The Need For Charity And Religion In A Just Society
ಪುಟ 8 - ಪ್ರಬಂಧ
Contributed by: Jaya shree|Vijaya Karnataka•
ನ್ಯಾಯಯುತ ಸಮಾಜಕ್ಕೆ ದಾನ-ಧರ್ಮದ ಅಗತ್ಯ
ಇಂಟ್ರೊ ನ್ಯಾಯ ಮತ್ತು ದಾನ-ಧರ್ಮಗಳು ಯಾವುದೇ ನಾಗರಿಕ ಸಮಾಜದ ಎರಡು ಮೂಲಭೂತ ಸ್ತಂಭಗಳಾಗಿವೆ. ನ್ಯಾಯವು ಸಮಾಜದ ಎಲ್ಲಾಸದಸ್ಯರಿಗೆ ಸಮಾನ ಅವಕಾಶಗಳನ್ನು, ಸಂಪನ್ಮೂಲಗಳನ್ನು ಒದಗಿಸಲು ಪ್ರಯತ್ನಿಸಿದರೆ, ದಾನ-ಧರ್ಮವು ಸಂಕಷ್ಟದಲ್ಲಿರುವವರ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿರುತ್ತದೆ. ಯಾವ ಸಮಾಜ ನ್ಯಾಯದಿಂದ ಕೂಡಿದೆಯೋ ಅಲ್ಲಿದಾನ-ಧರ್ಮದ ಅಗತ್ಯತೆ ಕಡಿಮೆ ಇರುತ್ತದೆ.
-------------
ನ್ಯಾಯಯುತ ಸಮಾಜದ ಸ್ಥಾಪನೆ ಎಲ್ಲಿಂದ ಮತ್ತು ಯಾರಿಂದ ಆರಂಭವಾಗಬೇಕು ಎಂಬ ಪ್ರಶ್ನೆಗೆ ಪ್ಲೇಟೋ ಹೇಳಿರುವ ‘‘ರಾಷ್ಟ್ರದ ಜೀವನ ಮತ್ತು ನಡವಳಿಕೆಯಲ್ಲಿನ್ಯಾಯವು ನೆಲೆಗೊಳ್ಳಬೇಕಾದರೆ, ಮೊದಲು ಅದು ನಾಗರಿಕರ ಹೃದಯ ಮತ್ತು ಆತ್ಮಗಳಲ್ಲಿನೆಲೆಗೊಂಡಿರಬೇಕು’’ ಎಂಬ ಮಾತಿನಲ್ಲಿನಾವು ಉತ್ತರವನ್ನು ಕಂಡುಕೊಳ್ಳಬಹುದು. ಒಂದು ಸಮಾಜ ಹೆಚ್ಚು ನ್ಯಾಯ ಅಥವಾ ಸಮಾನತೆಯಿಂದ ಕೂಡಿದೆ; ಅಥವಾ ಆ ಸಮಾಜ ಹೆಚ್ಚು ಅನ್ಯಾಯ ಅಥವಾ ಅಸಮಾನತೆಯಿಂದ ಕೂಡಿದೆ ಎಂದರೆ ಆ ಸಮಾಜದ ಜನರೇ ಅದಕ್ಕೆ ಕಾರಣ ಎಂಬುದು ಪ್ಲೇಟೋನ ಮಾತಿನಿಂದ ಮನವರಿಕೆಯಾಗುತ್ತದೆ.
