-ಡಿ.6ರೊಳಗೆ ನಿರ್ಣಯ ಕೈಗೊಳ್ಳದಿದ್ದರೆ ಅನಿರ್ದಿಷ್ಟ ಸತ್ಯಾಗ್ರಹ ಎಚ್ಚರಿಕೆವಿಕ ಸುದ್ದಿಲೋಕ ಹುಬ್ಬಳ್ಳಿ
ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ 15 ದಿನದೊಳಗೆ ನಿರ್ಣಯ ಕೈಗೊಳ್ಳುವುದಾಗಿ ಮಹಾನಗರ ಪಾಲಿಕೆ ಮೇಯರ್ ದುರ್ಗಮ್ಮ ಬೆಜವಾಡ ರೈತ ಮುಖಂಡರಿಗೆ ಭರವಸೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿಸೂಕ್ತ ನಿರ್ಧಾರ ತೆಗೆದುಕೊಳ್ಳದಿದ್ದರೆ ಡಿ.6ರಿಂದ ಪಾಲಿಕೆ ಆವರಣದಲ್ಲಿಅನಿರ್ದಿಷ್ಟ ಮುಷ್ಕರ ಆರಂಭಿಸುವುದಾಗಿ ರೈತ ಮುಖಂಡರು ಎಚ್ಚರಿಕೆಯನ್ನೂ ನೀಡಿದರು.
ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿಗುರುವಾರ ನಡೆದ ರೈತ ಸೇನಾ ಕರ್ನಾಟಕ ಮತ್ತು ಪಾಲಿಕೆ ಜನಪ್ರತಿನಿಧಿಗಳನ್ನೊಳಗೊಂಡ ಸಭೆಯಲ್ಲಿಮಾತನಾಡಿದ ಅವರು, ಮುಂದಿನ 15 ದಿನಗಳಲ್ಲಿಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು, ಪಾಲಿಕೆ ಸದಸ್ಯರು ಸಭೆ ಸೇರಿ ಚರ್ಚಿಸುತ್ತೇವೆ. ಅಲ್ಲಿಒಮ್ಮತದ ನಿರ್ಣಯ ಕೈಗೊಂಡು ತಿಳಿಸುವುದಾಗಿ ಹೇಳಿದರು.
ಆದರೆ, ಸಾಮಾನ್ಯ ಸಭೆಯಲ್ಲಿಮಹದಾಯಿ ಕುರಿತು ಚರ್ಚಿಸಿ ಠರಾವು ಪಾಸ್ ಮಾಡುವ ಬಗ್ಗೆ ಯಾವುದೇ ಸ್ಪಷ್ಟತೆಯನ್ನು ಮೇಯರ್ ತಿಳಿಸಲಿಲ್ಲ. ಈ ಬಗ್ಗೆ ರೈತ ಮುಖಂಡರೂ ಕೇಳಲಿಲ್ಲ. ಈ ಹಿಂದೆ ಇದೇ ಮೇಯರ್ ಮತ್ತು ಪಾಲಿಕೆ ಆಯುಕ್ತರು ನ.16ರಂದು ಸಾಮಾನ್ಯ ಸಭೆ ಕರೆದು ಯೋಜನೆ ಬಗ್ಗೆ ಠರಾವ್ ಪಾಸ್ ಮಾಡಿ ನ.19ರಂದು ರೈತರೊಂದಿಗಿನ ಸಭೆಯಲ್ಲಿತಿಳಿಸುವುದಾಗಿ ಹೇಳಿದ್ದು ಇಲ್ಲಿಉಲ್ಲೇಖಾರ್ಹ.
ಇದಕ್ಕೂ ಮುನ್ನ ಮಾತನಾಡಿದ ರೈತ ಸೇನಾ ಕರ್ನಾಟಕ ಅಧ್ಯಕ್ಷ ವೀರೇಶ ಸೊಬರದಮಠ, ಮಹದಾಯಿ, ಕಳಸಾ ಬಂಡೂರಿ ಯೋಜನೆಯಲ್ಲಿಕುಡಿಯುವುದಕ್ಕಾಗಿ 3.9 ಟಿಎಂಸಿ ನೀರು ಬಳಕೆಗೆ ನ್ಯಾಯಾಧೀಕರಣ 2018ರಲ್ಲೇ ಅನುಮತಿ ನೀಡಿದೆ. ಆದರೆ, ಇಲ್ಲಿಯವರೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾಲಹರಣ ಮಾಡುತ್ತಿವೆ. ಯೋಜನೆಯಲ್ಲಿಬಹುಪಾಲು ನೀರನ್ನು ಹು-ಧಾ ಪಾಲಿಕೆಯೇ ಪಡೆಯುತ್ತದೆ. ಹಾಗಾಗಿ ಪಾಲಿಕೆ ನಿಲುವು ಏನೆಂಬುದು ಮಹತ್ವದ್ದಾಗಿದೆ. ಯೋಜನೆ ಅನುಷ್ಠಾನಕ್ಕೆ ಪಾಲಿಕೆ ಮತ್ತು ಅವಳಿ ನಗರ ಜನತೆ ಬೆಂಬಲ ಅಗತ್ಯವಾಗಿದೆ. ಅದಕ್ಕಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ತಿಳಿಸಿದರು.
ಪಾಲಿಕೆ ಸದಸ್ಯರ ನಿಯೋಗವೊಂದು ಸಿಎಂ ಹಾಗೂ ಸ್ಥಳೀಯ ಶಾಸಕರು, ಸಂಸದರ ಜತೆ ಸೇರಿ ಪ್ರಧಾನಿ ಅವರನ್ನು ಭೇಟಿ ಮಾಡಿ ಮಹದಾಯಿ ಯೋಜನೆ ಜಾರಿಗೆ ಅನುಮತಿ ಕೊಡುವಂತೆ ಮನವರಿಕೆ ಮಾಡಬೇಕೋ ಅಥವಾ ಬೇಡವೋ ಎಂಬುದರ ಆಯ್ಕೆಯನ್ನು ಪಾಲಿಕೆ ಮಾಡಬೇಕು ಎಂದು ಸೊಬರದಮಠ ಸಲಹೆ ಮಾಡಿದರು. ಡಿ.6ರೊಳಗೆ ಸೂಕ್ತ ನಿರ್ಣಯ ಕೈಗೊಳ್ಳಬೇಕು. ಇಲ್ಲದಿದ್ದರೆ ಪಾಲಿಕೆ ಆವರಣದಲ್ಲಿಅನಿರ್ದಿಷ್ಟ ಸತ್ಯಾಗ್ರಹ ಆರಂಭಿಸುವುದಾಗಿಯೂ ಅವರು ಎಚ್ಚರಿಕೆ ನೀಡಿದರು.
ಮಲಪ್ರಭಾ ಡ್ಯಾಂ ನಿರ್ಮಾಣದಿಂದ ಇಲ್ಲಿಯವರೆಗೆ ಬಳಸಿಕೊಂಡ ನೀರಿನ ಪ್ರಮಾಣ ಮತ್ತು ಸಂಗ್ರಹಿಸಿದ ಟ್ಯಾಕ್ಸ್ ಮೊತ್ತವನ್ನು ಲಿಖಿತವಾಗಿ ಸಂಘಟನೆಗೆ ನೀಡುವಂತೆ ಮನವಿ ಮಾಡಿದರು.
ಮಹದಾಯಿ, ಕಳಸಾ ಬಂಡೂರಿ ಯೋಜನೆ ಅನುಷ್ಠಾನ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಲೋಕನಾಥ ಹೆಬಸೂರ ಮಾತನಾಡಿ, ಮಹದಾಯಿ ಯೋಜನೆಗಾಗಿ ಸಾಕಷ್ಟು ಹೋರಾಟ ನಡೆದಿದ್ದರಿಂದ ನ್ಯಾಯಾಧೀಕರಣದಿಂದ ಸಮಾಧಾನಕರ ತೀರ್ಪು ಬಂದಿದೆ. ಸರಕಾರಗಳ ಮೇಲೆ ನಿರಂತರ ಒತ್ತಡ ಹೇರುವುದು ಅವಶ್ಯವಾಗಿದೆ. ಇದೀಗ ಮಹಾನಗರ ಪಾಲಿಕೆಯ ಪಾತ್ರ ಮಹತ್ತರವಾಗಿದೆ. ಪಾಲಿಕೆಯ ಜನಪ್ರತಿನಿಧಿಗಳು ಬೆಳಗಾವಿ, ಬಾಗಲಕೋಟ, ಹಾವೇರಿ, ಧಾರವಾಡ ಸಂಸದರನ್ನು ಒಳಗೊಂಡು ಪ್ರಧಾನಿ, ರಾಜ್ಯದ ಸಿಎಂ ಬಳಿ ನಿಯೋಗ ಹೋಗಬೇಕು ಎಂದು ತಿಳಿಸಿದರು.
ಆಯುಕ್ತ ಡಾ.ರುದ್ರೇಶ ಘಾಳಿ ಮಾತನಾಡಿ, ಹುಬ್ಬಳ್ಳಿ ಧಾರವಾಡಕ್ಕೆ ಯಾವುದೇ ಜಲಮೂಲ ಇಲ್ಲ. ಇರುವ ಬೋರ್ ವೆಲ್ ಗಳು ಬತ್ತುತ್ತಿವೆ. ಮಲಪ್ರಭಾ ನದಿ ಅವಲಂಬನೆ ಅನಿವಾರ್ಯ. ಪರಾರ ಯಯ ನೀರಿನ ಮೂಲ ಹುಡುಕುವುದು ಸವಾಲಿನ ಕೆಲಸ ಎಂದು ಹೇಳಿದರು.
