ಕೌಶಲವಿದ್ದರೆ ಉದ್ಯೋಗಾವಕಾಶ ಸುಲಭ

Contributed bysrameshshashitnp@gmail.com|Vijaya Karnataka
if skills are developed job opportunities become easy
ಕೌಶಲವಿದ್ದರೆ ಉದ್ಯೋಗಾವಕಾಶ ಸುಲಭ

* ಜಿಲ್ಲಾಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್ . ಅರುಣ್ ಕುಮಾರ್ ಅಭಿಮತ
ವಿಕ ಸುದ್ದಿಲೋಕ ತಿ.ನರಸೀಪುರ

ಶಿಕ್ಷಣದ ಜತೆಗೆ ಕೌಶಲಾಭಿವೃದ್ಧಿ, ಉದ್ಯೋಗಾವಕಾಶ ಹಾಗೂ ಸ್ವಯಂ ಉದ್ಯೋಗದ ಬಗ್ಗೆ ಯುವಜನರು ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ಸರಕಾರ ಯುವಜನರ ಭವಿಷ್ಯ ರೂಪಿಸಲು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳ ಸದುಪಯೋಗ ಪಡೆದುಕೊಂಡು ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬೇಕು ಎಂದು ಜಿಲ್ಲಾಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್ . ಅರುಣ್ ಕುಮಾರ್ ತಿಳಿಸಿದರು.

ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಜಿಲ್ಲಾಉದ್ಯೋಗ ವಿನಿಮಯ ಕೇಂದ್ರ, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ, ಜಿಲ್ಲಾಪಂಚಾಯಿತಿ, ವೃತ್ತಿ ಮಾರ್ಗದರ್ಶನ ಕೋಶ, ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿಆಯೋಜಿಸಿದ್ದ ‘ಯುವನಿಧಿ ಅರಿವು ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದರು.

‘‘ವಿದ್ಯಾರ್ಥಿ ಜೀವನ ಭವಿಷ್ಯ ರೂಪಿಸಿಕೊಳ್ಳುವ ಪ್ರಮುಖ ಘಟ್ಟವಾಗಿದೆ. ಪದವಿ ಪಡೆದ ಬಳಿಕ ಉದ್ಯೋಗಕ್ಕಾಗಿ ಕಾಯುವುದಕ್ಕಿಂತ ತಮ್ಮ ಪ್ರತಿಭೆ, ಕೌಶಲ ಹಾಗೂ ಆಸಕ್ತಿಗೆ ಅನುಗುಣವಾಗಿ ವಿವಿಧ ಕ್ಷೇತ್ರಗಳಲ್ಲಿಅವಕಾಶಗಳನ್ನು ಹುಡುಕಿಕೊಳ್ಳಬೇಕು. ಸರಕಾರಿ ಹಾಗೂ ಖಾಸಗಿ ವಲಯಗಳಲ್ಲಿನ ಉದ್ಯೋಗಾವಕಾಶಗಳ ಕುರಿತು ಮಾಹಿತಿ ಪಡೆದು ಸೂಕ್ತ ತಯಾರಿ ನಡೆಸಬೇಕು,’’ ಎಂದರು.

‘‘ಯುವನಿಧಿ ಯೋಜನೆಯು ನಿರುದ್ಯೋಗಿ ಪದವೀಧರರು ಹಾಗೂ ಡಿಪ್ಲೊಮಾ ಪೂರ್ಣಗೊಳಿಸಿದ ಯುವಜನರಿಗೆ ನಿರ್ದಿಷ್ಟ ಅವಧಿಗೆ ಆರ್ಥಿಕ ನೆರವು ನೀಡುವುದರ ಜತೆಗೆ ಉದ್ಯೋಗ ಅರಸುವ ಸಂದರ್ಭದಲ್ಲಿಆತ್ಮವಿಶ್ವಾಸ ತುಂಬುವ ಉದ್ದೇಶ ಹೊಂದಿದೆ. ಯುವಕರು ಕೇವಲ ಆರ್ಥಿಕ ನೆರವಿನ ಮೇಲೆ ಅವಲಂಬಿತರಾಗದೆ, ಈ ಅವಧಿಯನ್ನು ಕೌಶಲಾಭಿವೃದ್ಧಿ ಹಾಗೂ ಉದ್ಯೋಗಕ್ಕೆ ಅಗತ್ಯವಾದ ತರಬೇತಿ ಪಡೆಯಲು ಬಳಸಿಕೊಳ್ಳಬೇಕು,’’ ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಚ್ .ವಿ. ಉದಯ್ ಕುಮಾರ್ ಮಾತನಾಡಿ, ‘‘ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿಕೇವಲ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದರೆ ಸಾಲದು. ಉದ್ಯೋಗ ಪಡೆಯಲು ಸಂವಹನ ಕೌಶಲ, ಜೀವನ ಕೌಶಲ ಹಾಗೂ ಸಂದರ್ಶನ ಎದುರಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು,’’ ಎಂದರು.

ಯುವನಿಧಿ ಯೋಜನೆ ಕುರಿತು ಮಾಹಿತಿ ಜಿಲ್ಲಾಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ಕೆ.ಡಿ. ಮಂಜುನಾಥ್ ಅವರು ಯುವನಿಧಿ ಯೋಜನೆಯ ಅರ್ಹತೆ, ನೋಂದಣಿ ಪ್ರಕ್ರಿಯೆ, ಯೋಜನೆಯ ಪ್ರಯೋಜನ ಹಾಗೂ ಉದ್ಯೋಗಾವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಯೋಜನೆಯ ಪ್ರಯೋಜನ ಪಡೆಯುವ ಕುರಿತು ಕಿರು ವೀಡಿಯೊ ಮೂಲಕವೂ ಅರಿವು ಮೂಡಿಸಲಾಯಿತು. ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಉಪಾಧ್ಯಕ್ಷ ಹುಣಸೂರು ಬಸವಣ್ಣ, ಅಧ್ಯಕ್ಷ ನವೀನ್ (ವೀರೇಂದ್ರ), ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ರಂಗಸ್ವಾಮಿ, ಉಪನ್ಯಾಸಕರಾದ ಟಿ. ದೇವರಾಜೇಗೌಡ, ರಾಮಮೂರ್ತಿ, ಗ್ಯಾರಂಟಿ ಸಮಿತಿ ಸದಸ್ಯ ಅಭಿಷೇಕ್ ನಾಯಕ್ , ವಿದ್ಯಾರ್ಥಿನಿ ಲಕ್ಷ್ಮಿ ಇತರರಿದ್ದರು.