ಜಗತ್ತಿನ ಎಲ್ಲಾಸಮಾಜಗಳು ವಿವಿಧ ಕಾಲಘಟ್ಟಗಳಲ್ಲಿಹೆಚ್ಚಿನ ನ್ಯಾಯ ಅಥವಾ ಅನ್ಯಾಯದಿಂದ ಕೂಡಿರುವುದನ್ನು ಕಾಣುತ್ತೇವೆ. ಇಲ್ಲಿನ್ಯಾಯ ಎಂದರೆ ರಾಷ್ಟ್ರದ ಸಂಪನ್ಮೂಲಗಳು, ಅವಕಾಶಗಳು ಎಲ್ಲರಿಗೂ ಸಮಾನವಾಗಿ ಲಭ್ಯವಿವೆ ಎಂದರ್ಥ. ಹಾಗೆಯೇ, ಅನ್ಯಾಯ ಎಂದರೆ ರಾಷ್ಟ್ರದ ಸಂಪನ್ಮೂಲಗಳನ್ನು, ಅವಕಾಶಗಳನ್ನು ಕೆಲವೇ ಕೆಲವು ಬಲಿಷ್ಠರು ಬಾಚಿಕೊಂಡಿದ್ದಾರೆ ಎಂದರ್ಥ. ನೈಸರ್ಗಿಕ ನ್ಯಾಯದ ಪ್ರಕಾರ, ಇಡೀ ಮಾನವ ಕುಲ ಜಗತ್ತಿನ ಎಲ್ಲಸಂಪನ್ಮೂಲಗಳ ಮೇಲೆ ಸಮಾನ ಒಡೆತನವನ್ನು ಹೊಂದಿರಬೇಕು. ಆದರೆ ಕೆಲವರ ಸ್ವಾರ್ಥ, ದುರಾಸೆಗಳು ಈ ನ್ಯಾಯದ ತಕ್ಕಡಿಯನ್ನು ಅಸಮತೋಲನಗೊಳಿಸುತ್ತವೆ. ಗಾಂಧೀಜಿಯವರು ಹೇಳಿದ ‘ಪ್ರತಿಯೊಬ್ಬರ ಅಗತ್ಯಗಳನ್ನು ಪೂರೈಸಲು ಜಗತ್ತಿನಲ್ಲಿಸಾಕಷ್ಟು ಸಂಪನ್ಮೂಲಗಳಿವೆ, ಆದರೆ ಪ್ರತಿಯೊಬ್ಬರ ದುರಾಸೆಯನ್ನು ಪೂರೈಸಲು ಅಲ್ಲ’ ಎಂಬ ಮಾತನ್ನು ನಾವು ಈ ಸಂದರ್ಭದಲ್ಲಿಗಮನಿಸಬೇಕು.
ಅನ್ಯಾಯಯುತ ಸಮಾಜಗಳನ್ನು ನ್ಯಾಯಯುತ ಸಮಾಜಗಳನ್ನಾಗಿಸುವ ಪ್ರಯತ್ನವನ್ನು ಮೊದಲಿನಿಂದಲೂ ವಿವಿಧ ರೀತಿಯಲ್ಲಿಮಾಡುತ್ತ ಬರಲಾಗಿದೆ. ಸಮಾನತೆಯ ಹರಿಕಾರನಾದ ಬಸವಣ್ಣ ಈ ನಿಟ್ಟಿನಲ್ಲಿಅಗ್ರಗಣ್ಯ ಐತಿಹಾಸಿಕ ವ್ಯಕ್ತಿಯೆಂದು ಹೇಳಬಹುದು. ಬಿಜ್ಜಳನ ಹಣಕಾಸು ಸಚಿವನಾಗಿದ್ದ ಬಸವಣ್ಣ ಭಂಡಾರದಲ್ಲಿರುವುದೆಲ್ಲಜನರಿಗೇ ಸೇರಿದ್ದು ಎಂಬ ಸ್ಪಷ್ಟ ವಿಚಾರಧಾರೆಯನ್ನು ಹೊಂದಿದ್ದ. ಬೇಡಿದವರಿಗೆ ಬೇಡಿದ್ದನ್ನು ನೀಡುವ ಶಪಥ ಮಾಡಿದ್ದ. ಅವನ ಪ್ರಯತ್ನದಿಂದಾಗಿ ಸಮಾಜ ನ್ಯಾಯದ ಯಾವ ಹಂತವನ್ನು ತಲುಪಿತ್ತೆಂದರೆ; ಸ್ವತಃ ಬಸವಣ್ಣ ತನ್ನ ಒಂದು ವಚನದಲ್ಲಿ‘‘ಬೇಡುವವರಿಲ್ಲದೆ ಬಡವನಾದೆನಯ್ಯ ಎನ್ನ, ಕಾಡುವ ಬೇಡುವ ಶರಣರ ತಂದು ಕಾಡಿಸು ಬೇಡಿಸಯ್ಯ, ಕೂಡಲಸಂಗಮದೇವ’’ ಎಂದು ಮೊರೆಯಿಡುತ್ತಾನೆ. ‘ನ್ಯಾಯಯುತವಾದ ಸಮಾಜದಲ್ಲಿದಾನ-ಧರ್ಮದ ಅಗತ್ಯವಿಲ್ಲ’ ಎಂಬುದಕ್ಕೆ ಬಸವಣ್ಣನ ಕಾಲದ ಸಮಾಜ ಹೆಚ್ಚು ಸೂಕ್ತ ಉದಾಹರಣೆಯಾಗಿದೆ. ಅದಕ್ಕೆ ಮುಖ್ಯ ಕಾರಣಗಳು ಎರಡು. ಅಗತ್ಯಕ್ಕೆ ತಕ್ಕಷ್ಟು ಮಾತ್ರ ಸಂಪಾದಿಸಬೇಕು/ಸಂಗ್ರಹಿಸಬೇಕು ಎಂಬುದು ಮೊದಲನೆಯದಾದರೆ, ಅಗತ್ಯಕ್ಕಿಂತ ಹೆಚ್ಚಾಗಿರುವುದನ್ನು ದಾಸೋಹದ ಮೂಲಕ ಸಮಾಜದಲ್ಲಿಹಂಚಬೇಕು ಎಂಬುದು ಎರಡನೇಯದು.
ಭಾರತೀಯ ಪರಂಪರೆಯಲ್ಲಿನ್ಯಾಯಯುತ ಸಮಾಜ ಸ್ಥಾಪನೆಗೆ ನಿರಂತರ ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಹಲವು ರಾಜರು ಬೇಡಿದವರಿಗೆ ಬೇಡಿದ್ದನ್ನು ನೀಡುವ ಕೈಂಕರ್ಯ ಕೈಗೊಂಡಿದ್ದನ್ನು ನೋಡುತ್ತೇವೆ. ಉದಾಹರಣೆಗೆ, ಬಲಿ ಚಕ್ರವರ್ತಿಯು ಬೇಡಿದವರಿಗೆ ಬೇಡಿದ್ದನ್ನೆಲ್ಲಕೊಡುತ್ತಿರುತ್ತಾನೆ. ಅಂತಹ ಧರ್ಮಶೀಲನು ವಾಮನನಿಂದ ಪಾತಾಳಕ್ಕೆ ತಳ್ಳಲ್ಪಟ್ಟದ್ದು ಒಂದು ವಿಪರ್ಯಾಸವೂ ಹೌದು! ಇಂಥದೇ ವೃತವನ್ನು ಕೈಗೊಂಡ ಹರಿಶ್ಚಂದ್ರನು ಸುಡಗಾಡು ಕಾಯುವಂಥಾದದ್ದು ಮತ್ತೊಂದು ವಿಪರ್ಯಾಸ!
ಇಂದಿನ ಕಾಲದಲ್ಲಿನಾವು ನ್ಯಾಯಯುತ ಸಮಾಜ ಸ್ಥಾಪಿಸಬೇಕಾದಲ್ಲಿಕಾನೂನಿನ ಆಳ್ವಿಕೆ ಮೊದಲ ಅಗತ್ಯತೆಯಾಗಿದೆ. ಸಮಾಜದ ಎಲ್ಲಾಸದಸ್ಯರಿಗೆ ಶಿಕ್ಷಣ, ಉದ್ಯೋಗ, ಆರೋಗ್ಯ ರಕ್ಷಣೆ ಹಾಗೂ ಇತರ ಅಗತ್ಯ ಸೇವೆಗಳ ಸಮಾನ ಲಭ್ಯತೆಯನ್ನು ಖಚಿತಪಡಿಸಬೇಕಾಗಿದೆ. ನ್ಯಾಯವು ನೆಲೆಗೊಂಡಾಗ, ಅದು ಸಂಪತ್ತು, ಅಧಿಕಾರ ಮತ್ತು ಸವಲತ್ತುಗಳಲ್ಲಿನ ಅಸಮಾನತೆಯನ್ನು ಕಡಿಮೆ ಮಾಡಿ, ಹೆಚ್ಚು ಸಮಾನತೆಯುಳ್ಳ ಸಮಾಜವನ್ನು ಸೃಷ್ಟಿಸುತ್ತದೆ.
