ಕೂಡಲೇ ಭದ್ರಾ ನಾಲೆಗೆ ನೀರು ಹರಿಸಿ

Contributed by: mhkhnl25@gmail.com|Vijaya Karnataka•
water scarcity in bhadra farmers protest
ಕೂಡಲೇ ಭದ್ರಾ ನಾಲೆಗೆ ನೀರು ಹರಿಸಿ

ಹೊನ್ನಾಳಿ: ತಾಲೂಕಿನ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಅಡಕೆ ತೋಟಗಳು ನೀರಿಲ್ಲದೇ ಒಣಗುತ್ತಿದ್ದು, ಕೂಡಲೇ ಭದ್ರಾ ನಾಲೆಗಳಿಗೆ ನೀರು ಹರಿಸಬೇಕು ಎಂದು ರೈತ ಮುಖಂಡ ನೆಲಹೊನ್ನೆ ಮೋಹನ್ ಶಾಸಕ ಡಿ.ಜಿ. ಶಾಂತನಗೌಡರಿಗೆ ಮನವಿ ಮಾಡಿದರು.
ತಾಲೂಕಿನ ಕುಂದೂರು, ಕೂಲಂಬಿ, ಕುಂಬಳೂರು, ನೆಲಹೊನ್ನೆ, ಯಕ್ಕನಹಳ್ಳಿ, ಚಿಕ್ಕಹಾಲಿವಾಣ, ಎರೆಚಿಕ್ಕನಹಳ್ಳಿ, ಕೆಂಗಲಹಳ್ಳಿ ಭಾಗದ ರೈತರು, ಶಾಸಕರನ್ನು ಗುರುವಾರ ಭೇಟಿ ಮಾಡಿ, ಮನವಿ ಮಾಡಿದರು.

ಮಳೆ ಇಲ್ಲದೇ ಕೆರೆ ಕಟ್ಟೆಗಳು ಒಣಗಿವೆ, ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲ, ಫಲಕ್ಕೆ ಬಂದ ತೋಟಗಳು ಒಣಗುತ್ತಿವೆ, ಆದ್ದರಿಂದ ಒಂದು ಟಿಎಂಸಿ ನೀರನ್ನಾದರೂ ನಮ್ಮ ಭದ್ರಾ ನಾಲೆಗೆ ಬಿಡಿಸಿದರೆ ಒಣಗುತ್ತಿರುವ ತೋಟಗಳನ್ನು ಉಳಿಸಿಕೊಳ್ಳಬಹುದು. ಇಲ್ಲದಿದ್ದರೆ ಹತ್ತಿಪ್ಪತ್ತು ವರ್ಷಗಳ ಕಾಲ ಸಾಕಿದ ಅಡಕೆ ಮರಗಳು ಒಣಗಿ ಬಹುದೊಡ್ಡ ಅನಾಹುತವಾಗುತ್ತದೆ ಎಂದರು.

ಶಾಸಕರು ಮಾತನಾಡಿ, ಮುಂದಿನ ಗುರುವಾರ ಕ್ಯಾಬಿನೆಟ್ ಮೀಟಿಂಗ್ ನಡೆಯಲಿದೆ, ಆಗ ನೀವೆಲ್ಲರೂ ಬನ್ನಿ ನೀರಾವರಿ ಸಚಿವರು, ಶಿವಮೊಗ್ಗ ಜಿಲ್ಲಾಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸೋಣ ಎಂದರು.

ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿನಾಲ್ಕು ಜಿಲ್ಲೆಗಳು, 800ಕ್ಕೂ ಹೆಚ್ಚು ಹಳ್ಳಿಗಳು, 32 ಜನ ಶಾಸಕರು ಬರುತ್ತಾರೆ. ಇದು ನನ್ನೊಬ್ಬನ ಕೈಯಿಂದ ಆಗುವ ಕೆಲಸವಲ್ಲ, ಅವರೆಲ್ಲರನ್ನು ಭೇಟಿ ಮಾಡಿ ಮನವಿ ಮಾಡೋಣ, ನೀವು ನನ್ನ ಜತೆ ಬನ್ನಿ ಎಂದರು.

ರೈತ ಮುಖಂಡರಾದ ಕೂಲಂಬಿ ಸೋಮಣ್ಣ, ಕುಂದೂರು ಧನಂಜಯ ಮಾತನಾಡಿದರು. ಮುಖಂಡ ಕುಂಬಳೂರು ವಾಗೀಶ್ , ಈಶಣ್ಣ, ಯಕ್ಕನಹಳ್ಳಿ ದಯಾನಂದ್ , ರಾಮಾಂಜನೇಯ, ಕೂಲಂಬಿ ಲೋಕೇಶ್ ಪಾಟೀಲ್ , ಹಾಲೇಶಪ್ಪ, ಬನ್ನಿಕೋಡು ಸಿದ್ದಪ್ಪ, ಜಿ.ಸಿ. ಬಸಣ್ಣ ಸೇರಿದಂತೆ ನೂರಾರು ರೈತರು ಹಾಜರಿದ್ದರು.

12ಎಚ್ ಎನ್ ಎಲ್ 1ಚಿತ್ರ1

ಹೊನ್ನಾಳಿ ಸಮೀಪದ ಗೊಲ್ಲರಹಳ್ಳಿಯಲ್ಲಿನ ಶಾಸಕ ಡಿ.ಜಿ. ಶಾಂತನಗೌಡರ ಕಚೇರಿಗೆ ಭೇಟಿ ನೀಡಿದ ರೈತರು, ಭದ್ರಾ ನಾಲೆಗೆ ನೀರು ಹರಿಸುವಂತೆ ಮನವಿ ಮಾಡಿದರು.