ನಾಡು-ನುಡಿ ರಕ್ಷಣೆಗೆ ಕನ್ನಡಿಗರೆಲ್ಲರೂ ಒಗ್ಗೂಡಬೇಕು

Contributed by: gsshabadi@gmail.com|Vijaya Karnataka•
all kannadigas must come together to protect kannada land and language
ಫೋಟೊ : 1ಸುರ್ 2 ಸುರಪುರದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿಸಾಹಿತಿ ಮಹಾಂತೇಶ ದೇವರಗೋನಾಲ ಉಪನ್ಯಾಸ ನೀಡಿದರು.

* ಸಾಹಿತಿ ಮಹಾಂತೇಶ ದೇವರಗೋನಾಲ ಅಭಿಮತ
ನಾಡು-ನುಡಿ ರಕ್ಷಣೆಗೆ ಕನ್ನಡಿಗರೆಲ್ಲರೂ ಒಗ್ಗೂಡಬೇಕು

ವಿಕ ಸುದ್ದಿಲೋಕ ಸುರಪುರ

ಕನ್ನಡ ನಾಡಿಗೆ ಎರಡು ಸಾವಿರಕ್ಕೂ ಅಧಿಕ ವರ್ಷಗಳ ಭವ್ಯ ಇತಿಹಾಸ ಮತ್ತು ಶ್ರೀಮಂತ ಸಾಹಿತ್ಯ ಪರಂಪರೆಯಿದೆ. ಪ್ರಾಚೀನ ಶಾಸನಗಳು, ಸಾಹಿತ್ಯ ಕೃತಿಗಳು ಹಾಗೂ ನಾನಾ ರಾಜವಂಶಗಳ ಆಡಳಿತದಲ್ಲಿಕನ್ನಡ ಭಾಷೆ, ಸಂಸ್ಕೃತಿ ಮತ್ತು ನಾಡಿನ ವೈಭವ ಬೆಳೆದು ಬಂದಿದೆ. ರಾಮಾಯಣ, ಮಹಾಭಾರತ ಸೇರಿ ಪ್ರಾಚೀನ ಸಾಹಿತ್ಯಗಳಲ್ಲಿಕನ್ನಡ ನಾಡಿನ ಉಲ್ಲೇಖಗಳಿದ್ದು, ತಮಿಳಿನ ಶಿಲಪ್ಪದಿಗಾರಂ ಕೃತಿಯಲ್ಲಿಯೂ ಕರುನಾಡಿನ ಪ್ರಸ್ತಾಪವಿದೆ ಎಂದು ಸಾಹಿತಿ ಮಹಾಂತೇಶ ದೇವರಗೋನಾಲ ಹೇಳಿದರು.

ಇಲ್ಲಿಯ ತಾಲೂಕಾಡಳಿತದಿಂದ ಭಾನುವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿವಿಶೇಷ ಉಪನ್ಯಾಸ ನೀಡಿದ ಅವರು, ಮಾಸ್ಕಿ ಶಾಸನ, ಹಲ್ಮಡಿ ಶಾಸನ, ಕಪ್ಪೆ ಅರಭಟ್ಟನ ಶಾಸನ ಹಾಗೂ ಕವಿರಾಜಮಾರ್ಗ ಕೃತಿಗಳು ಕನ್ನಡದ ಪ್ರಾಚೀನತೆ ಮತ್ತು ಸಾಹಿತ್ಯ ಶ್ರೀಮಂತಿಕೆಗೆ ಸಾಕ್ಷಿಯಾಗಿವೆ. ಕದಂಬರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು, ವಿಜಯನಗರ ಸಾಮ್ರಾಜ್ಯ ಹಾಗೂ ಮೈಸೂರು ಅರಸರು ಕನ್ನಡ ನಾಡಿನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.

ತಹಸೀಲ್ದಾರ್ ಎಚ್ .ಕೆ.ಸರಕವಾಸ್ , ತಾಪಂ ಇಒ ಬಸವರಾಜ ಸಜ್ಜನ್ , ಬಿಇಒ ಡಾ.ನಿಂಗರಾಜ್ ಮೂಲಿಮನಿ, ಕಸಾಪ ಅಧ್ಯಕ್ಷ ಶರಣಬಸಪ್ಪ ಯಾಳವಾರ ವೇದಿಕೆಯಲ್ಲಿದ್ದರು.

* ಬಾಕ್ಸ್

ಕನ್ನಡದ ಬಳಕೆ ಹೆಚ್ಚಾಗಲಿ

ಕನ್ನಡ ಭಾಷೆಯ ಉಳಿವು ಮತ್ತು ಅಭಿವೃದ್ಧಿಗೆ ಸರಕಾರದ ಜತೆಗೆ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯೂ ಮಹತ್ವದ್ದಾಗಿದೆ. ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವ ಸರೋಜಿನಿ ಮಹಿಷಿ ವರದಿ, ಕನ್ನಡ ಭಾಷೆಯ ಶಿಕ್ಷಣ ಮತ್ತು ಆಡಳಿತಾತ್ಮಕ ಬಳಕೆಗೆ ಸಂಬಂಧಿಸಿದ ಗೋಕಾಕ್ ವರದಿ, ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಸಂಬಂಧಿಸಿದ ಡಿ.ಎಂ.ನಂಜುಂಡಪ್ಪ ವರದಿ ಸೇರಿ ಪ್ರಮುಖ ಶಿಫಾರಸುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಅಂಗಡಿ, ಮುಂಗಟ್ಟುಗಳು ಹಾಗೂ ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಅನ್ಯ ಭಾಷಿಕರು ಕನ್ನಡ ಕಲಿಯಲು ಆಸಕ್ತಿ ತೋರಿದಾಗ ಅವರನ್ನು ಗೌರವದಿಂದ ಪ್ರೋತ್ಸಾಹಿಸಬೇಕು. ಕನ್ನಡದ ಬಳಕೆ ಮನೆ, ಶಾಲೆ, ಕಚೇರಿ ಹಾಗೂ ಸಾರ್ವಜನಿಕ ವಲಯಗಳಲ್ಲಿಹೆಚ್ಚಾಗಬೇಕು ಎಂದು ಹೇಳಿದರು.

* ಕೋಟ್

ಕನ್ನಡಿಗರು ಭಾಷೆ, ಉದ್ಯೋಗ, ಗಡಿ ಹಾಗೂ ನೆಲದ ಹಕ್ಕುಗಳ ವಿಚಾರದಲ್ಲಿಇಂದಿಗೂ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಬ್ಯಾಂಕಿಂಗ್ , ರೈಲ್ವೆ, ಅಂಚೆ ಸೇರಿ ಕೇಂದ್ರ ಸರಕಾರಿ ಸಂಸ್ಥೆಗಳಲ್ಲಿಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಅಗತ್ಯವಿದೆ. ಕಾವೇರಿ, ಕೃಷ್ಣಾನದಿ ನೀರು ಹಂಚಿಕೆ ಹಾಗೂ ಅಂತರರಾಜ್ಯ ಗಡಿ ಸಮಸ್ಯೆಗಳ ಪರಿಹಾರಕ್ಕೂ ಪರಿಣಾಮಕಾರಿ ಕ್ರಮಗಳು ಅಗತ್ಯವಾಗಿವೆ.

-ಮಹಾಂತೇಶ ದೇವರಗೋನಾಲ, ಸಾಹಿತಿ