ವೀಣಾ ಶಾಂತೇಶ್ವರ ಅವರ ‘ನಿರಾಕರಣೆ’ ಕತೆಯನ್ನು ಓದಿದ್ದು ನನ್ನ ಹದಿಹರೆಯದಲ್ಲಿ. ಆ ಶಕುಂತಲೆ ನನ್ನ ಪರಮ ನಾಯಕಿಯಾಗಿ ಬಿಟ್ಟಳು. ಹೆಣ್ಣು ಇರಬೇಕಾದ್ದು ಹೀಗೆ ಎನ್ನುವ ಮಾದರಿಯೊಂದನ್ನು ಅವಳು ಕಟ್ಟಿಕೊಟ್ಟುಬಿಟ್ಟಳು. ಮೃದುವಾದ ಅಷ್ಟೇ ಅಸಹಾಯಕವಾದ ಶಕುಂತಲೆಯ ಪರಿಚಿತ ಚಿತ್ರಕ್ಕೆ ತದ್ವಿರುದ್ಧವೆಂಬಂತೆ , ಕಠೋರಾನಿ ವಜ್ರಾದಪಿ ಎನ್ನುವ ಮಾತಿನ ಸಾಕಾರ ರೂಪವೆಂಬಂತೆ ಈ ಶಕುಂತಲೆ ಕಂಡಳು. ಈಗಲೂ ಆ ಮೊದಲ ಓದಿನ ಶಕುಂತಲೆಯನ್ನು ಕಂಡಾಗ ಆದ ರೋಮಾಂಚನ ನೆನಪಿದೆ. ಮುಗ್ಧವಾಗಿ ಅವಳನ್ನು ಕುರಿತು ಹುಟ್ಟಿದ್ದ ಪ್ರೀತಿ ಈಗ ಆತ್ಮಾಭಿಮಾನವನ್ನು ಎತ್ತಿ ಹಿಡಿದ ಹೆಣ್ಣಿನ ವ್ಯಕ್ತಿತ್ವ ಎನ್ನುವ ಕಾರಣಕ್ಕೆ ಪ್ರೀತಿಯ ಜೊತೆ ಗೌರವವೂ ಸೇರಿ ಇನ್ನೂ ಹೆಚ್ಚು ಪ್ರಿಯಳಾಗುತ್ತಾ ನನ್ನ ಪರಮ ಗೆಳತಿಯೇ ಆಗಿದ್ದಾಳೆ.
ಈ ಶಕುಂತಲೆ ಪ್ರೇಮಿಯ, ಹೆಂಡತಿಯ, ತಾಯಿಯ ಪಾತ್ರಗಳ ಜೊತೆ ‘ನಾನು’ ಎನ್ನುವ ಪಾತ್ರವನ್ನೂ ಅಷ್ಟೇ ಗಂಭೀರವಾಗಿ ಪರಿಗಣಿಸಿದವಳು. ಇತರ ಪಾತ್ರಗಳನ್ನು ನಿಭಾಯಿಸುತ್ತಾ ಹೆಣ್ಣು ‘ಸ್ವ’ ಎನ್ನುವುದನ್ನು ಮರೆತೇ ಬಿಡಬೇಕು ಎನ್ನುವ ಲೋಕರೂಢಿಯನ್ನು ತನ್ನ ಆತ್ಮಪ್ರತ್ಯಯದ ಮೂಲಕ ಒಡೆದವಳು ಇವಳು. ದುಷ್ಯಂತನ ಮರವೆ ಎನ್ನುವುದು, ಒಟ್ಟಾರೆಯಾಗಿ ಗಂಡಿನ ಭಂಡತನದ ಪ್ರತೀಕ. ತನಗೆ ತಾನೇ ಕೊಟ್ಟುಕೊಂಡ ಈ ಸವಲತ್ತನ್ನು ಬೇಕಾದಾಗ ಬೇಕಾದಂತೆ ಬಳಸುವುದು ಗಂಡಿನ ಕ್ರಮವೇ ಆಗಿಬಿಟ್ಟಿರುವುದನ್ನು ಶಕುಂತಲೆ ಹೆಣ್ಣಿನ ಶಾಂತ ಆದರೆ ಅಚಲ ನಿಲುವಿನಿಂದ ಧಿಕ್ಕರಿಸುತ್ತಾಳೆ.
