ನಮ್ಮ ಗುಪ್ತನಿಧಿ ಯಾವುದು?
---
- ವಾದಿರಾಜ ಪ್ರಸನ್ನ
-------
ಪಾರಮಾರ್ಥಿಕ ಸುಖವನ್ನು, ಶಾಶ್ವತವಾದ ಆನಂದವನ್ನು ಕರುಣಿಸುವ ಗುಪ್ತ ನಿಧಿ ಯಾವುದು? ಇಲ್ಲಿದೆ ಅವಲೋಕನ.
---------
ಗುಪ್ತನಿಧಿ ಎಂದೊಡನೆ ನಮಗೆ ಬಚ್ಚಿಟ್ಟ ಹಣ, ಬ್ಯಾಂಕಿನ ಲಾಕರ್ ನಲ್ಲಿಇಟ್ಟ ಸಂಪತ್ತು, ಇತ್ಯಾದಿಗಳೆಲ್ಲನೆನಪಾಗಬಹುದು. ನಮ್ಮ ನಿತ್ಯಜೀವನಕ್ಕೆ ಬೇಕಾದ ಆಹಾರ, ವಸ್ತ್ರ ಇತ್ಯಾದಿ ಖರೀದಿಸಲು ಹಣದಿಂದಲೇ ಸಾಧ್ಯ. ಹಾಗಾಗಿ ನಾವೆಲ್ಲಾಸದಾ ದುಡಿಯುತ್ತಿರುವುದು ಹಣ ಸಂಪಾದನೆಗಾಗಿಯೇ. ನಮ್ಮ ಸಂಸಾರ ಚಕ್ರವು ಸುಗಮವಾಗಿ ನಡೆಸಲು ಹಣದ ಪಾತ್ರ ದೊಡ್ಡದು. ಇನ್ನು, ನಾವು ಕೂಡಿಟ್ಟಿದ್ದ ಹಣದಲ್ಲಿಒಡವೆ, ವಸ್ತು-ವಾಹನ, ಮನೆ ಇತ್ಯಾದಿ ಖರೀದಿಸುವುದು ಉಂಟು. ಇನ್ನು ಕೆಲವರಿಗೆ ಪೂರ್ವಜರು ಸಂಪಾದಿಸಿದ ಸ್ಥಿರ ಚರ ಆಸ್ಥಿಗಳು ದೊರಕಿರಬಹುದು. ಅವೆಲ್ಲವೂ ಒಂದರ್ಥದಲ್ಲಿನಿಧಿ! ಇದನ್ನು ಸುಭದ್ರವಾಗಿ ಕಾಪಾಡಿಟ್ಟುಕೊಳ್ಳುವುದು ಮತ್ತು ವೃದ್ಧಿ ಮಾಡುವುದು ನಮ್ಮ ಕರ್ತವ್ಯವಾಗಿದೆ. ನಮ್ಮ ಸ್ಥಿರ-ಚರ ಆಸ್ಥಿಗಳು ಅಥವಾ ಹಣವು ಬಂದರೆ ಸಂತೋಷವಾಗುತ್ತದೆ. ಅದನ್ನು ಕಳೆದುಕೊಂಡರೆ ಅತೀವವಾದ ದುಃಖವಾಗುತ್ತದೆ. ಮತ್ತು ಈ ನಿಧಿಯಿಂದ ಲಾಭ ನಷ್ಟಗಳರೆಡೂ ಉಂಟು.
ಹಣ, ಆಸ್ತಿ, ಮನೆ, ಚಿನ್ನ ಇವುಗಳನ್ನೆಲ್ಲಬಿಟ್ಟು ಇನ್ನೇನಾದರೂ ನಿಧಿ ಇದೆಯೇ? ಈ ದೇಶದ ಮಹರ್ಷಿಗಳು ಯಾವುದನ್ನು ದೊಡ್ಡ ನಿಧಿ ಎಂದಿದ್ದಾರೆ ಎಂಬುದನ್ನು ಗಮನಿಸುವುದಾದರೆ,
ಸುಖಕ್ಕಾಗಿ ನಿಧಿ:
ನಿಜಕ್ಕೂ ಮೇಲಿನ ನಿಧಿಗಳನ್ನೆಲ್ಲಾನಾವು ಕೂಡಿ ಇಡುವುದು ನಮ್ಮ ಇಂದಿನ, ಮುಂದಿನ ಸುಖ ದ ಬದುಕಿಗಾಗಿ. ಅದರಿಂದ ಸುಖ ಸಿಗುತ್ತದೆ ಎಂಬುದೇ ನಿಧಿ ಸಂಗ್ರಹಣೆಯ ಹಿಂದಿನ ಸ್ಫೂರ್ತಿ. ಮಹರ್ಷಿಗಳು ಸಹ ಸುಖದ ಅನ್ವೇಷನೆಯಲ್ಲೇ ಸಾಗಿದವರು. ಅವರು ಈ ಬಗೆಯ ನಿಧಿಗಳಿಂದ ಸಿಗುವ ಸುಖ ಸಂತೋಷಗಳಿಗೆ ಅಪರಿಚಿತರೇನೂ ಅಲ್ಲ.
ಶಾಶ್ವತ ಸುಖದ ನಿಧಿ
ಆದರೆ ಆತ್ಯಂತಿಕವಾಗಿ ಎಂದೆಂದಿಗೂ ಶಾಶ್ವತವಾಗಿ ಉಳಿಯುವ ಸುಖವೇನಾದರೂ ಇದೆಯೇ ಎಂಬುದು ಅವರ ಅನ್ವೇಷಣೆಯಾಗಿತ್ತು. ಹಾಗೆಂದೇ ಕಣ್ಣಿಗೆ ಕಾಣುವ ನಿಧಿಗೆ ಮಾತ್ರ ಸೀಮಿತವಾಗದೆ, ತಮ್ಮ ತಪಸ್ಸಿನ ಶಕ್ತಿಯಿಂದ ಅತ್ಯಂತ ದೊಡ್ಡದಾದ ಪರಮಾನಂದ ನಿಧಿ ಇದೆ ಎಂಬುದನ್ನು ಕಂಡುಕೊಂಡುದೇ ಅವರ ಸಾಧನೆ. ಆ ನಿಧಿ ಇನ್ನೆಲ್ಲೂಇಲ್ಲದೇ ನಮ್ಮೊಳಗೇ ಇದೆ, ಅದನ್ನು ಮಾನವರೆಲ್ಲರೂ ಪಡೆಯಬಹುದಾದ ಮಾತ್ರವಲ್ಲ, ಪಡೆಯಲೇಬೇಕಾದ ನಿಧಿ ಎಂದು ಘೋಷಿಸಿದರು. ಪ್ರತಿಯೊಬ್ಬ ಜೀವಿಯ ಅಂತರಂಗದಲ್ಲಿಬೆಳಗುವ ಪರಮಾತ್ಮ ಜ್ಯೋತಿಯೇ ಆ ನಿಧಿ. ಅದರ ಅರಿವು ಉಂಟಾದಾಗ ಇನ್ನಿಲ್ಲದ ನೆಮ್ಮದಿ, ಶಾಂತಿ, ಆನಂದ. ಒಮ್ಮೆ ಅದರ ಅನುಭವವಾಗಿಬಿಟ್ಟರೆ ಆ ಆನಂದ ಶಾಶ್ವತ. ಮೇಲಿನ ನಿಧಿಗಳೆಲ್ಲಅದರ ಎದುರು ಕ್ಷುದ್ರ ಎಂಬುದು ಅವರ ಅನುಭವಿಕ ಸತ್ಯ. ಮಾನವ ದೇಹದಲ್ಲಿಆ ನಿಧಿಯನ್ನು ಪಡೆಯುವ ಎಲ್ಲಾಅನುಕೂಲತೆಗಳು ಇವೆ ಎಂಬುದನ್ನು ಅವರು ಕಂಡುಕೊಂಡರು.
ಪರಮಾತ್ಮ ಜ್ಯೋತಿಯೇ ನಮ್ಮ ಗುಪ್ತನಿಧಿ
ಆ ಪರಮಾತ್ಮ ಜ್ಯೋತಿಯನ್ನೇ ಬಹಳ ದೊಡ್ಡನಿಧಿ ಎಂದು ಅವರು ಕೊಂಡಾಡಿದ್ದು. ಅದು ನಮ್ಮೊಳಗೇ ಇರುವುದರಿಂದ, ಹೃದಯ ಗುಹೆಯಲ್ಲಿಅನುಭವಕ್ಕೆ ಬರುವುದರಿಂದ ಅದು ಗುಪ್ತ ನಿಧಿಯೂ ಹೌದು. ಅದನ್ನು ಪಡೆಯದ ಮಾನವ ಜನ್ಮ ವ್ಯರ್ಥ. ಆ ನಿಧಿಯನ್ನು ಪಡೆಯಲು ನಮ್ಮೆಲ್ಲಸಾಧನೆಗಳು, ಪೂಜೆ ಧ್ಯಾನ ಎಲ್ಲವೂ. ಅದನ್ನು ಪಡೆಯಲು ಮಹರ್ಷಿಗಳು ಹಲವಾರು ಮಾರ್ಗಗಳನ್ನು, ವಿಧಿ-ನಿಷೇಧಗಳನ್ನು ತಂದಿದ್ದಾರೆ. ಮಾನವ ಶರೀರದಲ್ಲಿಮಾತ್ರವೇ ಈ ಪರಮೋನ್ನತ ಸ್ಥಿತಿಯನ್ನು ಪಡೆಯಲು ಸಾಧ್ಯವೆಂದಿದ್ದಾರೆ. ಅಂದರೆ, ಪ್ರತಿ ಮಾನವ ದೇಹವೂ ಒಂದು ಗುಪ್ತ ನಿಧಿಯ ಭಂಡಾರವಾಗಿದೆ. ಆ ನಿಧಿಯನ್ನು ಕುಂಡಲಿರೂಪವಾದ ಸರ್ಪವು ಕಾಯುತ್ತಿದೆಯಂತೆ. ತೀವ್ರವಾದ ತಪಸ್ಸಿನಿಂದ ಅದರ ಅನ್ವೇಷಣೆಗೆ ತೊಡಗಿ ಅದಕ್ಕೆ ಬೇಕಾದ ವಿಧಿ, ವಿಧಾನಗಳನ್ನು ಅನುಸರಿಸಿ ಪ್ರಾಮಾಣಿಕ ಪ್ರಯತ್ನ ನಡೆಸಿದಲ್ಲಿಆ ಕುಂಡಲಿನಿ ದೇವಿಯು ನಮ್ಮನ್ನು ಒಳಗೆ ಸಾಗಲು ಅವಕಾಶ ಕೊಡುತ್ತಾಳಂತೆ. ಅದಿಲ್ಲದೇ ಕೇವಲ ಭೌತಿಕ ಜೀವನದಲ್ಲಿಮಾತ್ರ ಆಸಕ್ತರಾಗಿ ಆ ನಿಧಿಯ ಗೋಜಿಗೇ ಹೋಗದ ಬಡಜೀವಿಗಳಿಗೆ ಅದು ಎಂದೆಂದಿಗೂ ಅನುಭವಕ್ಕೆ ಬಾರದ ಗುಪ್ತ ನಿಧಿಯೇ. ಆ ನಿಧಿಯನ್ನು ಪತ್ತೆ ಹಚ್ಚಿ ಕೈವಶ ಮಾಡಿ ಕೊಂಡವರೇ ನಮ್ಮ ಭಾರತೀಯ ಮಹರ್ಷಿಗಳು.
ಶ್ರೀರಂಗ ವಾಣಿ
ಮಹರ್ಷಿಗಳ ಈ ಸಾಧನೆಯನ್ನು ಯೋಗಿವರೇಣ್ಯರಾದ ಶ್ರೀರಂಗ ಮಹಾಗುರುಗಳು; ‘ಪರಮಾತ್ಮಜ್ಯೋತಿಯನ್ನು ಪಡೆಯುವುದು ಭಾರತ ಋುಷಿಗಳ ದೃಷ್ಟಿಯಿಂದ ಜೀವನದ ಪರಮಧ್ಯೇಯ. ಅದೇ ಪರಮಾನಂದಸಾಧನೆ. ಅದೇ ಮುಕ್ತಿ. ನದಿಯು ಸಮುದ್ರದೊಡನೆ ಒಂದಾಗಿಬಿಡುವಂತೆ ಆ ಆತ್ಮ-ದೀಪದೊಡನೆ ಐಕ್ಯ ಭಾವವನ್ನು ಹೊಂದುವುದಕ್ಕೆ ಜ್ಞಾನ ಎಂದು ಹೆಸರು’ ಎಂದು ನುಡಿದಿದ್ದರು.
ಆ ಗುಪ್ತನಿಧಿಗಾಗಿ ನಮ್ಮ ಪ್ರಯತ್ನವಿರಲಿ
ಹಾಗಾಗಿ ನಾವು ಋುಷಿ ಪ್ರಣೀತವಾದ ಸಾಧನಾ ಮಾರ್ಗವನ್ನು ಅನುಸರಿಸೋಣ. ಲೌಕಿಕವಾದ ನಿಧಿಯ ಜೊತೆಯಲ್ಲೇ ಮಹರ್ಷಿಗಳು ತಮ್ಮ ತಪಸ್ಯೆಯಿಂದ ಅರುಹಿದ ಪಾರಮಾರ್ಥಿಕ ಸುಖವನ್ನು, ಶಾಶ್ವತವಾದ ಆನಂದವನ್ನು ಕರುಣಿಸುವ ಆ ಪರಮಾತ್ಮ ನಿಧಿಯನ್ನು ಕಂಡುಕೊಳ್ಳುವ ಮಾರ್ಗದಲ್ಲಿಹೆಜ್ಜೆ ಹಾಕೋಣ. ಅತ್ಯಂತ ದೊಡ್ಡದಾದ, ನಮ್ಮಲ್ಲೇ ಇರುವ ಆ ಗುಪ್ತನಿಧಿಯ ಪರಮಾನಂದವನ್ನು ಪಡೆಯುವಂತಾಗಲಿ ಎಂದು ಭಗವಂತನಲ್ಲಿಪ್ರಾರ್ಥಿಸೋಣ.
ಲೇಖಕರು: ಸಂಸ್ಕೃತಿ ಚಿಂತಕರು

