ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಶಿಕ್ಷಕರ, ಪದವೀಧರರ ಸಮಾವೇಶ
ಪರಿಷತ್ ಗೆ ಸಜ್ಜನರನ್ನು ಆರಿಸಿ ಕಳಿಸಿ-2965 ಪ್ರಾಧ್ಯಾಪಕರ ಭರ್ತಿ ಶಕ್ತಿ ಸರಕಾರಕ್ಕಿಲ್ಲ: ಜೋಶಿ ಆರೋಪ
ವಿಕ ಸುದ್ದಿಲೋಕ ಹುಬ್ಬಳ್ಳಿ
ವಿಧಾನ ಪರಿಷತ್ ಮತ್ತು ರಾಜ್ಯಸಭೆ ಚಿಂತಕರ ಚಾವಡಿಯಾಗಿದ್ದು, ಇಲ್ಲಿಚಿಂತಕರು, ಸಜ್ಜನರು ಇರಬೇಕು. ಯಾವುದೇ ಕಾರಣಕ್ಕೂ ಕುತಂತ್ರಿ, ಗೂಂಡಾಗಿರಿ ಪ್ರವೃತ್ತಿ ಹೊಂದಿದವರನ್ನು ಕಳಿಸಬಾರದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದಲ್ಲಿಬಿಜೆಪಿಯಿಂದ ಹೆಬಸೂರ ಭವನದಲ್ಲಿಭಾನುವಾರ ಆಯೋಜಿಸಿದ್ದ ಪಶ್ಚಿಮ ಪದವೀಧರರ ಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳ ಶಿಕ್ಷಕರ ಹಾಗೂ ಪದವೀಧರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಬಸವರಾಜ ಹೊರಟ್ಟಿ ಅವರ ಹಿರಿತನವನ್ನು ಪರಿಗಣಿಸದೇ, ಸಿಎಂ, ಪಕ್ಷದ ಅಧ್ಯಕ್ಷರು ಹಾಗೂ 20 ಎಂಎಲ್ ಸಿಗಳು ಗೂಂಡಾಗಿರಿ ಮಾಡುವ ಮೂಲಕ ಹೊರಟ್ಟಿ ಅವರನ್ನು ಪರಿಷತ್ ಸಭಾಪತಿ ಸ್ಥಾನದಿಂದ ಕೆಳಗಿಳಿಸಿದರು. ಈಗ ಅದರ ವಿರುದ್ಧ ಸೇಡು ತೀರಿಸಿಕೊಳ್ಳುವ ಅವಕಾಶ ಶಿಕ್ಷಕರು ಮತ್ತು ಪದವೀಧರರಿಗೆ ಬಂದಿದೆ ಎಂದರು.
ರಾಜ್ಯದ 31 ವಿಶ್ವವಿದ್ಯಾಲಯಗಳಲ್ಲಿ2965 ಪ್ರಾಧ್ಯಾಪಕರ ಹುದ್ದೆಗಳು ಖಾಲಿ ಇದ್ದರೂ, ಅವನ್ನು ಭರ್ತಿ ಮಾಡುವ ಶಕ್ತಿ ರಾಜ್ಯ ಸರಕಾರಕ್ಕಿಲ್ಲ. 11 ವಿವಿಗಳಲ್ಲಿಒಬ್ಬರೂ ಕಾಯಂ ಪ್ರಾಧ್ಯಾಪಕರಿಲ್ಲ, ಕಸ ಹೊಡೆಯುವವರಿಲ್ಲ. ಈ ಸ್ಥಿತಿಗೆ ರಾಜ್ಯ ಕಾಂಗ್ರೆಸ್ ಬಂದು ತಲುಪಿದೆ. ಈಗಾಗಲೇ ಹಣಕಾಸು ಇಲಾಖೆ ಕ್ಯಾಬಿನೆಟ್ ಗೆ ಹಣ ಇಲ್ಲಎಂದು ಪತ್ರ ಬರೆದಿದೆಯಲ್ಲದೇ, ಯಾವುದೇ ಹೊಸ ಯೋಜನೆಗೆ ಅನುದಾನ ನೀಡಲು ಹಣ ಇಲ್ಲಎಂದು ಹೇಳಿದೆ. ಹೀಗಾಗಿ ಆರ್ಥಿಕವಾಗಿ ದಿವಾಳಿ ಎದ್ದಿರುವ ರಾಜ್ಯ ಸರಕಾರ, ಏನೇ ಮಾತನಾಡಿದರೂ ಕೇಂದ್ರ ಸರಕಾರ ಎನ್ನುತ್ತಿದೆ ಎಂದು ಕಿಡಿಕಾರಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಶಿಕ್ಷಕರು ಎಲ್ಲಭಿನ್ನಾಭಿಪ್ರಾಯಗಳನ್ನು ಮರೆತು ಪ್ರಸ್ತುತ ಚುನಾವಣೆಯಲ್ಲಿಎಸ್ .