ಚಂದ್ರವನ ಕಲ್ಯಾಣಿ ಅಭಿವೃದ್ಧಿಗೆ 4.73 ಕೋಟಿ ಅನುದಾನ

Contributed by: nagaraj.navimane@timesofindia.com|Vijaya Karnataka•
significant funding of 473 crores for chandravana kalyani development
ಚಂದ್ರವನ ಕಲ್ಯಾಣಿ ಅಭಿವೃದ್ಧಿಗೆ 4.73 ಕೋಟಿ ಅನುದಾನ

ಅಮೃತ್ 2.0 ಯೋಜನೆಯಡಿ ಸಮಗ್ರ ಅಭಿವೃದ್ಧಿ | ಸಂಸದ ಶ್ರೀ ಯದುವೀರ್ ಒಡೆಯರ್ ಮಾಹಿತಿ
ವಿಕ ಸುದ್ದಿಲೋಕ ಮೈಸೂರು

ನಗರದ ಸರಸ್ವತಿಪುರಂನಲ್ಲಿರುವ ಚಂದ್ರವನ ಕಲ್ಯಾಣಿಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಭೇಟಿ ನೀಡಿ ನಗರ ಪಾಲಿಕೆಯ ಅಧಿಕಾರಿಗಳೊಂದಿಗೆ ಪ್ರಸ್ತಾವಿತ ಅಭಿವೃದ್ಧಿ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿದರು.

ಸಂಸದರು ಅಧಿಕಾರಿಗಳೊಂದಿಗೆ ಕಾಮಗಾರಿಗಳ ಯೋಜನೆ ಹಾಗೂ ಅನುಷ್ಠಾನದ ಕುರಿತು ಚರ್ಚಿಸಿ, ಕಾಮಗಾರಿಗಳನ್ನು ನಿಗದಿತ ಕಾಲಮಿತಿಯಲ್ಲಿಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಸೂಚಿಸಿದರು.

‘‘ಕೇಂದ್ರ ಸರಕಾರದ ಅಟಲ್ ಮಿಷನ್ ಫಾರ್ ರಿಜುವೆನೇಶನ್ ಆ್ಯಂಡ್ ಅರ್ಬನ್ ಟ್ರಾನ್ಸ್ ಫಾರ್ಮೇಷನ್ (2.0) ಯೋಜನೆಯಡಿ ಚಂದ್ರವನ ಕಲ್ಯಾಣಿಯ ಸಮಗ್ರ ಅಭಿವೃದ್ಧಿ ಮತ್ತು ಪುನಶ್ಚೇತನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಇದಕ್ಕಾಗಿ ಒಟ್ಟು 4.74 ಕೋಟಿ ಅನುದಾನ ಮೀಸಲಿಡಲಾಗಿದೆ. ಕೇಂದ್ರ ಸರಕಾರ, ರಾಜ್ಯ ಸರಕಾರ ಹಾಗೂ ಮಹಾನಗರ ಪಾಲಿಕೆಯ ಸಹಭಾಗಿತ್ವದಲ್ಲಿಈ ಯೋಜನೆ ಅನುಷ್ಠಾನಗೊಳ್ಳಲಿದೆ,’’ ಎಂದು ಮಾಹಿತಿ ನೀಡಿದರು.

‘‘ಈ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಕಲ್ಯಾಣಿಯ ನಿರ್ವಹಣೆಯನ್ನು ಮುಂದಿನ ಐದು ವರ್ಷಗಳ ಕಾಲ ಕೈಗೊಳ್ಳಲಾಗುವುದು. ಇದರಿಂದ ಕಲ್ಯಾಣಿಯ ಸ್ವಚ್ಛತೆ, ನಿರ್ವಹಣೆ ಹಾಗೂ ದೀರ್ಘಕಾಲೀನ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿದೆ,’’ ಎಂದು ತಿಳಿಸಿದರು.

‘‘ಮೈಸೂರಿನ ಐತಿಹಾಸಿಕ ಪರಂಪರೆಯಲ್ಲಿಕೆರೆಗಳು, ಕಲ್ಯಾಣಿಗಳು ಹಾಗೂ ಸಾಂಪ್ರದಾಯಿಕ ಜಲಮೂಲಗಳು ಮಹತ್ವದ ಸ್ಥಾನವನ್ನು ಹೊಂದಿವೆ. ಇವುಗಳ ಸಂರಕ್ಷಣೆ ಮತ್ತು ಪುನಶ್ಚೇತನವು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವುದರ ಜತೆಗೆ ನಗರದ ಪರಿಸರ ಸಮತೋಲನವನ್ನು ಕಾಪಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಅಮೃತ್ 2.0 ಯೋಜನೆಯ ಮೂಲಕ ಇಂತಹ ಅಮೂಲ್ಯ ಸಾರ್ವಜನಿಕ ಆಸ್ತಿಗಳನ್ನು ಪುನಶ್ಚೇತನಗೊಳಿಸಿ, ಮುಂದಿನ ಪೀಳಿಗೆಗೂ ಅವುಗಳ ಪ್ರಯೋಜನ ದೊರೆಯುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ,’’ ಎಂದು ತಿಳಿಸಿದರು.

ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಹಾಗೂ ಕಾಲಮಿತಿಯೊಳಗೆ ಪೂರ್ಣಗೊಳ್ಳುವುದರ ಜತೆಗೆ, ಕಲ್ಯಾಣಿಯ ಮೂಲ ಸ್ವರೂಪ ಮತ್ತು ಪರಿಸರ ಮಹತ್ವವನ್ನು ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಯೋಜನೆಯಡಿ ಕೈಗೊಳ್ಳಲಾಗುವ ಪ್ರಮುಖ ಕಾಮಗಾರಿಗಳೇನು?

1. ಕಲ್ಯಾಣಿಯಲ್ಲಿನ ಹೂಳು ತೆಗೆಯುವ ಮೂಲಕ ನೀರು ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸಿ ಪುನಶ್ಚೇತನಗೊಳಿಸುವುದು.

2. ಕಲ್ಯಾಣಿಯ ಸುತ್ತಲಿನ ಕಲ್ಲಿನ ಮೆಟ್ಟಿಲುಗಳನ್ನು ನವೀಕರಿಸಿ ಅಭಿವೃದ್ಧಿಪಡಿಸುವುದು.

3. ಕಲ್ಯಾಣಿಯ ಸುತ್ತಲೂ ಸುರಕ್ಷತೆ ಹಾಗೂ ಸೌಂದರ್ಯೀಕರಣದ ದೃಷ್ಟಿಯಿಂದ ಅಲಂಕಾರಿಕ ಗ್ರಿಲ್ ಗಳನ್ನು ಅಳವಡಿಸುವುದು.

4. ಕಲ್ಯಾಣಿಯ ಆವರಣದಲ್ಲಿಉದ್ಯಾನವನವನ್ನು ಅಭಿವೃದ್ಧಿಪಡಿಸುವುದು.

5. ಕಲ್ಯಾಣಿಯ ಸುತ್ತಲೂ ರೇಲಿಂಗ್ ಗಳನ್ನು ಅಳವಡಿಸುವುದು ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವುದು.

6. ಕಲ್ಯಾಣಿಯ ಸುತ್ತಮುತ್ತಲಿನ ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಸಾರ್ವಜನಿಕರ ಬಳಕೆಗೆ ಅನುಕೂಲಕರ ವಾತಾವರಣ ನಿರ್ಮಿಸುವುದು.

(ಫೋಟೋ ಇದೆ)