Ayurveda Degree A Gateway To New Life Opportunities
ಹೊಸ ಅಧ್ಯಾಯಕ್ಕೆ ಪದವಿ ನಾಂದಿ
Contributed by: Beeresha M|Vijaya Karnataka•
ವಿಕ ಸುದ್ದಿಲೋಕ ಮೈಸೂರು ಪದವಿ ಪಡೆಯುವುದು ಕೇವಲ ಶೈಕ್ಷಣಿಕ ಸಾಧನೆಯಾಗಿರದೇ ಅದು ಜೀವನದ ಹೊಸ ಅಧ್ಯಾಯಕ್ಕೆ ನಾಂದಿ ಎಂದು ಆಯುಷ್ ಸಚಿವಾಲಯದ ಆಯುರ್ವೇದ ಮಂಡಳಿ ಅಧ್ಯಕ್ಷ ಡಾ.ಅಲ್ಲಮಪ್ರಭು ಗುಡ್ಡ ಹೇಳಿದರು. ನಗರದ ಜೆಎಸ್ ಎಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಆವರಣದಲ್ಲಿಗುರುವಾರ ನಡೆದ ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಪದವಿ ಪ್ರದಾನ ಕಾರ್ಯಕ್ರಮದಲ್ಲಿಅವರು ಮಾತನಾಡಿದರು. ‘‘ಸವಾಲುಗಳನ್ನು ಎದುರಿಸಿ, ಅವುಗಳನ್ನೇ ಅವಕಾಶಗಳಾಗಿ ಪರಿವರ್ತಿಸಿಕೊಳ್ಳುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳ ಪದವಿ ಸಾಧನೆಯ ಹಿಂದೆ ವೈಯಕ್ತಿಕ ಪರಿಶ್ರಮದ ಜತೆಗೆ ಪೋಷಕರು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಯ ಕೊಡುಗೆಯೂ ಇದೆ. ಹೀಗಾಗಿ ಈ ಸಾಧನೆ ಸಾಮೂಹಿಕ ಯಶಸ್ಸಿನ ಪ್ರತೀಕವಾಗಿದೆ. ಆಯುರ್ವೇದ ಕ್ಷೇತ್ರದಲ್ಲಿಇಂದು ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿವಿಫುಲ ಅವಕಾಶಗಳು ತೆರೆದುಕೊಂಡಿದ್ದು, ಪದವೀಧರರು ಜ್ಞಾನ, ಕೌಶಲ ಮತ್ತು ವೃತ್ತಿಪರ ಬದ್ಧತೆಯೊಂದಿಗೆ ಮುನ್ನಡೆಯಬೇಕು,’’ ಎಂದರು. ‘‘ಮಣ್ಣಿನ ಮಡಕೆಯನ್ನು ಸರಿಯಾಗಿ ಸುಡದಿದ್ದರೆ ಅದರಲ್ಲಿನೀರನ್ನು ಹಿಡಿದಿಡಲು ಸಾಧ್ಯವಿಲ್ಲ. ಅದೇ ರೀತಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಶಿಸ್ತು ಮತ್ತು ನಿರಂತರ ಅಧ್ಯಯನದ ಮೂಲಕ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳದಿದ್ದರೆ ಗಳಿಸಿದ ಜ್ಞಾನ ಜೀವನದಲ್ಲಿಗಟ್ಟಿಯಾಗಿ ನೆಲೆಗೊಳ್ಳುವುದಿಲ್ಲ. ಹಲವು ವರ್ಷಗಳ ನಿರಂತರ ಪರಿಶ್ರಮವೇ ಇಂದು ಪದವಿ ಹಾಗೂ ರಾರ ಯಂಕ್ ರೂಪದಲ್ಲಿಫಲ ನೀಡಿದೆ,’’ ಎಂದರು. ‘‘2014ರಲ್ಲಿಸುಮಾರು 700 ಕೋಟಿ ರೂ. ಬಜೆಟ್ ಹೊಂದಿದ್ದ ಆಯುಷ್ ಇಲಾಖೆ ಇಂದು ಪ್ರತ್ಯೇಕ ಸಚಿವಾಲಯವಾಗಿ ಬೆಳೆದಿದ್ದು, ಅದರ ಬಜೆಟ್ ಸುವಾರು 4,500 ಕೋಟಿ ರೂ.