ಹಾಜರಾತಿ ಪ್ರಕ್ರಿಯೆಯೇ ‘ನಿರಂತರ’ ಕಿರಿಕಿರಿ

Contributed bymallugoudra461987@gmali.com|Vijaya Karnataka
technical glitches in continuous app hindering student attendance in belagavi
- ಆ್ಯಪ್ ತಾಂತ್ರಿಕ ದೋಷದಿಂದಾಗಿ ಮಕ್ಕಳ ಅಟೆಂಡೆನ್ಸ್ ಗೆ ಅಡೆತಡೆ

- ದೈನಂದಿನ ಹಾಜರಾತಿ ಪೂರ್ಣಗೊಳಿಸಲು ಶಿಕ್ಷಕರ ಪರದಾಟ
ಮಲ್ಲಿಕಾರ್ಜುನ ಬಾಳನಗೌಡರ ಬೆಳಗಾವಿ

ಞa್ಝ್ಝ್ಠಜಟ್ಠd್ಟa461987ಃಜಞaಜ್ಝಿ.್ಚಟಞ

ಸರಕಾರಿ ಶಾಲೆಗಳಲ್ಲಿವಿದ್ಯಾರ್ಥಿಗಳ ಹಾಜರಾತಿ ವ್ಯವಸ್ಥೆ ಆಧುನೀಕರಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಾರಿಗೆ ತಂದಿರುವ ‘ನಿರಂತರ ಆ್ಯಪ್ ’ ಬಳಸಿ ಹಾಜರಾತಿ ಪೂರ್ಣಗೊಳಿಸುವುದೇ ಶಿಕ್ಷಕರಿಗೆ ನಿರಂತರ ಕಿರಿಕಿರಿಯಾಗಿದೆ.

ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಿಂದ ಎಐ ಆಧಾರಿತ ಮುಖಚರ್ಯೆ ಗುರುತು ತಂತ್ರಜ್ಞಾನದ ಮೂಲಕ ಹಾಜರಾತಿ ದಾಖಲಿಸುವ ವ್ಯವಸ್ಥೆ ಜಾರಿಗೆ ಬಂದಿದೆ. ಆದರೆ, ಆ್ಯಪ್ ನ ತಾಂತ್ರಿಕ ದೋಷದಿಂದಾಗಿ ಬೆಳಗಾವಿ ಜಿಲ್ಲೆಯ ಬಹುತೇಕ ಸರಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಪ್ರತಿದಿನ ಮಕ್ಕಳ ಹಾಜರಾತಿ ಪೂರ್ಣಗೊಳಿಸಲು ಪರದಾಡುವಂತಾಗಿದೆ.

ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು:

ಚಿಕ್ಕೋಡಿ ಮತ್ತು ಬೆಳಗಾವಿ ಶೈಕ್ಷಣಿಕ ಜಿಲ್ಲೆಗಳ ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿಅಂದಾಜು 1 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಇದ್ದಾರೆ. ಮಕ್ಕಳ ಹಾಜರಾತಿಯನ್ನು ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 1 ರೊಳಗೆ ಮತ್ತು ಮಧ್ಯಾಹ್ನದ ಹಾಜರಾತಿಯನ್ನು 1.30 ರಿಂದ ಸಂಜೆ 4 ರೊಳಗೆ ಯಾವುದೇ ಸಮಯದಲ್ಲಿದಾಖಲಿಸಬಹುದು. ಆದರೆ, ನಿರಂತರ ಆ್ಯಪ್ ಆಗಾಗ ಕೈಕೊಡುತ್ತಿದ್ದು, ಶಿಕ್ಷಕರಿಗೆ ತಲೆನೋವಾಗಿದೆ.

ಬೋಧನಾ ಸಮಯ ವ್ಯರ್ಥ:

