ನಾರಾಯಣ ಯಾಜಿ (ಪು. 5)

Contributed by: sridevi.a@timesofindia.com|Vijaya Karnataka•
the truth and sacrifice of the chinnamasta goddess
ಛಿನ್ನಮಸ್ತ ದೇವಿ

ತನ್ನ ರಕ್ತವನ್ನೇ ಲೋಕಕ್ಕೆ ಧಾರೆಯೆರೆದ ಮಹಾವಿದ್ಯೆ
-------------

- ನಾರಾಯಣ ಯಾಜಿ

------------

ಉಗ್ರರೂಪದ ಹಿಂದೆ ಅಡಗಿರುವುದು ಕರುಣೆಯ ಕಡಲು. ತನ್ನ ಶಿರವನ್ನೇ ಕತ್ತರಿಸಿಕೊಂಡು ರಕ್ತಧಾರೆಯ ಮೂಲಕ ಲೋಕವನ್ನು ಪೋಷಿಸುವ ಛಿನ್ನಮಸ್ತೆ, ತ್ಯಾಗ , ಜೀವಶಕ್ತಿ ಮತ್ತು ಆತ್ಮಜ್ಞಾನದ ಅಪೂರ್ವ ಸಂಕೇತ. ಅಹಂಕಾರದ ಛೇದನದಿಂದ ಪರಮತತ್ತ್ವದ ಅರಿವಿನವರೆಗೆ ಸಾಗುವ ಈ ಮಹಾವಿದ್ಯೆಯ ದಿವ್ಯ ರಹಸ್ಯವೇನು?

ಧಿಧಿಧಿಧಿಧಿ-------

‘ಪ್ರತ್ಯಾಲೀಢಪದಾಂ ಸದೈವ ದಧತೀಂ ಛಿನ್ನಂ ಶಿರಃ ಕತ್ರ್ರಿಕಾಂ

ದಿಗ್ವಸ್ತಾ್ರಂ ಸ್ವಕಬಂಧಶೋಣಿತಸುಧಾಧಾರಾಂ ಪಿಬಂತೀಂ ಮುದಾ|

ನಾಗಾಬದ್ಧಶಿರೋಮಣಿಂ ತ್ರಿನಯನಾಂ ಹೃದ್ಯುತ್ಪಲಾಲಂಕೃತಾಂ

ರತ್ಯಾಸಕ್ತಮನೋಭವೋಪರಿ ದೃಢಾಂ ವಂದೇ ಜಪಾಸನ್ನಿಭಾಮ್ ||

‘ಎಡಗಾಲನ್ನು ಮುಂದಿಟ್ಟು ವೀರಾಸನದಲ್ಲಿ(ಪ್ರತ್ಯಾಲೀಢ ಪದ) ನಿಂತಿರುವ, ಸದಾ ತನ್ನ ಕತ್ತರಿಸಿದ ಶಿರವನ್ನು ಮತ್ತು ಖಡ್ಗವನ್ನು (ಕತ್ರ್ರಿಕಾಂ) ಹಿಡಿದಿರುವ, ದಿಕ್ಕುಗಳನ್ನೇ ವಸ್ತ್ರವಾಗಿ ಉಟ್ಟಿರುವ (ದಿಗಂಬರೆ), ತನ್ನದೇ ಮುಂಡದಿಂದ ಚಿಮ್ಮುವ ರಕ್ತವೆಂಬ ಅಮೃತಧಾರೆಯನ್ನು ಆನಂದದಿಂದ ಕುಡಿಯುತ್ತಿರುವ, ಸರ್ಪವನ್ನೇ ಶಿರೋಮಣಿಯಾಗಿ ಧರಿಸಿದ, ಮೂರು ಕಣ್ಣುಗಳುಳ್ಳ, ಹೃದಯದ ಬಳಿ ನೀಲಕಮಲದಿಂದ ಅಲಂಕೃತಳಾದ, ರತಿ ಮತ್ತು ಮನ್ಮಥರ ಮೇಲೆ ದೃಢವಾಗಿ ನಿಂತಿರುವ, ದಾಸವಾಳದ ಹೂವಿನಂತೆ ಕೆಂಪಾಗಿ ಪ್ರಕಾಶಿಸುವ ಛಿನ್ನಮಸ್ತ ದೇವಿಯನ್ನು ಧ್ಯಾನಿಸುತ್ತೇನೆ’.

