ವಿಕ ಸುದ್ದಿಲೋಕ ಶಿವಮೊಗ್ಗಲೇಖಕ ರವಿ ಹಂಜ್ ಅವರ ಹೇಳಿಕೆಗಳು ಹಾಗೂ ‘ಬಸವ ಮಂಟಪ’ ಪುಸ್ತಕಕ್ಕೆ ಸಂಬಂಧಿಸಿದಂತೆ ವ್ಯಕ್ತವಾಗಿರುವ ಆಕ್ಷೇಪಣೆಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿ, ಲಭ್ಯವಿರುವ ದಾಖಲೆಗಳು ಮತ್ತು ಸಾಕ್ಷ್ಯಗಳ ಆಧಾರದಲ್ಲಿನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಚಿಕ್ಕಮಗಳೂರಿನ ಶ್ರೀ ಬಸವತತ್ತ್ವ ಪೀಠ ಹಾಗೂ ಶಿವಮೊಗ್ಗ ಬಸವಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿಗೆ ಬಹಿರಂಗ ಪತ್ರ ಬರೆದಿರುವ ಸ್ವಾಮೀಜಿ, ಮುಖ್ಯವಾಗಿ 10 ಮನವಿಗಳನ್ನು ಮಾಡಿದ್ದಾರೆ. ಯಾವುದೇ ಕಾನೂನು ಉಲ್ಲಂಘನೆ ನಡೆದಿದ್ದರೆ, ಸಂಬಂಧಪಟ್ಟ ಕಾನೂನುಗಳ ಅಡಿಯಲ್ಲಿಸೂಕ್ತ ಕ್ರಮ ಕೈಗೊಳ್ಳಬೇಕು. ಈ ಪ್ರಕ್ರಿಯೆಯಲ್ಲಿಕಾನೂನು ಮತ್ತು ಸಂವಿಧಾನಾತ್ಮಕ ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಗಳನ್ನು ಗೌರವಿಸಬೇಕು. ಬಸವಣ್ಣನವರು ಹಾಗೂ ವಚನ ಸಾಹಿತ್ಯದ ಕುರಿತು ಆಧಾರರಹಿತ, ದಾರಿತಪ್ಪಿಸುವ ಅಥವಾ ಅವಹೇಳನಕಾರಿ ಸಂಗತಿಗಳನ್ನು ಪ್ರಸಾರ ಮಾಡುವುದರಿಂದ ಸಮಾಜದಲ್ಲಿಉಂಟಾಗಬಹುದಾದ ಪರಿಣಾಮಗಳನ್ನು ತಡೆಯಲು ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಬೇಕು. ಬಸವಣ್ಣನವರ ಜೀವನ, ಸಾಧನೆ, ವಚನಗಳು ಮತ್ತು ಸಾಮಾಜಿಕ ಕ್ರಾಂತಿಯ ಕುರಿತು ಸಮಗ್ರ ಅಧ್ಯಯನ ನಡೆಸಲು ನಾಡಿನ ಹಿರಿಯ ವಚನಕಾರರು, ಸಾಹಿತಿಗಳು, ಇತಿಹಾಸಕಾರರು, ಸಂಶೋಧಕರು ಹಾಗೂ ಬಸವತತ್ತ್ವ ಚಿಂತಕರನ್ನೊಳಗೊಂಡ ತಜ್ಞರ ಸಮಿತಿಯನ್ನು ರಚಿಸಬೇಕು. ಬಸವಣ್ಣನವರ ಕುರಿತು ಪ್ರಕಟವಾಗುವ ವಿವಾದಾತ್ಮಕ ಕೃತಿಗಳಲ್ಲಿಇತಿಹಾಸದ ಸತ್ಯಾಂಶ, ಸಂಶೋಧನೆಯ ಆಧಾರ ಮತ್ತು ಉಲ್ಲೇಖಗಳ ಕುರಿತು ಸಾರ್ವಜನಿಕರಿಗೆ ವೈಜ್ಞಾನಿಕ ಹಾಗೂ ವಸ್ತುನಿಷ್ಠ ಮಾಹಿತಿ ದೊರೆಯುವಂತೆ ವ್ಯವಸ್ಥೆ ಮಾಡಬೇಕು. ಇದು