ಜಿಲ್ಲೆಯ ಗ್ರಾಮೀಣ, ನಗರ, ಪಟ್ಟಣ ಪ್ರದೇಶದ ಬಹುತೇಕ ಸರಕಾರಿ ಶಾಲೆಗಳಲ್ಲಿ100 ರಿಂದ 200 ವಿದ್ಯಾರ್ಥಿಗಳು ಇರುತ್ತಾರೆ. ಶಾಲೆ ಆರಂಭವಾದ ತಕ್ಷಣ ವಿದ್ಯಾರ್ಥಿಗಳನ್ನು ಸಾಲಾಗಿ ನಿಲ್ಲಿಸಿ ಒಬ್ಬೊಬ್ಬರ ಮುಖವನ್ನು ಮೊಬೈಲ್ ನಲ್ಲಿಸ್ಕ್ಯಾ ನ್ ಮಾಡಬೇಕಾಗುತ್ತದೆ. 40 ರಿಂದ 60 ವಿದ್ಯಾರ್ಥಿಗಳಿರುವ ತರಗತಿಗಳಲ್ಲಿಈ ಪ್ರಕ್ರಿಯೆ ಪೂರ್ಣಗೊಳ್ಳಲು ಬಹಳಷ್ಟು ಸಮಯ ಹಿಡಿಯುತ್ತಿದ್ದು, ಕೆಲವೊಮ್ಮೆ ಒಂದು ಗಂಟೆಯ ಬೋಧನಾ ಸಮಯ ಹಾಜರಾತಿ ದಾಖಲಿಸುವುದರಲ್ಲೇ ಮುಗಿದು ಹೋಗುತ್ತಿದೆ.

ಮುಖ ಗುರುತಿಸದ ಆ್ಯಪ್ :

ಮಕ್ಕಳ ಮುಖ ಸ್ಕ್ಯಾ ನಿಂಗ್ ವೇಳೆ ಅನೇಕ ತಾಂತ್ರಿಕ ಹಾಗೂ ಪ್ರಾಯೋಗಿಕ ಸಮಸ್ಯೆಗಳು ಎದುರಾಗುತ್ತಿವೆ. ಒಂದು ದಿನ ಮಗು ತಲೆ ಸರಿಯಾಗಿ ಬಾಚಿಕೊಂಡು ಬಾರದಿದ್ದರೆ ಆ್ಯಪ್ ಮುಖವನ್ನು ಗುರುತಿಸುವುದಿಲ್ಲ. ಕೆಲವೊಮ್ಮೆ ವಿದ್ಯಾರ್ಥಿನಿಯರು ಧರಿಸುವ ದೊಡ್ಡ ಕಿವಿಯೋಲೆ, ಮೂಗಿನ ನತ್ತು, ಕನ್ನಡಕ, ಮಾಸ್ಕ್ ಅಥವಾ ತಲೆಗೆ ಕಟ್ಟಿರುವ ಬಟ್ಟೆ ಇದ್ದರೂ ಮುಖವನ್ನು ಸರಿಯಾಗಿ ಗುರುತಿಸಲು ಆ್ಯಪ್ ಗೆ ಸಾಧ್ಯವಾಗುತ್ತಿಲ್ಲ,’’ ಎಂಬುದು ಶಿಕ್ಷಕರ ಬೇಸರದ ಮಾತು.

ನೆಟ್ ವರ್ಕ್ ಸಮಸ್ಯೆ:

ಖಾನಾಪುರ ಸೇರಿ ಜಿಲ್ಲೆಯ ಇತರ ಗ್ರಾಮೀಣ, ಅರಣ್ಯ ಸಮೀಪದ ಪ್ರದೇಶಗಳಲ್ಲಿಇಂಟರ್ ನೆಟ್ ಸಂಪರ್ಕ ದುರ್ಬಲವಾಗಿರುವುದು ಮತ್ತೊಂದು ಪ್ರಮುಖ ಸಮಸ್ಯೆಯಾಗಿದೆ. ನೆಟ್ ವರ್ಕ್ ಇಲ್ಲದಿದ್ದರೆ ಅಥವಾ ಸರ್ವರ್ ಸ್ಪಂದಿಸದಿದ್ದರೆ ಹಾಜರಾತಿ ಅಪ್ ಲೋಡ್ ಆಗುವುದಿಲ್ಲ. ಇದರಿಂದ ಪಾಠ ಬೋಧನೆ, ವಿದ್ಯಾರ್ಥಿಗಳ ಕಲಿಕಾ ಪ್ರಗತಿ, ಮೌಲ್ಯಮಾಪನ ಹಾಗೂ ಇತರ ಶೈಕ್ಷಣಿಕ ಚಟುವಟಿಕೆಗಳಿಗೂ ತೊಂದರೆ ಆಗುತ್ತಿದೆ.

-ಬಾಕ್ಸ್

ಸ್ಕ್ಯಾ ನಿಂಗ್ ಗೆ ಅಡ್ಡಿ ಏನು?