ಕರ್ನಾಟಕದ ಅನೇಕರಿಗೆ ‘ಛಿನ್ನಮಸ್ತ ದೇವಿ’ ಎನ್ನುವ ಹೆಸರು ವಿಚಿತ್ರವಾಗಿ ಕಾಣಬಹುದು. ರುಂಡವಿಲ್ಲದ ತನ್ನ ರಕ್ತವನ್ನೇ ತಾನು ಮತ್ತು ತನ್ನ ಇಬ್ಬರು ಸಹಚರಿಯರಿಗೆ ಕುಡಿಸುತ್ತಿರುವ ಈ ಮೂರ್ತಿ ನೋಡಲು ಭಯಂಕರವಾಗಿದೆ. ಯಾವುದೋ ತಾಂತ್ರಿಕರು ಇಲ್ಲವೇ ಮಾಟಮೋಡಿ ಮಾಡುವವರು ಆರಾಧಿಸುವ ದೇವತೆ ಎಂದು ಹೆದರುವ ಸಾಧ್ಯತೆಯೂ ಇದೆ. ಜಾರ್ಖಂಡ್ ನ ರಾಮಗಢದಿಂದ ಸುಮಾರು 28ಕಿ.ಮೀ. ದೂರದಲ್ಲಿರುವ ಈ ದೇವಾಲಯವು ಭೈರವಿ (ಸ್ಥಳೀಯವಾಗಿ ಭೇರಾ ಅಥವಾ ಭೇರಾ ನದಿ) ದಾಮೋದರ ನದಿಯನ್ನು ಸೇರುವ ಸಂಗಮದ ಸಮೀಪದಲ್ಲಿರುವ ಪ್ರಸಿದ್ಧ ಕ್ಷೇತ್ರವಾದ ‘ಛಿನ್ನಮಸ್ತ’ ದೇವಿಯ ದೇವಾಲಯಕ್ಕೆ ಹೋದರೆ ಲಕ್ಷಾಂತರ ಭಕ್ತರು ಈ ದೇವಿಯನ್ನು ಉಗ್ರದೇವತೆಯಾಗಿ ಮಾತ್ರವಲ್ಲದೆ, ಜೀವಶಕ್ತಿ, ಸೃಷ್ಟಿ, ಕಾಮಶಕ್ತಿ, ಆತ್ಮಸಮರ್ಪಣೆ ಮತ್ತು ತ್ಯಾಗಗಳ ಮಹಾನ್ ಮೂರ್ತಿಯಾಗಿ ಆರಾಧಿಸುತ್ತಾರೆ. ಹಸಿದವರ ಪಾಲಿನ ಅನ್ನಪೂರ್ಣೆ ಈಕೆ, ಕರುಣಾಮಯಿಯೂ, ಪರತತ್ತ್ವದ ಜ್ಞಾನವನ್ನು ಕರುಣಿಸುವ ಅಭಯದಾತೆಯಾಗಿ ಆರಾಧಿಸುತ್ತಿದ್ದಾಳೆ. ಈ ಪುರಾತನ ಶಕ್ತಿಪೀಠವು ಕಾಮಾಖ್ಯ ದೇವಾಲಯದಷ್ಟೇ ಪ್ರಸಿದ್ಧಿ ಪಡೆದಿದೆ. ಇದಲ್ಲದೆ ಹಿಮಾಚಲ ಪ್ರದೇಶದ ಚಿಂತಪೂರ್ಣಿ ದೇವಾಲಯ, ಉತ್ತರ ಪ್ರದೇಶದ ವಾರಣಾಸಿ ಹಾಗೂ ಪಶ್ಚಿಮ ಬಂಗಾಳದ ಬಿಷ್ಣುಪುರದಲ್ಲೂಈ ದೇವಿಯ ಪ್ರಸಿದ್ಧ ಕ್ಷೇತ್ರಗಳಿವೆ.

