ಅವರ ಜೀವನ ಐಲ್ಯಾಂಡ್ ಆಗಿ ಹೋಗಿದೆ. ಆದರೆ ತಂದೆ ತಾಯಿ, ಮನೆಯ ಹಿರಿಯರು ಸೇರಿದಂತೆ ಕುಟುಂಬದವರೊಂದಿಗೆ ಮುಕ್ತವಾಗಿ ಬೆರೆತು ಮಾತನಾಡುವುದು, ಸಾಮಾಜಿಕ ಕಾರ್ಯಕ್ರಮಗಳಲ್ಲಿಭಾಗವಹಿಸುವುದು, ಮನೆ ಕೆಲಸಗಳಲ್ಲಿತೊಡಗಿಸಿಕೊಳ್ಳುವುದು, ಒಟ್ಟಿಗೆ ಹಬ್ಬ ಮಾಡುವುದು, ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುವುದು ಅವರ ಪ್ರಮುಖ ಜವಾಬ್ದಾರಿ. ಅನಗತ್ಯ ಆರೋಗ್ಯ ಸಲಹೆಯನ್ನು ಪಾಲಿಸದೆ, ಮತ್ತೊಬ್ಬರಿಗೆ ಹೋಲಿಸಿಕೊಳ್ಳದೇ ನಮ್ಮ ದೇಹ ಮತ್ತು ಮನಸ್ಸಿಗೆ ಯಾವುದು ಸೂಕ್ತ ಎಂಬುದನ್ನು ತಿಳಿದುಕೊಂಡು ಅದನ್ನು ಪಾಲಿಸಬೇಕು. ಮನೆಯ ಊಟದ ಜತೆ ವಾಕಿಂಗ್ ನಂತಹ ದೈಹಿಕ ಚಟುವಟಿಕೆಗಳ ಮೂಲಕ ದಿನಪೂರ್ತಿ ಚಟುವಟಿಕೆಯಿಂದ ಇದ್ದು, ಉತ್ತಮ ಜೀವನಶೈಲಿ ರೂಪಿಸಿಕೊಳ್ಳಬೇಕು.

ಸುಧಾ ಬೆಳವಾಡಿ | ನಟಿ