- ಉಭಯ ಸದನಗಳಲ್ಲಿಶಾಸಕರ ಹಾಜರಾತಿ ಹೆಚ್ಚಳಕ್ಕೆ ಅಗತ್ಯ ಕ್ರಮ - ವಿಧಾನಸಭಾಧ್ಯಕ್ಷ ಜಿ.ಎಸ್ . ಪಾಟೀಲ, ಸಭಾಪತಿ ಸಲೀಂ ಅಹಮ್ಮದ್ ಮಾಹಿತಿ
ವಿಕ ಸುದ್ದಿಲೋಕ ಬೆಳಗಾವಿಸುವರ್ಣ ವಿಧಾನಸೌಧದಲ್ಲಿಡಿ.2ರಿಂದ 11ರವರೆಗೆ ನಡೆಯಲಿರುವ ವಿಧಾನಮಂಡಲಗಳ ಚಳಿಗಾಲದ ಅಧಿವೇಶನದಲ್ಲಿಸಮಗ್ರ ಕರ್ನಾಟಕದ ಅಭಿವೃದ್ಧಿ ವಿಚಾರಗಳೊಂದಿಗೆ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಚರ್ಚೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ಬಾರಿಯೂ ಉತ್ತರದ ಸಮಸ್ಯೆಗಳ ಕುರಿತು ಚರ್ಚಿಸಲು ಹೆಚ್ಚುವರಿ ಸಮಯಾವಕಾಶ ಕಲ್ಪಿಸಲಾಗುವುದು ಎಂದು ವಿಧಾನಸಭಾಧ್ಯಕ್ಷ ಜಿ.ಎಸ್ . ಪಾಟೀಲ ಹಾಗೂ ವಿಧಾನಪರಿಷತ್ ಸಭಾಪತಿ ಸಲೀಂ ಅಹಮ್ಮದ್ ಹೇಳಿದ್ದಾರೆ.
ಸುವರ್ಣ ವಿಧಾನಸೌಧದಲ್ಲಿಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ‘‘ನಾವಿಬ್ಬರೂ ಉತ್ತರ ಕರ್ನಾಟಕದವರಾಗಿರುವುದರಿಂದ ಈ ಭಾಗದ ಸಮಸ್ಯೆಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದೇವೆ. ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಒಟ್ಟಾಗಿ ಚರ್ಚಿಸಿ, ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲಾಗುವುದು. ಉಭಯ ಸದನಗಳಲ್ಲಿಶಾಸಕರ ಹಾಜರಾತಿ ಹೆಚ್ಚಳಕ್ಕೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು’’, ಎಂದರು.
1488 ಪ್ರಶ್ನೆಗಳು:
‘‘ಅಧಿವೇಶನದಲ್ಲಿಮಂಡಿಸಲು ಸದ್ಯ ಒಂದು ವಿಧೇಯಕ ಬಂದಿದ್ದು, ಇನ್ನಷ್ಟು ವಿಧೇಯಕಗಳು ಬರಲಿವೆ. ಈವರೆಗೆ 1,488 ಪ್ರಶ್ನೆಗಳು ಸ್ವೀಕೃತವಾಗಿವೆ. ನಿಯಮ 73ರಡಿ 15 ಹಾಗೂ ನಿಯಮ 351ರಡಿ 25 ಪ್ರಶ್ನೆಗಳು ಬಂದಿವೆ. ಸರಕಾರ ಮತ್ತು ವಿಪಕ್ಷಗಳ ಮುಖಂಡರೊಂದಿಗೆ ಸಮಾಲೋಚಿಸಿ ಸದನದಲ್ಲಿಚರ್ಚಿಸಬೇಕಾದ ವಿಷಯಗಳನ್ನು ಅಂತಿಮಗೊಳಿಸಲಾಗುವುದು. ಇನ್ನು, ಜಿಲ್ಲಾಮತ್ತು ತಾಲೂಕು ಮಟ್ಟದಲ್ಲಿಬಗೆಹರಿಸಬಹುದಾದ ಸಮಸ್ಯೆಗಳನ್ನು ಪ್ರತಿಭಟನೆಗೂ ಮುನ್ನವೇ ಚರ್ಚಿಸಿ ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’’, ಎಂದು ಸಭಾಧ್ಯಕ್ಷ ಜಿ.ಎಸ್ . ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ , ಪೊಲೀಸ್ ಕಮಿಷನರ್ ಪ್ರಕಾಶ್ ನಿಕ್ಕಂ, ಜಿಪಂ ಸಿಇಒ ರಾಹುಲ್ ಶಿಂಧೆ, ಎಸ್ಪಿ ಕೆ.ರಾಮರಾಜನ್ ಇದ್ದರು.