ದಶಮಹಾವಿದ್ಯೆಯ ಸ್ವರೂಪ

ಭಾರತೀಯ ಅಧ್ಯಾತ್ಮ ಪರಂಪರೆಯಲ್ಲಿದೇವತೆಗಳ ರೂಪಗಳ ಹಿಂದೆ ಗಹನವಾದ ತತ್ತ್ವಶಾಸ್ತ್ರದ ಆದರ್ಶವಿದೆ. ಶಾಕ್ತ ಪರಂಪರೆಯ ದಶಮಹಾವಿದ್ಯೆಗಳಲ್ಲಿಆರನೆಯವಳಾದ ‘ಛಿನ್ನಮಸ್ತ’ ದೇವಿಯ ರೂಪವೂ ಅಂತಹದ್ದೇ ಒಂದು ವಿಸ್ಮಯ. ‘ಶಾಕ್ತರು’ ಶಕ್ತಿಯನ್ನೇ ಸೃಷ್ಟಿಯ ಮೂಲತತ್ತ್ವವೆಂದು ಪರಿಗಣಿಸುತ್ತಾರೆ. ಅವಳೇ ಆದಿಪರಾಶಕ್ತಿ. ಸೃಷ್ಟಿ, ಸ್ಥಿತಿ ಮತ್ತು ಲಯಗಳಿಗೆ ಕಾರಣವಾದ ಪರಮಚೈತನ್ಯದ ಕ್ರಿಯಾಶೀಲ ರೂಪ. ಶಿವನು ಶುದ್ಧ ಚೈತನ್ಯವಾದರೆ, ಶಕ್ತಿಯು ಆ ಚೈತನ್ಯದ ಅಭಿವ್ಯಕ್ತಿ. ಶಿವ ಮತ್ತು ಶಕ್ತಿಯನ್ನು ಬೇರ್ಪಡಿಸಲಾಗದು. ಚೈತನ್ಯಕ್ಕೆ ಕ್ರಿಯಾಶೀಲತೆ ದೊರೆಯುವುದು ಶಕ್ತಿಯಿಂದಲೇ. ಶಂಕರಾಚಾರ್ಯರು ಸೌಂದರ್ಯಲಹರಿಯಲ್ಲಿಶಕ್ತಿಯೊಂದಿಗೆ ಒಂದಾದಾಗ ಮಾತ್ರ ಶಿವನು ಸೃಷ್ಟಿಕಾರ್ಯಕ್ಕೆ ಸಮರ್ಥನಾಗುತ್ತಾನೆ. ಶಕ್ತಿಯಿಲ್ಲದೆ ಅವನಿಗೆ ಚಲಿಸಲೂ ಸಾಧ್ಯವಿಲ್ಲಎಂದು ವರ್ಣಿಸಿದ್ದಾರೆ. ಶಾಕ್ತರು ಎಂದರೆ ತಾಂತ್ರಿಕರು, ಭಯಂಕರವಾಗಿ ಇರುವವರು ಎಂದು ಹೊರನೋಟಕ್ಕೆ ಅನಿಸಿದರೂ, ಯತಾರ್ಥದಲ್ಲಿದೇವಿಯನ್ನು ಜ್ಞಾನದ ಸ್ವರೂಪಳನ್ನಾಗಿ ಆರಾಧಿಸುತ್ತಾರೆ. ಆದಿಪರಾಶಕ್ತಿಯ ಸ್ವರೂಪಳಾದ ಆಕೆ ಹತ್ತು ದಿವ್ಯ (ಜ್ಞಾನ) ಸ್ವರೂಪಗಳಲ್ಲಿಕಾಣಿಸಿಕೊಳ್ಳುತ್ತಾಳೆ. ಅವುಗಳೇ ಕಾಳಿ, ತಾರಾ, ತ್ರಿಪುರಸುಂದರಿ, ಭುವನೇಶ್ವರಿ, ಭೈರವಿ, ಛಿನ್ನಮಸ್ತ, ಧೂಮಾವತಿ, ಬಗಲಾಮುಖಿ, ಮಾತಂಗಿ ಮತ್ತು ಕಮಲಾತ್ಮಿಕಾ ಎನ್ನುವ ದಶಮಹಾವಿದ್ಯೆಗಳು. ಮುಂಡಮಾಲಾ ತಂತ್ರದ ಮೊದಲ ಪಟಲದಲ್ಲಿಉಲ್ಲೇಖವಾಗಿರುವ ಕ್ರಮದಲ್ಲಿಛಿನ್ನಮಸ್ತೆಯು ಆರನೆಯ ಮಹಾವಿದ್ಯೆ.