ಗೆ ಏರಿಕೆಯಾಗಿದೆ. ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳಿಗೆ ಭಾರತದಲ್ಲಿದೊರೆತಿರುವ ಪ್ರಾಮುಖ್ಯತೆ ಹಾಗೂ ಆಯುಷ್ ಕ್ಷೇತ್ರದ ಉತ್ಪಾದನಾ ಮತ್ತು ಸೇವಾ ವಲಯಗಳ ವಿಸ್ತರಣೆ ಭವಿಷ್ಯದ ಅವಕಾಶಗಳನ್ನು ಹೆಚ್ಚಿಸಿದೆ,’’ ಎಂದು ತಿಳಿಸಿದರು. ದೇಶದ ಆರ್ಥಿಕತೆಗೆ ಕೊಡುಗೆ : ‘‘ಆಯುಷ್ ಕ್ಷೇತ್ರವು ದೇಶದ ಒಟ್ಟು ಆರ್ಥಿಕತೆಯಲ್ಲಿಸುಮಾರು ಶೇ.1.3ರಷ್ಟು ಕೊಡುಗೆ ನೀಡುತ್ತಿದ್ದು, 2047ರ ವೇಳೆಗೆ ಈ ಪ್ರಮಾಣವನ್ನು ಶೇ.5ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ದೇಶದಲ್ಲಿಸುಮಾರು 12,500 ಕ್ಷೇಮ ಕೇಂದ್ರಗಳು, 33 ಸಾವಿರಕ್ಕೂ ಹೆಚ್ಚು ಸರಕಾರಿ ಆಯುರ್ವೇದ ಚಿಕಿತ್ಸಾಲಯಗಳು ಹಾಗೂ 600 ಆಯುರ್ವೇದ ಕಾಲೇಜುಗಳಿವೆ. ಇದರಿಂದ ಪದವೀಧರರಿಗೆ ಉದ್ಯೋಗ, ಸ್ವಂತ ವೈದ್ಯಕೀಯ ಸೇವೆ, ಸಂಶೋಧನೆ ಮತ್ತು ಉದ್ಯಮಶೀಲತೆಯಂತಹ ಹಲವು ಕ್ಷೇತ್ರಗಳಲ್ಲಿಅವಕಾಶಗಳಿವೆ,’’ ಎಂದರು. ಆಯುರ್ವೇದ ವ್ಯಾಪ್ತಿ ವಿಸ್ತರಣೆ : ಅಂತಾ ರಾಷ್ಟ್ರೀಯ ಮಟ್ಟದಲ್ಲಿಯೂ ಆಯುರ್ವೇದದ ವ್ಯಾಪ್ತಿ ವಿಸ್ತರಿಸುತ್ತಿದೆ. ಆಯುಷ್ ಸಚಿವಾಲಯವು 27 ದೇಶಗಳು ಮತ್ತು 54 ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ವಿದೇಶಗಳಲ್ಲಿ16 ಆಯುಷ್ ಪೀಠಗಳು ಹಾಗೂ 39 ದೇಶಗಳಲ್ಲಿ43 ಮಾಹಿತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಶಿಕ್ಷಣ, ಸಂಶೋಧನೆ ಮತ್ತು ಚಿಕಿತ್ಸಾ ಸೇವೆಗಳ ಮೂಲಕ ಭಾರತೀಯ ವೈದ್ಯಕೀಯ ಪದ್ಧತಿಗಳು ಜಾಗತಿಕ ಮಟ್ಟದಲ್ಲಿಗುರುತಿಸಿಕೊಳ್ಳುತ್ತಿವೆ,’’ ಎಂದು ತಿಳಿಸಿದರು. ಜೆಎಸ್ ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಅಧ್ಯಕ್ಷತೆ ವಹಿಸಿದ್ದರು. ಜೆಎಸ್ ಎಸ್ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್ .ಮಹೇಶ್ , ಕಾಲೇಜಿನ ಪ್ರಾಂಶುಪಾಲ ಡಾ.ಸರ್ವೇಶ್ವರ ಕರ್ ವೇದಿಕೆಯಲ್ಲಿಹಾಜರಿದ್ದರು.