*ಶಾಸಕ ಪೊನ್ನಣ್ಣ ಹೇಳಿಕೆ | ಅಮ್ಮತ್ತೀರ ಕುಟುಂಬಸ್ಥರು ಪುನರ್ ನಿರ್ಮಿಸಿದ ಐನ್ ಮನೆ ಉದ್ಘಾಟನೆವಿಕ ಸುದ್ದಿಲೋಕ ಗೋಣಿಕೊಪ್ಪ
ಕೊಡವ ಸಂಸ್ಕೃತಿ, ಪರಂಪರೆ ಹಾಗೂ ಆಚಾರ-ವಿಚಾರಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವಲ್ಲಿಐನ್ ಮನೆಗಳ ಪಾತ್ರ ಮಹತ್ವದ್ದಾಗಿದೆ. ಐನ್ ಮನೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್ .ಪೊನ್ನಣ್ಣ ಹೇಳಿದರು.
ಪೊನ್ನಂಪೇಟೆ ತಾಲೂಕಿನ ಬಾಡಗರಕೇರಿ ಗ್ರಾಮದ ಅಮ್ಮತ್ತೀರ ಕುಟುಂಬಸ್ಥರು ಪುನರ್ ನಿರ್ಮಿಸಿದ ಐನ್ ಮನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘‘ ಐನ್ ಮನೆಗಳು ಸೂರ್ಯಚಂದ್ರ ಇರುವವರೆಗೂ ಶಾಶ್ವತವಾಗಿ ಉಳಿಯಬೇಕು. ಈ ನಿಟ್ಟಿನಲ್ಲಿಎಲ್ಲೆಡೆ ಐನ್ ಮನೆಗಳ ಮಹತ್ವ ಅರಿತು ಅವುಗಳ ಅಭಿವೃದ್ಧಿಗೆ ಪ್ರಯತ್ನಗಳು ನಡೆಯುತ್ತಿವೆ. ಅಮ್ಮತ್ತೀರ ಕುಟುಂಬಸ್ಥರು ಐನ್ ಮನೆಯನ್ನು ಪುನರ್ ನಿರ್ಮಿಸಿರುವುದು ಸಂತೋಷದ ವಿಚಾರ,’’ ಎಂದರು.
‘‘ಕೊಡವ ಭಾಷಿಕ ಸಮಾಜದ 21 ಜನಾಂಗಗಳ ಪೈಕಿ ಕಡಿಮೆ ಅಥವಾ ಹೆಚ್ಚಿನ ಜನಸಂಖ್ಯೆ ಹೊಂದಿರುವ ಯಾವುದೇ ಸಮುದಾಯಕ್ಕೂ ತಾರತಮ್ಯ ಮಾಡದೆ ಸಮುದಾಯ ಭವನ, ಐನ್ ಮನೆಗಳ ನಿರ್ಮಾಣ ಹಾಗೂ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡಲಾಗುತ್ತಿದೆ,’’ ಎಂದು ತಿಳಿಸಿದರು.
‘‘ನಾಡು, ನುಡಿ ಹಾಗೂ ಸಂಸ್ಕೃತಿಯ ಉಳಿವಿಗಾಗಿ ಎಲ್ಲರೂ ಅಭಿಮಾನದಿಂದ ಒಗ್ಗಟ್ಟಾಗಿ ಸೇವೆ ಸಲ್ಲಿಸಬೇಕು. ಜನರನ್ನು ವಿಭಜಿಸುವ ಮೂಲಕ ನಾಡು ಮತ್ತು ಸಂಸ್ಕೃತಿಯನ್ನು ಉಳಿಸಲು ಸಾಧ್ಯವಿಲ್ಲ. ನಮ್ಮ ಸಂಸ್ಕೃತಿ, ಆಚರಣೆ, ಪದ್ಧತಿ ಹಾಗೂ ಪರಂಪರೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಪರಸ್ಪರ ದ್ವೇಷದ ಮನೋಭಾವ ಬಿಟ್ಟು ಎಲ್ಲರೊಂದಿಗೆ ಸಹಬಾಳ್ವೆ ನಡೆಸಬೇಕು,’’ ಎಂದು ಕರೆ ನೀಡಿದರು.