ಸೆನ್ಸಾರ್ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ನಿರ್ಬಂಧವಾಗದೆ, ಜ್ಞಾನಾಧಾರಿತ ಚರ್ಚೆ ಮತ್ತು ಸಾರ್ವಜನಿಕ ಅರಿವಿಗೆ ಪೂರಕವಾಗಿರಬೇಕು. ಶಾಲಾ-ಕಾಲೇಜುಗಳ ಪಠ್ಯಕ್ರಮದಲ್ಲಿಬಸವಣ್ಣನವರ ಸಾಮಾಜಿಕ ಕ್ರಾಂತಿ, ಅನುಭವ ಮಂಟಪದ ಪರಿಕಲ್ಪನೆ, ವಚನ ಸಾಹಿತ್ಯದ ಮಾನವೀಯ ಮೌಲ್ಯಗಳು ಮತ್ತು ಸಮಾನತೆಯ ಆಶಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಬಸವಣ್ಣನವರ ವಿಚಾರಧಾರೆಯನ್ನು ಯುವಜನತೆಗೆ ತಲುಪಿಸುವ ಉದ್ದೇಶದಿಂದ ರಾಜ್ಯಾದ್ಯಂತ ವಿಚಾರ ಸಂಕಿರಣಗಳು, ಉಪನ್ಯಾಸಗಳು, ವಚನ ಗಾಯನ, ಸಾಹಿತ್ಯ ಸಂವಾದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಬಸವಣ್ಣನವರ ಹೆಸರಿನಲ್ಲಿದ್ವೇಷ, ಸಾಮಾಜಿಕ ಸಂಘರ್ಷ ಅಥವಾ ಅನಗತ್ಯ ವಿವಾದಗಳನ್ನು ಸೃಷ್ಟಿಸುವ ಪ್ರಯತ್ನಗಳು ನಡೆಯದಂತೆ ಸಾರ್ವಜನಿಕ ಜಾಗೃತಿ ಮೂಡಿಸಬೇಕು. ಇಂತಹ ವಿಷಯಗಳ ಕುರಿತು ಜವಾಬ್ದಾರಿಯುತವಾಗಿ ವರ್ತಿಸುವಂತೆ ಮಾಧ್ಯಮಗಳು, ಪ್ರಕಾಶಕರು ಮತ್ತು ಸಾರ್ವಜನಿಕ ವೇದಿಕೆಗಳಿಗೆ ಅರಿವು ಮೂಡಿಸಬೇಕು. ಭವಿಷ್ಯದಲ್ಲಿಬಸವಣ್ಣನವರು ಸೇರಿದಂತೆ ನಾಡಿನ ಮಹಾನ್ ಸಮಾಜ ಸುಧಾರಕರು, ಸಂತರು, ಶರಣರು ಹಾಗೂ ಐತಿಹಾಸಿಕ ವ್ಯಕ್ತಿತ್ವಗಳ ಕುರಿತು ಆಧಾರರಹಿತ ಅವಹೇಳನಕಾರಿ ಹೇಳಿಕೆಗಳು ಅಥವಾ ಉದ್ದೇಶಪೂರ್ವಕವಾಗಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಕೃತ್ಯಗಳು ಮರುಕಳಿಸದಂತೆ ಕಾನೂನುಬದ್ಧ ತಡೆ ಮತ್ತು ಅಗತ್ಯ ಜಾಗೃತಿ ಕ್ರಮಗಳನ್ನು ಕೈಗೊಳ್ಳಬೇಕು. ಈ ಪ್ರಕರಣದಲ್ಲಿಸರಕಾರ ಕೈಗೊಳ್ಳುವ ಕ್ರಮಗಳ ಕುರಿತು ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ನೀಡಬೇಕು. ತನಿಖೆ ಹಾಗೂ ಕಾನೂನು ಪ್ರಕ್ರಿಯೆಗಳು ಯಾವುದೇ ರಾಜಕೀಯ ಅಥವಾ ಸಾಮಾಜಿಕ ಒತ್ತಡಕ್ಕೆ ಒಳಗಾಗದೆ ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.