(ಲೀಡ್ ...) 2 ವರ್ಷಗಳ ಗರಿಷ್ಠಕ್ಕೆ ಹಣದುಬ್ಬರ ಏರಿಕೆ

Contributed by: vijay.cheelange@timesgroup.com|Vijaya Karnataka•
inflation reaches 2 year high rbi faces challenges
** ಆರ್ ಬಿಐ ಗಡಿ ದಾಟಿ ಶೇ. 6.09ಕ್ಕೆ ಹೆಚ್ಚಳ

** ನಿಯಂತ್ರಣ ಕ್ರಮವಾಗಿ ಆರ್ ಬಿಐನಿಂದ ರೆಪೊ ದರ ಹೆಚ್ಚಳ ನಿರೀಕ್ಷೆ
ಹೊಸದಿಲ್ಲಿ: ಭಾರತದ ಚಿಲ್ಲರೆ ಹಣದುಬ್ಬರವು ಅಕ್ಟೋಬರ್ ನಲ್ಲಿಶೇ. 6.09ಕ್ಕೆ ಏರಿಕೆಯಾಗಿದ್ದು, ಎರಡು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತೀಯ ರಿಸವ್ ರ್ ಬ್ಯಾಂಕ್ ನ (ಆರ್ ಬಿಐ) ಗರಿಷ್ಠ ಸಹಿಷ್ಣುತಾ ಮಿತಿಯಾದ (ಸಿಪಿಐ) ಶೇ.6ರಷ್ಟನ್ನು ದಾಟಿದೆ.

ಇದರ ಪರಿಣಾಮವಾಗಿ ಒಂದೆಡೆ ದಿನಸಿ ಮತ್ತು ತರಕಾರಿ ಬೆಲೆಗಳು ಗಗನಕ್ಕೇರಿ ಜನಸಾಮಾನ್ಯರ ಮನೆಯ ಬಜೆಟ್ ನಲ್ಲಿಭಾರಿ ಏರಿಕೆಯಾಗಿದೆ. ಮತ್ತೊಂದೆಡೆ, ಈ ಹಣದುಬ್ಬರವನ್ನು ನಿಯಂತ್ರಿಸಲು ಮುಂಬರುವ ಡಿಸೆಂಬರ್ ಸಭೆಯಲ್ಲಿಆರ್ ಬಿಐ ತನ್ನ ರೆಪೊ ದರವನ್ನು ಕನಿಷ್ಠ 25-50 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸುವ ನಿರೀಕ್ಷೆಯಿದೆ. ಈ ಮೂಲಕ ಗೃಹ, ವಾಹನ ಮತ್ತು ವೈಯಕ್ತಿಕ ಸಾಲಗಳ ಬಡ್ಡಿ ದರ ಮತ್ತಷ್ಟು ದುಬಾರಿಯಾಗಲಿದ್ದು, ಜನಸಾಮಾನ್ಯರ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಆರ್ಥಿಕ ತಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ಸಚಿವಾಲಯ (ಎಂಎಸ್ ಪಿಐ) ಬಿಡುಗಡೆ ಮಾಡಿರುವ ಮಾಹಿತಿಯಂತೆ, ಸೆಪ್ಟೆಂಬರ್ ನಲ್ಲಿಶೇ. 7.74ರಷ್ಟಿದ್ದ ಆಹಾರ ಹಣದುಬ್ಬರವು ಅಕ್ಟೋಬರ್ ನಲ್ಲಿಶೇ. 8.94ಕ್ಕೆ ಜಿಗಿದಿದೆ.

ಮತ್ತೊಂದಡೆ, ಈರುಳ್ಳಿ ಬೆಲೆ ಕಳೆದ ವರ್ಷಕ್ಕಿಂತ ಶೇ. 116.22ರಷ್ಟು ಜಿಗಿದರೆ, ಬೆಳ್ಳುಳ್ಳಿ ಶೇ. 60.74ರಷ್ಟು ಹಾಗೂ ಶುಂಠಿ ಶೇ. 48.32ರಷ್ಟು ಏರಿಕೆಯಾಗಿದೆ. ನಗರ ಪ್ರದೇಶದಲ್ಲಿಶೇ. 5.41ರಷ್ಟು ಹಣದುಬ್ಬರ ದಾಖಲಾಗಿದ್ದರೆ, ಗ್ರಾಮೀಣ ಭಾಗದಲ್ಲಿಇದು ಶೇ. 6.63ರಷ್ಟಿದೆ. ಹೀಗಾಗಿ ಹಳ್ಳಿ ಜನರಿಗೆ ಬೆಲೆ ಏರಿಕೆಯ ಬಿಸಿ ಹೆಚ್ಚು ತಟ್ಟಿದೆ. ತಮಿಳುನಾಡು (ಶೇ. 7.29) ಹಾಗೂ ತೆಲಂಗಾಣದಲ್ಲಿ(ಶೇ. 7.26) ಅತಿ ಹೆಚ್ಚು ಬೆಲೆ ಏರಿಕೆ ಕಂಡುಬಂದಿದೆ ಎಂದು ಆರ್ ಬಿಐ ವರದಿ ತಿಳಿಸಿದೆ.