ಕರುಣಾಮಯಿ ತಾಯಿಯ ಸ್ವರೂಪ

ಈ ಹತ್ತು ಮಹಾವಿದ್ಯೆಗಳಲ್ಲಿಆರನೆಯವಳಾದ ಛಿನ್ನಮಸ್ತ ದೇವಿಯ ವಿವರ ‘ಪ್ರಾಣತೋಷಿಣಿ ತಂತ್ರ’ ಮತ್ತು ‘ಶಾಕ್ತ ಪ್ರಮೋದ’ ಗ್ರಂಥಗಳಲ್ಲಿದೆ. ಆದಿಮಾಯೆಯ ದಶಮಹಾವಿದ್ಯೆಗಳ ಪೈಕಿ ಈಕೆಯದು ಆರನೆಯ ಮಹಾವಿದ್ಯೆಯಾದ ಅಜ್ಞಾನವನ್ನು ನಿವಾರಿಸಿ ಪರಮತತ್ತ್ವದ ಅರಿವನ್ನು ನೀಡುವ ಮಹಾಜ್ಞಾನದ ಸಂಕೇತವಾಗಿದೆ.

ಒಮ್ಮೆ ಪಾರ್ವತಿ ದೇವಿಯು ತನ್ನ ಸಖಿಯರಾದ ಜಯಾ ಮತ್ತು ವಿಜಯಾ (ಡಾಕಿನಿ ಮತ್ತು ವರ್ಣಿನಿ) ಅವರೊಂದಿಗೆ ಮಂದಾಕಿನಿ ನದಿಯಲ್ಲಿಸ್ನಾನಕ್ಕೆ ತೆರಳಿದ್ದಳು. ಸ್ನಾನ ಮುಗಿಸುವಷ್ಟರಲ್ಲಿಸಖಿಯರಿಗೆ ವಿಪರೀತ ಹಸಿವಾಗಿ, ಹಸಿವಿನ ತೀವ್ರತೆಗೆ ಅವರ ಮೈಬಣ್ಣವೇ ಕಪ್ಪಾಯಿತು. ಮಕ್ಕಳ ಹಸಿವನ್ನು ಕಂಡು ಮರುಗಿದ ಜಗನ್ಮಾತೆ, ಕ್ಷಣಮಾತ್ರವೂ ಯೋಚಿಸದೆ ತನ್ನ ಉಗುರಿನಿಂದಲೇ ತನ್ನ ಶಿರವನ್ನು ಕತ್ತರಿಸಿಕೊಂಡಳು. ಕುತ್ತಿಗೆಯಿಂದ ಚಿಮ್ಮಿದ ಮೂರು ರಕ್ತದ ಧಾರೆಗಳಲ್ಲಿಎರಡು ಸಖಿಯರ ಬಾಯಿಗೆ ಬಿದ್ದರೆ, ನಡುವಿನ ಧಾರೆ ದೇವಿಯ ಕೈಯಲ್ಲಿದ್ದ ಕತ್ತರಿಸಿದ ಶಿರದ ಬಾಯಿಗೆ ಬಿತ್ತು. ಹೀಗೆ ತನ್ನನ್ನೇ ತಾನು ಅರ್ಪಿಸಿಕೊಂಡು ಭಕ್ತರ ಹಸಿವು ನೀಗಿಸಿದ ಆ ಕರುಣಾಮಯಿಯೇ ‘ಛಿನ್ನಮಸ್ತ’. ಸಮುದ್ರ ಮಥನದಲ್ಲೂಆಕೆಯೇ ದೈತ್ಯರನ್ನು ನಿಗ್ರಹಿಸಿದಳು ಎನ್ನುವ ಇನ್ನೊಂದು ಕಥೆಯೂ ಇದೆ. ಅದೇ ರೀತಿ ದಕ್ಷ ಯಜ್ಞದಲ್ಲಿದಾಕ್ಷಾಯಿಣಿಯೇ ಈಕೆ ಎನ್ನುವುದುಂಟು.

