Sting Operations Transparency Of Records Or Violation Of Personal Privacy
ಪ್ರಬಂಧ
Contributed by: Jaya shree|Vijaya Karnataka•
ಕುಟುಕು ಕಾರ್ಯಾಚರಣೆಯ ಸಾಧಕ-ಬಾಧಕಗಳು
ಇಂಟ್ರೊಸಮಕಾಲೀನ ಪ್ರಜಾಪ್ರಭುತ್ವಗಳಲ್ಲಿ, ನಾಗರಿಕರ ಗೌಪ್ಯತೆಯ ಹಕ್ಕು ಮತ್ತು ಸಮಾಜದ ತಿಳಿದುಕೊಳ್ಳುವ ಹಕ್ಕಿನ ನಡುವೆ ಘರ್ಷಣೆಗಳು ಉಂಟಾಗುತ್ತಿರುವುದನ್ನು ಕಾಣಬಹುದು. ಆಗಾಗ ಸುದ್ದಿ ಮಾಡುವ ಕುಟುಕು ಕಾರ್ಯಾಚರಣೆಗಳೂ (ಸ್ಟಿಂಗ್ ಆಪರೇಶನ್ ) ಈ ಘರ್ಷಣೆಯ ಭಾಗವಾಗಿದ್ದು ಈ ವಿಷಯದ ಕುರಿತ ಪ್ರಬಂಧ ಬರಹ ಇಲ್ಲಿದೆ.
--------------
ಸಾಮಾನ್ಯವಾಗಿ ಪತ್ರಕರ್ತರು ಅಥವಾ ತನಿಖಾ ಸಂಸ್ಥೆಗಳು ನಡೆಸುವ ಕುಟುಕು ಕಾರ್ಯಾಚರಣೆಗಳು ವಂಚನೆ, ಭ್ರಷ್ಟಾಚಾರ , ಅಧಿಕಾರ ದುರುಪಯೋಗ ಮತ್ತು ಅನೈತಿಕ ಚಟುವಟಿಕೆಗಳನ್ನು ಬಹಿರಂಗಗೊಳಿಸುವ ಉದ್ದೇಶವನ್ನು ಹೊಂದಿರುತ್ತವೆ. ಆದರೆ, ಅನೇಕ ಬಾರಿ ವೈಯಕ್ತಿಕ ಲಾಭ ಅಥವಾ ಇನ್ನೊಬ್ಬರ ಚಾರಿತ್ರ್ಯ ವಧೆಗಾಗಿ ಇದನ್ನು ಬಳಸಿಕೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿಕುಟುಕು ಕಾರ್ಯಾಚರಣೆಗಳ ಸಾಧಕ-ಬಾಧಕಗಳ ಸಂಕ್ಷಿಪ್ತ ಚರ್ಚೆ ಇಲ್ಲಿದೆ.
ಅರ್ಥ
ಮಾಧ್ಯಮ ಪ್ರತಿನಿಧಿಗಳು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳ ತಪ್ಪು ಕೃತ್ಯಗಳನ್ನು ಅಥವಾ ಅವರ ಗುಪ್ತ ಅಕ್ರಮಗಳನ್ನು ಬಯಲಿಗೆಳೆಯಲು ‘ಸ್ಟಿಂಗ್ ಆಪರೇಷನ್ ’ಗಳನ್ನು ಒಂದು ಸಾಧನವಾಗಿ ಬಳಸುತ್ತಾರೆ. ಅಪರಾಧಿಗಳ ವಿರುದ್ಧ ನಿರ್ಣಾಯಕ ಮತ್ತು ದೋಷಾರೋಪಣೆಗೆ ಕಾರಣವಾಗುವ ಸಾಕ್ಷ್ಯಗಳನ್ನು ಸಂಗ್ರಹಿಸಲು ಕಾನೂನು ಜಾರಿ ಸಂಸ್ಥೆಗಳು ಕೂಡ ಇವುಗಳನ್ನು ಬಳಸುತ್ತವೆ.
