Tribute To Arjuna In Youth Celebration Arts Festival At Open Theatre
(ಬೆಂಗಳೂರಿಗೆ) ಯುವ ಸಂಭ್ರಮದಲ್ಲಿಅರ್ಜುನನಿಗೆ ನಮನ
Contributed by: Mahadev Swamy|Vijaya Karnataka•
ಯುವ ಸಂಭ್ರಮದಲ್ಲಿಅರ್ಜುನನಿಗೆ ನಮನ
*ಕುವೆಂಪು ಬಯಲು ರಂಗಮಂದಿರದಲ್ಲಿ ಪ್ರೇಕ್ಷಕರಿಗೆ ರಸದೌತಣ*ನಾನಾ ಹಾಡಿಗೆ ವಿದ್ಯಾರ್ಥಿಗಳ ಹೆಜ್ಜೆ, ಮುಗಿಲು ಮುಟ್ಟಿದ ಕರತಾಡನ
ವಿಕ ಸುದ್ದಿಲೋಕ ಮೈಸೂರು
ಕನ್ನಡ ಪ್ರೇಮ, ಶಿವನ ತಾಂಡವ, ಹಿರಣ್ಯ ಕಶ್ಯಪನ ಸಂಹಾರ, ಮಹಾಕಾಳಿಯ ಅವತಾರ, ಅರ್ಜುನ ಆನೆಯ ಸ್ಮರಣೆ...ಇವು ಮಾನಸ ಗಂಗೋತ್ರಿ ಕುವೆಂಪು ಬಯಲು ರಂಗಮಂದಿರದಲ್ಲಿನಡೆಯುತ್ತಿರುವ ಯುವ ಸಂಭ್ರಮದ 6ನೇ ದಿನದ ಕಾರ್ಯಕ್ರಮದಲ್ಲಿಕಂಡು ಬಂದ ವಿಶೇಷತೆಗಳು. ಕಲಾವಿದರು, ವಿದ್ಯಾರ್ಥಿಗಳು, ವಿಶೇಷಚೇತನ ವಿದ್ಯಾರ್ಥಿಗಳು ಸಿನಿಮಾ ಗೀತೆ, ಭಕ್ತಿ ಗೀತೆ, ಸಾಮಾಜಿಕ ಕಳಕಳಿ ಸಾರುವ ಗೀತೆಗಳಿಗೆ ಹೆಜ್ಜೆ ಹಾಕುವ ಮೂಲಕ ನೆರೆದಿದ್ದ ಪ್ರೇಕ್ಷಕರಿಗೆ ರಸದೌತಣ ನೀಡಿದರು.
ಮೇಟಗಳ್ಳಿಯ ಸನತ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜಿನ ತಂಡ ಪ್ರದರ್ಶಿಸಿದ ‘ಓ ಪ್ರೇಮವೇನಾ...ಓ ಹೃದಯವೇನಾ, ಅಹಂ ಬ್ರಹ್ಮಾಸ್ಮಿ ಅಹಂ ಪ್ರೇಮಾಸ್ಮಿ’ ಹಾಡಿಗೆ ನೃತ್ಯ ಮೈ ನವಿರೇಳಿಸಿತು. ಪುನೀತ್ ರಾಜ್ ಕುಮಾರ್ ನಟನೆಯ ಅಪ್ಪು ಚಿತ್ರದ ‘ತಾಲಿಬಾನ್ ಅಲ್ಲಅಲ್ಲಬಿನ್ ಲಾಡೆನ್ ಅಲ್ವೆ ಅಲ್ಲ’. ‘ಹೇ ಪಾರು. ಹೇಳೇ ಪಾರು..’ ಹಾಡಿಗೆ ಕುಣಿದು ಕುಪ್ಪಳಿಸಿ, ಯುವಜನರನ್ನು ಕುಣಿಯುವಂತೆ ಮಾಡಿದರು.
ತಿ.ನರಸೀಪುರದ ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ‘ರೈತ ರೈತ ಅನ್ನ ಕೊಡುವದಾತ’ ಹಾಡಿಗೆ ನೃತ್ಯ ಮಾಡಿ ಕೃಷಿ ಚಟುವಟಿಕೆಯಿಂದ ಬಹುತೇಕ ಎಷ್ಟೋ ರೈತರ ಬಾಳು ಹಸನಾಗಿದೆ ಎಂಬ ಸ್ಲೋಗನ್ ಮೂಲಕ ಕೃಷಿಯ ಮಹತ್ವ ಸಾರಿದರು.
ಕುವೆಂಪು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಶಿವಸ್ಮರಣೆ ಮಾಡಿ ಮಹದೇವನನ್ನು ವೇದಿಕೆಗೆ ಕರೆತಂದರು. ನಂಜನಗೂಡಿನ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ವೇದಿಕೆಯಲ್ಲೇ ಶಿವ ತಾಂಡವ ಹಾಡಿದರು.
ತೆರಕಣಾಂಬಿ ಕಾಲೇಜಿನ ವಿದ್ಯಾರ್ಥಿಗಳು ಪೌರಾಣಿಕ ನಾಟಕದ ದೃಶ್ಯವನ್ನು ಪ್ರಸ್ತುತಪಡಿಸಿದರು. ಮಾಡ್ರನ್ ಗೀತೆಗೆ ಪೌರಾಣಿಕ ನೃತ್ಯ ರೂಪಕ ನಡೆಸಿಕೊಟ್ಟರು. ಭಕ್ತಪ್ರಹ್ಲಾದ ಚಿತ್ರದ ದೃಶ್ಯ ಕಟ್ಟಿಕೊಟ್ಟರು. ಉಗ್ರ ನರಸಿಂಹನ ಅವತಾರ ಸೃಷ್ಟಿಸಿ ನೆರೆದಿದ್ದವರ ಶಿಳ್ಳೆ ಗಿಟ್ಟಿಸಿದರು.
ಹುಣಸೂರಿನ ಶಾಸ್ತ್ರಿ ಕಾಲೇಜಿನ ವಿದ್ಯಾರ್ಥಿಗಳು ಗಣೇಶನನ್ನು ಸ್ಮರಿಸಿ, ಸಮಾಜವನ್ನು ಒಗ್ಗೂಡಿಸಲು ಗಣೇಶ ಹಬ್ಬ ಆಚರಣೆ ಮಾಡುವ ಸಂದೇಶ ಸಾರಿದರು. ಶಿವಮೊಗ್ಗದ ಐನೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಜಾನಪದ ಹಾಡಿಗೆ ನೃತ್ಯ ಮಾಡಿ ಮಹಾಕಾಳಿ ಮಹಾತ್ಮೆಯನ್ನು ಸ್ಮರಿಸಿದರು.
ಮದ್ದೂರಿನ ಸೋಮನಹಳ್ಳಿ ಸರಕಾರಿ ಕೈಗಾರಿಕಾ ಸಂಸ್ಥೆ ವಿದ್ಯಾರ್ಥಿಗಳು ಅರ್ಜುನ ಆನೆಯ ಧೈರ್ಯ, ಸಾಹಸವನ್ನು ನೆನಪಿಸಿಕೊಳ್ಳುವ ಮೂಲಕ ನೃತ್ಯವನ್ನು ಅರ್ಜುನ ಆನೆಗೆ ಅರ್ಪಿಸಿದರು. ಅರ್ಜುನ ಮತ್ತು ಅರಮನೆ ಸಿಬ್ಬಂದಿ ನಡುವಿನ ಒಡನಾಟವನ್ನು ನೃತ್ಯದ ಮೂಲಕ ವರ್ಣಿಸಿದರು. ಒಟ್ಟು 47 ಕಲಾ ತಂಡಗಳು ಭಾಗವಹಿಸಿದ್ದವು.
ಗಮನ ಸೆಳೆದ ವಿಶೇಷ ಮಕ್ಕಳು: ಮರ್ಸಿ ಶ್ರವಣದೋಷವುಳ್ಳ ಮಕ್ಕಳ ವಸತಿ ಶಾಲೆಯ ಪುಟ್ಟ ಮಕ್ಕಳು ‘ಅಮ್ಮ ನಿನ್ನ ತ್ಯಾಗಕ್ಕೆ ಸರಿಸಾಟಿ ಯಾರು ಇಲ್ಲ.. ನಿನಗಿಂತ ದೇವರಿಲ್ಲ’ ಎಂದು ನೃತ್ಯ ಮಾಡಿ ಸಂಭ್ರಮಿಸಿದರು. ದೃಷ್ಟಿ ಚಾರಿಟಬಲ್ ಟ್ರಸ್ಟ್ ವತಿಯಿಂದ ‘ಹುಟ್ಟು ಭಿಕ್ಷೆ ಕಣೋ.. ಬದುಕು ಶಿಕ್ಷೆ ಕಣೋ... ಬ್ರಹ್ಮನ ಬರಹ ಇದೇ ಕಣೋ..’ ಎಂಬ ನೃತ್ಯ ಪ್ರದರ್ಶಿಸಿ ಭಿಕ್ಷೆ ಬೇಡಿ ಜೀವನ ಮಾಡಬೇಡಿ ಎಂಬ ದೃಶ್ಯ ನೃತ್ಯ ರೂಪಕ ಮೂಲಕ ಕಟ್ಟಿಕೊಟ್ಟರು.
ನವಚೇತನ ಬಸವೇಶ್ವರ ಟ್ರಸ್ಟ್ ವಿಶೇಷಚೇತನ ಶಾಲೆಯ ಮಕ್ಕಳು ‘ಕರುನಾಡೇ ಕೈ ಚಾಚಿದೆ ನೋಡೆ, ಹಸಿರುಗಳೇ ಆ ತೋರಣಗಳೇ..’, ‘ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ’ ಹಾಡಿಗೆ ಕುಣಿದು ಸಂಭ್ರಮಿಸಿ ಪ್ರೇಕ್ಷಕರಿಂದ ಚಪ್ಪಾಳೆಗಿಟ್ಟಿಸಿದರು.
ಬಾಕ್ಸ್
ಟಾರ್ಚ್ ಲೈಟ್ ಹಾಕಿ ಸಂಭ್ರಮ:
‘ಬೊಂಬೆ ಹೇಳು ತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ. ಆಡಿಸಿನೋಡಿ ಬೀಳಿಸಿ ನೋಡು ಹಾಡು, ಯಾರೇ ನೀನು ರೋಜಾ ಹೂವೆ, ಯಾರೇ ನೀನು ಮಲ್ಲಿಗೆ ಹೂವೇ, ಹೇಳೆ ಓ ಚೆಲುವೆ..ಚೆಲುವಿನ ಹೂವೇ’ ಹಾಡಿನ ನೃತ್ಯ ಭಂಗಿ ಹಾಗೂ ಸಂಗೀತಕ್ಕೆ ನೆರೆದಿದ್ದ ಪ್ರೇಕ್ಷಕರು ತಮ್ಮ ಮೊಬೈಲ್ ಮೂಲಕ ಟಾರ್ಚ್ ಲೈಟ್ ಹಾಕಿ ಸಂಭ್ರಮಿಸಿದರು.