ಕವಿ ನಾಗವರ್ಮ , ಸುಮಾರು ಕ್ರಿ.ಶ. 990ರಲ್ಲಿ, ಬಾಣ ಭಟ್ಟನ ಮೂಲ ಸಂಸ್ಕೃತ ಚಂಪೂ ಕಾವ್ಯವನ್ನು ಆಧರಿಸಿ ಬರೆದ ‘ ಕರ್ಣಾಟಕ ಕಾದಂಬರಿ ’ ಕಾವ್ಯ ನನ್ನ ಸಾರ್ವಕಾಲಿಕ ಇಷ್ಟದ ಕೃತಿಗಳಲ್ಲೊಂದು. ಇದರ ಕತೆ ಮತ್ತು ಪಾತ್ರಗಳು ಒಂದು ಸಾವಿರ ವರ್ಷಗಳಷ್ಟು
ಹಳೆಯದಾದರೂ ಇವತ್ತಿಗೂ ಪ್ರಸ್ತುತ ಎನ್ನಿಸುವಷ್ಟು ನಿತ್ಯನೂತನವಾಗಿವೆ. ಎಲ್ಲಾಪಾತ್ರಗಳೂ ಅತ್ಯಂತ ಸುಸಂಸ್ಕತ್ರೃತವಾಗಿ, ಸಹೃದಯತೆಯಿಂದ, ಭಾವ ತೀವ್ರತೆಯಿಂದ ನಡೆದುಕೊಳ್ಳುತ್ತವೆ. ಈ ಕಾವ್ಯವನ್ನು ನಮಗೆ ಪಾಠ ಮಾಡಿದ ಡಾ.ಕುಶಾಲಪ್ಪ ಗೌಡ ಅವರು ಈ ಪಾತ್ರಗಳು ನಮ್ಮ ಮನದಲ್ಲಿಆಳವಾಗಿ ಬೇರೂರುವಂತೆ ಪ್ರಭಾವಿಸಿದ್ದರು. ಮಹಾಶ್ವೇತೆಯ ಪಾತ್ರವನ್ನೇ ತೆಗೆದುಕೊಂಡರೆ ಅವಳು ಸುಸಂಸ್ಕೃತತೆಯ ಮಹಾಮೇರು. ಅಪ್ರತಿಮ ಸೌಂದರ್ಯ, ಗಟ್ಟಿ ವ್ಯಕ್ತಿತ್ವ, ದೃಢ ನಿಲುವು. ರಾಜಕಾರಣದಲ್ಲಾಗಲೀ, ಅರಣ್ಯದ ತಪಸ್ವಿನಿಯಾಗಿಯಾಗಲೀ, ಗೆಳತಿ ಕಾದಂಬರಿ ಮತ್ತು ಚಂದ್ರಾಪೀಡರ ಪ್ರಣಯಕ್ಕೆ ಇಂಬು ಕೊಡುವವಳಾಗಿಯಾಗಲೀ, ಪುಂಡರೀಕನ ಪ್ರಣಯಿನಿಯಾಗಿಯಾಗಲೀ ಮಹಾಶ್ವೇತೆ ಒಂದು ಪರಿಪೂರ್ಣ ಹೆಣ್ಣಾಗಿ ಪ್ರಜ್ವಲಿಸುತ್ತಾಳೆ.
ನಿರ್ಜನ ಪ್ರದೇಶದಲ್ಲಿಅಪೂರ್ವ ಸುಂದರಿಯೊಬ್ಬಳನ್ನು ಕಂಡಾಗ ಚಂದ್ರಾಪೀಡ ಅವಳ ಸೌಂದರ್ಯ, ತಪೋ ತೇಜಸ್ಸು, ಗಂಭೀರ ವ್ಯಕ್ತಿತ್ವವನ್ನು ನೋಡಿ ಅವಳನ್ನು ಗೌರವದಿಂದಲ್ಲದೇ ಬೇರೆ ರೀತಿಯಲ್ಲಿಭಾವಿಸಲು ಸಾಧ್ಯವಿಲ್ಲದಂತಹ ಕಮಾಂಡಿಂಗ್ ಅಸ್ಮಿತೆ ಅವಳದು. ಮಹಾಶ್ವೇತೆಯ ಪಾತ್ರ ಸಾರ್ವಕಾಲಿಕ ಶ್ರೇಷ್ಠ ಸ್ತ್ರೀ ಪಾತ್ರಗಳಲ್ಲಿಒಂದೆಂದು ಪರಿಗಣಿಸಲು ಕಾವ್ಯದುದ್ದಕ್ಕೂ ಹಲವಾರು ನಿದರ್ಶನಗಳು ಸಿಗುತ್ತವೆ. ಆಧುನಿಕ ಸ್ತ್ರೀ ಪಾತ್ರಗಳಿಗೆ ಸಡ್ಡು ಹೊಡೆಯುವಂತಹ ಸ್ವತಂತ್ರ ವ್ಯಕ್ತಿತ್ವ ಅವಳದು. ಮಹಾಶ್ವೇತೆಯ ಪಾತ್ರವನ್ನು ನಾಗವರ್ಮ (ಬಾಣನನ್ನು ಅನುಸರಿಸಿ) ಪ್ರೀತಿ, ವಿರಹ, ತ್ಯಾಗ ಮತ್ತು ವಿಧಿಯಾಟವನ್ನು ಪರಿಚಯಿಸುವ ಮಹತ್ವದ ರೂಪಕವಾಗಿ ಚಿತ್ರಿಸಿದ್ದಾನೆ. ಮಾಕ್ರ್ವೆಜ್ ನಂತಹ ಕಾದಂಬರಿಕಾರರ ಮ್ಯಾಜಿಕಲ್ ರಿಯಲಿಸಂ ಕಾದಂಬರಿಗಳನ್ನು ಜಾಗತಿಕ ಮಟ್ಟದಲ್ಲಿಚರ್ಚಿಸುವ ಇವತ್ತಿನ ಓದುಗರು ‘ಕರ್ಣಾಟಕ ಕಾದಂಬರಿ’ಯನ್ನು ಕೈಗೆತ್ತಿಕೊಂಡರೆ ಅವರು ಪ್ರವೇಶಿಸುವ ಜಗತ್ತೇ ಬೇರೆಯದು.