ಬೆಳಗಿನ ಸಮಯದಲ್ಲಿತರಗತಿ ಕೊಠಡಿಯಲ್ಲಿಬೆಳಕಿನ ಅಭಾವ, ವಿದ್ಯುತ್ ಇಲ್ಲದಿರುವುದು, ನೆರಳಿರುವ ಪ್ರದೇಶದಲ್ಲಿನಿಂತಿರುವುದು ಅಥವಾ ಮೊಬೈಲ್ ಕ್ಯಾಮೆರಾದ ಗುಣಮಟ್ಟ ಕಡಿಮೆಯಿರುವುದು ಕೂಡ ಸ್ಕ್ಯಾ ನಿಂಗ್ ಗೆ ಅಡ್ಡಿಯಾಗುತ್ತಿದೆ. ಇಂಥ ಸಂದರ್ಭದಲ್ಲಿನೆಟ್ ವರ್ಕ್ ಸಮಸ್ಯೆ, ಬೆಳಕಿನ ಕೊರತೆಯಿಂದಾಗಿ 15-20 ಮಕ್ಕಳ ಮುಖ ಮಾತ್ರ ಕ್ಯಾಪ್ಚರ್ ಆಗುತ್ತಿದ್ದು, ಉಳಿದ ಮಕ್ಕಳ ಹಾಜರಾತಿ ಪೂರ್ಣಗೊಳಿಸಲು ಮತ್ತೆ ಮತ್ತೆ ಪ್ರಯತ್ನಿಸಬೇಕಾಗಿದೆ.

-ಬಾಕ್ಸ್

ಬಿಸಿಯೂಟಕ್ಕೂ ಅಡ್ಡಗಾಲು

ಕೆಲವು ಮಕ್ಕಳ ಮುಖವನ್ನು ಮೊದಲ ಬಾರಿ ನೋಂದಾಯಿಸಿದರೂ ಮರುದಿನ ಅಥವಾ ಕೆಲವು ದಿನಗಳ ನಂತರ ಅದೇ ಮಗುವಿನ ಮುಖವನ್ನು ಆ್ಯಪ್ ಗುರುತಿಸದೇ ಪುನಃ ಪುನಃ ಸ್ಕ್ಯಾ ನ್ ಮಾಡಲು ಸೂಚಿಸುತ್ತದೆ. ಅನೇಕ ಬಾರಿ ಪ್ರಯತ್ನಿಸಿದರೂ ಹಾಜರಾತಿ ದಾಖಲಾಗದ ಕಾರಣ, ಶಾಲೆಗೆ ಹಾಜರಾಗಿರುವ ವಿದ್ಯಾರ್ಥಿಯನ್ನು ‘ಗೈರು’ ಎಂದು ದಾಖಲಿಸುವ ಪರಿಸ್ಥಿತಿ ಉಂಟಾಗುತ್ತಿದೆ. ಅಲ್ಲದೇ ವಿದ್ಯಾರ್ಥಿಗಳ ಹಾಜರಾತಿ ಆಧರಿಸಿ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಫಲಾನುಭವಿಗಳ ಸಂಖ್ಯೆಯನ್ನು ಲೆಕ್ಕ ಹಾಕಲಾಗುವುದರಿಂದ, ಹಾಜರಾತಿ ಸರಿಯಾಗಿ ದಾಖಲಾಗದಿದ್ದರೆ ಬಿಸಿಯೂಟದ ಪ್ರಮಾಣದ ಮೇಲೂ ಪರಿಣಾಮ ಬೀರುವ ಆತಂಕ ಶಿಕ್ಷಕರನ್ನು ಕಾಡುತ್ತಿದೆ.

-ಕೋಟ್

‘ನಿರಂತರ ಆ್ಯಪ್ ’ ತಾಂತ್ರಿಕ ದೋಷದಿಂದ ಜಿಲ್ಲೆಯ ಬಹುತೇಕ ಶಿಕ್ಷಕರು ಪ್ರತಿದಿನ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ತಾಂತ್ರಿಕ ಸಮಸ್ಯೆ ಶೀಘ್ರ ಸರಿಪಡಿಸಿ, ಶಾಲೆಗಳ ವಾಸ್ತವ ಪರಿಸ್ಥಿತಿಗೆ ಹೊಂದುವಂತೆ ಸರಳ ಮತ್ತು ಪರಿಣಾಮಕಾರಿ ಹಾಜರಾತಿ ವ್ಯವಸ್ಥೆ ಜಾರಿಗೆ ತರಬೇಕು.

-ಬಾಬು ಸೊಗಲನ್ನವರ, ಅಧ್ಯಕ್ಷರು, ಬೆಳಗಾವಿ ನಗರ ಶಿಕ್ಷಕರ ಸಂಘ

ಫೊಟೊ ಎಐ: