ಹೊನ್ನಾವರ ಪ್ರಕಟಣೆ

Contributed by: krishnamoortibhat@gmail.com|Vijaya Karnataka•
isnt the state governments right to the livelihood of the poor
ಬಡವರ ಜೀವನಾಧಾರ ಕಸಿಯುವ ಹುನ್ನಾರ

ವಿಕ ಸುದ್ದಿಲೋಕ ಹೊನ್ನಾವರ
ಅರಣ್ಯವಾಸಿಗಳಿಗೆ ಗ್ರಾಮ ಪಂಚಾಯಿತಿಯಿಂದ ನೀಡುವ ಮನೆಕರ ಪಾವತಿಯನ್ನು ತಡೆಹಿಡಿಯುವ ಅಧಿಸೂಚನೆಯನ್ನು ಹೊರಡಿಸುವ ಮೂಲಕ ರಾಜ್ಯ ಕಾಂಗ್ರೆಸ್ ಸರಕಾರವು ಬಡವರು ಮತ್ತು ಸ್ವಂತ ಆಶ್ರಯವಿಲ್ಲದ ಕುಟುಂಬಗಳ ಜೀವನಾಧಾರವನ್ನು ಕಿತ್ತುಕೊಳ್ಳಲು ಮುಂದಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷ ಈಶ್ವರ ನಾಯ್ಕ ಆರೋಪಿಸಿದ್ದಾರೆ.

ತಲೆತಲಾಂತರದಿಂದ ಅರಣ್ಯ ಭಾಗದಲ್ಲಿಸೂರು ಕಟ್ಟಿಕೊಂಡು ವಾಸಿಸುತ್ತಿರುವವರೆಲ್ಲರೂ ಕಡುಬಡವರಾಗಿದ್ದು, ಅದನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಭೂ ರಹಿತರಾಗಿರುವ ಇವರಿಗೆ ಪಹಣಿ ಪತ್ರ ಅಥವಾ ತಮ್ಮ ಭೂಮಿಗೆ ಸಂಬಂಧಿಸಿದ ಯಾವುದೇ ಕಾಗದಪತ್ರಗಳು ಇದುವರೆಗೂ ದೊರೆತಿಲ್ಲ. ಪ್ರತಿವರ್ಷ ಗ್ರಾಮ ಪಂಚಾಯಿತಿಗೆ ಪಾವತಿಸುತ್ತಿರುವ ಮನೆ ಕರದ ಪಾವತಿಯೊಂದೇ ಅಧಿಕೃತ ಆಧಾರವಾಗಿದೆ. ಬಡವರ ಕೈಲಿರುವ ಇದೊಂದು ದಾಖಲೆಯನ್ನೂ ಕಸಿದುಕೊಳ್ಳಲು ಈಗಿನ ರಾಜ್ಯ ಸರಕಾರವು ಮುಂದಾಗಿದೆ ಎಂದು ಆಪಾದಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಂತಹ ಹಿರಿಯ ನಾಯಕರು ತಮ್ಮ ಅಧಿಕಾರಾವಧಿಯಲ್ಲಿ ಅರಣ್ಯ ವಾಸಿಗಳಿಗೆ ಹಕ್ಕು ಪತ್ರವನ್ನು ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದರು. ರಾಜ್ಯದಲ್ಲಿಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ ಉತ್ತರಕನ್ನಡ. ಶೇ. 82 ಅರಣ್ಯ ಪ್ರದೇಶವನ್ನು ಹೊಂದಿರುವ ಉತ್ತರ ಕನ್ನಡಿಗರು ಅಣು ವಿದ್ಯುತ್ ಸ್ಥಾವರ, ಉಷ್ಟಣ ವಿದ್ಯುತ್ ಸ್ಥಾವರ, ಬಂದರು ಅಭಿವೃದ್ಧಿ ಹೀಗೆ ರಾಜ್ಯದ ಹಿತಕ್ಕಾಗಿ ಬೇರೆ ಬೇರೆ ಅಭಿವೃದ್ಧಿ ಯೋಜನೆಗಳಿಗೆ ತ್ಯಾಗ ಮಾಡುತ್ತ ಬಂದಿದ್ದಾರೆ. ಆದರೆ ನಮ್ಮ ಜಿಲ್ಲೆಯ ಅರಣ್ಯವಾಸಿಗಳನ್ನೇ ಒಕ್ಕಲಿಬ್ಬಿಸುವ ನಿಟ್ಟಿನಲ್ಲಿಸರಕಾರ ಯೋಚಿಸುತ್ತಿದೆ. ಅರಣ್ಯವಾಸಿಗಳು ಅರಣ್ಯ ಸಂರಕ್ಷಣೆಗೆ ಪೂರಕವಾಗಿ ಜೀವನವನ್ನು ರೂಪಿಸಿಕೊಂಡು ಬರುತ್ತಿದ್ದಾರೆ. ಇದೆಲ್ಲಅಂಶಗಳು ಇಲ್ಲಿಯವರೇ ಆಗಿರುವ ಮಂಕಾಳ ವೈದ್ಯರ ಅರಿವಿಗಿದ್ದರೂ ಜನರ ಪರವಾಗಿ ಸರಕಾರದ ಮಟ್ಟದಲ್ಲಿಧ್ವನಿ ಎತ್ತದಿರುವುದು ಬೇಸರದ ಸಂಗತಿ ಎಂದಿದ್ದಾರೆ.

ಬಿಜೆಪಿಯ ರಾಜ್ಯಮಟ್ಟದ ನಾಯಕರು ಹಾಗೂ ಸ್ಥಳೀಯಮಟ್ಟದ ನಾಯಕರು ಸಾರ್ವಜನಿಕರ ಹಿತಾಸಕ್ತಿಗಳನ್ನು ರಕ್ಷಿಸಲು ಕಟಿಬದ್ಧರಾಗಿದ್ದು, ರಾಜ್ಯಸರಕಾರ ಇಂತಹ ಜನವಿರೋಧಿ ನಿರ್ಧಾರವನ್ನು ಹಿಂಪಡೆಯದಿದ್ದರೆ ಪಕ್ಷಾತೀತವಾಗಿ ರಾಜ್ಯಾದ್ಯಂತ ಹೋರಾಟ ಮಾಡಲಿದ್ದೇವೆ ಎಂದು ಎಚ್ಚರಿಸಿದ್ದಾರೆ.

4 ಹೆಚ್ .ಎನ್ .ಆರ್ .2; ಈಶ್ವರ ನಾಯ್ಕ