ಸ್ಟಿಂಗ್ ಆಪರೇಷನ್ ಪ್ರಕರಣದ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮೊದಲ ಬಾರಿಗೆ ಭೇಟಿಯಾದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜಕೀಯ ವಿದ್ಯಮಾನಗಳು ಸೇರಿ ಹಲವು ಪ್ರಮುಖ ವಿಚಾರಗಳ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ.ಸ್ಟಿಂಗ್ ವಿಡಿಯೊ ವೈರಲ್ , ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿ ಅವರ ಆರೋಪ, ಪ್ರಕರಣ ಸಂಬಂಧ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ಹೀಗಾಗಿ ಬೇಸರಗೊಂಡಿದ್ದ ಸಿದ್ದರಾಮಯ್ಯ ಅವರನ್ನು ‘ಕಾವೇರಿ’ ನಿವಾಸದಲ್ಲಿಭೇಟಿ ಮಾಡಿದ ಸಿಎಂ ಡಿ.ಕೆ.ಶಿವಕುಮಾರ್ ದೀಪಾವಳಿ ಹಬ್ಬದ ಶುಭ ಕೋರಿದರು.ಒಂದೂವರೆ ತಾಸು ಕಾಲ ಸುದೀರ್ಘ ಸಮಾಲೋಚನೆ ನಡೆಸಿರುವುದು ಗಮನ ಸೆಳೆದಿದೆ. ಈ ವೇಳೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎ.ಎಸ್ .ಪೊನ್ನಣ್ಣ ಅವರೂ ಇದ್ದರು.
ಕುಮಾರಸ್ವಾಮಿ ಅವರು ಆರೋಪಿಸಿರುವಂತೆ ಸ್ಟಿಂಗ್ ವಿಡಿಯೊಗೂ ನನಗೂ ಯಾವ ಸಂಬಂಧವೂ ಇಲ್ಲ. ವಿರೋಧಿಗಳು ರಾಜಕೀಯವಾಗಿ ಲಾಭ ಮಾಡಿಕೊಳ್ಳಲು ಸ್ಟಿಂಗ್ ವಿಚಾರವನ್ನು ಮುನ್ನೆಲೆಗೆ ತಂದು ನಮ್ಮಲ್ಲಿಗೊಂದಲ ಸೃಷ್ಟಿಸುವ ಪ್ರಯತ್ನವಾಗಿದೆ ಎಂಬುದನ್ನು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿಸಿದ್ದರಾಮಯ್ಯ ಅವರಿಗೆ ಸ್ಪಷ್ಟಪಡಿಸಿದರು ಎನ್ನಲಾಗಿದೆ.
ವಿದ್ಯಮಾನಗಳ ಚರ್ಚೆ
ಸ್ಟಿಂಗ್ ಪ್ರಕರಣದ ಬಳಿಕ ರಾಹುಲ್ ಗಾಂಧಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು, ಮಾತುಕತೆ ವಿವರಗಳ ಕುರಿತೂ ಚರ್ಚೆ ನಡೆಸಿದ್ದಾರೆ. ಪ್ರಕರಣದ ತನಿಖೆಯ ಪ್ರಗತಿ ಕುರಿತು ಸಿದ್ದರಾಮಯ್ಯ ಅವರೊಟ್ಟಿಗೆ ಸಿಎಂ ವಿವರ ಹಂಚಿಕೊಂಡರು ಎಂದು ತಿಳಿದುಬಂದಿದೆ.
ವಿಧಾನ ಪರಿಷತ್ ಚುನಾವಣೆಯಲ್ಲಿಪಕ್ಷದ ಸೋಲು ಹಾಗೂ ಅದಕ್ಕೆ ಕಾರಣವಾದ ಅಂಶಗಳ ಕುರಿತು ಚರ್ಚೆ ನಡೆದಿದ್ದು, ಸಚಿವ ಸಂಪುಟ ವಿಸ್ತರಣೆ, ವಿಧಾನ ಪರಿಷತ್ ನ ಐದು ಸ್ಥಾನಗಳಿಗೆ ನಾಮನಿರ್ದೇಶನ ಹಾಗೂ ನಿಗಮ-ಮಂಡಳಿಗಳ ನೇಮಕ ಕುರಿತಂತೆಯೂ ಚರ್ಚೆ ನಡೆಸಿದರು ಎಂದು ಹೇಳಲಾಗಿದೆ.
ನಮ್ಮಿಬ್ಬರ ನಡುವೆ ಯಾವುದೇ ಮುನಿಸಿಲ್ಲ-ಡಿಕೆಶಿ
ಸಿದ್ದರಾಮಯ್ಯ ಅವರ ಭೇಟಿ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಡಿ.ಕೆ.ಶಿವಕುಮಾರ್ , ‘‘ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ನನ್ನ ನಡುವೆ ದೊಡ್ಡ ಮುನಿಸೂ ಇಲ್ಲ, ಸಣ್ಣ ಮುನಿಸೂ ಇಲ್ಲ. ಕೆಲವರು ನಮ್ಮ ನಡುವೆ ಮುನಿಸು ಇದೆ ಎಂಬ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ,’’ ಎಂದು ಹೇಳಿದರು.
‘‘ರಾಜಕಾರಣದಲ್ಲಿನಿಂದಕರು ಇರಬೇಕು, ವಿರೋಧಿಗಳು ಇದ್ದಾಗಲೇ ನಮ್ಮಂತಹವರು ಶುದ್ಧ ರಾಜಕಾರಣ ಮಾಡಲು ಸಾಧ್ಯ. ಅನೇಕ ವಿಚಾರಗಳನ್ನು ಸಿದ್ದರಾಮಯ್ಯ ಅವರೊಟ್ಟಿಗೆ ಚರ್ಚೆ ಮಾಡಬೇಕಾಗಿತ್ತು. ಹಾಗಾಗಿ ಅವರನ್ನು ಭೇಟಿ ಮಾಡಿ ಹಬ್ಬದ ಶುಭಾಶಯ ಕೋರಿ, ಮಾತನಾಡಿಕೊಂಡು ಬಂದಿದ್ದೇನೆ,’’ ಎಂದು ತಿಳಿಸಿದರು.