ವಿಕ ಸುದ್ದಿಲೋಕ ಮಂಡ್ಯನಗರದಲ್ಲಿಸ್ಥಾಪಿಸಲು ಉದ್ದೇಶಿಸಿರುವ ಶ್ರೀಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ಉಪ ಕೇಂದ್ರಕ್ಕಾಗಿ ಇದೀಗ ಜಾಗ ಗುರುತಿಸುವ ಪ್ರಕ್ರಿಯೆ ಆರಂಭಗೊಂಡಿದೆ.
ಜಿಲ್ಲಾಉಸ್ತುವಾರಿ ಮತ್ತು ಜಲಸಂಪನ್ಮೂಲ ಸಚಿವ ಎನ್ .ಚಲುವರಾಯಸ್ವಾಮಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ಅಧ್ಯಕ್ಷತೆಯಲ್ಲಿಬೆಂಗಳೂರಿನಲ್ಲಿಗುರುವಾರ ನಡೆದ ಸಭೆಯಲ್ಲಿಜಯದೇವ ಆಸ್ಪತ್ರೆಯ ಸ್ಥಾಪನೆ ಸಂಬಂಧ ಚರ್ಚೆ ನಡೆದಿತ್ತು. ಆಸ್ಪತ್ರೆಗೆ ಬೇಕಾದ ಜಾಗ ನೀಡುವುದಾಗಿ ಸಚಿವ ಚಲುವರಾಯಸ್ವಾಮಿ, ಶಾಸಕ ಪಿ.ರವಿಕುಮಾರ್ ಗೌಡ ಗಣಿಗ ಪ್ರಸ್ತಾಪಿಸಿ, ಕಟ್ಟಡ ಕಾಮಗಾರಿ ಆರಂಭಕ್ಕೂ ಮುನ್ನವೇ ಒಪಿಡಿ ಆರಂಭಿಸುವಂತೆ ಮನವಿ ಮಾಡಿದ್ದರು.
ಇದರ ಬೆನ್ನಲ್ಲೇ ಶ್ರೀಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ದಿನೇಶ್ ಅವರು ತಮ್ಮ ತಂಡದೊಂದಿಗೆ ನಗರಕ್ಕೆ ಶುಕ್ರವಾರ ಆಗಮಿಸಿ ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ ಹಾಗೂ ಡಿಎಚ್ ಒ ಕಚೇರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಜಯದೇವ ಆಸ್ಪತ್ರೆಯ ಉಪ ಕೇಂದ್ರ ನಿರ್ಮಾಣಕ್ಕಾಗಿ ಅಗತ್ಯವಾದ ಜಾಗಕ್ಕಾಗಿ ಮಿಮ್ಸ್ ಆವರಣ ಮತ್ತು ಡಿಎಚ್ ಒ ಕಚೇರಿ ಆವರಣವನ್ನು ಪರಿಶೀಲಿಸಿದರು.
‘‘ಮಂಡ್ಯ ಜಿಲ್ಲೆಯ ಪ್ರತಿಯೊಬ್ಬ ನಾಗರಿಕರಿಗೂ ಉತ್ತಮ ಆರೋಗ್ಯ ಸೇವೆ ಒದಗಿಸಬೇಕೆಂಬ ಸರಕಾರದ ಆಶಯದಂತೆ ಜಯದೇವ ಸಂಸ್ಥೆಯ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ವೈದ್ಯಕೀಯ ಕಾಲೇಜು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೇರಿದ ಜಾಗವನ್ನು ಪರಿಶೀಲಿಸಿದೆ. ಇದರಲ್ಲಿಡಿಎಚ್ ಒ ಕಚೇರಿ ಆವರಣ ಹೆಚ್ಚು ಸೂಕ್ತವಾಗಿದೆ. ಈ ಕುರಿತು ನೀಲನಕ್ಷೆಯನ್ನು ಮೂರ್ನಾಲ್ಕು ದಿನಗಳಲ್ಲಿಸರಕಾರಕ್ಕೆ ಸಲ್ಲಿಸಲಾಗುವುದು,’’ ಎಂದು ತಿಳಿಸಿದರು.
‘‘ಹೃದಯಾಘಾತದಂತಹ ತುರ್ತು ಸಂದರ್ಭಗಳಲ್ಲಿರೋಗಿಗಳಿಗೆ ತ್ವರಿತ ಚಿಕಿತ್ಸೆ ದೊರೆಯುವುದು ಅತ್ಯಂತ ಮುಖ್ಯ. ಹೃದ್ರೋಗಿಗಳಿಗೆ ಮೈಸೂರು ಅಥವಾ ಬೆಂಗಳೂರಿಗೆ ತೆರಳುವ ಅನಿವಾರ್ಯತೆ ತಪ್ಪಿಸಿ, ಮಂಡ್ಯದಲ್ಲಿಯೇ ತುರ್ತು ಚಿಕಿತ್ಸೆ ಒದಗಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಹೃದಯಾಘಾತ ಸಂಭವಿಸಿದ ಮೊದಲ 45 ನಿಮಿಷಗಳ ಗೋಲ್ಡನ್ ಅವರ್ ಅವಧಿಯಲ್ಲಿಸೂಕ್ತ ಚಿಕಿತ್ಸೆ ದೊರೆತರೆ ಅಮೂಲ್ಯ ಜೀವಗಳನ್ನು ಉಳಿಸಲು ಸಾಧ್ಯವಾಗುತ್ತದೆ,’’ಎಂದು ಹೇಳಿದರು.
‘‘ಈ ಯೋಜನೆ ಅನುಷ್ಠಾನಕ್ಕೆ ಸ್ಥಳೀಯ ಶಾಸಕ ಪಿ.ರವಿಕುಮಾರ್ ಗೌಡ ಗಣಿಗ ಅವರು ಸಹಕಾರ ನೀಡುತ್ತಿದ್ದಾರೆ. ಸರಕಾರದ ಮಾರ್ಗದರ್ಶನ ಹಾಗೂ ಜನಪ್ರತಿನಿಧಿಗಳ ಸಹಕಾರದೊಂದಿಗೆ ಮುಂದಿನ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಮಂಡ್ಯ ಜಿಲ್ಲೆಯ ಜನರಿಗೆ ಉತ್ತಮ ಹೃದ್ರೋಗ ಚಿಕಿತ್ಸಾ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು,’’ ಎಂದು ತಿಳಿಸಿದರು.
ಜಯದೇವ ಆಸ್ಪತ್ರೆಯ ಸಿಎಒ ಮೋಹನ್ ರಾಜ್ , ವೈದ್ಯ ಅಧೀಕ್ಷಕ ಮತ್ತು ಅನಸ್ತೇಷಿಯಾ ವಿಭಾಗದ ಮುಖ್ಯಸ್ಥ ಡಾ.ಪ್ರಭಾಕರ್ , ಮಂಡ್ಯದ ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ, ಅಧೀಕ್ಷಕ ಡಾ.ಶಿವಕುಮಾರ್ , ಆರ್ ಸಿಎಚ್ ಅಧಿಕಾರಿ ಡಾ.ಎಂ.ಎನ್ .ಆಶಾಲತಾ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕೋಟ್ ..
ಆಸ್ಪತ್ರೆಯ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಕನಿಷ್ಠ 5 ಎಕರೆ ಜಾಗದ ಅಗತ್ಯವಿದೆ. ಅಗತ್ಯ ಜಾಗ ಲಭ್ಯವಾದಲ್ಲಿ250 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸುವ ಉದ್ದೇಶವಿದೆ. ಆಸ್ಪತ್ರೆಯಲ್ಲಿತೀವ್ರ ನಿಗಾ ಘಟಕ(ಐಸಿಯು), ಹೃದ್ರೋಗ ತೀವ್ರ ನಿಗಾ ಘಟಕ(ಎಂಐಸಿಯು), ಕ್ಯಾತ್ ಲ್ಯಾಬ್ ಹಾಗೂ ಶಸ್ತ್ರಚಿಕಿತ್ಸಾ ಕೊಠಡಿಗಳ(ಒಟಿ) ಸಂಕೀರ್ಣ ಸೇರಿದಂತೆ ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು.
-ಡಾ.ದಿನೇಶ್ , ನಿರ್ದೇಶಕ, ಶ್ರೀಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು