** (ನುಡಿ ನಮನ) ಡಾ.ಶ್ರೀಕೃಷ್ಣ ಭಟ್ ಅರ್ತಿಕಜೆ- ವಿದ್ವತ್ತಿಗಿಂತ ದೊಡ್ಡ ಮನುಷ್ಯತ್ವ !

Contributed by: sudhakara.kannadamoole@timesofindia.com|Vijaya Karnataka•
dr shreekrishna bhatt artikaje honor and humanity
ಮದ್ರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ, ವಿಭಾಗದ ಮುಖ್ಯಸ್ಥರಾಗಿದ್ದ ಡಾ.ಶ್ರೀಕೃಷ್ಣ ಭಟ್ ಅರ್ತಿಕಜೆ ಅವರನ್ನು ನೆನಪಿಸಿಕೊಳ್ಳುವಾಗ ನನಗೆ ಮೊದಲು ನೆನಪಾಗುವುದು ಅವರ ವಿದ್ವತ್ತಲ್ಲ; ಅವರ ಮನುಷ್ಯತ್ವ.

ಮೂರು ದಶಕಗಳ ಹಿಂದಿನ ಮಾತು. ಕನ್ನಡ ಎಂ.ಎ. ಪದವಿಗಾಗಿ ದೂರದ ಮದ್ರಾಸಿಗೆ ನಾನು ಹೋದಾಗ, ರೈಲ್ವೆ ನಿಲ್ದಾಣದಿಂದ ನಮ್ಮನ್ನು ಕರೆದುಕೊಂಡು ಹೋಗಿ ಕೆಲವು ದಿನ ತಮ್ಮ ಮನೆಯಲ್ಲಿಯೇ ಇರಿಸಿಕೊಂಡವರು ಅರ್ತಿಕಜೆ. ಅಪರಿಚಿತ ನಗರದಲ್ಲಿಓದಲು ಬಂದಿದ್ದ ಹಳ್ಳಿಯ ನಾಟಿ ಮನಸಿನ ನನಗೆ ಅವರು ಕೊಟ್ಟದ್ದು ವಸತಿ ಮಾತ್ರವಲ್ಲ, ಒಂದು ಮಾನಸಿಕ ಧೈರ್ಯ. ಆಗಾಗ ವಿಭಾಗದಿಂದ ತಮ್ಮ ಮನೆಗೆ ಕರೆಸಿ ಊರಿನ ಕುಚ್ಚಲಕ್ಕಿ ಊಟ ಹಾಕುತ್ತಿದ್ದರು. ಈ ಕಾರಣಕ್ಕೆ ದೂರದ ಕರ್ನಾಟಕದಿಂದ ಮದ್ರಾಸಿಗೆ ಬಂದಿದ್ದ ನನ್ನಂತ ವಿದ್ಯಾರ್ಥಿಗಳಿಗೆ ಅವರು ಕೇವಲ ಅಧ್ಯಾಪಕರಾಗಿರಲಿಲ್ಲ; ತಮ್ಮವರೇ ಆಗಿದ್ದರು. ಮದ್ರಾಸಿನಂಥ ಹೊರನಾಡಿನಲ್ಲಿಕನ್ನಡ ಓದುತ್ತಿದ್ದ ಮಕ್ಕಳಿಗೂ, ಕನ್ನಡ ವಿಭಾಗಕ್ಕೂ, ಒಂದು ಮನೆಯ ಆತ್ಮೀಯತೆಯನ್ನು ಅವರು ಕಟ್ಟಿಕೊಟ್ಟಿದ್ದರು.
ಮದ್ರಾಸಿನ ಕರ್ನಾಟಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತಿನ ಚೆನ್ನೈ ಘಟಕ, ಹವ್ಯಕ ಸಂಘ, ತಮಿಳುನಾಡಿನ ಕನ್ನಡ ಪಠ್ಯಪುಸ್ತಕ ರಚನಾ ಸಮಿತಿ, ಕನ್ನಡ ಭಾಷಾ ಸಲಹಾ ಸಮಿತಿ, ಕನ್ನಡ ಚಲನಚಿತ್ರ ಸೆನ್ಸಾರ್ ಮಂಡಳಿ ಹೀಗೆ ಹಲವು ಸಂಸ್ಥೆಗಳಲ್ಲಿಅವರು ಹೊಣೆಗಾರಿಕೆ ನಿರ್ವಹಿಸಿದರು. ಮದ್ರಾಸಿನ ಲಹರಿ ಕನ್ನಡ ಪತ್ರಿಕೆಯ ಸಂಪಾದಕರಾಗಿಯೂ ಕೆಲಸ ಮಾಡಿದರು. ಹೊರನಾಡಿನಲ್ಲಿಕನ್ನಡವನ್ನು ಕೇವಲ ಒಂದು ಭಾಷೆಯಾಗಿ ಉಳಿಸದೆ, ಒಂದು ಸಾಂಸ್ಕೃತಿಕ ನೆಲೆಯಾಗಿ ಉಳಿಸುವ ಕೆಲಸದಲ್ಲಿಅವರ ಪಾತ್ರ ಗಮನಾರ್ಹ.