ಕೆಲವು ಉದಾಹರಣೆಗಳು
ತೆಹೆಲ್ಕಾದ ಆಪರೇಷನ್ ವೆಸ್ಟ್ ಎಂಡ್ (2001) ರಕ್ಷಣಾ ಖರೀದಿಯಲ್ಲಿನ ಭ್ರಷ್ಟಾಚಾರವನ್ನು ಬಹಿರಂಗಪಡಿಸಿತು. 2005ರಲ್ಲಿಕೋಬ್ರಾ ಪೋಸ್ಟ್ ಮತ್ತು ಆಜ್ ತಕ್ ಮಾಧ್ಯಮಗಳು ನಡೆಸಿದ ಕುಟುಕು ಕಾರ್ಯಾರಣೆಯಲ್ಲಿ11 ಸಂಸತ್ ಸದಸ್ಯರು ಹಣ ಪಡೆದು ಪ್ರಶ್ನೆ ಕೇಳುವುದು ಬಹಿರಂಗಗೊಂಡು ಅವರು ಸದಸ್ಯತ್ವದಿಂದ ಅನರ್ಹಗೊಂಡರು. 2014ರಲ್ಲಿ‘ನಾರದ ಸ್ಟಿಂಗ್ ಅಪರೇಷನ್ ’ನಲ್ಲಿಪತ್ರಕರ್ತರು ‘ಇಂಪೆಕ್ಸ್ ಕನ್ಸಲ್ಟೆನ್ಸಿ’ ಎಂಬ ನಕಲಿ ಕಂಪನಿಯ ಪ್ರತಿನಿಧಿಗಳ ಸೋಗಿನಲ್ಲಿಬಂದು, ತೃಣಮೂಲ ಕಾಂಗ್ರೆಸ್ ನ 12 ಸಚಿವರು, ನಾಯಕರು ಮತ್ತು ಒಬ್ಬ ಹಿರಿಯ ಪೊಲೀಸ್ ಅಧಿಕಾರಿ ನಗದು ಹಣದ ಕಟ್ಟುಗಳನ್ನು ಸ್ವೀಕರಿಸುತ್ತಿರುವುದನ್ನು ವಿಡಿಯೊ ಚಿತ್ರೀಕರಿಸಿಕೊಂಡರು.
2000ರಲ್ಲಿಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ಮತ್ತು ಬೆಟ್ಟಿಂಗ್ ಏಜೆಂಟರು (ಬುಕ್ಕಿಗಳು) ಭಾಗಿಯಾಗಿದ್ದ ವ್ಯಾಪಕ ಮ್ಯಾಚ್ -ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಜಾಲಗಳನ್ನು ತೆಹಲ್ಕಾ ಸುದ್ದಿ ಸಂಸ್ಥೆ ಬಯಲಿಗೆಳೆಯಿತು. ಸಾರ್ವಜನಿಕ ಜೀವನಕ್ಕೆ ಸಂಬಂಧಿಸಿದ ಇಂಥದೇ ಹತ್ತಾರು ಕುಟುಕು ಕಾರ್ಯಾಚರಣೆಗಳು ನಡೆದಿವೆ. ಇವು ರಾಜಕಾರಣಿಗಳು ಮತ್ತು ಅಧಿಕಾರಿಗಳು ನಡೆಸುವ ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಮೂಲಕ ಅವರನ್ನು ದೇಶದ ಜನರ ಎದುರು ಬೆತ್ತಲುಗೊಳಿಸಿವೆ.
ಕುಟುಕು ಕಾರ್ಯಾಚರಣೆಗಳ ಪರ ವಾದಗಳು
* ಸಾಂಪ್ರದಾಯಿಕ ಕಾನೂನು ಜಾರಿ ಸಂಸ್ಥೆಗಳು ಭ್ರಷ್ಟ ಆಚರಣೆಗಳನ್ನು ಬಯಲಿಗೆಳೆಯುವಲ್ಲಿವಿಫಲವಾಗಿರುವಾಗ ಕುಟುಕು ಕಾರ್ಯಾಚರಣೆಗಳು ಇದನ್ನು ಮಾಡುತ್ತಿರುವುದು ವ್ಯವಸ್ಥೆಯನ್ನು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿಒಂದು ಉತ್ತಮ ಸಾಧನವಾಗಿದೆ.
* ಲಂಚ, ಕಿಕ್ ಬ್ಯಾಕ್ ಮತ್ತು ಸಾರ್ವಜನಿಕ ಕಚೇರಿಯ ದುರುಪಯೋಗವು ಸಾಮಾನ್ಯವಾಗಿ ಮುಚ್ಚಿದ ಬಾಗಿಲುಗಳ ಹಿಂದೆ ನಡೆಯುತ್ತದೆ. ರಹಸ್ಯ ರೆಕಾಡಿಂರ್ ಗ್ ಗಳಿಲ್ಲದೆ ಇಂತಹ ವೈಟ್ -ಕಾಲರ್ ಅಪರಾಧಗಳ ಬಗ್ಗೆ ಗಟ್ಟಿಯಾದ ಪುರಾವೆಗಳನ್ನು ಸಂಗ್ರಹಿಸುವುದು ಬಹುತೇಕ ಅಸಾಧ್ಯ. ಈ ನಿಟ್ಟಿನಲ್ಲಿಕುಟುಕು ಕಾರ್ಯಾಚರಣೆ ಒಂದು ಉತ್ತಮ ಸಾಧನವಾಗಿದೆ.
* ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿರುವ ಪತ್ರಿಕಾ ಸ್ವಾತಂತ್ರ್ಯವು ಸಾರ್ವಜನಿಕರಿಗೆ ಮಾಹಿತಿ ಒದಗಿಸಲು ಸಂವಿಧಾನದ 19(1)(ಎ) ವಿಧಿಯ ಅಡಿಯಲ್ಲಿಕುಟುಕು ಕಾರ್ಯಾಚರಣೆಯ ಮೂಲಕ ತನಿಖೆ ನಡೆಸುವ ಹಕ್ಕನ್ನು ನೀಡುತ್ತದೆ.
* ಸತ್ಯಾಂಶವನ್ನು ಮುಂದಿಡುವಂತಿದ್ದರೆ ಮತ್ತು ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವಂತಿದ್ದರೆ, ಕುಟುಕು ಕಾರ್ಯಾಚರಣೆಯು ನೀಡುವ ಸಾಕ್ಷ್ಯವನ್ನು ಒಪ್ಪಿಕೊಳ್ಳಬಹುದು ಎಂದು ಭಾರತೀಯ ನ್ಯಾಯಾಲಯಗಳು ಪದೇ ಪದೇ ಒಪ್ಪಿಕೊಂಡಿವೆ.
ಸ್ಟಿಂಗ್ ಕಾರ್ಯಾಚರಣೆಗಳ ವಿರುದ್ಧದ ವಾದಗಳು
* ಕಡಿವಾಣವಿಲ್ಲದ ಸ್ಟಿಂಗ್ ಕಾರ್ಯಾಚರಣೆಗಳು ಆಗಾಗ್ಗೆ ವಯಯಕ್ತಿಕ ಸ್ವಾತಂತ್ರ್ಯ ಮತ್ತು ಸಾಂವಿಧಾನಿಕ ಹಕ್ಕುಗಳ ತೀವ್ರ ಉಲ್ಲಂಘನೆಯ ರೇಖೆಯನ್ನು ದಾಟುತ್ತವೆ ಎಂದು ವಿಮರ್ಶಕರು ವಾದಿಸುತ್ತಾರೆ.
* ಭಾರತೀಯ ಸಂವಿಧಾನದ 21ನೇ ವಿಧಿಯು ನೀಡಿರುವ ಜೀವನದ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನ ಅಡಿಯಲ್ಲಿಗೌಪ್ಯತೆಯನ್ನು ಮೂಲಭೂತ ಹಕ್ಕು ಎಂದು ನ್ಯಾಯಾಂಗ ಘೋಷಿಸಿದೆ. ಒಪ್ಪಿಗೆಯಿಲ್ಲದೆ ಯಾರನ್ನಾದರೂ ರಹಸ್ಯವಾಗಿ ಚಿತ್ರೀಕರಿಸುವುದು ಆ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ.
* ಅನೇಕ ಸ್ಟಿಂಗ್ ಕಾರ್ಯಾಚರಣೆಗಳಲ್ಲಿ, ಅದನ್ನು ಚಿತ್ರೀಕರಣದ ಮೂಲಕ ದಾಖಲಿಸಿಕೊಳ್ಳುವ ಪತ್ರಕರ್ತ ಅಥವಾ ತನಿಖಾಧಿಕಾರಿಯು ಉದ್ದೇಶಿತ ವ್ಯಕ್ತಿಯು ಅಪರಾಧ ಮಾಡಲು ಪ್ರೇರೇಪಿಸುತ್ತಾರೆ, ಆಮಿಷವೊಡ್ಡುತ್ತಾರೆ ಅಥವಾ ಪ್ರಲೋಭಿಸುತ್ತಾರೆ. ಉದಾಹರಣೆಗೆ, ಚಿತ್ರೀಕರಣಕ್ಕೊಳಗಾಗುತ್ತಿರುವ ವ್ಯಕ್ತಿಯು ಲಂಚವನ್ನು ತಾನಾಗಿಯೇ ಕೇಳದೇ ಇದ್ದರೂ, ಅವನು ಲಂಚವನ್ನು ಪಡೆಯುವಂತೆ ಪ್ರೇರೇಪಿಸಲಾಗುತ್ತದೆ. ಮಾಧ್ಯಮಗಳು ಅಪರಾಧವನ್ನು ಪತ್ತೆ ಮಾಡಬೇಕು, ನಿಜ; ಆದರೆ ಅವು ಅಪರಾಧವನ್ನು ಸೃಷ್ಟಿಸಬಾರದು ಎಂದು ವಿಮರ್ಶಕರು ವಾದಿಸುತ್ತಾರೆ.
* ಮಾಧ್ಯಮ ಸಂಸ್ಥೆಗಳು ಪರಿಶೀಲಿಸದ ಅಥವಾ ತಪ್ಪಾಗಿ ಎಡಿಟ್ ಮಾಡಿದ ಕುಟುಕು ದೃಶ್ಯಗಳನ್ನು ಪ್ರಸಾರ ಮಾಡಿದಾಗ, ಹಾಗೆ ತೋರಿಸಲ್ಪಟ್ಟವರು ತಕ್ಷಣದ ಸಾರ್ವಜನಿಕ ಅವಮಾನ, ಜೀವನೋಪಾಯದ ನಷ್ಟ ಮತ್ತು ಚಾರಿತ್ರ್ಯ ವಧೆಯನ್ನು ಎದುರಿಸುತ್ತಾರೆ.
ಸಮತೋಲನ ಸಾಧಿಸುವ ‘ಲಕ್ಷತ್ರ್ಮಣ ರೇಖೆ’
ಕುಟುಕು ಕಾರ್ಯಾಚರಣೆಯು ಪ್ರಜಾಪ್ರಭುತ್ವದ ಕಾನೂನುಬದ್ಧ ರಕ್ಷಣೆಯೇ ಅಥವಾ ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ಕಾನೂನುಬಾಹಿರ ದಾಳಿಯೇ ಎಂದು ನಿರ್ಧರಿಸಲು, ನ್ಯಾಯಶಾಸ್ತ್ರ ಮತ್ತು ಮಾಧ್ಯಮ ನೀತಿ ಸಮಿತಿಗಳು (ಕಾನೂನು ಆಯೋಗದ ಚರ್ಚೆಗಳ ಸಮಯದಲ್ಲಿಪ್ರಸ್ತಾಪಿಸಲಾದ ಮಾರ್ಗಸೂಚಿಗಳು) ಈ ಕೆಳಗಿನ ಕಟ್ಟುನಿಟ್ಟಾದ ಪರೀಕ್ಷೆಯನ್ನು ಸೂಚಿಸುತ್ತವೆ:
1. ಕೊನೆಯ ಉಪಾಯ ನಿಯಮ: ಕುಟುಕು ಕಾರ್ಯಾಚರಣೆಯು ಎಂದಿಗೂ ಮೊದಲ ಆಯ್ಕೆಯಾಗಿರಬಾರದು; ಎಲ್ಲಾಸಾಮಾನ್ಯ, ಪಾರದರ್ಶಕ ತನಿಖೆಯ ಮಾರ್ಗಗಳು ವಿಫಲವಾದಾಗ ಮಾತ್ರ ಅದನ್ನು ನಡೆಸಬೇಕು.