ಮುಂಗಾರು ಬೆಳೆ ಉತ್ಪಾದನೆ ಕುಂಠಿತ:

ಮಳೆ ಕೊರತೆಯಿಂದಾಗಿ ಮುಂಗಾರು ಬೆಳೆಗಳ ಉತ್ಪಾದನೆ ಕುಸಿದಿರುವುದು ಈ ದಿಢೀರ್ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಮುಂಬರುವ ದಿನಗಳಲ್ಲಿಆಹಾರ ಪೂರೈಕೆ ಸುಧಾರಿಸದಿದ್ದರೆ ಆರ್ಥಿಕ ಸಂಕಷ್ಟ ಮತ್ತಷ್ಟು ಬಿಗಡಾಯಿಸುವ ಲಕ್ಷಣಗಳಿವೆ. ಈಗಾಗಲೇ ಆಹಾರ ವಸ್ತುಗಳ ಹಣದುಬ್ಬರ ಶೇ. 8.94ಕ್ಕೇರಿದೆ. ಇದರ ಜೊತೆಗೆ, ವೈಯಕ್ತಿಕ ಆರೈಕೆ ಮತ್ತು ದಿನಬಳಕೆ ವಸ್ತುಗಳ ದರ ಶೇ. 10.14ರಷ್ಟು ಹಾಗೂ ರೆಸ್ಟೋರೆಂಟ್ ಮತ್ತು ವಸತಿ ಸೇವೆಗಳು ಶೇ. 10.06ರಷ್ಟು ಜಿಗಿದಿವೆ ಎಂದು ಎಂಎಸ್ ಪಿಐ ವರದಿ ತಿಳಿಸಿದೆ.

**

ಒಟ್ಟಾರೆ ಹಣದುಬ್ಬರ ಇನ್ನೂ ತನ್ನ ಗರಿಷ್ಠ ಮಟ್ಟವನ್ನು ತಲುಪಿಲ್ಲ. ಜತೆಗೆ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಉಂಟಾಗುವ ಪ್ರತಿಕೂಲ ಪರಿಣಾಮವು, ಆರ್ ಬಿಐನ ಮುಂಬರುವ ತ್ರೈಮಾಸಿಕ ಅಂದಾಜುಗಳನ್ನು ಪರಿಷ್ಕರಿಸುವಂತೆ ಮಾಡಲಿದೆ. ಅಕ್ಟೋಬರ್ ನ ಈ ಅಂಕಿ-ಅಂಶಗಳನ್ನು ಗಮನಿಸಿದರೆ, ಡಿಸೆಂಬರ್ ಸಭೆಯಲ್ಲಿಆರ್ ಬಿಐ ಸತತ ಎರಡನೇ ಬಾರಿಗೆ ತನ್ನ ಬಡ್ಡಿದರವನ್ನು ಹೆಚ್ಚಿಸುವುದು ಬಹುತೇಕ ಖಚಿತ.

- ಅದಿತಿ ನಾಯರ್ , ಆರ್ಥಿಕ ತಜ್ಞೆ, ಇಕ್ರಾ ಸಂಸ್ಥೆ

ಹಣದುಬ್ಬರದ ಒತ್ತಡ ವ್ಯಾಪಕವಾಗುತ್ತಿರುವ ಸ್ಪಷ್ಟ ಲಕ್ಷಣಗಳು ನಮಗೆ ಗೋಚರಿಸುತ್ತಿವೆ. ಇಂಧನ ಮತ್ತು ಕಚ್ಚಾ ವಸ್ತುಗಳ ದುಬಾರಿ ವೆಚ್ಚವು ನೇರವಾಗಿ ಮೂಲ ಹಣದುಬ್ಬರದ ಏರಿಕೆಗೆ ಕಾರಣವಾಗುತ್ತಿದೆ. ಇದರ ಜೊತೆಗೆ, ಆಹಾರ ವಸ್ತುಗಳ ಬೆಲೆಯೂ ಗಣನೀಯವಾಗಿ ಹೆಚ್ಚಾಗುತ್ತಿದೆ. ಜಲಾಶಯಗಳಲ್ಲಿನೀರಿನ ಮಟ್ಟ ಕುಸಿದಿರುವುದು ಮುಂಬರುವ ಹಿಂಗಾರು ಬೆಳೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದ್ದು, ಆಹಾರ ಬೆಲೆಗಳು ಮತ್ತಷ್ಟು ಜಿಗಿಯುವ ಆತಂಕವಿದೆ. ಆದಾಗ್ಯೂ, ಇತ್ತೀಚೆಗೆ ಕಚ್ಚಾ ತೈಲ ಬೆಲೆಯಲ್ಲಿನ ತೀವ್ರ ಕುಸಿತ ಮತ್ತು ರೂಪಾಯಿ ಮೌಲ್ಯ ಕೊಂಚ ಚೇತರಿಸಿಕೊಂಡಿರುವುದು ಆರ್ ಬಿಐಗೆ ತುಸು ನಿರಾಳತೆ ತಂದುಕೊಟ್ಟಿದೆ.

- ವಿಕ್ರಮ್ ಛಾಬ್ರಾ, ಹಿರಿಯ ಅರ್ಥಶಾಸ್ತ್ರಜ್ಞರು