ವಿ. ಸಂಕನೂರ ಅವರನ್ನು ಗೆಲ್ಲಿಸಲು ಶ್ರಮಿಸಬೇಕು. ಒಂದೊಂದು ಮತವು ಮುಖ್ಯವಾಗಿದ್ದು, ಶಿಕ್ಷಕರು, ಪದವೀಧರರ ಮತಗಳು ಕುಲಗೆಡಬಾರದು. ಈ ನಿಟ್ಟಿನಲ್ಲಿಶಿಕ್ಷಕರು ಸ್ಥಳೀಯವಾಗಿರುವ ಪದವೀಧರರಿಗೆ ತರಬೇತಿ, ಅಭ್ಯರ್ಥಿ ಪರ ಪ್ರಚಾರ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಬೇಕು. ಈ ನಿಟ್ಟಿನಲ್ಲಿಶಿಕ್ಷಕರ ತಾಲೂಕು, ಜಿಲ್ಲಾಸಂಘಟನೆಗಳು ನಿತ್ಯವು ವರದಿ ಕೊಡಬೇಕು ಎಂದು ಹೇಳಿದರು.
ಅನುದಾನಿತ, ಅನುದಾನ ರಹಿತ, ಸರಕಾರಿ ಶಾಲಾ ಶಿಕ್ಷಕರ ಬೇಡಿಕೆ ಈಡೇರಿಕೆಗೆ ನವೆಂಬರ್ 18ರಂದು ಶಾಲೆಗಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲು ಕರೆ ನೀಡಲಾಗಿದೆ. ನಮ್ಮ ಸಂಘಟನೆಯೇ ನಮ್ಮ ಶಕ್ತಿಯಾಗಿದ್ದು, ಹೋರಾಟದ ಮೂಲಕ ನಮ್ಮ ಹಕ್ಕು ಪಡೆಯೋಣ. ಹಾಗೆಯೇ ಈ ಚುನಾವಣೆಯಲ್ಲಿನಮ್ಮ ಸಂಘಟನೆಯಿಂದ ಹೆಚ್ಚಿನ ಕೆಲಸ ಆಗಬೇಕಿದೆ. ಈ ಗೆಲುವಿನಲ್ಲಿಸಲ್ಪ ವ್ಯತ್ಯಾಸ ಉಂಟಾದರೂ, ಸಂಘಟನೆ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಸಂಘಟನೆಯ ಎಲ್ಲಪದಾಧಿಕಾರಿಗಳು ನಾನೇ ಚುನಾವಣೆಗೆ ನಿಂತಿದ್ದೇನೆ ಎಂದು ಪ್ರಚಾರ ನಡೆಸಿ ಸಂಕನೂರ ಅವರನ್ನು ಗೆಲ್ಲಿಸಬೇಕು ಎಂದರು.
ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ .ವಿ.ಸಂಕನೂರ ಮಾತನಾಡಿ, ಶಿಕ್ಷಕರು, ಪದವೀಧರರ ಸಮಸ್ಯೆಗಳನ್ನು ಸಮರ್ಥವಾಗಿ ಸದನದಲ್ಲಿಮಂಡಿಸುವ ಜತೆಗೆ ಅವರ ಪರ ಹೋರಾಟ ಮಾಡಿದ್ದೇನೆ. 10 ವರ್ಷಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನಿವೃತ್ತಿಗೊಂಡ ಹುದ್ದೆ ಭರ್ತಿಗೆ ಕ್ರಮ ವಹಿಸಿರಲಿಲ್ಲ. ಈ ಬಗ್ಗೆ ಸದನದಲ್ಲಿ3 ಬಾರಿ ಪ್ರಶ್ನಿಸಿದ್ದಲ್ಲದೇ, ಧರಣಿ ಕುಳಿತುಕೊಳ್ಳುತೇನೆಂದು ಹೇಳಿದ್ದೆ. ಇದಾದ ಬಳಿಕ 2016-20ರ ಅವಧಿ ಹುದ್ದೆಗಳ ಭರ್ತಿಗೆ ಸರಕಾರ ಆದೇಶ ಮಾಡಿದೆ ಎಂದರು.
