ಸಾಯಿ

Contributed bysomashekar.Mahadev@timesgroup.com|Vijaya Karnataka
smartphone dilemma responsibility of children or parents
ಸ್ಮಾರ್ಟ್ ಫೋನ್ ಗೀಳು: ಮಕ್ಕಳು ಬದಲಾಗಬೇಕೇ ಅಥವಾ ಪೋಷಕರೇ?

ನಮ್ಮ ವಿದ್ಯಾಸಂಸ್ಥೆಗಳಲ್ಲಿಸುಮಾರು ನಾಲ್ಕು ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪದವಿ ಹಾಗೂ ವೈದ್ಯಕೀಯ (ಎಂಬಿಬಿಎಸ್ ) ಕಲಿಯುತ್ತಿರುವ ವಿದ್ಯಾರ್ಥಿಗಳಿಗೂ ನಾವು ಕ್ಯಾಂಪಸ್ ನಲ್ಲಿಸ್ಮಾರ್ಟ್ ಫೋನ್ ಬಳಸಲು ಅವಕಾಶ ನೀಡಿಲ್ಲ. ಪೋಷಕರೊಂದಿಗೆ ಮಾತನಾಡಲು ಕೇವಲ ಸಾಮಾನ್ಯ (ಬೇಸಿಕ್ ) ಮೊಬೈಲ್ ಫೋನ್ ಗಳ ವ್ಯವಸ್ಥೆ ಮಾಡಿದ್ದೇವೆ. ಸಾಮಾಜಿಕ ಜಾಲತಾಣಗಳಿಂದ ದೂರವಿರುವ ಕಾರಣದಿಂದಾಗಿಯೇ ನಮ್ಮ ವಿದ್ಯಾರ್ಥಿಗಳಲ್ಲಿಚಿತ್ತಚಾಂಚಲ್ಯ ಕಡಿಮೆಯಾಗಿ, ಏಕಾಗ್ರತೆ ಹೆಚ್ಚಿದೆ. ಗುರುಗಳಲ್ಲಿಶ್ರದ್ಧೆಯಿಟ್ಟು ಕಲಿಯುವ ಅವರು, ಬಹುತೇಕರು ಅತ್ಯುನ್ನತ ಶ್ರೇಣಿಯಲ್ಲಿಯೇ (ಡಿಸ್ಟಿಂಕ್ಷನ್ ) ತೇರ್ಗಡೆಯಾಗುತ್ತಾರೆ.
ಆರಂಭದಲ್ಲಿ, ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ನಿರ್ಬಂಧಿಸಿದಾಗ ಪೋಷಕರು ಹಾಗೂ ವಿದ್ಯಾರ್ಥಿಗಳಿಂದಲೇ ವಿರೋಧ ವ್ಯಕ್ತವಾಗಿತ್ತು. ಆಗ ನಾನು ಸ್ಮಾರ್ಟ್ ಫೋನ್ ಗಳಿಂದ ಉಂಟಾಗುವ ಅನರ್ಥಗಳನ್ನು ಅವರಿಗೆ ಮನವರಿಕೆ ಮಾಡಿಕೊಟ್ಟೆ. ಜೊತೆಗೆ, ಜ್ಞಾನಾರ್ಜನೆಗೆ ಅಗತ್ಯವಿರುವ ಇಂಟರ್ನೆಟ್ , ಡಿಜಿಟಲ್ ಲೈಬ್ರೆರಿ ಸೇರಿದಂತೆ ಎಲ್ಲಸೌಲಭ್ಯಗಳೂ ಕ್ಯಾಂಪಸ್ ನಲ್ಲಿಲಭ್ಯವಿವೆ ಎಂದು ವಿವರಿಸಿದಾಗ ಅವರು ಸಮಾಧಾನಗೊಂಡರು.

ಆದರೆ, ರಜೆಯಲ್ಲಿಮನೆಗೆ ಹೋಗಿಬಂದ ಮಕ್ಕಳ ಬಗ್ಗೆ ಕೆಲವು ಪೋಷಕರು, ‘ಮನೆಗೆ ಹೋದಾಗಿನಿಂದ ಮಗು ಸದಾ ಮೊಬೈಲ್ ಗೆ ಅಂಟಿಕೊಂಡಿರುತ್ತದೆ’ ಎಂದು ದೂರುತ್ತಾರೆ. ‘ಕ್ಯಾಂಪಸ್ ನಲ್ಲಿನಾವು ಮೊಬೈಲ್ ಕೊಡುವುದಿಲ್ಲ, ಮನೆಯಲ್ಲಿನೀವೇಕೆ ಅವರ ಕೈಗೆ ಫೋನ್ ಕೊಟ್ಟಿರಿ?’ ಎಂದು ನಾನು ಮರುಪ್ರಶ್ನಿಸಿದಾಗ, ‘ಮಕ್ಕಳ ಸತತ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಫೋನ್ ಕೊಟ್ಟೆವು’ ಎಂದು ಅಸಹಾಯಕತೆ ಒಪ್ಪಿಕೊಳ್ಳುತ್ತಾರೆ.

ಗಮನಿಸಿ, ಇಲ್ಲಿಸಮಸ್ಯೆಯ ಮೂಲ ಇರುವುದು ಮಕ್ಕಳಲ್ಲಿಅಲ್ಲವೇ ಅಲ್ಲ. ಮಕ್ಕಳು ಎಂದರೆ ಸಹಜವಾಗಿಯೇ ಕುತೂಹಲದ ಗಣಿ. ಆ ಕುತೂಹಲವನ್ನು ತಣಿಸಲು ನಾವು ಅವರನ್ನು ದೈನಂದಿನ ಚಟುವಟಿಕೆಗಳಲ್ಲಿತೊಡಗಿಸಿಕೊಳ್ಳಬೇಕು; ಅವರ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಬೇಕು. ಆದರೆ, ಇಂದಿನ ಧಾವಂತದ ಬದುಕಿನಲ್ಲಿಮಕ್ಕಳಿಗೆ ಸಮಯ ಕೊಡಲಾಗದ ಪೋಷಕರು, ತಮ್ಮ ಪಾಲನೆ-ಪೋಷಣೆಯ (ಪೇರೆಂಟಿಂಗ್ ) ಜವಾಬ್ದಾರಿಯನ್ನು ಸ್ಮಾರ್ಟ್ ಫೋನ್ ಗಳಿಗೆ ಹಸ್ತಾಂತರಿಸುತ್ತಿದ್ದಾರೆ. ಇದೇ ಎಲ್ಲಅನರ್ಥಗಳಿಗೂ ಮೂಲ ಕಾರಣ. ನಮ್ಮ ಜವಾಬ್ದಾರಿಯಿಂದ ನಾವೇ ನುಣುಚಿಕೊಂಡು, ಕೊನೆಗೆ ‘ಮಕ್ಕಳಿಗೆ ಸ್ಮಾರ್ಟ್ ಫೋನ್ ಗೀಳು ಅಂಟಿಕೊಂಡಿದೆ’ ಎಂದು ಅವರನ್ನು ದೂರುವುದು ಎಷ್ಟು ಸರಿ?

ಪೋಷಕರು ತಮ್ಮ ಹೊಣೆಗಾರಿಕೆಯನ್ನು ಅರಿತು ಬದಲಾದರೆ, ಮಕ್ಕಳು ತಾನಾಗಿಯೇ ಸರಿಯಾಗುತ್ತಾರೆ.