ವಿವಾದಿತ ‘ಬಸವ ಮಂಟಪ’ ಕೃತಿ ಹಾಗೂ ಬಸವಾದಿ ಶರಣರ ತಾತ್ವಿಕತೆಯ ಮೇಲಿನ ದಾಳಿಯ ಹಿಂದಿನ ಷಡ್ಯಂತ್ರವನ್ನು ಬಹಿರಂಗಪಡಿಸಲು ರಾಜ್ಯ ಸರಕಾರ ವಿಶೇಷ ತನಿಖಾ ತಂಡವನ್ನು (ಎಸ್ ಐಟಿ) ರಚಿಸಿ, ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಒತ್ತಾಯಿಸಿದೆ.ನಗರದಲ್ಲಿಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿಮಾತನಾಡಿದ ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭಾ ಹಾಗೂ ಬಸವಪರ ಸಂಘಟನೆಗಳ ಮುಖಂಡರು, ‘‘ರವಿ ಹಂಜ್ ತಮ್ಮ ‘ಬಸವ ಮಂಟಪ’ ಕೃತಿಯಲ್ಲಿಆಧಾರರಹಿತ, ಸತ್ಯಕ್ಕೆ ದೂರವಾದ ಮಾಹಿತಿ ಆಧರಿಸಿ ವಿಶ್ವಗುರು ಬಸವಣ್ಣ ಹಾಗೂ ಮಠಾಧೀಶರನ್ನು ಅವಹೇಳನ ಮಾಡಿದ್ದಾರೆ. ಬಿಜ್ಜಳನ ಆಸ್ತಿ ಕಳವು, ವಿಷಪ್ರಾಶನ ಮೊದಲಾದ ಸುಳ್ಳುಗಳನ್ನು ಬರೆಯಲಾಗಿದೆ. ಸದ್ಯಕ್ಕೆ ಸರಕಾರ ವಿವಾದಿತ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸುವುದು ಸ್ವಾಗತಾರ್ಹ. ಇಂತಹ ಪುಸ್ತಕಗಳ ಲೇಖಕರು, ಪ್ರಕಾಶಕರಿಗೆ ಪ್ರಚೋದನೆ ನೀಡಿರುವುದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ಇದನ್ನು ಬಯಲಿಗೆಳೆಯಲು ಎಸ್ ಐಟಿ ರಚಿಸಬೇಕು,’’ ಎಂದು ಆಗ್ರಹಿಸಿದರು.
‘‘ಕಳೆದ ವರ್ಷ ಆರ್ ಎಸ್ ಎಸ್ ಹಿನ್ನೆಲೆಯುಳ್ಳವರು ಗದಗಿನ ಮಠವೊಂದರ ಮೂಲಕವೇ ಬಸವಣ್ಣ, ಶರಣರು ಹಾಗೂ ವಚನಗಳ ಕುರಿತು ಹಲವು ಅಂಶಗಳನ್ನು ತಿರುಚಿ ‘ವಚನ ದರ್ಶನ’ ಪುಸ್ತಕ ಬಿಡುಗಡೆ ಮಾಡಿಸಿದ್ದರು. ಆರ್ ಎಸ್ ಎಸ್ ನ ಮುದ್ರಣ ಕೇಂದ್ರಗಳಿಂದಲೇ ಇದು ಹೊರಬಂದಿತ್ತು. ಇದಕ್ಕೆ ಪ್ರತಿಯಾಗಿ ಸತ್ಯಾಂಶವನ್ನು ಜನರ ಮುಂದಿಡಲು ‘ವಚನ ದರ್ಶನ ಮಿಥ್ಯೆ ವರ್ಸಸ್ ಸತ್ಯ’ ಎಂಬ ಪುಸ್ತಕವನ್ನು ಹೊರತರಲಾಯಿತು. ಲಿಂಗಾಯತ ಧರ್ಮ ಹಾಗೂ ಶರಣ ಪರಂಪರೆ ತುಳಿಯುವ ಹುನ್ನಾರದ ಹಿಂದೆ ದುಷ್ಟ ಶಕ್ತಿಗಳು ಕೆಲಸ ಮಾಡುತ್ತಿವೆ. ಈಗಿನ ಪ್ರಕರಣದ ಹಿಂದೆಯೂ ಇಂತಹ ಪಾತ್ರವಿರುವ ಅನುಮಾನವಿದೆ,’’ ಎಂದರು.