ಮಗ ಭರತನಿಗೋಸ್ಕರ ದುಷ್ಯಂತನ ಅರಮನೆಗೆ ಶಕುಂತಲೆ ಬಂದದ್ದನ್ನು ಮಹಾರಾಜನಾದ ದುಷ್ಯಂತ ಶಕುಂತಲೆ ಎಲ್ಲರೀತಿಯಲ್ಲೂಮರಳಿ ಬಂದಳು ಎಂದು ಶಂಕೆಯೇ ಇಲ್ಲದೆ ನಂಬುವುದು ಮಾತ್ರವಲ್ಲ, ಆಕೆಯ ಜೊತೆಗಿನ ದಾಂಪತ್ಯವನ್ನು ಮತ್ತೆ ಆರಂಭಿಸುವ ತಯಾರಿಗಳನ್ನೂ ಇವನ ಇಷಾರೆಯ ಮೇಲೋ, ಅಭ್ಯಾಸಬಲದಿಂದಲೋ ಮಾಡಲಾಗುತ್ತದೆ. ದುಷ್ಯಂತನೋ ಚಂದವಾಗಿ ಅಲಂಕರಿಸಿಕೊಂಡು ಶಕುಂತಲೆಯೊಂದಿಗಿನ ಮಧುರರಾತ್ರಿಗಾಗಿ ಕಾಯುತ್ತಿರುತ್ತಾನೆ. ಎಷ್ಟು ಹೊತ್ತಾದರೂ ಬಾರದವಳನ್ನು ಕರೆಯಲು ಇವನೇ ಹೋದರೆ, ತಣ್ಣಗಿನ ದನಿಯಲ್ಲಿಶಕುಂತಲೆ, ಅರಮನೆಗೆ ನನ್ನ ಪುನರಾಗಮನ ತಾಯಿಯಾಗಿಯೇ ಹೊರತು ಹೆಂಡತಿಯಾಗಲ್ಲ. ನಮ್ಮಿಬ್ಬರ ದಾಂಪತ್ಯ ಮುಗಿದು ಹೋದ ಕತೆ ಎಂದು ಸ್ಪಷ್ಟ ಪಡಿಸುತ್ತಾಳೆ. ಜೀವಮಾನದ ಆಘಾತಕ್ಕೊಳಗಾದ ದುಷ್ಯಂತ ಭಾರವಾದ ಹೆಜ್ಜೆಗಳನ್ನಿಡುತ್ತಾ ಅವಳ ಕೋಣೆಯಿಂದ ಹೊರಹೋಗುತ್ತಾನೆ. ಕಾಳಿದಾಸನ ಶಕುಂತಲೆ ದುಷ್ಯಂತನನ್ನು ‘ಅನಾರ್ಯ’ ಎಂದು ಕರೆಯುತ್ತಾಳೆ. ವೀಣಾ ಅವರ ಶಕುಂತಲೆ ಅನಾರ್ಯನ ಜೊತೆ ತಾನು ಬದುಕಬೇಕಿಲ್ಲಎಂದು ತೀರ್ಮಾನಿಸಿ ಅವನನ್ನು ನಿರಾಕರಿಸುತ್ತಾಳೆ. ಇದು ಅನಾರ್ಯರೊಂದಿಗೆ, ಅನಾರ್ಯ ಲೋಕದೊಂದಿಗೆ ಹೆಣ್ಣು ವ್ಯವಹರಿಸಬೇಕಾದ ರೀತಿ. ಇದನ್ನು ರಸಿಕಸಿಯಿಲ್ಲದೆ, ಆದರೆ ಎದುರಿಗಿನವರು ಮರು ಮಾತನಾಡಲು ಅವಕಾಶವಿಲ್ಲದ ಘನತೆ ಮತ್ತು ಪ್ರಬುದ್ಧತೆಯಲ್ಲಿನಿರ್ವಹಿಸುವ ಶಕುಂತಲೆ ನನ್ನ ಮೆಚ್ಚಿನ ಪಾತ್ರಗಳಲ್ಲಿಒಂದು.