ಮೊರ, ಬುಟ್ಟಿ, ಬಿದಿರು ಡಬ್ಬ ಸೇರಿದಂತೆ ಬಿದಿರು ಉತ್ಪನ್ನಗಳಿಗೆ ಬೇಡಿಕೆ ಕುಸಿತ
ಮೃತ್ಯುಂಜಯ ಕೋಡಿಹಳ್ಳಿ ಚಿಕ್ಕಬಳ್ಳಾಪುರದೀಪಾವಳಿ ಹಬ್ಬ ಬಂತೆಂದರೆ ಒಂದು ಕಾಲದಲ್ಲಿಮನೆಗಳಲ್ಲಿಕಜ್ಜಾಯದ ಘಮಲು, ಚಕ್ಕುಲಿ, ಕೋಡುಬಳೆಯ ಸಿದ್ಧತೆ ಜೋರಾಗಿರುತ್ತಿತ್ತು. ಹಬ್ಬಕ್ಕೆ ತಯಾರಿಸಿದ ತಿಂಡಿಗಳನ್ನು ಬಹುದಿನ ಬಾಳಿಕೆ ಬರಲೆಂದು ಜೋಪಾನವಾಗಿ ಸಂಗ್ರಹಿಸಿಡಲು ಬಿದಿರು ಉತ್ಪನ್ನಗಳನ್ನು ಬಳಸಲಾಗುತ್ತಿತ್ತು. ಧಾನ್ಯಗಳನ್ನು ಹಸನು ಮಾಡಲು ಮೊರಗಳನ್ನು ಹೊರತೆಗೆದು ಸ್ವಚ್ಛಗೊಳಿಸಲಾಗುತ್ತಿತ್ತು.
ಆದರೆ, ಆಧುನಿಕ ಜೀವನಶೈಲಿ ಹಾಗೂ ಪ್ಲಾಸ್ಟಿಕ್ , ಸ್ಟೀಲ್ ಪಾತ್ರೆಗಳ ಬಳಕೆ ಹೆಚ್ಚಾಗಿರುವುದರಿಂದ ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿದ್ದ ಮೊರ ಮತ್ತು ಬಿದಿರು ಡಬ್ಬಗಳು ಇಂದು ನಿಧಾನವಾಗಿ ಮರೆಯಾಗುತ್ತಿವೆ. ಹಿಂದಿನ ಕಾಲದಲ್ಲಿದೀಪಾವಳಿ ಹಬ್ಬದ ಸಿದ್ಧತೆ ಎಂದರೆ ಮನೆಯ ಮಹಿಳೆಯರಿಗೆ ಬಿಡುವಿಲ್ಲದ ಕೆಲಸ.
ಅಕ್ಕಿ, ಬೆಲ್ಲಬಳಸಿ ಕಜ್ಜಾಯ, ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ ಸೇರಿದಂತೆ ವಿವಿಧ ತಿಂಡಿಗಳನ್ನು ಮನೆಯಲ್ಲಿಯೇ ತಯಾರಿಸುತ್ತಿದ್ದರು. ಹೀಗೆ ತಯಾರಿಸಿದ ತಿಂಡಿಗಳನ್ನು ತಣ್ಣಗಾದ ಬಳಿಕ ಒಂದರ ಮೇಲೊಂದು ಜೋಡಿಸಿ ಬಿದಿರಿನಿಂದ ನೇಯ್ದ ಡಬ್ಬಗಳಲ್ಲಿಸಂಗ್ರಹಿಸಿಡುತ್ತಿದ್ದರು. ಹಗುರವಾಗಿದ್ದ ಈ ಡಬ್ಬಗಳು ತಿಂಡಿಗಳನ್ನು ಜೋಪಾನವಾಗಿ ಇಡಲು ಅನುಕೂಲವಾಗಿದ್ದವು. ಹಬ್ಬದ ದಿನಗಳಲ್ಲಿಮಕ್ಕಳಿಗೆ ಕಜ್ಜಾಯ ತೆಗೆದುಕೊಡುವುದರಿಂದ ಹಿಡಿದು ಅತಿಥಿಗಳಿಗೆ ಸಿಹಿ ಹಂಚುವವರೆಗೂ ಇವು ಬಳಕೆಯಾಗುತ್ತಿದ್ದವು.
ಬಿದಿರು ಉತ್ಪನ್ನಗಳಿಗೆ ಕುಸಿದ ಬೇಡಿಕೆ: ಮೊರ, ಬುಟ್ಟಿ, ಬಿದಿರು ಡಬ್ಬ ಸೇರಿದಂತೆ ಹಲವು ವಸ್ತುಗಳ ತಯಾರಿಕೆಗೆ ಬಿದಿರು ಪ್ರಮುಖ ಕಚ್ಚಾವಸ್ತು. ಒಂದು ಕಾಲದಲ್ಲಿದೀಪಾವಳಿ ಹಬ್ಬದ ಸಂದರ್ಭದಲ್ಲಿಬಿದಿರಿನ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಇರುತ್ತಿತ್ತು. ಹೀಗಾಗಿ ಬಿದಿರು ವ್ಯಾಪಾರಿಗಳಿಗೂ ಉತ್ತಮ ವಹಿವಾಟು ನಡೆಯುತ್ತಿತ್ತು. ಆದರೆ, ಈಗ ಬೇಡಿಕೆ ಕಡಿಮೆಯಾಗಿರುವುದರಿಂದ ವ್ಯಾಪಾರವೂ ಕುಂಠಿತವಾಗಿದೆ.
‘ಹಿಂದೆ ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಮೊರ, ಬುಟ್ಟಿ ಮತ್ತು ಬಿದಿರಿನ ಡಬ್ಬ ತಯಾರಿಸಲು ಸಾಕಷ್ಟು ಬಿದಿರು ಖರೀದಿಸುತ್ತಿದ್ದರು. ಹಬ್ಬದ ಸಂದರ್ಭದಲ್ಲಿವ್ಯಾಪಾರವೂ ಚೆನ್ನಾಗಿರುತ್ತಿತ್ತು. ಈಗ ಪ್ಲಾಸ್ಟಿಕ್ ಮತ್ತು ಸ್ಟೀಲ್ ವಸ್ತುಗಳ ಬಳಕೆ ಹೆಚ್ಚಾಗಿರುವುದರಿಂದ ಬಿದಿರು ಖರೀದಿಸುವವರ ಸಂಖ್ಯೆ ಕಡಿಮೆಯಾಗಿದೆ. ಮೊದಲಿನಂತೆ ವ್ಯಾಪಾರ ನಡೆಯುತ್ತಿಲ್ಲ. ಹಬ್ಬದ ಸಮಯದಲ್ಲಿಯೂ ಹೆಚ್ಚಿನ ಬೇಡಿಕೆ ಇಲ್ಲದಿರುವುದು ನಮ್ಮ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ’ ಎಂದು ಬಿದಿರು ವ್ಯಾಪಾರಿ ಮುನಿಕೃಷ್ಣಪ್ಪ ಬೇಸರ ವ್ಯಕ್ತಪಡಿಸಿದರು.
ಕೈಚಳಕದ ಕರಕುಶಲ ವೃತ್ತಿಗೆ ಸಂಕಷ್ಟ: ಬಿದಿರಿನಿಂದ ಮೊರ ಅಥವಾ ಡಬ್ಬ ತಯಾರಿಸುವುದು ಸುಲಭದ ಕೆಲಸವಲ್ಲ. ಮೊದಲು ಬಿದಿರನ್ನು ಆಯ್ಕೆ ಮಾಡಿ, ಸೀಳಿ ತೆಳುವಾದ ಪಟ್ಟಿಗಳನ್ನಾಗಿ ಮಾಡಬೇಕು. ಬಳಿಕ ಒಂದೊಂದೇ ಪಟ್ಟಿಯನ್ನು ನಾಜೂಕಾಗಿ ಹೆಣೆದು ಬೇಕಾದ ಆಕಾರ ನೀಡಬೇಕು. ಇದಕ್ಕೆ ಸಾಕಷ್ಟು ಸಮಯ, ತಾಳ್ಮೆ ಮತ್ತು ಅನುಭವ ಅಗತ್ಯ. ತಲೆಮಾರುಗಳಿಂದ ಈ ಕಸುಬು ಮಾಡಿಕೊಂಡು ಬಂದಿರುವ ಕುಟುಂಬಗಳಿಗೆ ಬೇಡಿಕೆ ಕುಸಿತದಿಂದ ಜೀವನ ನಿರ್ವಹಣೆಯೇ ಕಷ್ಟವಾಗುತ್ತಿದೆ.