ಅಹಂಕಾರದ ಛೇದನ

ಛಿನ್ನಮಸ್ತ ದೇವಿಯ ಸ್ವರೂಪದಲ್ಲಿಪ್ರತಿಯೊಂದು ಅಂಶವೂ ಗೂಢಾರ್ಥವನ್ನು ಹೊಂದಿದೆ. ಶಿರವನ್ನು ಕತ್ತರಿಸಿಕೊಳ್ಳುವುದು ಎಂದರೆ ‘ಅಹಂಕಾರ’ವನ್ನು ಕಡಿದು ಹಾಕುವುದು ಎಂದರ್ಥ. ಮನುಷ್ಯನ ಎಲ್ಲಾಬಂಧನಗಳಿಗೆ ಅವನ ‘ನಾನು’ ಎಂಬ ಅಹಂಕಾರವೇ ಮೂಲ ಕಾರಣ. ಬೌದ್ಧಿಕ ಮಿತಿಗಳನ್ನು ಮತ್ತು ಅಹಂಕಾರವನ್ನು ತ್ಯಜಿಸಿದಾಗ ಮಾತ್ರ ಪರಮ ಸತ್ಯದ ದರ್ಶನವಾಗುತ್ತದೆ ಎಂಬುದನ್ನು ಈ ರೂಪ ಸಾರುತ್ತದೆ.

ಮೂರು ರಕ್ತಧಾರೆಗಳು: ಜೀವಶಕ್ತಿಯ ರಹಸ್ಯ

ದೇವಿಯ ಕಂಠದಿಂದ ಹೊರಹೊಮ್ಮುವ ಮೂರು ರಕ್ತಧಾರೆಗಳಲ್ಲಿಒಂದನ್ನು ದೇವಿಯೇ ಕುಡಿಯುತ್ತಾಳೆ. ಉಳಿದ ಎರಡನ್ನು ಆಕೆಯ ಸಹಚರಿಯರು ಕುಡಿಯುತ್ತಾರೆ. ಇದರಲ್ಲಿಒಂದು ವಿಶಿಷ್ಟ ತತ್ತ್ವವಿದೆ. ಶಕ್ತಿಯೇ ತನ್ನಿಂದ ಜೀವವನ್ನು ಸೃಷ್ಟಿಸುತ್ತದೆ, ಅದನ್ನೇ ಪೋಷಿಸುತ್ತದೆ, ಮತ್ತೆ ತನ್ನಲ್ಲಿಯೇ ಅದನ್ನು ಲೀನಗೊಳಿಸಿಕೊಳ್ಳುತ್ತದೆ.

ಯೋಗ ಮತ್ತು ಜೀವನದ ಸಮತೋಲನ

ಕೆಲವು ಯೋಗತಾಂತ್ರಿಕ ವ್ಯಾಖ್ಯಾನಗಳ ಪ್ರಕಾರ, ಬೌದ್ಧರ ಯೋಗಶಾಸ್ತ್ರದಲ್ಲಿ ದೇವಿಯ ಕುತ್ತಿಗೆಯಿಂದ ಚಿಮ್ಮುವ ಮೂರು ರಕ್ತದ ಧಾರೆಗಳು ನಮ್ಮ ದೇಹದ ಇಡಾ, ಪಿಂಗಳಾ ಮತ್ತು ಸುಷುಮ್ನಾ ನಾಡಿಗಳ ಸಂಕೇತವಾಗಿವೆ. ಸುಷುಮ್ನಾ ನಾಡಿಯ ಮೂಲಕ ಕುಂಡಲಿನಿ ಶಕ್ತಿಯು ಮೇಲೇರಿ ಸಹಸ್ರಾರ ಚಕ್ರವನ್ನು ಭೇದಿಸುವ ಕ್ರಿಯೆಯನ್ನೇ ಶಿರಚ್ಛೇದನದ ರೂಪಕವಾಗಿ ತೋರಿಸಲಾಗಿದೆ.

ಕಾಮದ ನಿಯಂತ್ರಣ

ದೇವಿಯು ಅರಳಿದ ಕಮಲದ ಮೇಲೆ ನಿಂತಿದ್ದು, ಆ ಕಮಲದ ಕೆಳಗೆ ರತಿ ಮತ್ತು ಮನ್ಮಥರು ಮಿಲನಕ್ರಿಯೆಯಲ್ಲಿತೊಡಗಿರುವ ಚಿತ್ರಣವಿದೆ. ಕಾಮ ಮತ್ತು ಲೌಕಿಕ ಆಸೆಗಳನ್ನು ಮೆಟ್ಟಿ ನಿಂತಾಗ ಮಾತ್ರ ಆಧ್ಯಾತ್ಮಿಕ ಉನ್ನತಿ ಸಾಧ್ಯ ಎಂಬ ಕಟು ಸತ್ಯವನ್ನು ಇದು ತಿಳಿಸುತ್ತದೆ.

