14, 15 ರಂದು ಮೈಸೂರಿನಲ್ಲಿಬಾಳೆ ಮೇಳ

Contributed by: nagaraj.navimane@timesofindia.com|Vijaya Karnataka•
banana fair in mysore providing new insights to industry and food market
ವಿಕ ಸುದ್ದಿಲೋಕ ಮೈಸೂರು ದೇಸಿ ಬಾಳೆಯ ವೈವಿಧ್ಯ, ಕೃಷಿ ಮತ್ತು ಆಹಾರ ಸಂಸ್ಕೃತಿಯನ್ನು ಜನಪ್ರಿಯಗೊಳಿಸಲು ಸಹಜ ಸಮೃದ್ಧ ಸಂಸ್ಥೆಯು ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್ ), ಐಸಿಎಆ ರ್ ಜೆಎಸ್ ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು ಮತ್ತು ಅಭಯ್ ನ್ಯಾಚುರಲ್ಸ್ ಜೊತೆಗೂಡಿ ನ.14 ಮತ್ತು 15ರಂದು ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ‘ ಬಾಳೆ ಮೇಳ ’ ಏರ್ಪಡಿಸಿದೆ. ಮೇಳದಲ್ಲಿ150ಕ್ಕೂ ಹೆಚ್ಚಿನ ಬಾಳೆ ಪ್ರದರ್ಶನಕ್ಕೆ ಬರಲಿವೆ. ಬಾಳೆಯ ಮೌಲ್ಯವರ್ಧಿತ ಉತ್ಪನ್ನಗಳು, ಬಾಳೆನಾರಿನ ಪದಾರ್ಥಗಳು ಮತ್ತು ಬಾಳೆಯ ಅಡುಗೆಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಇರಲಿವೆ. 400 ಬಾಳೆ ತಳಿಗಳನ್ನು ಸಂರಕ್ಷಿಸಿರುವ ಸುಳ್ಯದ ದಯಾ ಪ್ರಸಾದ್ ತಮ್ಮ ಸಂಗ್ರಹದ ಅಪರೂಪದ ಬಾಳೆಗಳನ್ನು ಸಾರ್ವಜನಿಕರಿಗೆ ವೀಕ್ಷಿಸಲು ತರಲಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಸಸ್ಯ ಸಂರಕ್ಷಕ ಶಿರಸಿಯ ರಾಮ ಪ್ರಸಾದ್ ಹೆಗಡೆ ಅಪರೂಪದ ಬಾಳೆ ಮತ್ತು ಕಂದುಗಳನ್ನು ಮೇಳಕ್ಕೆ ತರುತ್ತಿದ್ದಾರೆ. 8 ಅಡಿ ಉದ್ದದ ಸಹಸ್ರ ಬಾಳೆ , ಇಡೀ ಗಿಡವೇ ಬೆಂಕಿ ಹಚ್ಚಿದಂತೆ ಕಾಣುವ ಕೆಂಪು ಬಾಳೆ ಮೇಳದ ಆಕರ್ಷಣೆಯಾಗಲಿವೆ. ಎರಡು ದಿನಗಳ ಬಾಳೆ ಮೇಳವನ್ನು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ ( ಕೆಪೆಕ್ )ನ ವ್ಯವಸ್ಥಾಪಕ ನಿರ್ದೇಶಕ ವೆಂಕಟರಾಮ ರೆಡ್ಡಿ ಜೆ ಪಾಟೀಲ್ ಉದ್ಘಾಟಿಸಲಿದ್ದಾರೆ. ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯದ ನಿರ್ದೇಶಕ ಡಾ.ಗಿರಿಧರ್ ಪಾರ್ವತಂ ‘ಬನಾನ ಭಾರತ್ ’ ಆ್ಯಪ್ ಬಿಡುಗಡೆ ಮಾಡಲಿದ್ದಾರೆ. ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ರೂಪಶ್ರೀ ಕೆ.ಎನ್ , ಕೊಡಗಿನ ಬಾಳೆ ಬೆಳೆಗಾರ ಪೊನ್ನಂಪೇಟೆಯ ರವಿಶಂಕರ್ , ಸುತ್ತೂರಿನ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಎನ್ .ಜ್ಞಾನೇಶ್ ಮತ್ತು ಸಿಎಫ್ ಟಿಆರ್ ಐ ಹಿರಿಯ ವಿಜ್ಞಾನಿ ಡಾ.ಉಮೇಶ್ ಎಚ್ ಹೆಬ್ಬಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 14ರಂದು ಮಧ್ಯಾಹ್ನ 2 ಗಂಟೆಗೆ ಬಾಳೆಯ ಕೃಷಿ ಮತ್ತು ಮೌಲ್ಯವರ್ಧನೆಯ ಅವಕಾಶಗಳ ಬಗ್ಗೆ ತರಬೇತಿ ಏರ್ಪಡಿಸಲಾಗಿದೆ. 15ರಂದು ಬೆಳಗ್ಗೆ 10.30ಕ್ಕೆ ಮಕ್ಕಳ ಚಿತ್ರಕಲಾ ಸ್ಪರ್ಧೆ ಮತ್ತು ಬಾಳೆ ಅಡುಗೆ ಸ್ಪರ್ಧೆ ಏರ್ಪಡಿಸಲಾಗಿದೆ. ಮೇಳದಲ್ಲಿ50 ಕ್ಕೂ ಹೆಚ್ಚಿನ ಮಳಿಗೆಗಳಿದ್ದು, ಬಾಳೆಯ ಅಡುಗೆ, ಮೌಲ್ಯವರ್ಧಿತ ಪದಾರ್ಥಗಳು, ಸಾವಯವ ಉತ್ಪನ್ನಗಳು, ಹಣ್ಣಿನ ಗಿಡಗಳು ಮತ್ತು ದೇಸಿ ಬೀಜಗಳು ಮಾರಾಟಕ್ಕೆ ಇರುತ್ತವೆ. ಮೇಳದಲ್ಲಿನಂಜನಗೂಡು ರಸಬಾಳೆ, ನೇಂದ್ರ ಬಾಳೆ, ಏಲಕ್ಕಿ ಬಾಳೆ, ಫಿಂಗರ್ ಬಾಳೆ, ಕೆಂಪು ಬಾಳೆ ಮೊದಲಾದ ತಳಿಗಳ ಬಾಳೆಹಣ್ಣು ಕೊಳ್ಳಲು ಸಿಗಲಿವೆ. ಬಾಳೆ ನೆಡಲು ಆಸಕ್ತರಾದವರಿಗೆ ಗುಣಮಟ್ಟದ ಬಿತ್ತನೆಯ ಬಾಳೆ ಕಂದುಗಳು ಕೊಳ್ಳಲು ಸಿಗುತ್ತವೆ. ಕಮಲಾಪುರ ಕೆಂಪು ಬಾಳೆ, ನಂಜನಗೂಡು ರಸಬಾಳೆ, ಕರ್ಪೂರವಲ್ಲಿ, ಪೂವನ್ , ಚಂದ್ರಬಾಳೆ, ಮದರಂಗಿ, ಏಲಕ್ಕಿ ಬಾಳೆ ಸೇರಿದಂತೆ ವಿವಿಧ ದೇಸಿ ಬಾಳೆ ತಳಿಗಳ ಗೆಡ್ಡೆಗಳನ್ನು ಸಹಜ ಸೀಡ್ಸ್ ಮಾರಾಟಕ್ಕೆ ಲಭಿಸಲಿವೆ.