‘ಒಂದು ಮೊರ ಅಥವಾ ಬಿದಿರಿನ ಡಬ್ಬ ತಯಾರಿಸಲು ಸಾಕಷ್ಟು ಶ್ರಮ ಹಾಕಬೇಕು. ಬಿದಿರು ಸೀಳುವುದರಿಂದ ಹಿಡಿದು ಕೊನೆಯ ಹಂತದವರೆಗೆ ಎಲ್ಲವೂ ಕೈಕೆಲಸವೇ. ಹಿಂದೆ ಹಬ್ಬದ ಸಮಯದಲ್ಲಿಮುಂಗಡವಾಗಿ ಆರ್ಡರ್ ಬರುತ್ತಿದ್ದವು. ಈಗ ಜನರು ಅಂಗಡಿಗಳಲ್ಲಿಸಿಗುವ ಪ್ಲಾಸ್ಟಿಕ್ ಡಬ್ಬಗಳನ್ನು ಖರೀದಿಸುತ್ತಿದ್ದಾರೆ. ನಮ್ಮ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗಿದ್ದು, ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡುವುದೂ ಕಷ್ಟವಾಗಿದೆ. ಈ ವೃತ್ತಿಯಿಂದ ಬರುವ ಆದಾಯದಲ್ಲಿಕುಟುಂಬ ನಿರ್ವಹಣೆ ಮಾಡುವುದು ಸವಾಲಾಗಿದೆ. ಮುಂದಿನ ಪೀಳಿಗೆಯವರು ಈ ವೃತ್ತಿಯಲ್ಲಿಆಸಕ್ತಿ ತೋರದಿರುವುದು ಆತಂಕ ತಂದಿದೆ’ ಎಂದು ಬಿದಿರು ಉತ್ಪನ್ನಗಳ ತಯಾರಕ ನಾಗರಾಜ್ ತಮ್ಮ ಅಳಲು ತೋಡಿಕೊಂಡರು.
ಮೊರದ ಬಳಕೆ ನೆನಪಷ್ಟೆ: ಗ್ರಾಮೀಣ ಮನೆಗಳಲ್ಲಿರಾಗಿ, ಜೋಳ, ಅಕ್ಕಿ, ಸಜ್ಜೆ ಸೇರಿದಂತೆ ವಿವಿಧ ಧಾನ್ಯಗಳನ್ನು ಹಸನು ಮಾಡಲು ಮೊರವೇ ಪ್ರಮುಖ ಸಾಧನವಾಗಿತ್ತು. ಧಾನ್ಯದಲ್ಲಿರುವ ಹೊಟ್ಟು, ಕಸ, ಕಲ್ಲುಗಳನ್ನು ಬೇರ್ಪಡಿಸಲು ಹಿರಿಯರು ಮೊರ ಬಳಸುತ್ತಿದ್ದರು. ಗಾಳಿಗೆ ಧಾನ್ಯಗಳನ್ನು ಹಾರಿಸಿ ಹೊಟ್ಟು ಬೇರ್ಪಡಿಸುವ ಅವರ ಕೌಶಲ್ಯ ಇಂದಿನ ಪೀಳಿಗೆಗೆ ಅಪರೂಪದ ಅನುಭವವಾಗಿದೆ. ಮದುವೆ, ಹಬ್ಬ ಹಾಗೂ ಇತರ ಶುಭ ಕಾರ್ಯಗಳಲ್ಲಿಮೊರಕ್ಕೆ ವಿಶೇಷ ಸ್ಥಾನವಿತ್ತು.
ಪರಂಪರೆ ಉಳಿಸುವ ಹೊಣೆ ನಮ್ಮದು: ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಹಿನ್ನೆಲೆಯಲ್ಲಿಬಿದಿರಿನಂತಹ ನೈಸರ್ಗಿಕ ವಸ್ತುಗಳ ಬಳಕೆಗೆ ಮತ್ತೆ ಆದ್ಯತೆ ನೀಡಬೇಕಿದೆ. ಸ್ಥಳೀಯ ಕರಕುಶಲಗಾರರಿಂದ ಇಂತಹ ವಸ್ತುಗಳನ್ನು ಖರೀದಿಸುವ ಮೂಲಕ ಅವರ ಬದುಕಿಗೆ ಆಸರೆಯಾಗುವ ಜತೆಗೆ ಗ್ರಾಮೀಣ ಕಲೆ ಮತ್ತು ಸಂಸ್ಕೃತಿ ಉಳಿಸಬಹುದು.
08 ಸಿಬಿಪಿ 1 ಮತ್ತು 2
ಬಿದಿರಿನ ಮೊರ ಮತ್ತು ಡಬ್ಬ ಮಾರಾಟ ತಯಾರಿಸುತ್ತಿರುವ ಕುಶಲಕರ್ಮಿ.