ಸೃಷ್ಟಿ ಮತ್ತು ಲಯದ ಚಕ್ರ

ಪ್ರಕೃತಿಯ ನಿಯಮವೇ ಹಾಗೆ. ಇಲ್ಲಿಒಂದರ ತ್ಯಾಗದಿಂದ ಇನ್ನೊಂದರ ಪೋಷಣೆಯಾಗುತ್ತದೆ. ಸಾವು ಮತ್ತು ಬದುಕು ಒಂದೇ ನಾಣ್ಯದ ಎರಡು ಮುಖಗಳು. ತಾಯಿಯು ತನ್ನ ರಕ್ತವನ್ನೇ ನೀಡಿ ಮಕ್ಕಳನ್ನು ಸಲಹುವಂತೆ, ಪ್ರಕೃತಿಯು ತನ್ನನ್ನು ತಾನು ಸವೆಸಿಕೊಂಡು ಜೀವಸಂಕುಲವನ್ನು ಪೋಷಿಸುತ್ತದೆ. ಛಿನ್ನಮಸ್ತಾ ದೇವಿಯು ಕೇವಲ ಉಗ್ರ ಸ್ವರೂಪಿಯಲ್ಲ, ಆಕೆ ಜೀವನದ ಸತ್ಯವನ್ನು ತೆರೆದಿಡುವ ಮಹಾಶಕ್ತಿ. ತ್ಯಾಗವಿಲ್ಲದೆ ಸೃಷ್ಟಿಯಿಲ್ಲ, ಅಹಂಕಾರದ ನಾಶವಿಲ್ಲದೆ ಮೋಕ್ಷವಿಲ್ಲಎಂಬುದೇ ಈ ಮಹಾವಿದ್ಯೆಯ ಅಂತಿಮ ಸಂದೇಶ.

ಶಿರವನ್ನು ಕಳೆದುಕೊಂಡರೂ ಜ್ಞಾನವನ್ನು ಕಳೆದುಕೊಳ್ಳದ ದೇವಿ

ಭಯಂಕರವಾಗಿ ಕಾಣುವ ಛಿನ್ನಮಸ್ತೆಯ ರೂಪ ಭಯಾನಕವಾಗಿ ಕಾಣಬಹುದು. ಆಕೆ ತನ್ನ ಶಿರವನ್ನು ತಾನೇ ಕತ್ತರಿಸಿಕೊಂಡಿದ್ದರೂ ಆಕೆಯ ಶಕ್ತಿ ಕುಂದಿಲ್ಲ. ಆಕೆಯ ಕಂಠದಿಂದ ಹರಿಯುವ ಜೀವಧಾರೆ ನಿಂತಿಲ್ಲ. ತನ್ನನ್ನೂ ಇತರರನ್ನೂ ಪೋಷಿಸುವ ಶಕ್ತಿಯಾಗಿ ಆಕೆ ನಿಂತಿದ್ದಾಳೆ. ನಾನು ಯಾರು, ನನ್ನ ಅಸ್ತಿತ್ವವೇನು ಎನ್ನುವ ದೇಹದ ಮೇಲಿನ ಅಭಿಮಾನಕ್ಕಿಂತಲೂ ಈ ದೇಹ ಇರುವುದೇ ಪರೋಪಕ್ಕಾರಕ್ಕಾಗಿ ಎನ್ನುವುದನ್ನು ಸಾರುತ್ತದೆ. ‘ಛಿನ್ನಮಸ್ತ ಮಹಾವಿದ್ಯೆ’ ಕರುಣಿಸುವ ಜ್ಞಾನವೆಂದರೆ ಅಹಂಕಾರವನ್ನು ಮೀರುವುದು, ಕಾಮಶಕ್ತಿಯನ್ನು ಆತ್ಮಶಕ್ತಿಯಾಗಿ ಪರಿವರ್ತಿಸಿಕೊಳ್ಳುವುದು ಮತ್ತು ಜೀವಶಕ್ತಿಯ ಮೂಲಸ್ವರೂಪವನ್ನು ಅರಿಯುವುದಾಗಿದೆ.

ಲೇಖಕರು: ಅಧ್ಯಾತ್ಮ ಚಿಂತಕರು