ಹೊಸದಿಲ್ಲಿ: ಇತರ ಹಿಂದುಳಿದ ವರ್ಗಗಳು (ಒಬಿಸಿ) ‘ಕೆನೆಪದರ’ ಮೀಸಲು ನಿಯಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ವಿಚಾರಣೆಗಾಗಿ ವಿಶೇಷ ನ್ಯಾಯಪೀಠವನ್ನು ರಚಿಸಿ ಮುಂದಿನ ವಾರ ಅರ್ಜಿಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ.
2025ರ ನಾಗರಿಕ ಸೇವಾ ಪರೀಕ್ಷೆಯ ಪ್ರಕ್ರಿಯೆಯು ತೀರ್ಪು ಪ್ರಕಟವಾಗುವ ಮುನ್ನವೇ ಬಹುತೇಕ ಪೂರ್ಣಗೊಂಡಿದ್ದು, ಸದ್ಯ ಸೇವಾ ಹಂಚಿಕೆಯ ಅಂತಿಮ ಹಂತದಲ್ಲಿದೆ. ಈ ಹಂತದಲ್ಲಿಹೊಸ ತೀರ್ಪನ್ನು ಪೂರ್ವಾನ್ವಯವಾಗಿ ಜಾರಿಗೊಳಿಸಿದರೆ, ಒಂದೇ ಪರೀಕ್ಷೆ ಬರೆದು ಆಯ್ಕೆಯಾಗಿರುವ ಅಭ್ಯರ್ಥಿಗಳ ನಡುವೆ ಭಾರೀ ತಾರತಮ್ಯ ಉಂಟಾಗಲಿದ್ದು, ಇದು ಗೊಂದಲಕ್ಕೆ ಕಾರಣವಾಗಲಿದೆ ಎಂದು ಕೇಂದ್ರ ಸರ್ಕಾರ ತನ್ನ ಅರ್ಜಿಯಲ್ಲಿವಾದಿಸಿದೆ. ನ್ಯಾ.ಪಿ.ಎಸ್ . ನರಸಿಂಹ ಮತ್ತು ನ್ಯಾ.ಮಹದೇವನ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು ಕೆನೆಪದರ ಸಂಬಂಧಿತ ಕಳೆದ ಮಾರ್ಚ್ನಲ್ಲಿಮಹತ್ವದ ತೀರ್ಪು ನೀಡಿತ್ತು. ಕೇವಲ ಪೋಷಕರ ಆದಾಯವನ್ನು ಮಾತ್ರ ಆಧಾರವಾಗಿಟ್ಟುಕೊಂಡು ಅಭ್ಯರ್ಥಿಯೊಬ್ಬರನ್ನು ‘ಒಬಿಸಿ ಕೆನೆಪದರ’ದ ವ್ಯಾಪ್ತಿಗೆ ಸೇರಿಸಲು ಸಾಧ್ಯವಿಲ್ಲಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು. ಅಲ್ಲದೆ, ಮೀಸಲು ಸೌಲಭ್ಯವನ್ನು ನಿರ್ಧರಿಸುವಾಗ ಖಾಸಗಿ ಮತ್ತು ಸಾರ್ವಜನಿಕ ವಲಯದ ನೌಕರರು ಹಾಗೂ ಅವರ ಮಕ್ಕಳನ್ನು, ಸರಕಾರಿ ನೌಕರರಿಗಿಂತ ಭಿನ್ನವಾಗಿ ಪರಿಗಣಿಸುವುದು ಸಂವಿಧಾನದ 14ನೇ ವಿಧಿಯ (ಸಮಾನತೆಯ ಹಕ್ಕು) ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ದಿಲ್ಲಿ, ಮದ್ರಾಸ್ ಮತ್ತು ಕೇರಳ ಹೈಕೋರ್ಟ್ ಗಳು ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು.ಒಬಿಸಿ ಕೆನೆಪದರವನ್ನು ಗುರುತಿಸಲು 1993ರ ಸೆ. 8ರಂದು ಕೇಂದ್ರ ಹೊರಡಿಸಿದ್ದ ಕಚೇರಿ ಜ್ಞಾಪಕ ಪತ್ರ ಹಾಗೂ 2004ರ ಅಕ್ಟೋಬರ್ 14ರಂದು ನೀಡಿದ್ದ ಸ್ಪಷ್ಟೀಕರಣ ಪತ್ರವನ್ನು ಒಟ್ಟಾಗಿ ಪರಿಶೀಲಿಸಿದಾಗ, ಕೇವಲ ವೇತನದ ಆದಾಯವು ಕೆನೆಪದರವನ್ನು ನಿರ್ಧರಿಸುವ ಏಕೈಕ ಮಾನದಂಡವಾಗಲು ಸಾಧ್ಯವಿಲ್ಲಎಂದು ಸುಪ್ರೀಂ ಕೋರ್ಟ್ ಹೇಳಿತ್ತು.