ಸರಕಾರ ಕನ್ನಡ ವಿವಿ ಕಡೆ ಕಾಳಜಿ ವಹಿಸಲಿ

Contributed by: rathodjayakumar92@gmail.com|Vijaya Karnataka•
Vijay Karnataka
ಹಿರಿಯ ಚಿಂತಕ ಡಾ.ಜಿ.ರಾಮಕೃಷ್ಣ ಅವರಿಗೆ ನಾಡೋಜ ಪದವಿ ಪ್ರದಾನ (ಕಿಕ್ಕರ್ )

ಸರಕಾರ ಕನ್ನಡ ವಿವಿ ಕಡೆ ಕಾಳಜಿ ವಹಿಸಲಿ
ವಿಕ ಸುದ್ದಿಲೋಕ ಹೊಸಪೇಟೆ (ವಿಜಯನಗರ)

‘‘ಕನ್ನಡ ವಿಶ್ವವಿದ್ಯಾಲಯದ ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಗಳು ನಿರಂತರವಾಗಿ ಮುಂದುವರಿಯಲು ಸರಕಾರ ಹೆಚ್ಚಿನ ಸೌಕರ್ಯಗಳನ್ನು ಒದಗಿಸಬೇಕು ಮತ್ತು ವಿಶೇಷ ಕಾಳಜಿ ವಹಿಸಬೇಕು,’’ ಎಂದು ಹಿರಿಯ ಚಿಂತಕ ಹಾಗೂ ನಾಡೋಜ ಡಾ. ಜಿ. ರಾಮಕೃಷ್ಣ ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ 34ನೇ ನುಡಿಹಬ್ಬದ ನಾಡೋಜ ಪದವಿಗೆ ಭಾಜನರಾಗಿದ್ದ ಅವರಿಗೆ, ಶುಕ್ರವಾರ ಬೆಂಗಳೂರಿನ ಅವರ ಸ್ವಗೃಹದಲ್ಲಿವಿಶ್ವವಿದ್ಯಾಲಯ ನೀಡಿದ ನಾಡೋಜ ಗೌರವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಹೆಚ್ಚಿನ ಅನುದಾನ ನೀಡಲಿ:

‘‘ ಕನ್ನಡ ವಿಶ್ವವಿದ್ಯಾಲಯದ ಮೌಲ್ಯಗಳನ್ನು ಗುರುತಿಸಿ ಅವುಗಳನ್ನು ಅಭಿವೃದ್ಧಿಪಡಿಸುವುದು ನಮ್ಮೆಲ್ಲರ ಮೂಲ ಕರ್ತವ್ಯವಾಗಿದೆ. ಕನ್ನಡ ವಿವಿಯಿಂದ ಇಂತಹ ಪ್ರತಿಷ್ಠಿತ ಗೌರವ ದೊರೆತಿರುವುದು ನನಗೆ ಅತೀವ ಸಂತಸ ಹಾಗೂ ಹೆಮ್ಮೆ ತಂದಿದೆ. ಕನ್ನಡಕ್ಕಾಗಿ ಏನನ್ನಾದರೂ ಮಾಡುವುದಿದ್ದರೆ ಅದು ಕನ್ನಡ ವಿಶ್ವವಿದ್ಯಾಲಯದ ಏಳಿಗೆಗೆ ಪ್ರಜ್ಞಾಪೂರ್ವಕವಾಗಿ ಶ್ರಮಿಸುವುದಾಗಿದೆ. ವಿಶ್ವವಿದ್ಯಾಲಯದ ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಗಳು ನಿರಂತರವಾಗಿ ಮುಂದುವರಿಯಲು ಸರಕಾರ ಹೆಚ್ಚಿನ ಅನುದಾನ ನೀಡಲು ಕಾಳಜಿ ವಹಿಸಬೇಕು,’’ ಎಂದು ಆಶಿಸಿದರು.

ಜಿ.ರಾಮಕೃಷ್ಣ ಅವರ ಸೇವೆ ಅಪಾರ:

ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಮಾತನಾಡಿ, ‘‘ಅನಿವಾರ್ಯ ಕಾರಣಗಳಿಂದಾಗಿ ಡಾ. ಜಿ. ರಾಮಕೃಷ್ಣ ಅವರಿಗೆ 34ನೇ ನುಡಿಹಬ್ಬದ ಸಮಾರಂಭಕ್ಕೆ ಆಗಮಿಸಿ ಪದವಿ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈಗ ಅವರ ನಿವಾಸದಲ್ಲೇ ಸನ್ಮಾನಿಸಲಾಗಿದೆ. ವಿಜ್ಞಾನ, ತಂತ್ರಜ್ಞಾನ, ಕನ್ನಡ ಮತ್ತು ಭಾರತೀಯ ಸಾಹಿತ್ಯ, ಮಾರ್ಕ್ಸ್ ವಾದ, ಸಾಂಸ್ಕೃತಿಕ ವಿಮರ್ಶೆ ಹಾಗೂ ಸಾಮಾಜಿಕ ಚಳವಳಿಗಳಿಗೆ ಅವರು ಸಲ್ಲಿಸಿದ ಮೌಲಿಕ ಸೇವೆ ಪರಿಗಣಿಸಿ ಈ ಗೌರವ ನೀಡಲಾಗಿದೆ. ಇಂತಹ ವಿದ್ವಾಂಸರನ್ನು ಗೌರವಿಸಿರುವುದು ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ವಿಷಯ,’’ ಎಂದರು.

ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಸ್ವಾಗತಿಸಿದರು. ಅಧ್ಯಯನಾಂಗದ ನಿರ್ದೇಶಕ ಡಾ. ಎನ್ . ಚಿನ್ನಸ್ವಾಮಿ ಸೋಸಲೆ ಸನ್ಮಾನಿತರ ಪರಿಚಯ ಮಾಡಿಕೊಟ್ಟರು. ಉಪಕುಲಸಚಿವ ಎಚ್ . ಶ್ರೀನಿವಾಸ್ ವಂದಿಸಿದರು. ಕಾರ್ಯ ಕಾರಿ ಸಮಿತಿ ಸದಸ್ಯರಾದ ಡಾ. ಬಂಜಗೆರೆ ಜಯಪ್ರಕಾಶ್ , ಡಾ. ಎಸ್ .ಎಂ. ಮುತ್ತಯ್ಯ, ಉಪನಿರ್ದೇಶಕ ವಿಜಯೇಂದ್ರ ಎಸ್ .ಕೆ. ಸೇರಿದಂತೆ ವಿವಿಯ ಸಿಬ್ಬಂದಿ, ಡಾ.ಜಿ. ರಾಮಕೃಷ್ಣ ಅವರ ಕುಟುಂಬಸ್ಥರು, ಶಿಷ್ಯ ವರ್ಗದವರು ಇದ್ದರು.

ವಿಜೆಎನ್ 20ಜಯಪ್ಪ08: ಬೆಂಗಳೂರಿನ ಡಾ. ಜಿ. ರಾಮಕೃಷ್ಣ ಅವರ ಸ್ವಗೃಹದಲ್ಲಿಶುಕ್ರವಾರ ಕನ್ನಡ ವಿವಿ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ, ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ, ಸಿಂಡಿಕೇಟ್ ಸದಸ್ಯರು ಡಾ. ಜಿ. ರಾಮಕೃಷ್ಣ ಅವರಿಗೆ ನಾಡೋಜ ಪ್ರಶಸ್ತಿ ಪ್ರದಾನ ಮಾಡಿದರು.