ಭಾರತದ ಇಂದಿನ ಸಮಾಜವನ್ನು ಮುನ್ನಡೆಸುತ್ತಿರುವ ಸಂವಿಧಾನವು ನ್ಯಾಯದ ನೆಲೆಯಲ್ಲಿಸಮಾಜ ಸ್ಥಾಪನೆಗೆ ಹಲವಾರು ನಿಬಂಧನೆಗಳನ್ನು ಮಾಡಿದೆ. ಯಾವುದೇ ವ್ಯಕ್ತಿಯ ಜಾತಿ, ಧರ್ಮ, ಜನಾಂಗ, ಲಿಂಗ ಅಥವಾ ಹುಟ್ಟಿನ ಸ್ಥಳದ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡದೇ ಎಲ್ಲರಿಗೂ ಸಮಾನ ಅವಕಾಶಗಳು ದೊರೆಯಬೇಕು ಎಂಬುದು ಜನರ ಮೂಲಭೂತ ಹಕ್ಕಾಗಿದೆ. ಎಲ್ಲರ ಕಲ್ಯಾಣವೇ ಸಂವಿಧಾನದ ಗುರಿಯಾಗಿದೆ ಎಂಬುದಕ್ಕೆ ರಾಜ್ಯ ನೀತಿ ನಿರ್ದೇಶಕ ತತ್ವಗಳು ಉದಾಹರಣೆಗಳಾಗಿವೆ. ಸಂವಿಧಾನ ಜಾರಿಗೊಂಡಾಗಿನಿಂದ ಎಲ್ಲಸರಕಾರಗಳು ಸಮಾನತೆಯ ಅಥವಾ ನ್ಯಾಯಯುತ ಸಮಾಜ ಸ್ಥಾಪನೆಗೆ ನೂರಾರು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಲೇ ಬಂದಿವೆ. ಇವೆಲ್ಲಪ್ರಯತ್ನಗಳು ಭಾರತೀಯ ಸಮಾಜವನ್ನು ಮೊದಲಿಗಿಂತ ಹೆಚ್ಚು ನ್ಯಾಯಯುತವನ್ನಾಗಿಸಿವೆ ಎಂಬುದರಲ್ಲಿಎರಡು ಮಾತಿಲ್ಲ. ಮೊದಲಿನಷ್ಟು ಬಡತನವಿಲ್ಲ; ಹಸಿವಿನಿಂದ ಬಳಲುವವರಿಲ್ಲ; ಅವಲಂಬಿತರಿಲ್ಲಎಂಬುದು ಸ್ಪಷ್ಟವಾಗಿದೆ.
ಆದರೆ, ಮತ್ತೊಂದೆಡೆ ಕಂಡದ್ದೆಲ್ಲತನ್ನದಾಗಬೇಕೆಂಬ ಹಪಾಪಿತನ, ಸಾರ್ವಜನಿಕ ಜೀವನದಲ್ಲಿರುವವರಿಂದ ಅಪರಿಮಿತ ಭ್ರಷ್ಟಾಚಾರ ಮತ್ತು ಗ್ರಾಹಕರನ್ನು ಸಾಧ್ಯವಿದ್ದಷ್ಟೂ ಶೋಷಿಸಬೇಕೆನ್ನುವ ಉದ್ಯಮ-ವ್ಯಾಪಾರಿ ವರ್ಗದ ಮನೋಭಾವ ಭಾರತೀಯ ಸಮಾಜವನ್ನು ಹೆಚ್ಚು ಅಸಮಾನತೆಯತ್ತ, ಅನ್ಯಾಯದತ್ತ ಕೊಂಡೊಯ್ಯುತ್ತಿವೆ. ‘‘ವಿಶ್ವ ಅಸಮಾನತೆ ವರದಿ 2026ರ ಪ್ರಕಾರ, ಸಂಪತ್ತು ಮತ್ತು ಆದಾಯದ ಕೇಂದ್ರೀಕರಣದ ವಿಷಯದಲ್ಲಿಭಾರತವು ವಿಶ್ವದ ಅತ್ಯಂತ ಅಸಮಾನ ದೇಶಗಳ ಪಟ್ಟಿಯಲ್ಲಿಸ್ಥಾನ ಪಡೆದಿದೆ. ಇಲ್ಲಿನ ಅತ್ಯುನ್ನತ ಶೇ. 