* ಬ್ರಹ್ಮರಕೂಟ್ಲುಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಹಗಲು-ರಾತ್ರಿ ಧರಣಿ

Contributed by: yadavvkbantwal@gmail.com|Vijaya Karnataka•
brahmarakootlu tollgate protest day night struggle erupts with strike warning
ಶೀಘ್ರ ತೆರವುಗೊಳಿಸದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ: ಮಾಜಿ ಸಚಿವ ರಮಾನಾಥ ರೈ ಎಚ್ಚರಿಕೆ

ವಿಕ ಸುದ್ದಿಲೋಕ ಬಿ.ಸಿ.ರೋಡ್
ಬ್ರಹ್ಮರಕೂಟ್ಲುಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಸಾರ್ವಜನಿಕರ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಟೋಲ್ ಗೇಟ್ ತೆರವು ಹೋರಾಟ ಸಮಿತಿ ಹಾಗೂ ಸಮಾನ ಮನಸ್ಕ ಸಂಘಟನೆಗಳ ಆಶ್ರಯದಲ್ಲಿಮಂಗಳವಾರ ಹಗಲು-ರಾತ್ರಿ ಧರಣಿ ಸತ್ಯಾಗ್ರಹ ಆರಂಭಗೊಂಡಿದ್ದು, ಹೋರಾಟಕ್ಕೆ ಜಿಲ್ಲೆಯ ನಾನಾ ಭಾಗಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಈ ಹಿಂದೆ ಮೊದಲ ಹಂತವಾಗಿ ಟೋಲ್ ಗೇಟ್ ಬಳಿ ಒಂದು ದಿನದ ಧರಣಿ, ಎರಡನೇ ಹಂತವಾಗಿ ಹೊಸ ಟೋಲ್ ಗೇಟ್ ನಿರ್ಮಾಣಗೊಳ್ಳುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರಿಗೆ ಹೋರಾಟದ ಉದ್ದೇಶ ಹಾಗೂ ಟೋಲ್ ಗೇಟ್ ನಿಂದ ಎದುರಾಗಬಹುದಾದ ಸಮಸ್ಯೆಗಳ ಕುರಿತು ಮಾಹಿತಿ, ಮೂರನೇ ಹಂತವಾಗಿ ಬಿ.ಸಿ.ರೋಡ್ ನಿಂದ ಬ್ರಹ್ಮರಕೂಟ್ಲುಟೋಲ್ ಗೇಟ್ ವರೆಗೆ ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸಲಾಗಿತ್ತು. ಇದೀಗ ನಾಲ್ಕನೇ ಹಂತವಾಗಿ ಮಂಗಳವಾರ ಬೆಳಗ್ಗೆಯಿಂದ ಬುಧವಾರ ಬೆಳಿಗ್ಗೆವರೆಗೆ ನಿರಂತರ ಧರಣಿ ನಡೆಯಲಿದೆ. ಬೇಡಿಕೆ ಈಡೇರದಿದ್ದಲ್ಲಿಮುಂದಿನ ಹಂತದಲ್ಲಿಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ಎಚ್ಚರಿಕೆಯನ್ನು ಹೋರಾಟ ಸಮಿತಿ ನೀಡಿದೆ.

ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ, ಬ್ರಹ್ಮರಕೂಟ್ಲುಟೋಲ್ ಗೇಟ್ ನ ಅವಧಿ ಮುಗಿದಿದ್ದರೂ ಅದನ್ನು ಮುಂದುವರಿಸುವ ಪ್ರಯತ್ನ ನಡೆಯುತ್ತಿರುವುದು ಸರಿಯಲ್ಲ. ಇಲ್ಲಿಟೋಲ್ ಸಂಗ್ರಹಕ್ಕೆ ಬೇಕಾದ ಕನಿಷ್ಠ ಮೂಲಸೌಕರ್ಯಗಳೂ ಇಲ್ಲ. ಹೆದ್ದಾರಿ ಇಲಾಖೆಯ ನಿಯಮಗಳನ್ನೂ ಸಮರ್ಪಕವಾಗಿ ಪಾಲಿಸುತ್ತಿಲ್ಲ. ಇದು ಸುಸಜ್ಜಿತ ಟೋಲ್ ಗೇಟ್ ಆಗಿರದೆ ಕೇವಲ ಹಣ ಸಂಗ್ರಹಿಸುವ ಕೇಂದ್ರವಾಗಿ ಮಾರ್ಪಟ್ಟಿದೆ. ಆದ್ದರಿಂದ ಯಾವುದೇ ವಿಳಂಬವಿಲ್ಲದೆ ಟೋಲ್ ಗೇಟ್ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ಬ್ರಹ್ಮರಕೂಟ್ಲುಪ್ರದೇಶದಲ್ಲಿಈ ಹಿಂದೆ ಮಳೆಗಾಲದಲ್ಲಿನೆರೆ ನೀರು ಆವರಿಸುತ್ತಿದ್ದ ಹಿನ್ನೆಲೆಯಲ್ಲಿಜನರ ಅನುಕೂಲಕ್ಕಾಗಿ ನೆರೆ ವಿಮೋಚನಾ ರಸ್ತೆಯನ್ನು ಎತ್ತರಿಸಿ ನಿರ್ಮಿಸಲಾಗಿತ್ತು. ಅಂತಹ ರಸ್ತೆಯಲ್ಲೇ ಟೋಲ್ ಗೇಟ್ ಸ್ಥಾಪಿಸಿರುವುದು ವಿಪರ್ಯಾಸ. ಜಗತ್ತಿನ ಬೇರೆಲ್ಲಿಯೂ ನೆರೆ ವಿಮೋಚನಾ ರಸ್ತೆಯಲ್ಲಿಟೋಲ್ ಸಂಗ್ರಹಿಸುವ ವ್ಯವಸ್ಥೆ ಇರಲಿಕ್ಕಿಲ್ಲಎಂದು ಅವರು ಟೀಕಿಸಿದರು.

ಸಾರ್ವಜನಿಕರ ವಿರೋಧ ಹಾಗೂ ಇಲ್ಲಿನ ಅವ್ಯವಸ್ಥೆಗಳ ಬಗ್ಗೆ ತಿಳಿದಿದ್ದರೂ ಹೆದ್ದಾರಿ ಇಲಾಖೆ ಜನರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ಈ ಹೋರಾಟವನ್ನು ಏಕಾಏಕಿ ಕೈಗೆತ್ತಿಕೊಂಡಿಲ್ಲ. ಕಾನೂನು ಮತ್ತು ನಿಯಮಗಳಿಗೆ ಗೌರವ ನೀಡಿ ಹಂತ ಹಂತವಾಗಿ ಹೋರಾಟ ರೂಪಿಸಲಾಗಿದೆ. ಜನರ ಭಾವನೆಗಳಿಗೆ ಸ್ಪಂದಿಸಿ ಕೂಡಲೇ ಟೋಲ್ ಗೇಟ್ ತೆರವುಗೊಳಿಸಬೇಕು. ಇಲ್ಲವಾದಲ್ಲಿಮುಂದಿನ ದಿನಗಳಲ್ಲಿಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಇಳಿಯಲಾಗುವುದು ಎಂದು ರಮಾನಾಥ ರೈ ಎಚ್ಚರಿಸಿದರು.

ಬ್ರಹ್ಮರಕೂಟ್ಲುಟೋಲ್ ಗೇಟ್ ತೆರವು ಹೋರಾಟ ಸಮಿತಿಯ ಅಧ್ಯಕ್ಷ ಮೋಹನ ಶೆಟ್ಟಿ ಪಂಜಿಕಲ್ಲು, ಸಂಚಾಲಕ ಬಿ. ಶೇಖರ್ , ಸಿಪಿಐ ನಾಯಕ ಸುರೇಶ್ ಕುಮಾರ್ ಬಂಟ್ವಾಳ, ದಕ್ಷಿಣ ಕನ್ನಡ ಜಿಲ್ಲಾಬಸ್ ಮಾಲೀಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ, ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪದ್ಮಶೇಖರ ಜೈನ್ , ಮಿಥುನ್ ರೈ, ಬೇಬಿ ಕುಂದರ್ , ಲುಕ್ಮಾನ್ , ಜಯಂತಿ ಪೂಜಾರಿ, ಶಾಲೆಟ್ ಪಿಂಟೊ, ಲವಿನಾ ವಿಲ್ಮಾ ಮೋರಸ್ , ಸುದೀಪ್ ಶೆಟ್ಟಿ, ಚಂದ್ರಶೇಖರ ಭಂಡಾರಿ, ಪದ್ಮನಾಭ ರೈ, ಪಿ.ಎ. ರಹೀಂ, ಅಬ್ಬಾಸ್ ಅಲಿ, ಸಿದ್ದೀಕ್ ಗುಡ್ಡೆಅಂಗಡಿ, ಉಮೇಶ್ ಬೋಳಿಯಾರ್ , ಪ್ರವೀಣ್ ತುಂಬೆ, ಪ್ರಕಾಶ್ ಶೆಟ್ಟಿ , ಪ್ರವೀಣ್ ಬಂಟ್ವಾಳ, ಪ್ರಕಾಶ್ ಸಾಲ್ಯಾನ್ , ಭಾರತಿ ಶಂಭೂರು, ಮಾಯಿಲಪ್ಪ ಸಾಲ್ಯಾನ್ , ಅಶೋಕ್ ಭಂಡಾರಿಬೆಟ್ಟು, ಜೋಸ್ಮೀನ್ ಡಿಸೋಜಾ, ರಾಮಕೃಷ್ಣ ಆಳ್ವ, ಮಹಮ್ಮದ್ ಶರೀಫ್ , ಮನೋಹರ ನೇರಂಬೋಳು, ಉಷಾ ಅಂಚನ್ , ಮಮತಾ ಗಟ್ಟಿ, ಪಿಯೂಸ್ ರೋಡ್ರಿಗಸ್ ಸೇರಿದಂತೆ ಜಿಲ್ಲೆಯ ನಾನಾ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.