ಭಾರತ ಆರ್ಥಿಕತೆ, ವೈದ್ಯಕೀಯ, ವಿಜ್ಞಾನ, ಶಿಕ್ಷಣ ಹಾಗೂ ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿಮುನ್ನಡೆಯುತ್ತಿದೆ. ಆದರೆ ಸಾಮಾಜಿಕವಾಗಿ ಹಿನ್ನಡೆಯಾಗುತ್ತಿರುವುದು ಆತಂಕಕಾರಿ. ದೇಶದ ಪ್ರಗತಿಯಲ್ಲಿಪ್ರಜೆಗಳ ಪಾತ್ರ ಮಹತ್ವದ್ದು. ಸ್ವಾರ್ಥ ರಾಜಕಾರಣ, ಭ್ರಷ್ಟಾಚಾರ, ಮಾದಕ ವಸ್ತುಗಳ ಬಳಕೆ, ದುಶ್ಚಟಗಳು ಮತ್ತು ಯುವಜನತೆಯ ದಾರಿತಪ್ಪುವಿಕೆ ರಾಷ್ಟ್ರದ ಅಭಿವೃದ್ಧಿಗೆ ಅಡ್ಡಿಯಾಗುತ್ತಿವೆ. ಸರಕಾರ ಕೆಲವೊಂದು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಜನರ ಸಹಕಾರವಿಲ್ಲದೆ ಬದಲಾವಣೆ ಸಾಧ್ಯವಿಲ್ಲ. ‘ನಾವು ಸಾಮಾನ್ಯ ಜನರು, ನಮ್ಮದೇನೂ ತಪ್ಪಿಲ್ಲ’ ಎಂದು ಕೆಲವರು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ. ಇನ್ನು ಕೆಲವರು ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಹಿಂಜರಿಯುತ್ತಾರೆ. ಹೀಗಾಗಿ ಕಣ್ಣು, ಕಿವಿ ಮತ್ತು ಬಾಯಿ ಇದ್ದರೂ ಮೌನವಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶವು ಕೇವಲ ಆರ್ಥಿಕವಾಗಿ ಮಾತ್ರವಲ್ಲ, ನೈತಿಕತೆ, ಸಂಸ್ಕಾರ ಮತ್ತು ಜವಾಬ್ದಾರಿಯಲ್ಲಿಯೂ ಮುನ್ನಡೆಯಬೇಕು. ದುಶ್ಚಟಗಳನ್ನು ತೊರೆದು, ಸಾಮಾಜಿಕ ಹೊಣೆಗಾರಿಕೆಯಿಂದ ನಡೆದುಕೊಂಡಾಗ ಮಾತ್ರ ಭಾರತ ನಿಜವಾದ ಅರ್ಥದಲ್ಲಿಅಭಿವೃದ್ಧಿ ಹೊಂದಲಿದೆ.- ಸ್ವಸ್ತಿಕ, 3ನೇ ಬಿಸಿಎ, ಸರಕಾರಿ ಪ್ರಥಮ ದರ್ಜೆ ಕಾಲೇಜು, ತೀರ್ಥಹಳ್ಳಿ