‘‘ಗೋಣಿಕೊಪ್ಪದಲ್ಲಿರುವ ಅಮ್ಮ ಕೊಡವ ಸಮಾಜದ ಕಟ್ಟಡವು ಪ್ರವಾಹದಿಂದ ಕುಸಿಯುವ ಆತಂಕವಿರುವ ಹಿನ್ನೆಲೆಯಲ್ಲಿಅದರ ಸಂರಕ್ಷಣೆಗೆ 2 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಅಲ್ಲದೆ ಸಮಾಜದ ಅಭಿವೃದ್ಧಿಗೆ 25 ಲಕ್ಷ ರೂ. ಅನುದಾನ ನೀಡಲಾಗಿದೆ,’’ ಎಂದು ಹೇಳಿದರು.
ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ ಮಾತನಾಡಿ, ‘‘ಕೊಡವ ಹಾಗೂ ಕೊಡವ ಭಾಷಿಕ ಜನಾಂಗಗಳ ಐನ್ ಮನೆ, ಗುರುಮನೆ ಮತ್ತು ಕಾರೋಣ ಮನೆಗಳ ಅಭಿವೃದ್ಧಿಗೆ ಪ್ರಣಾಳಿಕೆಯಲ್ಲಿನೀಡಿದ ಭರವಸೆಯಂತೆ ಶಾಸಕ ಪೊನ್ನಣ್ಣ ಅನುದಾನ ಒದಗಿಸುತ್ತಿದ್ದಾರೆ. ಇದರಿಂದ ಅನೇಕ ಐನ್ ಮನೆಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ಐನ್ ಮನೆಗಳ ಸಂರಕ್ಷಣೆಗೆ ವಿಶೇಷ ಗಮನ ಹರಿಸುವ ಮೂಲಕ ಸಂಸ್ಕೃತಿಯ ಉಳಿವಿಗೆ ಅವರು ಮಹತ್ವದ ಕೊಡುಗೆ ನೀಡುತ್ತಿದ್ದಾರೆ,’’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಮ್ಮತ್ತೀರ ಕುಟುಂಬದ ಉಪಾಧ್ಯಕ್ಷೆ ರೇವತಿ ಪರಮೇಶ್ವರ ಮಾತನಾಡಿ, ‘‘ಶಾಸಕ ಪೊನ್ನಣ್ಣ ಅವರು ನೀಡಿದ 4 ಲಕ್ಷ ರೂ. ಅನುದಾನದಿಂದ ಐನ್ ಮನೆಯನ್ನು ಪುನರ್ ನಿರ್ಮಿಸಲು ಅನುಕೂಲವಾಗಿದೆ. ಐನ್ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡಬೇಕು,’’ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ಹಾಗೂ ತಲಕಾವೇರಿ-ಭಾಗಮಂಡಲ ದೇವಸ್ಥಾನ ವ್ ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾನಂಡ ಪ್ರತ್ಯು, ತಾಲೂಕು ಬಗರ್ ಹುಕುಂ ಸಕ್ರಮೀಕರಣ ಸಮಿತಿ ಅಧ್ಯಕ್ಷ ಅಣ್ಣಳಮಾಡ ಲಾಲಾ ಅಪ್ಪಣ್ಣ, ಅಮ್ಮತ್ತೀರ ಕುಟುಂಬದ ಅಧ್ಯಕ್ಷ ಅಶೋಕ, ಕಾರ್ಯದರ್ಶಿ ಸುನಿಲ…, ಸಹ ಕಾರ್ಯದರ್ಶಿ ವಾಸುವರ್ಮ ಹಾಗೂ ಹಿರಿಯರಾದ ಕಾಳಮಯ್ಯ ಉಪಸ್ಥಿತರಿದ್ದರು.
*ಫೋಟೊ ಇದೆ
1.ಅಮ್ಮತ್ತೀರ ಕುಟುಂಬದ ಕಾರ್ಯಕ್ರಮದಲ್ಲಿಗಣ್ಯರನ್ನು ಸನ್ಮಾನಿಸಲಾಯಿತು.
2.ಬಾಡಗರಕೇರಿಯಲ್ಲಿಪುನರ್ ನಿರ್ಮಿಸಲಾದ ಅಮ್ಮತ್ತೀರ ಕುಟುಂಬದ ಐನ್ ಮನೆಯನ್ನು ಶಾಸಕ ಅಜ್ಜಿಕುಟ್ಟಿರ ಎಸ್ .ಪೊನ್ನಣ್ಣ ಉದ್ಘಾಟಿಸಿದರು.