10ರಷ್ಟು ಜನರು ರಾಷ್ಟ್ರೀಯ ಆದಾಯದ ಶೇ. 58ರಷ್ಟು ಪಾಲನ್ನು ಮತ್ತು ಒಟ್ಟು ಸಂಪತ್ತಿನ ಶೇ. 65ರಷ್ಟನ್ನು ಹೊಂದಿದ್ದಾರೆ; ಆದರೆ ಕೆಳವರ್ಗದ ಶೇ. 50ರಷ್ಟು ಜನರು ಕೇವಲ ಶೇ. 15ರಷ್ಟು ಆದಾಯವನ್ನು ಮಾತ್ರ ಪಡೆಯುತ್ತಾರೆ. ಅಲ್ಲದೇ ಕೇವಲ ಶೇ. 1ರಷ್ಟು ಜನರು ಶೇ. 40ರಷ್ಟು ಸಂಪತ್ತನ್ನು ಹೊಂದಿದ್ದಾರೆ ಎಂಬ ಸಂಗತಿಯು ಮೇಲಿನ ವಿಚಾರವನ್ನು ಪುಷ್ಠೀಕರಿಸುತ್ತದೆ.
ಉಪಸಂಹಾರ
ನ್ಯಾಯವು ಒಂದು ಉದಾತ್ತ ಗುರಿಯಾಗಿದ್ದರೂ, ಯಾವುದೇ ಸಮಾಜವು ಎಲ್ಲಾಅನ್ಯಾಯಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲಎಂಬುದನ್ನು ಒಪ್ಪಿಕೊಳ್ಳುವುದು ಮುಖ್ಯ. ಅನಿರೀಕ್ಷಿತ ಸಂದರ್ಭಗಳು ಅಥವಾ ವ್ಯವಸ್ಥೆಯ ವೈಫಲ್ಯಗಳಿಂದಾಗಿ ಸಹಾಯದ ಅಗತ್ಯವಿರುವ ವ್ಯಕ್ತಿಗಳು ಯಾವಾಗಲೂ ಇರುತ್ತಾರೆ. ಅವಕಾಶ ವಂಚಿತರಾಗಿ ಸಂಕಷ್ಟಕ್ಕೆ ಸಿಲುಕಿದವರಿಗೆ, ದತ್ತಿ ಕಾರ್ಯಗಳು ಒಂದು ರಕ್ಷಣಾ ಕವಚದಂತೆ ಕಾರ್ಯನಿರ್ವಹಿಸುತ್ತವೆ. ನೈಸರ್ಗಿಕ ವಿಕೋಪಗಳು, ಸಾಂಕ್ರಾಮಿಕ ರೋಗಗಳು ಮತ್ತು ಅನಿರೀಕ್ಷಿತ ವೈಯಕ್ತಿಕ ಬಿಕ್ಕಟ್ಟುಗಳಂತಹ ತುರ್ತು ಸಂದರ್ಭಗಳಲ್ಲಿದಾನ-ದತ್ತಿ ಸಂಸ್ಥೆಗಳು ನಿರ್ಣಾಯಕ ಪಾತ್ರವಹಿಸುತ್ತವೆ. ಹೆಚ್ಚು ನ್ಯಾಯಯುತವಾದ ಸಮಾಜದಲ್ಲಿಇಂತಹ ತುರ್ತು ಪರಿಸ್ಥಿತಿಗಳ ತೀವ್ರತೆ ಕಡಿಮೆಯಾಗಬಹುದು; ಅಷ್ಟೇ! ಯಾವುದೇ ಸಮಾಜದ ಮೌಲ್ಯವನ್ನು, ಅದು ತನ್ನ ಅತ್ಯಂತ ದುರ್ಬಲ ಸದಸ್ಯರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದರ ಮೂಲಕ ಅಳೆಯಬಹುದು’ ಎಂಬ ಗಾಂಧೀಜಿಯವರ ಮಾತು ಪ್ರಸ್ತುತವೆನಿಸುತ್ತದೆ.