ಇನ್ನೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿಶೇ.60ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳ ಶಿಕ್ಷಕರ ವೇತನ ಹೆಚ್ಚಳ ತಡೆ, ಸಂಬಳ ಕಡಿತ, ಗ್ರ್ಯಾಂಟ್ ಹಿಂಪಡೆಯುವುದಾಗಿ ಅವೈಜ್ಞಾನಿಕ ಆದೇಶವನ್ನು ಸರಕಾರ ಹೊರಡಿಸಿತ್ತು. ಇದರ ಬಗ್ಗೆ ಸದನದಲ್ಲಿಮನವರಿಕೆ ಜತೆಗೆ ಹೋರಾಟದ ಎಚ್ಚರಿಕೆ ನೀಡಿದ ನಂತರ ಸರಕಾರ ಅವೈಜ್ಞಾನಿಕ ಆದೇಶವನ್ನು ವಾಪಸ್ ಪಡೆಯಿತು. ಇನ್ನೂ ಶಿಕ್ಷಕೇತರ ಮತ್ತು 2006ರ ನಂತರ ನೇಮಕಗೊಂಡ ನೌಕರರಿಗೆ ಒಪಿಎಸ್ ನೀಡಬೇಕೆಂಬುದರ ಬಗ್ಗೆ ಸದನದಲ್ಲಿಮಂಡಿಸಿದ್ದು, ಈ ಬಗ್ಗೆ ತಮ್ಮ ಬೆಂಬಲಕ್ಕೆ ಇರುತ್ತೇನೆ ಎಂದು ಭರವಸೆ ನೀಡಿದರು.
ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶಾಸಕ ಎಂ.ಆರ್ .ಪಾಟೀಲ, ಕೆಎಲ್ ಇ ಸಂಸ್ಥೆ ಮಾಜಿ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಜಿ.ಆರ್ .ಭಟ್ , ಸಂದೀಪ ಬೂದಿಹಾಳ, ಎಚ್ .ಪಿ.ಬಣಕಾರ, ಜಗದೀಶ ದ್ಯಾವಕ್ಕನವರ, ವಿಶ್ವನಾಥ ಕೊರವಿ ಸೇರಿದಂತೆ ಇತರರು ಇದ್ದರು.
ಬಾಕ್ಸ್ ..
ರಾಹುಲ್ ಯಂಗ್ ಮ್ಯಾನ್ ಹೇಗೆ?
ದೇಶದಲ್ಲಿಎಸ್ ಐಆರ್ ವಿವಾದ ಎಬ್ಬಿಸಿದ ರಾಹುಲ್ ಗಾಂಧಿ ಅವರು ನನಗಿಂತ 5-6 ವರ್ಷ ಸಣ್ಣವರಿರಬಹುದಷ್ಟೇ. ಆದರೂ ಕಾಂಗ್ರೆಸ್ಸಿಗರು ಅವರಿಗೆ ಯಂಗ್ ಮ್ಯಾನ್ ಎನ್ನುತ್ತಾರೆ. ಎಸ್ ಐಆರ್ ಪ್ರಕ್ರಿಯೆ ಆರಂಭಗೊಂಡ ನಂತರ ನುಸುಳುಕೋರರು ಓಡಿ ಹೋಗಿದ್ದಾರೆ. ಅವರ ರಕ್ಷಣೆಗೆ ಇವರು ಹೋರಾಟ ನಡೆಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ದೂರಿದರು.
ಫೋಟೋ: 11 ಸಂತೋಷ ಬಿಜೆಪಿ
ಹುಬ್ಬಳ್ಳಿಯ ಹೆಬಸೂರ ಭವನದಲ್ಲಿನಡೆದ ಶಿಕ್ಷಕರ ಹಾಗೂ ಪದವೀಧರರ ಸಮಾವೇಶದಲ್ಲಿಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿದರು.