6ರಂದು ವೀರಭದ್ರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

Contributed by: vknagamangala@gmail.com|Vijaya Karnataka•
veerabhadreshwara swami jatra mahotsava in nagamangala to commence with grand chariot festival on 6th
ವಿಕ ಸುದ್ದಿಲೋಕ ನಾಗಮಂಗಲ

ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಅ.4ರಂದು ದಕ್ಷಯಾಗ-ದಕ್ಷಬ್ರಹ್ಮ ಸಂಹಾರ ಹಾಗೂ ಅ.6ರಂದು ಅದ್ಧೂರಿ ರಥೋತ್ಸವ ಜರುಗಲಿದೆ ಎಂದು ಶ್ರೀ ವೀರಭದ್ರೇಶ್ವರ ಸ್ವಾಮಿ ಸೇವಾ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಶರತ್ ರಾಮಣ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಮಾತನಾಡಿ, ‘‘ದಕ್ಷಿಣ ಭಾರತದಲ್ಲಿಯೇ ದಕ್ಷಬ್ರಹ್ಮ ಸಂಹಾರದ ಸಂಪ್ರದಾಯವಿರುವುದು ನಾಗಮಂಗಲದಲ್ಲಿನಡೆಯುವ ಶ್ರೀ ವೀರಭದ್ರೇಶ್ವರಸ್ವಾಮಿ ಜಾತ್ರಾ ಮಹೋತ್ಸವದಲ್ಲಿಮಾತ್ರ. ಈ ಪ್ರತೀತಿ ದೇಶದ ಯಾವುದೇ ರಾಜ್ಯಗಳ ಶ್ರೀ ವೀರಭದ್ರಸ್ವಾಮಿ ದೇಗುಲ, ಜಾತ್ರೆಗಳಲ್ಲಿನಡೆಯುವುದಿಲ್ಲ. ದಕ್ಷಬ್ರಹ್ಮ ಸಂಹಾರವೇ ಈ ಜಾತ್ರಾ ಮಹೋತ್ಸವದ ವಿಶೇಷ ,’’ಎಂದರು.

‘‘ಕಳೆದ ಸೆ.21ರಂದು ಅಂಕುರಾರ್ಪಣ ನೆರವೇರಿಸಿ, ಸೆ.22ರಂದು ವಿಶೇಷ ಪೂಜೆಯೊಂದಿಗೆ ಧ್ವಜಾರೋಹಣ ಮಾಡುವ ಮೂಲಕ 18 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ. ಪ್ರತಿನಿತ್ಯ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ ಉತ್ಸವಗಳು ನಡೆಯುತ್ತಿವೆ ,’’ಎಂದರು.

‘‘ಸೆ.25ರಂದು ಗ್ರಾಮದ ಗುಂಡಾ ಭಕ್ತರಿಂದ ಮಂದಹಾಸ ಉತ್ಸವ ನಡೆಯಿತು. ಸೆ.26ರಂದು ಚಿಕ್ಕವೀರನಕೊಪ್ಪಲು ಗ್ರಾಮಸ್ಥರಿಂದ ಶೇಷವಾಹನೋತ್ಸವ. ಸೆ.27ರಂದು ಭದ್ರೇಗೌಡನಕೊಪ್ಪಲು ಗ್ರಾಮಸ್ಥರಿಂದ ಭೂತವಾಹನೋತ್ಸವ, ಸೆ.28ರಂದು ಕಸುವಿನಹಳ್ಳಿ ಗ್ರಾಮಸ್ಥರಿಂದ ಬಸವ ವಾಹನೋತ್ಸವ, ಸೆ.29ರಂದು ದಂ.ಜಕ್ಕನಹಳ್ಳಿ ಗ್ರಾಮಸ್ಥರಿಂದ ನಂದಿವಾಹನೋತ್ಸವ, ಸೆ.30ರಂದು ನಾಗಮಂಗಲ ಲಕ್ಕಿಬೋರಣ್ಣ ವಂಶಸ್ಥರಿಂದ ಹುಲಿವಾಹನೋತ್ಸವ, ಅ.1ರಂದು ಪಾಲಗ್ರಹಾರ ಗ್ರಾಮಸ್ಥರಿಂದ ನಂದಿ ವಾಹನೋತ್ಸವ, ಅ.2ರಂದು ಜೋಡಿನೇರಕೆರೆ ಗ್ರಾಮಸ್ಥರಿಂದ ನವಿಲು ವಾಹನೋತ್ಸವ, ಅ.3ರಂದು ಬೆಟ್ಟದಮಲ್ಲೇನಹಳ್ಳಿ ಗ್ರಾಮಸ್ಥರಿಂದ ತ್ರಿಪುರ ಸಂವಾಹ ಲೀಲೋತ್ಸವ ಜರುಗಿವೆ,’’ಎಂದು ತಿಳಿಸಿದರು.

‘‘ಅ.4ರಂದು ದಕ್ಷಯಾಗ-ದಕ್ಷಬ್ರಹ್ಮ ಸಂಹಾರ. ಅ.5ರಂದು ಪುಣ್ಯಹೋಮ, ಅ.6ರಂದು ವೈಭವದ ರಥೋತ್ಸವ ನಡೆಯಲಿದೆ. ಅ.7ರ ಬುಧವಾರ ಮುಂಜಾನೆ ಅಗ್ನಿ ಕೊಂಡೋತ್ಸವ ನಡೆಯಲಿದ್ದು, ಸುತ್ತಮುತ್ತಲ ಹಲವು ಗ್ರಾಮದೇವತೆಗಳ ಉತ್ಸವ ಮೂರ್ತಿಗಳು ಮತ್ತು ವಿವಿಧ ಜಾನಪದ ಕಲಾತಂಡಗಳು ಪಾಲ್ಗೊಳ್ಳಲಿವೆ. ರಥೋತ್ಸವ ಹಾಗೂ ಕೊಂಡೋತ್ಸವ ದಿನದಂದು ಎಲ್ಲಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಹಾಗಾಗಿ ತಾಲೂಕು, ಜಿಲ್ಲೆಸೇರಿದಂತೆ ನಾಡಿನ ವಿವಿದೆಡೆ ಇರುವ ದೇವರ ಒಕ್ಕಲುಗಳು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿಜಾತ್ರಾ ಮಹೋತ್ಸವದಲ್ಲಿಪಾಲ್ಗೊಳ್ಳಬೇಕು,’’ ಎಂದು ಮನವಿ ಮಾಡಿದರು.

ಅ.8ರಂದು ಗ್ರಾಮದ ಗುಂಡಾ ಭಕ್ತರಿಂದ ಗಜವಾಹನೋತ್ಸವ ಮತ್ತು ಕಂಕಣ ವಿಸರ್ಜನೆ ಮತ್ತು ಅ.9ರಂದು ತೀರ್ಥ ಸ್ನಾನದ ಮೂಲಕ 18 ದಿನಗಳ ಜಾತ್ರಾ ಮಹೋತ್ಸವಕ್ಕೆ ತೆರೆಬೀಳಲಿದೆ ಎಂದು ತಿಳಿಸಿದರು.

ಟ್ರಸ್ಟ್ ನ ಗೌರವಾದ್ಯಕ್ಷ ಬಿ.ಕೃಷ್ಣ, ಉಪಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ಎನ್ .ನಟರಾಜ್ , ಸದಸ್ಯ ಎನ್ . ರುದ್ರೇಶ್ ಗೋಷ್ಠಿಯಲ್ಲಿಹಾಜರಿದ್ದರು.

ಚಿತ್ರ ಎಂಡಿವೈ 3-1: ನಾಗಮಂಗಲ ಪಟ್ಟಣದ ಶ್ರೀ ವೀರಭದ್ರೇಶ್ವರಸ್ವಾಮಿ ವಿಗ್ರಹ.