ರಾಜ್ಯ ಕಾಂಗ್ರೆಸ್ ನ ಹಿರಿಯ ನಾಯಕ, ಮಾಜಿ ಸಚಿವ ರಮಾನಾಥ ರೈ ಅವರ ಇನೋವಾ ಕಾರು ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ರಾಮಂದಿರದ ಬಳಿ ಭಾನುವಾರ ಮಧ್ಯಾಹ್ನ ಅಪಘಾತಕ್ಕೀಡಾಗಿದ್ದು, ರಮಾನಾಥ ರೈ ಅಲ್ಪ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದ ಉಳಿದ ಮೂವರಿಗೆ ಸ್ವಲ್ಪ ಗಂಭೀರ ಗಾಯವಾಗಿದೆ.ರಾಷ್ಟ್ರೀಯ ಹೆದ್ದಾರಿ 169ರಲ್ಲಿಇನೋವಾ ಕಾರಿನಲ್ಲಿಕಾರ್ಕಳಕ್ಕೆ ಬರುತ್ತಿದ್ದ ಸಂದರ್ಭ, ಕಾರು ಚಾಲಕನ ನಿಯಂತ್ರಣ ತಪ್ಪಿ ಬಲಬದಿಗೆ ಚಲಿಸಿದೆ. ಈ ಸಂದರ್ಭ ಮೂಡುಬಿದಿರೆ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಕಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ರಮಾನಾಥ ರೈ ಅವರ ಕೈ ಮತ್ತು ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಆಪ್ತ ಸಹಾಯಕ ಡೆನ್ಸಿಲ್ ಅವರ ಕಾಲು, ಮುಖಕ್ಕೆ ತೀವ್ರ ಗಾಯವಾಗಿದೆ. ಉಳಿದಂತೆ ಕಾರು ಚಾಲಕ ಅಭಿಷೇಕ್ , ಸಹಾಯಕ ಚರಣ್ ಗೆ ಗಾಯವಾಗಿದೆ. ಕಾರಿನಲ್ಲಿಒಟ್ಟು ಐದು ಜನ ಪ್ರಯಾಣಿಸುತ್ತಿದ್ದು, ಗನ್ ಮ್ಯಾನ್ ಗೆ ಯಾವುದೇ ತೊಂದರೆಯಾಗಿಲ್ಲ. ಸ್ಥಳೀಯರು ತಕ್ಷಣ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದಿಂದ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.
ನಿಶ್ಚಿತಾರ್ಥ ಕಾರ್ಯಕ್ರಮ: ಪಕ್ಷದ ಕಾರ್ಯಕರ್ತನ ನಿಶ್ಚಿತಾರ್ಥವು ಭಾನುವಾರ ಕಾರ್ಕಳ ತಾಲೂಕಿನ ಕೆರ್ವಾಸೆಯಲ್ಲಿನಡೆದಿದ್ದು, ಆ ಸಮಾರಂಭಕ್ಕೆ ಭಾಗವಹಿಸುವ ಉದ್ದೇಶದಿಂದ ಆಗಮಿಸುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಕೆರ್ವಾಸೆ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯ ವಿವರದ ಬಗ್ಗೆ ಮಾತನಾಡುತ್ತಾ ಬರುತ್ತಿರುವ ಸಂದರ್ಭ ಈ ಅಪಘಾತ ಸಂಭವಿಸಿದೆ.
ರಸ್ತೆ ಕಾಮಗಾರಿ ಸಮಸ್ಯೆ: ಕಾರ್ಕಳದ ಪುಲ್ಕೇರಿ ಬೈಪಾಸಿನಿಂದ ಮಂಗಳೂರಿನವರೆಗೆ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ಕಳೆದ ಹಲವು ಸಮಯದಿಂದ ಈ ಭಾಗದ ರಸ್ತೆಗ ಕಾಮಗಾರಿಯಲ್ಲಿವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿಪದೇ ಪದೆ ರಸ್ತೆ ಅಪಘಾತಗಳು ಸಂಭವಿಸುತ್ತಿವೆ.
ಡೇಂಜರ್ ಸ್ಪಾಟ್ : ಕಾರು ಅಪಘಾತ ನಡೆದ ಜಾಗದಲ್ಲಿಈ ಹಿಂದೆಯೂ ಅನೇಕ ಅಪಘಾತಗಳು ನಡೆದು ಸಾವು ನೋವುಗಳು ಸಂಭವಿಸಿದೆ. ಕಳೆದ ಮಾರ್ಚ್ ತಿಂಗಳಲ್ಲಿನಡೆದ ಯುಗಾದಿ ಹಬ್ಬದ ಹಿಂದಿನ ದಿನ ಬೈಕ್ ಡಿಕ್ಕಿ ಹೊಡೆದ ಪರಿಣಾಮ, ಸಾಣೂರು ನಿವಾಸಿ ಹರೀಶ್ ಪೂಜಾರಿ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಅಪಘಾತ ಸಂಭವಿಸಿ 11 ದಿನಗಳ ಬಳಿಕ ಮತ್ತೆ ಅದೇ ಸ್ಥಳದಲ್ಲಿಇನ್ನೊಂದು ಅಪಘಾತ ನಡೆದಿದ್ದು, ಈ ಘಟನೆಯಲ್ಲಿತಂದೆಯೊಬ್ಬರು ಮಗನಿಗೆ ತಿಂಡಿ ತರಲೆಂದು ಅಂಗಡಿಗೆ ತೆರಲಿ ವಾಪಸ್ ಬರುತ್ತಿದ್ದ ಸಂದರ್ಭ ಟೆಂಪೊ ಡಿಕ್ಕಿ ಹೊಡೆದು ಮೃತಪಟ್ಟಿದ್ದರು. ಸಾಣೂರು ಭಾಗದಲ್ಲಿರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಗೊಂಡ ದಿನದಂದಿನಿಂದ ನಿರಂತರ ಅಪಘಾತಗಳು ಸಂಭವಿಸುತ್ತಿವೆ.
(ಬಾಕ್ಸ್ )
ಸಿಎಂರಿಂದ ಆರೋಗ್ಯ ವಿಚಾರಣೆ
ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಸಂಜೆ ಮೊಬೈಲ್ ಕರೆ ಮಾಡಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿರುವ ರಮಾನಾಥ ರೈ ಅವರ ಜತೆ ಮಾತನಾಡಿ ಆರೋಗ್ಯ ವಿಚಾರಿಸಿದ್ದಾರೆ. ಯಾವುದೇ ವಿಷಯದಲ್ಲೂಒತ್ತಡಕ್ಕೊಳಗಾಗಬೇಡಿ, ಕೂಡಲೇ ಗುಣಮುಖರಾಗಿ ಎಂದು ಸಿಎಂ ಅವರು ಸಲಹೆ ನೀಡಿದ್ದಾರೆಂದು ಆಪ್ತ ಮೂಲಗಳು ತಿಳಿಸಿವೆ.
ಫೊಟೋಕ್ಯಾಪ್ಶನ್ : ಅಪಘಾತಕ್ಕೀಡಾದ ಇನೋವಾ ಕಾರು ಮತ್ತು ಬಸ್