ತೆರಿಗೆ ಅಧಿಕಾರಿಗಳ ಅರೆಸ್ಟ್ ಪವರ್ ಗೆ ಬ್ರೇಕ್ ?

Contributed by: shree vijendra|Vijaya Karnataka•
break on tax officers arrest power in gst council meeting
ಅ.7ರ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿಮಹತ್ವದ ಸುಧಾರಣೆ ಸಾಧ್ಯತೆ

ಹೊಸದಿಲ್ಲಿ: ಕಳೆದ ವರ್ಷದ ಜಿಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ದರ ಪರಿಷ್ಕರಣೆ ನಂತರ ಕೇಂದ್ರ ಸರಕಾರ ಈಗ ಮತ್ತೊಂದು ಮಹತ್ವದ ‘ನೆಕ್ಸ್ಟ್ - ಜೆನ್ ’ ಸುಧಾರಣೆಗೆ ಸಿದ್ಧತೆ ನಡೆಸಿದೆ.
ಅಕ್ಟೋಬರ್ 7ರಂದು ನಡೆಯಲಿರುವ ಜಿಎಸ್ ಟಿ ಮಂಡಳಿ ಸಭೆಯಲ್ಲಿತೆರಿಗೆ ಇಲಾಖೆ ಅಧಿಕಾರಿಗಳಿಂದ ಬಂಧನ ಅಧಿಕಾರ ಹಿಂಪಡೆಯುವ ಮತ್ತು ಯಾವುದೇ ಬಂಧನಕ್ಕೂ ಮುನ್ನ ನ್ಯಾಯಾಲಯದ ಆದೇಶ ಕಡ್ಡಾಯಗೊಳಿಸುವ ಸಮಗ್ರ ಜಿಎಸ್ ಟಿ ಜಾರಿ ನಿಯಮಗಳ ಪರಿಷ್ಕರಣೆಯನ್ನು ಪರಿಗಣಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಸದ್ಯ ಕೇಂದ್ರ ಜಿಎಸ್ ಟಿ ಕಾಯಿದೆಯ ಸೆಕ್ಷನ್ 69 ತೆರಿಗೆ ಅಧಿಕಾರಿಗಳಿಗೆ ಬಂಧಿಸುವ ಅಧಿಕಾರ ನೀಡುತ್ತದೆ.

ಅಪರಾಧ ಮೊಕದ್ದಮೆ ಹೂಡುವ ಮಿತಿಯನ್ನು 1 ಕೋಟಿ ರೂ.ನಿಂದ 5 ಕೋಟಿ ರೂ.ಗೆ ಏರಿಸುವ ಪ್ರಸ್ತಾವವನ್ನೂ ಮಂಡಳಿ ಪರಿಗಣಿಸುವ ನಿರೀಕ್ಷೆ ಇದೆ. ಗಮನಾರ್ಹ ತೆರಿಗೆ ವಂಚನೆ ಅಥವಾ ಮೋಸ ಒಳಗೊಂಡಿರುವ ಹೆಚ್ಚು ಗಂಭೀರ ಪ್ರಕರಣಗಳಿಗೆ ಮಾತ್ರ ಕ್ರಿಮಿನಲ್ ಪ್ರಾಸಿಕ್ಯೂಷನ್ ಸೀಮಿತಗೊಳಿಸಲು ಇದು ನೆರವಾಗಲಿದೆ.

ತೆರಿಗೆ ನಿಯಮಗಳ ಭಿನ್ನ ವ್ಯಾಖ್ಯಾನಗಳಿಂದ ಉದ್ಭವಿಸುವ ವರ್ಗೀಕರಣ, ಮೌಲ್ಯಮಾಪನ ಅಥವಾ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಕುರಿತ ದಿನನಿತ್ಯದ ವಿವಾದಗಳನ್ನು ಅಪರಾಧಗಳೆಂದು ಪರಿಗಣಿಸದಂತೆ ಪ್ರಾಸಿಕ್ಯೂಷನ್ ನಿಬಂಧನೆಗಳ ವ್ಯಾಪ್ತಿಯನ್ನು ಕಡಿಮೆಗೊಳಿಸುವುದು ಪ್ರಸ್ತಾವಿತ ಬದಲಾವಣೆಗಳ ಉದ್ದೇಶವಾಗಿದೆ.