ಮಲಪ್ರಭಾ ನದಿಯಿಂದ ಹುಬ್ಬಳ್ಳಿ -ಧಾರವಾಡ ಮತ್ತು ಸುತ್ತಲಿನ 27 ಹಳ್ಳಿಗಳಿಗೆ ನೀರು ಒದಗಿಸುತ್ತಿದ್ದೇವೆ. ವಾರ್ಷಿಕ 2.50 ಟಿಎಂಸಿ ನೀರು ಬಳಸುತ್ತಿದ್ದು, ಪ್ರತಿ ತಿಂಗಳೂ 70 ಕೋಟಿ ರೂ. ವಿದ್ಯುತ್ ಬಿಲ್ ಪಾವತಿಸುತ್ತೇವೆ. ಆದರೆ, ಜನರಿಂದ ಕೇವಲ 4 ಕೋಟಿ ರೂ. ಶುಲ್ಕ ಬರುತ್ತದೆ. ಮಾರ್ಕೆಟ್ ನಲ್ಲಿಲೀ. ನೀರಿಗೆ 20 ರೂ. ಇದ್ದರೆ, ಪಾಲಿಕೆಯು ಒಂದು ಸಾವಿರ ಲೀ. ನೀರಿಗೆ 7 ರೂ. ಶುಲ್ಕ ಪಡೆಯುತ್ತಿದೆ. ಹಳ್ಳಿಗಳಿಂದ 110 ಕೋಟಿ ರೂ.ಗೂ ಹೆಚ್ಚು ನೀರಿನ ಬಿಲ್ ಬಾಕಿ ಇದೆ. ಇದೊಂದು ಸೇವೆ ಎಂದು ಪರಿಗಣಿಸಿ ಪಾಲಿಕೆ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು.
ಸಭೆಯಲ್ಲಿಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ಮಹಾನಗರ ಪಾಲಿಕೆಯು ಯೋಜನೆ ಪರವಾಗಿ ಇದೆ. ಈ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಉಪಮೇಯರ್ ರತ್ನಾಬಾಯಿ ನಾಝರೆ ಸೇರಿದಂತೆ ಹಲವು ಸದಸ್ಯರು ಹಾಗೂ ಮಲಪ್ರಭಾ ಜಲಾಶಯ ಇಇ ವಿ.ಕೆ.ಮುದಿಗೌಡರ್ ಇದ್ದರು. ನೂರಾರು ರೈತರು ಪಾಲ್ಗೊಂಡಿದ್ದರು.
ಬಾಕ್ಸ್
ಕೃಷಿ ಉದ್ದೇಶಕ್ಕಾಗಿಯೇ ಮಲಪ್ರಭಾ ಡ್ಯಾಂ ನಿರ್ಮಿಸಿದ್ದು, 37.731 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಡ್ಯಾಂ ಭರ್ತಿಯಾದಾಗಲೆಲ್ಲಕನಿಷ್ಠ 24 ಟಿಎಂಸಿ ನೀರನ್ನು ಕೃಷಿಗೆ ಕೊಡಲಾಗುತ್ತದೆ. ಹುಬ್ಬಳ್ಳಿ-ಧಾರವಾಡಕ್ಕೆ ವಾರ್ಷಿಕ 2.5 ಟಿಎಂಸಿ ನೀರು ಪೂರೈಸಲಾಗುತ್ತಿದೆ. 3 ಟಿಎಂಸಿ ನೀರು ಡೆಡ್ ಸ್ಟೋರೇಜ್ ಎಂದು ಪರಿಗಣಿಸಲಾಗುತ್ತದೆ. ಈ ವರ್ಷ ಮಳೆ ಕೊರತೆಯಿಂದ ಕೇವಲ 15 ಟಿಎಂಸಿ ನೀರಿದ್ದು, ಆದ್ಯತೆ ಮೇರೆಗೆ ಕುಡಿಯಲು ಮಾತ್ರ ಬಳಸಲಾಗುತ್ತದೆ. ಇಲ್ಲಿಯವರೆಗೆ ಡ್ಯಾಂನ ಶೇ.10 ಹೂಳು ತುಂಬಿರಬಹುದು ಎಂಬ ಅಂದಾಜು ಇದೆ.
-ಸುಭಾಷ ನಾಯಕ, ಅಧೀಕ್ಷಕ ಎಂಜನೀಯರ್ , ಮಲಪ್ರಭಾ ಜಲಾಶಯ
ಫೋಟೋ: 19 ಸಂತೋಷ ಮಹದಾಯಿ ಮೀಟಿಂಗ್
ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಭವನದಲ್ಲಿಗುರುವಾರ ನಡೆದ ರೈತ ಸೇನಾ ಕರ್ನಾಟಕ ಮತ್ತು ಪಾಲಿಕೆ ಜನಪ್ರತಿನಿಧಿಗಳನ್ನೊಳಗೊಂಡ ಸಭೆಯಲ್ಲಿಪಾಲಿಕೆ ಆಯುಕ್ತ ವಿರೇಶ ಸೊಬರದ ಮಠ ಮಾತನಾಡಿದರು.