ಪೌರಾಣಿಕ ಉಲ್ಲೇಖ ತಪ್ಪಾಗಿ ಬಳಕೆ:
ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್ .ಎಂ.ಜಾಮದಾರ್ ಮಾತನಾಡಿ, ‘‘ತಮ್ಮ ಕೃತಿಯಲ್ಲಿಬಿ.ಎಲ್ .ರೈಸ್ ಅವರ ಸಂಶೋಧನೆ, ಜೈನ ಕೃತಿಕಾರರ ಪೌರಾಣಿಕ ಕಥೆಗಳನ್ನು ಆಕರವೆಂದು ಲೇಖಕರು ಹೇಳಿದ್ದಾರೆ. ಆದರೆ, ರೈಸ್ ಅವರು ತಮ್ಮ ಕೃತಿಯಲ್ಲಿಬಸವಣ್ಣನವರ ಕುರಿತು ಇಂತಹ ವಿವಾದಗಳಿವೆ ಎಂದಿದ್ದಾರೆಯೇ ಹೊರತು ಅದೇ ಸತ್ಯ ಎಂದು ಎಲ್ಲಿಯೂ ಹೇಳಿಲ್ಲ. ಹಾಗೆಯೇ ಶಿವಪುರಾಣದಂತಹ ಐತಿಹಾಸಿಕ ದಾಖಲೆ ಬಿಟ್ಟು ಕೇವಲ ಜೈನ ಲೇಖಕರ ಕೃತಿಗಳನ್ನು ಉಲ್ಲೇಖಿಸಿರುವುದು ತಪ್ಪು. ಬಸವಣ್ಣನವರು ಅವತಾರ ಪುರುಷನಲ್ಲ, ಬದಲಾಗಿ ಐತಿಹಾಸಿಕ ಹಿನ್ನೆಲೆಯುಳ್ಳವರು. ಅವರ ಕುರಿತು ವಿವಾದಾತ್ಮಕವಾಗಿ ಬರೆದ ಕೆಲವು ಜೈನ ಕವಿಗಳ ಬರಹ ಹಾಗೂ ಪೌರಾಣಿಕ ಉಲ್ಲೇಖಗಳನ್ನು ತಪ್ಪಾಗಿ ಬಳಸಿಕೊಳ್ಳಲಾಗುತ್ತಿದೆ,’’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘‘ಈ ಹಿಂದೆ ವೀಣಾ ಬನ್ನಂಜೆ ಅವರಿಂದ 12ನೇ ಶತಮಾನದಲ್ಲಿಅನುಭವ ಮಂಟಪವೇ ಇರಲಿಲ್ಲಎಂದು ಹೇಳಿಕೆ ಕೊಡಿಸಲಾಗಿತ್ತು. ಆಗ ಅವರೇ ಕ್ಷಮೆ ಕೇಳಿದ್ದರು. ಆದರೆ, ಈಚೆಗೆ ಪುನಃ ಒಂದು ವಿಡಿಯೊದಲ್ಲಿವಿವಾದಿತ ಹೇಳಿಕೆ ನೀಡಿದ್ದಾರೆ. ಅದಕ್ಕೂ ನಾವು ಶೀಘ್ರ ಪ್ರತ್ಯುತ್ತರ ನೀಡಲಿದ್ದೇವೆ. ಕೆಲ ರಾಜಕಾರಣಿಗಳು ತಮ್ಮ ಇಬ್ಬಗೆ ನೀತಿಯಿಂದ ಹೊರಬಂದು ಸ್ಪಷ್ಟ ನಿಲುವು ತಳೆಯಬೇಕು,’’ ಎಂದು ಹೇಳಿದರು.
ರಾಷ್ಟ್ರೀಯ ಬಸವದಳದ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಮಾತನಾಡಿ, ‘‘ಬಸವಣ್ಣನ ಅವಹೇಳನ ಕುರಿತು ಪುಸ್ತಕ ಪ್ರಕಟಣೆಗೆ ಕುಮ್ಮಕ್ಕು ನೀಡಿದವರು ಕ್ಷಮಗೆ ಅರ್ಹರಲ್ಲ. ಈ ಹೋರಾಟ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ,’’ ಎಂದರು.