ಕೃತಕ ಬುದ್ಧಿಮತ್ತೆ ಸಾಮರ್ಥ್ಯ ಕೇಂದ್ರ ಸ್ಥಾಪನೆಗೆ ಒಪ್ಪಂದ

Contributed by: mahesh.adali@gmail.com|Vijaya Karnataka•
Vijay Karnataka
ಕೃತಕ ಬುದ್ಧಿಮತ್ತೆ ಸಾಮರ್ಥ್ಯ ಕೇಂದ್ರ ಸ್ಥಾಪನೆಗೆ ಒಪ್ಪಂದ

ವಿಕ ಸುದ್ದಿಲೋಕ ವಿಜಯಪುರ
ಉತ್ತರ ಕರ್ನಾಟಕದಲ್ಲಿಕೃತಕ ಬುದ್ಧಿಮತ್ತೆ ಶಿಕ್ಷಣ, ತಂತ್ರಜ್ಞಾನ ಮತ್ತು ನಾವೀನ್ಯತೆಗೆ ಉತ್ತೇಜನ ನೀಡುವ ಮಹತ್ವದ ಹೆಜ್ಜೆಯಾಗಿ ನಗರದ ಬಿಎಲ್ ಡಿಇ ಸಂಸ್ಥೆಯು ಬೆಂಗಳೂರಿನ ಸರ್ವಂ ಎಐ ಸಂಸ್ಥೆಯೊಂದಿಗೆ ಮಹತ್ವದ ಒಡಂಬಡಿಕೆ ಮಾಡಿಕೊಂಡಿದೆ.

ಬಿಎಲ್ ಡಿಇ ಸಂಸ್ಥೆಯ ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಮಹಾವಿದ್ಯಾಲಯದಲ್ಲಿಕೃತಕ ಬುದ್ಧಿಮತ್ತೆ ಸಾಮರ್ಥ್ಯ ಕೇಂದ್ರ ಸ್ಥಾಪಿಸುವ ಉದ್ದೇಶದಿಂದ ಈ ಒಪ್ಪಂದ ಮಾಡಿಕೊಳ್ಳಲಾಗಿದೆ.

ಬೆಂಗಳೂರಿನಲ್ಲಿನಡೆಯುತ್ತಿರುವ ಬೆಂಗಳೂರು ಟೆಕ್ ಶೃಂಗಸಭೆ-2026ರಲ್ಲಿಗುರುವಾರ ಬಿಎಲ್ ಡಿಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ಎಂಎಲ್ಸಿ ಸುನಿಲಗೌಡ ಪಾಟೀಲ ಹಾಗೂ ಸರ್ವಂ ಎಐ ಸಂಸ್ಥೆಯ ಸಹ-ಸಂಸ್ಥಾಪಕ ವಿವೇಕ ರಾಘವನ್ ಅವರು ರಾಜ್ಯ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಅವರ ಸಮ್ಮುಖದಲ್ಲಿಒಪ್ಪಂದ ಪತ್ರಗಳನ್ನು ವಿನಿಮಯ ಮಾಡಿಕೊಂಡರು.

ಈ ಕೇಂದ್ರ ಸ್ಥಾಪಿಸುವ ಮೂಲಕ ಬಿಎಲ್ ಡಿಇ ಸಂಸ್ಥೆಯ ನಾನಾ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಗೆ ಮಾತ್ರವಲ್ಲದೆ, ವಿಜಯಪುರ ಹಾಗೂ ಉತ್ತರ ಕರ್ನಾಟಕದ ನಾನಾ ಭಾಗಗಳ ವಿದ್ಯಾರ್ಥಿಗಳಿಗೂ ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಹಾಗೂ ಜನರೇಟಿವ್ ಎಐ ಕ್ಷೇತ್ರಗಳಲ್ಲಿತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ.

ಬಿಎಲ್ ಡಿಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುನಿಲಗೌಡ ಪಾಟೀಲ ಮಾತನಾಡಿ, ‘‘ವಿಜಯಪುರ ಜಿಲ್ಲೆಯನ್ನು ಕೃತಕ ಬುದ್ಧಿಮತ್ತೆ ಶಿಕ್ಷಣ, ಸಂಶೋಧನೆ, ನಾವೀನ್ಯತೆ ಮತ್ತು ಸ್ಟಾರ್ಟ್ ಅಪ್ ಗಳ ಪ್ರಮುಖ ಕೇಂದ್ರವನ್ನಾಗಿ ರೂಪಿಸಲು ಸಂಸ್ಥೆ ಬದ್ಧವಾಗಿದೆ’’ ಎಂದರು.

ಬಿಎಲ್ ಡಿಇ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಪಿ.ಮಂಜುನಾಥ, ಎಐ ಸಾಮರ್ಥ್ಯ ಕೇಂದ್ರದ ಅಧ್ಯಕ್ಷ ಡಾ.ಆರ್ .ಪಿ.ಬಿ.ಕೋಟ್ನಾಳ, ಸದಸ್ಯ ಕಾರ್ಯದರ್ಶಿ ಡಾ.ಪ್ರದೀಪ ಮಲಾಜಿ, ಎಂಜಿನಿಯರಿಂಗ್ ಕಾಲೇಜಿನ ಬೋಧಕ ಸಿಬ್ಬಂದಿ ಹಾಗೂ ಸವಂರ್ ಎಐ ಸಂಸ್ಥೆಯ ಪ್ರತಿನಿಧಿಗಳಿದ್ದರು.

ಎಐ-ಬಿಜೆಪಿ19(1.2)

ವಿಜಯಪುರದ ಬಿಎಲ್ ಡಿಇ ಸಂಸ್ಥೆಯು ಬೆಂಗಳೂರಿನ ಸರ್ವಂ ಎಐ ಸಂಸ್ಥೆಯೊಂದಿಗೆ ಮಹತ್ವದ ಒಡಂಬಡಿಕೆ ಮಾಡಿಕೊಂಡಿತು.