ಅವರ ವಿದ್ವತ್ತಿನ ವ್ಯಾಪ್ತಿಯೂ ದೊಡ್ಡದು. ಕನ್ನಡದ ಜತೆಗೆ ತಮಿಳು, ಮಲಯಾಳಂ, ಹಿಂದಿ, ಹವ್ಯಕ, ತುಳು ಭಾಷಾ- ಸಾಹಿತ್ಯಗಳ ಪರಿಚಯ ಅವರಿಗೆ ಇತ್ತು. ಈ ಬಹುಭಾಷಾ ಅನುಭವ ಅವರ ಬರವಣಿಗೆಯಲ್ಲೂಕಾಣಿಸಿತು. ಜಾನಪದ ಜೀವನ, ಜಾನಪದ ಜೀವನಗಾನ, ಗಾನಮಂಜರಿ, ಸೂತ ಭಾರತ, ತುಳು ಗಾದೆಲು, ಹವ್ಯಕ ಗಾದೆಗಳು, ವಿಷಕನ್ನಿಕೆ, ಸಾರ್ಥಕ, ಬಹದ್ದೂರ್ , ಕನ್ನಡದಲ್ಲಿಶತಕ ಸಾಹಿತ್ಯ, ಸಮಾಜ ವಿಜ್ಞಾನಿ ಪೆರಿಯಾರ್ , ಸಾಹಿತ್ಯ ಸಂಬಂಧ, ನುಡಿ ಸಂಸ್ಕೃತಿ ಮುಂತಾದ ಕೃತಿಗಳು ಅವರ ಬಹುಮುಖ ಆಸಕ್ತಿಗೆ ಸಾಕ್ಷಿ. ಹವ್ಯಕರ ಹಾಡುಗಳು, ಹವ್ಯಕ ಜಾನಪದ ಸಾಹಿತ್ಯ, ಕರಾವಳಿ ಯಕ್ಷಗಾನ, ತಮಿಳಿನ ಕಾವಡಿಯಾಟ್ಟಂ ಮೊದಲಾದ ಜಾನಪದ ವಿಷಯಗಳ ಕುರಿತು ಅವರು ನಡೆಸಿದ ಅಧ್ಯಯನಗಳು ಕರಾವಳಿ ಮತ್ತು ತಮಿಳುನಾಡಿನ ಸಾಂಸ್ಕೃತಿಕ ಸಂಬಂಧಗಳನ್ನೂ ಪರಿಚಯಿಸುತ್ತವೆ. ನೂರಾರು ಸಂಶೋಧನಾ ಲೇಖನಗಳು, ವ್ಯಕ್ತಿಚಿತ್ರಗಳು, ತೌಲನಿಕ ಸಾಹಿತ್ಯದ ಬರಹಗಳು, ಅನುವಾದ ಅವರ ಸಾಹಿತ್ಯಿಕ ಬದುಕಿನ ವಿಸ್ತಾರವನ್ನು ತೋರಿಸುತ್ತವೆ.

ಸಾಹಿತ್ಯ ಮಾತ್ರವಲ್ಲ, ಸಂಗೀತದಲ್ಲೂಅವರ ಹೆಜ್ಜೆಯಿತ್ತು. ಅವರು ಬರೆದ ಭಕ್ತಿಗೀತೆಗಳನ್ನು ಡಾ.ಎಂ.ಬಾಲಮುರಳಿಕೃಷ್ಣ ಅವರಂತಹ ಮಹಾನ್ ಸಂಗೀತಗಾರರು ಹಾಡಿದ್ದಾರೆ. ಕಾಂಚಿ ಕಾಮಕೋಟಿ ಪೀಠದ ಸ್ವಾಮೀಜಿ ವಜ್ರ ಮಹೋತ್ಸವ ಸನ್ಮಾನ, ಹಿಂದಿ ಸೇವಾ ಸನ್ಮಾನ, ಪ್ರೇಮಚಂದ್ ಸನ್ಮಾನ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಸುವರ್ಣ ಕನ್ನಡಿಗ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಅವರಿಗೆ ದೊರೆತವು. ಅವರ ಷಷ್ಟ್ಯಬ್ದಿ ಸಂದರ್ಭದಲ್ಲಿಡಾ.ಚಿನ್ನಪ್ಪ ಗೌಡ ಸಂಪಾದಕತ್ವದಲ್ಲಿಅನನ್ಯ ಎಂಬ ಸುಮಾರು ಆರುನೂರಕ್ಕೂ ಹೆಚ್ಚು ಪುಟಗಳ ಅಭಿನಂದನಾ ಗ್ರಂಥ ಪ್ರಕಟವಾದದ್ದು ಅವರ ಸಾಹಿತ್ಯಿಕ ಬದುಕಿಗೆ ಸಲ್ಲಿಸಿದ ದೊಡ್ಡ ಗೌರವವಾಗಿದೆ.

ನನ್ನ ಪಾಲಿಗೆ ಅವರು ಮೊದಲು ಒಬ್ಬ ಮಾನವೀಯ ಗುರು. ನಂತರ ಲೇಖಕ, ಸಂಶೋಧಕ, ಅನುವಾದಕ, ಸಂಘಟಕ. ದೂರದ ಊರಿನಿಂದ ಓದಲು ಬಂದ ವಿದ್ಯಾರ್ಥಿಯನ್ನು ರೈಲು ನಿಲ್ದಾಣದಿಂದ ಕರೆದುಕೊಂಡು ಹೋಗಿ ತನ್ನ ಮನೆಯ ಬಾಗಿಲು ತೆರೆದಿಡುವ ವ್ಯಕ್ತಿಯ ದೊಡ್ಡತನವನ್ನು ಯಾವ ಪ್ರಶಸ್ತಿಯೂ ಅಳೆಯಲಾರದು. ವಿದ್ಯಾರ್ಥಿಯ ಅಂಕಪಟ್ಟಿಯಲ್ಲಿಅಲ್ಲ, ಅವನ ಬದುಕಿನ ನೆನಪಿನಲ್ಲಿಹೀಗೆ ಉಳಿಯುವ ಗುರುಗಳೇ ನಿಜವಾದ ಗುರುಗಳು.

ಒಂದು ವಿಶ್ವವಿದ್ಯಾಲಯದ ವಿಭಾಗವೆಂದರೆ ಕೇವಲ ಕಟ್ಟಡವಲ್ಲ. ಅಲ್ಲಿಪಾಠ ಮಾಡಿದ ಗುರುಗಳ ಧ್ವನಿಗಳು, ಅವರ ಮಾತುಗಳು, ಅವರ ನಗು, ಅವರ ಕಾಳಜಿ, ಅವರು ವಿದ್ಯಾರ್ಥಿಗಳಿಗೆ ಕೊಟ್ಟ ಧೈರ್ಯ ಇವೆಲ್ಲಸೇರಿ ಅದು ನಮ್ಮ ನೆನಪಿನ ಮನೆಯಾಗಿ ಉಳಿಯುತ್ತದೆ. ಮದ್ರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗ ನನ್ನ ಪಾಲಿಗೆ ಅಂಥ ಒಂದು ನೆನಪಿನ ಮನೆ. ಆ ಮನೆಯೊಳಗೆ ಶ್ರೀಕೃಷ್ಣ ಭಟ್ ಅರ್ತಿಕಜೆಯವರ ಧ್ವನಿ ಇನ್ನೂ ಕೇಳಿಸುತ್ತಲೇ ಇದೆ.

-ನರೇಂದ್ರ ರೈ ದೇರ್ಲ

ಫೋಟೋ: 3ಪಿ-ಅರ್ತಿಕಜೆ

ಡಾ.ಶ್ರೀಕೃಷ್ಣ ಭಟ್ ಅರ್ತಿಕಜೆ