---
ಸೌಧದಲ್ಲಿಸದನ ಸಮಿತಿ ಮಾಸಿಕ ಸಭೆ
‘‘ಸುವರ್ಣ ವಿಧಾನಸೌಧವನ್ನು ವರ್ಷವಿಡೀ ಕ್ರಿಯಾಶೀಲವಾಗಿಡುವ ಉದ್ದೇಶದಿಂದ ಇನ್ನು ಮುಂದೆ ಪ್ರತಿ ತಿಂಗಳು ಒಂದು ಸದನ ಸಮಿತಿಯ ಸಭೆಯನ್ನು ಇಲ್ಲಿಯೇ ನಡೆಸಲು ಉದ್ದೇಶಿಸಲಾಗಿದೆ’’, ಎಂದು ಸಭಾಧ್ಯಕ್ಷರು ತಿಳಿಸಿದರು. ‘‘ಅಧಿವೇಶನದ ಸಂದರ್ಭದಲ್ಲಿಇದೇ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜಿಸಲಾಗುತ್ತಿದೆ. ಶಾಸಕರು ತಂಗುವ ಸ್ಥಳಗಳಲ್ಲಿಪ್ರತಿದಿನ ಯೋಗಾಭ್ಯಾಸ ಹಾಗೂ ನುರಿತರಿಂದ ಯೋಗ ತರಬೇತಿ ನೀಡಲಾಗುವುದು. ಅಧಿವೇಶನ ವೀಕ್ಷಣೆಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ (ಎಐ) ಮೂಲಕ ಸಂವಾದ ನಡೆಸುವ ಅವಕಾಶ ಕಲ್ಪಿಸಲಾಗುವುದು. ಎಂದಿನಂತೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಇರಲಿವೆ’’, ಎಂದು ಮಾಹಿತಿ ನೀಡಿದರು.
----
ಶಾಸಕರ ಭವನಕ್ಕೆ ಶಂಕುಸ್ಥಾಪನೆ ಚಿಂತನೆ
‘‘ಅಧಿವೇಶನಕ್ಕೆ ಆಗಮಿಸುವ ಸಚಿವರು ಮತ್ತು ಶಾಸಕರ ವಸತಿ ವ್ಯವಸ್ಥೆ ಸೇರಿದಂತೆ ಊಟೋಪಹಾರ, ಸಾರಿಗೆ, ಭದ್ರತೆ, ವಿದ್ಯುತ್ ಹಾಗೂ ಅಂತರ್ಜಾಲ ಸೌಲಭ್ಯಗಳ ಸಿದ್ಧತೆ ಪರಿಶೀಲಿಸಲಾಗಿದೆ. ಬೆಳಗಾವಿಯಲ್ಲಿಶಾಸಕರ ಭವನ ನಿರ್ಮಿಸುವ ಉದ್ದೇಶವಿದ್ದು, ಜಾಗ ಇನ್ನೂ ಅಂತಿಮವಾಗಿಲ್ಲ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಅವಕಾಶ ದೊರೆತರೆ ಇದೇ ಅಧಿವೇಶನದ ಅವಧಿಯಲ್ಲಿಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವ ಚಿಂತನೆಯಿದೆ. ಈ ಹಿಂದೆ ಖಾಸಗಿ ಸಹಭಾಗಿತ್ವದಲ್ಲಿಭವನ ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು. ಅದಕ್ಕೆ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿಕೈಬಿಡಲಾಗಿದೆ. ಈಗ ಸರಕಾರದಿಂದಲೇ ಭವನ ನಿರ್ಮಿಸುವ ಆಶಯ ಹೊಂದಲಾಗಿದೆ’’, ಎಂದು ತಿಳಿಸಿದರು.
----
*ಫೋಟೋ-21ರವಿಜಿ2
ಸುವರ್ಣ ವಿಧಾನಸೌಧದಲ್ಲಿಸುದ್ದಿಗೋಷ್ಠಿಯಲ್ಲಿಮಾತನಾಡಿದ ವಿಧಾನಸಭಾಧ್ಯಕ್ಷ ಜಿ.ಎಸ್ . ಪಾಟೀಲ, ವಿಧಾನಪರಿಷತ್ ಸಭಾಪತಿ ಸಲೀಂ ಅಹಮ್ಮದ್ . ಡಿಸಿ ಮೊಹಮ್ಮದ್ ರೋಷನ್ ಇದ್ದಾರೆ.