ಪಪಂ ಅಧ್ಯಕ್ಷ ಸ್ಥಾನ ದುರ್ಬಳಕೆ ವಿಚಾರಣೆಗೆ ತಡೆಯಾಜ್ಞೆ

Contributed bynkhvkkms@gmail.com|Vijaya Karnataka
Vijay Karnataka
ಕಿಕ್ಕರ್ : ಪತಿಯ ಸ್ಥಿರಾಸ್ಥಿ ಕಂದಾಯ ದಾಖಲೆಗಳ ನಮೂದಿಗೆ ಸಹಾಯ ಆರೋಪ| ವಿಚಾರಣೆ ಡಿ.1ಕ್ಕೆ ಮುಂದೂಡಿಕೆ

---
ಪಪಂ ಅಧ್ಯಕ್ಷ ಸ್ಥಾನ ದುರ್ಬಳಕೆ ವಿಚಾರಣೆಗೆ ತಡೆಯಾಜ್ಞೆ

ವಿಕ ಸುದ್ದಿಲೋಕ ನಾಯಕನಹಟ್ಟಿ

ಪಪಂ ಅಧ್ಯಕ್ಷೆ ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಪತಿಯ ಸ್ಥಿರಾಸ್ಥಿ ಕಂದಾಯ ದಾಖಲೆಗಳ ನಮೂದು ಪಡೆಯಲು ಸಹಾಯ ಮಾಡಿದ್ದಾರೆ. ಹೀಗಾಗಿ ಅವರನ್ನು ಪಪಂ ಸದಸ್ಯ ಸ್ಥಾನದಿಂದ ರದ್ದುಗೊಳಿಸಿ ಎಂದು ಆರೋಪಿಸಿ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿನ ವಿಚಾರಣೆಗೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಪ್ರಕರಣವೇನು?

ಪಪಂ ಮಾಜಿ ಸದಸ್ಯ ಎನ್ . ಮಹಾಂತಣ್ಣ, ಪಪಂ ಅಧ್ಯಕ್ಷೆ ಮಂಜುಳ ಅವರು ತಮ್ಮ ಹುದ್ದೆಯನ್ನು ಬಳಸಿಕೊಂಡು ಪತಿಯ ಹೆಸರಿಗೆ ಸ್ಥಿರಾಸ್ಥಿಗಳನ್ನು ನಮೂದಿಸಿದ್ದಾರೆ. ಪಪಂ ಅಧ್ಯಕ್ಷೆಯ ಪತಿ ನಿವೇಶನವನ್ನು ಪಡೆದು ಅದಕ್ಕೆ ಇ ಖಾತೆ ಮಾಡಲು ತಮ್ಮ ಸ್ಥಾನದ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಕರ್ನಾಟಕ ಪುರಸಭೆಗಳ ಅಧಿನಿಯಮ ಕಲಂ 16(1)(ಕೆ) ಅಡಿಯಲ್ಲಿಎನ್ . ಮಹಾಂತಣ್ಣ ದೂರು ಸಲ್ಲಿಸಿದ್ದರು. ಹೀಗಾಗಿ ಪಪಂ ಅಧ್ಯಕ್ಷೆಯ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಉಪವಿಭಾಗಾಧಿಕಾರಿಯವರ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಮಂಜುಳ ಅವರ ಪತಿ ಆರ್ . ಶ್ರೀಕಾಂತ್ ರವರು ನಿವೇಶನವನ್ನು ಕೃಷ್ಣನಾಯ್ಕರವರಿಂದ ಖರೀದಿಸಿದ್ದಾರೆ. ಕೃಷ್ಣನಾಯ್ಕರವರು ಇದನ್ನು ಗ್ರಾಪಂ ನಿರ್ಣಯ ಮತ್ತು ಹರಾಜಿನ ಮೂಲಕ ಖರೀದಿಸಿದ್ದಾರೆ. ಆರ್ . ಶ್ರೀಕಾಂತ್ ರವರು ಸದರಿ ನಿವೇಶನವನ್ನು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿಪಪಂ ಅಧ್ಯಕ್ಷೆ ತಮ್ಮ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿ ಅನರ್ಹತೆ ಕೋರಿ ಉಪವಿಭಾಗಾಧಿಕಾರಿ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು.

ವಾದಿ ಮತ್ತು ಪ್ರತಿವಾದಿಗಳ ದಾಖಲೆಗಳ ಆಧಾರದ ಮೇಲೆ ನ್ಯಾಯಾಲಯವು ಉಪವಿಭಾಗಾಧಿಕಾರಿಗಳ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಪ್ರತಿವಾದಿ ಎನ್ .ಮಹಾಂತಣ್ಣ ಪಪಂ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ. 12.05.2026 ರಂದು ನೀಡಲಾದ ಆದೇಶದ ಹಿನ್ನೆಲೆ ಪ್ರತಿಕಾರದ ಉದ್ದೇಶದಿಂದ ಈ ಅರ್ಜಿ ಸಲ್ಲಿಸಲಾಗಿದೆ. ಮಂಜುಳ 2024ರಲ್ಲಿಆಯ್ಕೆಯಾಗಿದ್ದಾರೆ. ಅವರ ಪತಿ ಆಸ್ತಿಯನ್ನು 2000 ಇಸವಿಯಲ್ಲಿಖರೀದಿ ಮಾಡಿದ್ದಾರೆ. 2008ರಲ್ಲಿಕಟ್ಟಡದ ಪರವಾನಗಿ ನೀಡಲಾಗಿದೆ. 2014ರಲ್ಲಿಇ ಖಾತೆ ಮಾಡಲಾಗಿದೆ. ಈ ಪ್ರಕರಣದಲ್ಲಿಪಪಂ ಅಧ್ಯಕ್ಷೆ ತಮ್ಮ ಆದೇಶದ ಮೇರೆಗೆ ನಡೆಯುವ ಕಾರ್ಯ ಅಥವ ಗುತ್ತಿಗೆಯಲ್ಲಿಪಾಲ್ಗೊಂಡಿಲ್ಲ. ಹೀಗಾಗಿ ಇದು ಸದಸ್ಯತ್ವ ಅನರ್ಹತೆಗೆ ಕಾರಣವಾಗುವುದಿಲ್ಲಎಂದು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ರವರ ಪೀಠ ಅಭಿಪ್ರಾಯಪಟ್ಟು ಮಧ್ಯಂತರ ಮೌಖಿಕ ಆದೇಶ ನೀಡಿದೆ. ಪ್ರತಿವಾದಿಗಳಿಗೆ ತಮ್ಮ ಉತ್ತರ ಅಥವಾ ವಿವರಣೆಗಳನ್ನು ನೀಡುವಂತೆ ನೋಟಿಸ್ ನೀಡಿ ವಿಚಾರಣೆಯನ್ನು ಡಿ. 1 ಕ್ಕೆ ಮುಂದೂಡಿದೆ.

----

ಫೋಟೋ: ನ್ಯಾಯಾಲಯದ ಆದೇಶ ಪ್ರತಿ