ಆಟೋ-ಲಾರಿ ನಡುವೆ ಡಿಕ್ಕಿ: ತಾಯಿ, 3 ತಿಂಗಳ ಹಸುಳೆ ಸಾವು

Contributed byShrinivasa Mallikarjuna|Vijaya Karnataka
auto truck collision mother and 3 month old calf killed
ಆಟೋ-ಲಾರಿ ನಡುವೆ ಡಿಕ್ಕಿ: ತಾಯಿ, 3 ತಿಂಗಳ ಹಸುಳೆ ಸಾವು

ವಿಕ ಸುದ್ದಿಲೋಕ ವಾಡಿ
ಕಲಬುರಗಿ -ಗುತ್ತಿ ರಾಷ್ಟ್ರೀಯ ಹೆದ್ದಾರಿ 150ರ ಹಲಕರ್ಟಿ ಬಳಿ ಆಟೋ-ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ತಾಯಿ ಮತ್ತು ಮೂರು ತಿಂಗಳ ಹಸುಳೆ ಸಾವನ್ನಪ್ಪಿದ ಘಟನೆ ಬುಧವಾರ ಮಧ್ಯಾಹ್ನ ಜರುಗಿದೆ.

ವಾಡಿ ಪಟ್ಟಣದ ಕಲಕಮ್ಮ ಬಡಾವಣೆ ನಿವಾಸಿ ಶರಣಮ್ಮ ಗಂ.ಶರಣು ಸಿಂಗೆ (30) ಮತ್ತು ಅವರ ಮೂರು ತಿಂಗಳ ಮಗು ರಾಘವೇಂದ್ರ ಮೃತರು. ಸಾಬಮ್ಮ ಮತ್ತು ಆಟೋ ಚಾಲಕ ಖಾಜಾಪಟೇಲ್ ಗಂಭೀರ ಗಾಯಗೊಂಡಿದ್ದಾರೆ.

3 ತಿಂಗಳ ಹಿಂದೆ ಸಿಜೇರಿಯನ್ ಮಾಡಿಕೊಂಡಿದ್ದ ಶರಣಮ್ಮ ಹೊಲಿಗೆ ಬಿಚ್ಚಿಸಿಕೊಂಡು ಬರಲು ಮಗು ಮತ್ತು ಅತ್ತೆಯೊಂದಿಗೆ ಯಾದಗಿರಿ ಆಸ್ಪತ್ರೆಗೆ ತೆರಳಿದ್ದಳು. ಆಟೋದಲ್ಲಿವಾಪಸ್ ಬರುವಾಗ ಹಲಕರ್ಟಿ ಸಮೀಪ ಲಾರಿ ಡಿಕ್ಕಿ ಹೊಡೆದಿದೆ. ತಾಯಿ ಸ್ಥಳದಲ್ಲೇ ಮೃತಪಟ್ಟರೆ, ಮಗು ವಾಡಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದೆ.

ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಮಗುವನ್ನು ಮತ್ತು ಗಾಯಾಳು ಸಾಬಮ್ಮ ಅವರನ್ನು ವಾಡಿ ಮುಖಂಡ ವಿಠ್ಠಲ್ ವಾಲ್ಮೀಕಿ ನಾಯಕ ತಮ್ಮ ಸ್ವಂತ ಕಾರಿನಲ್ಲಿಸಮುದಾಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ನೆರವಾದರೂ ಮಗು ಉಳಿಯಲಿಲ್ಲ.

ಡಿಕ್ಕಿಯ ರಭಸಕ್ಕೆ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ವಾಡಿ ಪಿಎಸ್ ಐ ತಿರುಮಲೇಶ ಕೆ. ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.