ಬಾಲಿ : ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷರಾಗಿ ಜಯ್ ಶಾ ಅವರನ್ನು ಎರಡನೇ ಎರಡು ವರ್ಷಗಳ ಅವಧಿಗೆ ಅವಿರೋಧವಾಗಿ ಮರುನೇಮಕ ಮಾಡಲಾಗಿದೆ. ‘ಕ್ರಿಕೆಟ್ , ಕ್ರೀಡೆಯ ನಿರ್ಣಾಯಕ ಘಟ್ಟದಲ್ಲಿರುವಾಗ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು,’’ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಐಸಿಸಿ ಸೋಮವಾರ ತಿಳಿಸಿದೆ.ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ 38 ವರ್ಷದ ಜಯ್ ಶಾ, 2024 ರ ಡಿಸೆಂಬರ್ ನಲ್ಲಿಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಭಾನುವಾರ ಮುಕ್ತಾಯಗೊಂಡ ಐಸಿಸಿ ಮಂಡಳಿ ಸಭೆಯಲ್ಲಿಅವರನ್ನು ಮರುನೇಮಕ ಮಾಡಲಾಗಿದೆ. ಈ ಹುದ್ದೆ ಅಲಂಕರಿಸಿದ ಅತಿ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.
‘‘ಕ್ರೀಡೆಯ ಜಾಗತಿಕ ವಿಸ್ತರಣೆ, ಅಭಿಮಾನಿಗಳ ಸಂಖ್ಯೆಯ ಹೆಚ್ಚಳ ಮತ್ತು ವಾಣಿಜ್ಯ ಅಭಿವೃದ್ಧಿ ಐಸಿಸಿಯ ಕಾರ್ಯತಂತ್ರದ ಮಾರ್ಗಸೂಚಿಯ ಪ್ರಮುಖ ಅಂಶಗಳಾಗಿರುವ ಈ ನಿರ್ಣಾಯಕ ಸಮಯದಲ್ಲಿ, ಜಯ್ ಶಾ ಅವರ ನಾಯಕತ್ವದ ಮೇಲಿನ ಮಂಡಳಿಯ ವಿಶ್ವಾಸವನ್ನು ಈ ನಿರ್ಧಾರ ಪ್ರತಿಬಿಂಬಿಸುತ್ತದೆ. ಜತೆಗೆ, ಇದು ನಿರಂತರತೆಯನ್ನು ಒದಗಿಸುತ್ತದೆ,’’ ಎಂದು ಐಸಿಸಿ ಹೇಳಿಕೆಯಲ್ಲಿತಿಳಿಸಿದೆ.2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಲ್ಲಿಕ್ರಿಕೆಟ್ ಮತ್ತೆ ಒಲಿಂಪಿಕ್ಸ್ ಗೆ ಮರಳಲು ಸಿದ್ಧವಾಗುತ್ತಿರುವ ಸಂದರ್ಭದಲ್ಲೇ ಜಯ್ ಶಾ ಅವರ ಎರಡನೇ ಅವಧಿ ಆರಂಭವಾಗಲಿದೆ.
‘‘ಐಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದು ಗೌರವವೂ ಹೌದು, ಜವಾಬ್ದಾರಿಯೂ ಹೌದು. ವಿಶ್ವದಾದ್ಯಂತ ಕ್ರಿಕೆಟ್ ನ ಹಿತಾಸಕ್ತಿಗಳನ್ನು ಮುಂದುವರಿಸಲು ನಮ್ಮ ಸದಸ್ಯ ರಾಷ್ಟ್ರಗಳೊಂದಿಗೆ ಕೈಜೋಡಿಸಿ ಕೆಲಸ ಮಾಡುವುದಕ್ಕೆ ನಾನು ಬದ್ಧನಾಗಿದ್ದೇನೆ,’’ ಎಂದು ಜಯ್ ಶಾ ಹೇಳಿದ್ದಾರೆ.ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ರಿಚರ್ಡ್ ಥಾಂಪ್ಸನ್ , ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮಹತ್ವದ ಘಟ್ಟವಾಗಿರುವ ಸಮಯದಲ್ಲಿಜಯ್ ಶಾ ಅವರ ಮರುನೇಮಕ ನಡೆದಿದೆ ಎಂದು ಹೇಳಿದ್ದಾರೆ.
ತೆಂಡೂಲ್ಕರ್ , ಬಿಂದ್ರಾ ಅಭಿನಂದನೆ
ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ , ಶೂಟರ್ ಅಭಿನವ್ ಬಿಂದ್ರಾ ಜಯ್ ಶಾ ಅವರ ಮರುನೇಮಕಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
‘‘ಹೊಸ ಅವಕಾಶಗಳನ್ನು ಸೃಷ್ಟಿಸುವುದು, ಕ್ರಿಕೆಟ್ ನ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಕ್ರೀಡೆಯನ್ನು ಹೊಸ ಪ್ರೇಕ್ಷಕರಿಗೆ ತಲುಪಿಸುವುದರ ಮೇಲೆ ಕ್ರಿಕೆಟ್ ನ ಬೆಳವಣಿಗೆ ಅವಲಂಬಿತವಾಗಿದೆ. ಈ ಆದ್ಯತೆಗಳತ್ತ, ವಿಶೇಷವಾಗಿ ಮಹಿಳಾ ಕ್ರಿಕೆಟ್ ನತ್ತ, ಜಯ್ ಶಾ ಅವರು ಶ್ರಮಿಸಿದ್ದಾರೆ. ಐಸಿಸಿ ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ಮುಂದುವರಿಯುತ್ತಿರುವ ಅವರಿಗೆ ಶುಭಾಶಯಗಳು,’’ ಎಂದು ತೆಂಡೂಲ್ಕರ್ ‘ಎಕ್ಸ…’ನಲ್ಲಿಹಂಚಿಕೊಂಡಿದ್ದಾರೆ. ಒಲಿಂಪಿಕ್ಸ್ ನಲ್ಲಿಚಿನ್ನದ ಪದಕ ಗೆದ್ದ ಭಾರತದ ಶೂಟಿಂಗ್ ದಿಗ್ಗಜ ಅಭಿನವ್ ಬಿಂದ್ರಾ ಕೂಡ ಜಯ್ ಶಾ ಅವರನ್ನು ಅಭಿನಂದಿಸಿದ್ದಾರೆ. ಈ ಅವಧಿಯಲ್ಲಿಅವರು ಮೇಲ್ವಿಚಾರಣೆ ವಹಿಸಲಿರುವ ಪ್ರಮುಖ ಬೆಳವಣಿಗೆಗಳಲ್ಲಿಕ್ರಿಕೆಟ್ ನ ಒಲಿಂಪಿಕ್ಸ್ ಗೆ ಮರಳುವಿಕೆಯೂ ಒಂದಾಗಿದೆ ಎಂದು ಬಿಂದ್ರಾ ಹೇಳಿದ್ದಾರೆ.