2. ಸಾರ್ವಜನಿಕ ಹಿತಾಸಕ್ತಿ : ಒಬ್ಬ ವ್ಯಕ್ತಿಯ ಕೃತ್ಯವು ಸಾರ್ವಜನಿಕ ಸುವ್ಯವಸ್ಥೆ, ಪಾರದರ್ಶಕತೆ ಅಥವಾ ರಾಜ್ಯದ ಸಮಗ್ರತೆಗೆ ಬೆದರಿಕೆ ಹಾಕುವಂತಿದ್ದರೆ ಕುಟುಕು ಕಾರ್ಯಾಚರಣೆ ನಡೆಸಬೇಕೇ ಹೊರತು ನಿರುಪದ್ರವ, ಅಪರಾಧವಲ್ಲದ ಖಾಸಗಿ ನಡವಳಿಕೆ ಅಥವಾ ವೈಯಕ್ತಿಕ/ಲೈಂಗಿಕ ಜೀವನವನ್ನು ತನಿಖೆ ಮಾಡಬಾರದು.
3. ಆಮಿಷ ಒಡ್ಡಬಾರದು: ಕುಟುಕು ಕಾರ್ಯಾಚರಣೆ ನಡೆಸುವವರು ಯಾವುದೇ ವ್ಯಕ್ತಿಯನ್ನು ಅಪರಾಧ ಎಸಗುವಂತೆ ಒತ್ತಾಯಿಸಬಾರದು. ಉದಾಹರಣೆಗೆ: ಒತ್ತಾಯದಿಂದ ಹಣ ನೀಡುವುದು ಅಥವಾ ಲೈಂಗಿಕವಾಗಿ ಆಕರ್ಷಿಸುವುದು.
4. ನೈಜತೆ ಕಾಪಾಡಬೇಕು: ವಿಡಿಯೋ ಚಿತ್ರೀಕರಣವನ್ನು ತಮಗೆ ಬೇಕಾದಂತೆ ಎಡಿಟ್ ಮಾಡುವುದು, ನಕಲಿ ಧ್ವನಿ ಬಳಸುವುದು, ಆಯ್ದ ಸಂದರ್ಭಗಳನ್ನು ಮಾತ್ರ ತೋರಿಸುವ ಅಥವಾ ಕತ್ತರಿಸುವ ಕೆಲಸ ಮಾಡಬಾರದು.
ಉಪಸಂಹಾರ
ಕುಟುಕು ಕಾರ್ಯಾಚರಣೆಯು ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ದಾಳಿಯಲ್ಲ, ಅದು ಸಮಾಜಕ್ಕೆ ಹಾನಿ ಮಾಡುವ ಭ್ರಷ್ಟ ಚಟುವಟಿಕೆಗಳನ್ನು ಸಾಕ್ಷಿ ಸಮೇತ ಬಹಿರಂಗಗೊಳಿಸುವ ಒಂದು ಸಾಧನವಾಗಿದೆ. ಇದು ಸಾರ್ವಜನಿಕ ಜೀವನದಲ್ಲಿಪಾರದರ್ಶಕತೆಯನ್ನು, ಅಧಿಕಾರದಲ್ಲಿರುವವರಲ್ಲಿನೈತಿಕತೆಯನ್ನು ತುಂಬುವ ಒಂದು ಪ್ರಯತ್ನವಾಗಿದೆ. ಆದಾಗ್ಯೂ, ಅದು ಸಂವೇದನಾಶೀಲವಾಗಿರಬೇಕು. ಅದು ಯಾವುದೇ ವ್ಯಕ್ತಿಯ ವೈಯಕ್ತಿಕ ಘನತೆ ಮತ್ತು ಸಾಂವಿಧಾನಿಕ ಸ್ವಾತಂತ್ರ್ಯದ ಮೇಲಿನ ದಾಳಿಯಾಗಬಾರದು.