ಕಕ್ಕಲದೊಡ್ಡಿಯಿಂದ ಜಾಲಹಳ್ಳಿಗೆ ಅ.12ರಂದು ಬೃಹತ್ ಪಾದಯಾತ್ರೆಗೆ ನಿರ್ಧಾರ
ದೇವದುರ್ಗ ತಾಲೂಕಿಗೆ ಸೇರಿಸಲು ಪಟ್ಟುವಿಕ ಸುದ್ದಿಲೋಕ ದೇವದುರ್ಗ
ಗಾಣಧಾಳ ಗ್ರಾ.ಪಂ. ಅನ್ನು ಅರಕೇರಾ ತಾಲೂಕಿನಿಂದ ಕೈಬಿಟ್ಟು ದೇವದುರ್ಗ ತಾಲೂಕಿಗೆ ಸೇರ್ಪಡೆ ಮಾಡುವಂತೆ ಒತ್ತಾಯಿಸಿ ಹೋರಾಟ ನಡೆಸಲು ಗ್ರಾಪಂ ವ್ಯಾಪ್ತಿಯ ನಾನಾ ಹಳ್ಳಿಗಳ ಜನರು ಕಕ್ಕಲದೊಡ್ಡಿ ಗ್ರಾಮದಲ್ಲಿಭಾನುವಾರ ಪೂರ್ವಭಾವಿ ಸಭೆ ನಡೆಸಿ, ತೀರ್ಮಾನ ಕೈಗೊಂಡರು.
ಗ್ರಾಪಂ ಮಾಜಿ ಅಧ್ಯಕ್ಷ ಶಿವನಗೌಡ ದೇಸಾಯಿ ಮಾತನಾಡಿ, ‘‘ಗಾಣಧಾಳ ಗ್ರಾಪಂ ಅರಕೇರಾ ತಾಲೂಕಿಗೆ ಸೇರ್ಪಡೆ ಮಾಡಿದ್ದು ಖಂಡನೀಯ. ಗಾಣಧಾಳ ಜಾಲಹಳ್ಳಿಗೆ ಕೇವಲ 5 ಕಿಮೀ ದೂರಲ್ಲಿದೆ. ಆದರೆ, ಅರಕೇರಾಗೆ 25 ಕಿ.ಮೀ. ದೂರವಿದೆ. ಗಾಣಧಾಳ, ಕಮಲದಿನ್ನಿ, ಕಕ್ಕಲದೊಡ್ಡಿ, ಮ್ಯಾಕಲದೊಡ್ಡಿ, ಬಿ.ಆರ್ .ಗುಂಡಾ ಜಾಲಹಳ್ಳಿಯನ್ನೇ ಅವಲಂಬಿಸಿವೆ. ಆದರೆ, ಗ್ರಾಮಸ್ಥರ ಅಭಿಪ್ರಾಯ ಪಡೆಯದೆ ಅರಕೇರಾ ಗ್ರಾಪಂಗೆ ಸೇರಿಸಿದ್ದಾರೆ. ಇದರಿಂದ ಗ್ರಾಮಸ್ಥರು, ರೈತರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಕೂಡಲೇ, ಅರಕೇರಾ ತಾಲೂಕಿನಿಂದ ಕೈಬಿಟ್ಟು ದೇವದುರ್ಗಕ್ಕೆ ಸೇರಿಸಬೇಕು,’’ ಎಂದು ಒತ್ತಾಯಿಸಿದರು.
ದೇವದುರ್ಗ ತಾಲೂಕಿಗೆ ಸೇರಿಸುವಂತೆ ಒತ್ತಾಯಿಸಿ ಅ.12ರಂದು ಕಕ್ಕಲದೊಡ್ಡಿಯಿಂದ ಜಾಲಹಳ್ಳಿವರೆಗೆ 8 ಕಿ.ಮೀ. ಸಾವಿರಾರು ಗ್ರಾಮಸ್ಥರೊಂದಿಗೆ ಪಾದಯಾತ್ರೆ ನಡೆಸಲು ಸಭೆಯಲ್ಲಿತೀರ್ಮಾನ ಕೈಗೊಳ್ಳಲಾಯಿತು. ಹೋರಾಟಕ್ಕೆ ಜಿಲ್ಲಾಧಿಕಾರಿ ಸ್ಪಂದಿಸದಿದ್ದರೆ ಬೆಂಗಳೂರು ಚಲೋ ನಡೆಸಲು ನಾಲ್ಕು ಹಳ್ಳಿಯ ಜನರು ಒಕ್ಕರಲಿನ ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೆ ,ಸರಕಾರ ಸ್ಪಂದಿಸದಿದ್ದರೆ ಮನೆಮನೆಯಿಂದ ಹಣ, ದವಸಧಾನ್ಯ ಸಂಗ್ರಹಿಸಿ ಕಾನೂನು ಹೋರಾಟ ಮಾಡಲು ನಾನಾ ಗ್ರಾಮಸ್ಥರು ನಿರ್ಣಯ ಕೈಗೊಂಡರು. ಅರಕೇರಾ ತಾಲೂಕಿನಿಂದ ಕೈಬಿಡುವಂತೆ ಒತ್ತಾಯಿಸಿ ಕಮಲದಿನ್ನಿ ಗ್ರಾಮಸ್ಥರು ಕೂಡ ಸಭೆ ಸೇರಿ ತೀರ್ಮಾನ ಕೈಗೊಂಡಿದ್ದರು.